ಸೋಮವಾರ, ನವೆಂಬರ್ 18, 2019
20 °C
ಜೀವಜಲ, ಜಲಾಮೃತ, ಜಲಶಕ್ತಿ ಅಭಿಯಾನ ಹಾಗೂ ಸ್ವಚ್ಛಮೇವ ಜಯತೆ ಕಾರ್ಯಕ್ರಮಗಳ ಕುರಿತ ಒಂದು ದಿನದ ಕಾರ್ಯಾಗಾರ

ಅ.1ರ ಒಳಗೆ ಜಿಲ್ಲೆ ಶುಚಿಗೊಳ್ಳಲಿ: ಅಧಿಕಾರಿಗಳಿಗೆ ತಾಕೀತು

Published:
Updated:
Prajavani

ಚಿಕ್ಕಬಳ್ಳಾಪುರ: ‘ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಅಕ್ಟೋಬರ್ 1ರ ಒಳಗಾಗಿ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಚರಂಡಿ, ರಸ್ತೆಗಳನ್ನು ಕಸ ಮುಕ್ತವನ್ನಾಗಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ. ಮಂಜುನಾಥ್ ಅವರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸ್ವಚ್ಛ ಭಾರತ್ ಮಿಷನ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಜೀವಜಲ, ಜಲಾಮೃತ, ಜಲಶಕ್ತಿ ಅಭಿಯಾನ ಹಾಗೂ ಸ್ವಚ್ಛಮೇವ ಜಯತೆ ಕಾರ್ಯಕ್ರಮಗಳ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಗಾಂಧೀಜಿ ಅವರು ಗ್ರಾಮ ಸ್ವರಾಜ್ ನಿರ್ಮಾಣದ ಕನಸು ಹೊಂದಿದ್ದರು. ಆದ್ದರಿಂದ ಅವರ ಆಶಯದಂತೆಯೇ ನಮ್ಮ ಜಿಲ್ಲೆಯಲ್ಲಿರುವ ಗ್ರಾಮೀಣ ಪ್ರದೇಶವನ್ನು ಅನೈರ್ಮಲ್ಯದಿಂದ ಮುಕ್ತಗೊಳಿಸೋಣ. ಅದಕ್ಕೆ ಅಧಿಕಾರಿಗಳು ಹಾಗೂ ಸಾರ್ವಜನಿಕರೆಲ್ಲರೂ ಕೈಜೋಡಿಸಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ನೀರಿನ ಅಭಾವ ಹೆಚ್ಚಾದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಯೆಥೇಚ್ಚವಾಗಿ ಕೊಳವೆ ಬಾವಿಗಳನ್ನು ಕೊರೆದು ಅಂತರ್ಜಲ ಮಟ್ಟ ಕುಗ್ಗುತ್ತಿದ್ದರೂ ಜನರು ನೀರಿನ ಸಂಗ್ರಹಕ್ಕೆ ಮುಂದಾಗುತ್ತಿಲ್ಲ. ಜತೆಗೆ ಜಲಮೂಲಗಳನ್ನು ಒತ್ತುವರಿ ಮಾಡಿಕೊಂಡ ಪರಿಣಾಮ, ಕೆರೆಗಳು, ಹಳ್ಳ ಕೊಳ್ಳಗಳು ಬತ್ತಿ ಕುಡಿಯುವ ನೀರಿಗೆ ಹಾಹಾಕಾರ ತಲೆದೋರುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನೀರಿನ ವಿಚಾರದಲ್ಲಿ ವಿನಾಕಾರಣ ಸರ್ಕಾರಗಳನ್ನು ದೂಷಿಸುವುದು ಬೇಡ. ನಮ್ಮ ಪೂರ್ವಜರ ರೀತಿಯಲ್ಲಿ ನಾವು ಕೆರೆ, ಕುಂಟೆ, ಹಳ್ಳ, ಕೊಳ್ಳ ಹಾಗೂ ಕಲ್ಯಾಣಿಗಳನ್ನು ನಿರ್ಮಿಸಿ, ಮಳೆ ನೀರನ್ನು ಸಂರಕ್ಷಿಸುವ ಕೆಲಸ ಮಾಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಇನ್ನಾದರೂ ನಾವು ನೀರು ಸಂಗ್ರಹಿಸುವ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು’ ಎಂದರು.

‘ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣ ಮಾಡುವ ಉದ್ದೇಶದಿಂದ ಕೋಟಿ ನಾಟಿ ಯೋಜನೆಯಡಿ ಜಿಲ್ಲೆಯಲ್ಲಿ ಲಕ್ಷಾಂತರ ಗಿಡಗಳನ್ನು ನೆಡಲಾಗಿದೆ. ಜಿಲ್ಲೆಯಾದ್ಯಂತ 140 ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲಾಗಿದೆ. ನೀರಿನ ಸಂರಕ್ಷಣೆಗಾಗಿ 157 ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಲು ಆದೇಶ ನೀಡಿದೆ’ ಎಂದು ತಿಳಿಸಿದರು.

ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಜಲತಜ್ಞ ಪ್ರೊ.ಎ.ಆರ್.ಶಿವಕುಮಾರ್ ಮಾತನಾಡಿ, ‘ನಮ್ಮ ಕುಟುಂಬ ಸುಮಾರು 24 ವರ್ಷಗಳಿಂದ ಮಳೆ ನೀರನ್ನೇ ಶುದ್ಧೀಕರಿಸಿಕೊಂಡು ಉಪಯೋಗಿಸುತ್ತಿದ್ದೇವೆ. ಮನೆಯ ನಿರ್ಮಾಣ ಹಂತದಲ್ಲಿ ಸುಮಾರು ₹15 ಸಾವಿರ ಖರ್ಚು ಮಾಡಿದರೆ ಸುಲಭವಾಗಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಬಹುದು’ ಎಂದು ಹೇಳಿದರು.

‘ಮಳೆ ಇಲ್ಲದೆ ಅಂತರ್ಜಲ ಮಟ್ಟ ಕುಸಿದು ನೀರಿನ ಅಭಾವ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ ಇರುವ ನೀರನ್ನು ಮಿತವಾಗಿ ಬಳಸಬೇಕು ಇಲ್ಲದಿದ್ದರೆ ಮನುಕುಲ ವಿನಾಶ ಕಟ್ಟಿಟ್ಟ ಬುತ್ತಿ. ಮಳೆ ನೀರು ಸಂಗ್ರಹಿಸುವುದಕ್ಕೆ ತುಂಬಾ ಹಣ ಖರ್ಚು ಮಾಡಬೇಕಿಲ್ಲ. ಇಚ್ಛಾಶಕ್ತಿ ಇದ್ದರೆ ಸಾಕು ಪ್ರತಿಯೊಬ್ಬರೂ ತಮ್ಮ ಅಗತ್ಯಕ್ಕೆ ಬೇಕಾದ ನೀರನ್ನು ಮಳೆಯಿಂದ ಸಂಗ್ರಹಿಸಬಹುದು’ ಎಂದು ತಿಳಿಸಿದರು.

ಕಾರ್ಯಗಾರದಲ್ಲಿ ಸಿದ್ದಾರ್ಥ ಕಲಾತಂಡ ಕಲಾವಿದರು ಪರಿಸರ ಗೀತೆಗಳ ಮೂಲಕ ಅರಿವು ಮೂಡಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ ರೇಣುಕಾ, ಗೌರಿಬಿದನೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರತ್ಮಮ್ಮ, ಪರಿಸರವಾದಿ ಚೌಡಪ್ಪ, ಉಸಿರುಗಾಗಿ ಹಸಿರು ಟ್ರಸ್ಟ್ ಗಂಗಾಧರ್ ರೆಡ್ಡಿ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

 

ಪ್ರತಿಕ್ರಿಯಿಸಿ (+)