ಮುಟ್ಟು, ಮೈಲಿಗೆ ಮತ್ತು ಅಸ್ಪೃಶ್ಯತೆ

7

ಮುಟ್ಟು, ಮೈಲಿಗೆ ಮತ್ತು ಅಸ್ಪೃಶ್ಯತೆ

Published:
Updated:

ಆರೋಗ್ಯಕರ ಪ್ರತಿಭಟನೆಗಳು ಪ್ರಜಾಪ್ರಭುತ್ವವನ್ನು ಶಕ್ತಿಶಾಲಿಯಾಗಿಸುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಗತಿ
ವಿರೋಧಿ ಶಕ್ತಿಗಳು ತಮ್ಮ ಹಿತಾಸಕ್ತಿಗೆ ಧಕ್ಕೆ ಬರುತ್ತದೆ ಎಂದು ಗೊತ್ತಾದಾಗಲೆಲ್ಲಾ ಅಮಾಯಕ ಜನರಿಗೆ ಕುಮ್ಮಕ್ಕು ನೀಡಿ, ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿ ಪ್ರತಿಭಟನೆಗಳನ್ನು ಸಂಘಟಿಸುತ್ತಿವೆ. ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶದ ಹಕ್ಕನ್ನು ಸಂವಿಧಾನದ ಪ್ರಕಾರ ಎತ್ತಿ ಹಿಡಿದಿರುವುದು ಸರಿಯಷ್ಟೆ. ‘ಕುಲಕ್ಕೆ ಕೊಡಲಿ ಕಾವಿನಿಂದ ಪೆಟ್ಟು’ ಎನ್ನುವ ರೀತಿ ಪ್ರವೇಶ ವಿರೋಧಿಸಿ ಮಹಿಳೆಯರಿಂದಲೇ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ.

ಇದೇ ರೀತಿ ‘ಮಡೆಸ್ನಾನ ಇರಬೇಕು, ಇದು ನಮ್ಮ ಜನ್ಮಸಿದ್ಧ ಹಕ್ಕು’ ಎಂದು ಮಲೆಕುಡಿಯರು ಪ್ರತಿಭಟಿಸಿದ್ದಾರೆ.
ಇಂತಹ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿರುವ ಬಹುತೇಕರಿಗೆ ತಾವು ಏತಕ್ಕಾಗಿ ಭಾಗವಹಿಸುತ್ತಿದ್ದೇವೆ ಎಂಬ ಸಾಮಾನ್ಯ ಜ್ಞಾನವೂ ಇರುವುದಿಲ್ಲ. ಯಾವುದೋ ಹಿತಾಸಕ್ತಿ ಗುಂಪುಗಳು ಇದರ ಹಿಂದೆ ನಿಂತು ಕುಮ್ಮಕ್ಕು ನೀಡುತ್ತಿರುತ್ತವೆ. ಮಹಿಳೆಯರ ದೇಹದಲ್ಲಿ ಜರುಗುವ ಪ್ರಕೃತಿ ಕ್ರಿಯೆಗಳಾದ ಮಾಸಿಕ ಮುಟ್ಟನ್ನು ಮೈಲಿಗೆ ಎಂದು ಪರಿಗಣಿಸಿ ಮಹಿಳೆಯರನ್ನು ಅಸ್ಪೃಶ್ಯರೆಂದು ಪರಿಗಣಿಸುವುದರಲ್ಲಿ ಯಾವ ತರ್ಕವಿದೆ?

‘ಮುಟ್ಟಾದ ಹೊಟ್ಟೆಯೊಳಗೆ ಹುಟ್ಟಿಹುದು ಜಗವೆಲ್ಲ, ಮುಟ್ಟಬೇಡ ಎನ್ನುವರು ಹುಟ್ಟಿರುವುದು ಎಲ್ಲಿಂದ’ ಎಂಬ ಸರ್ವಜ್ಞನ ವಚನದ ಪ್ರಕಾರ, ಪುರುಷ ಪ್ರಧಾನ ಮೇಲಾಟಗಳನ್ನು ಪ್ರತಿಭಟಿಸಬೇಕಾದ ಪ್ರಗತಿಪರ ಸ್ತ್ರೀ ಶಕ್ತಿ ಗುಂಪುಗಳು ಮೌನ ವಹಿಸಿರುವುದು ಆಶ್ಚರ್ಯವೇ ಸರಿ. ಧೈರ್ಯ ವಹಿಸಿ ಪ್ರತಿಭಟನೆಗೆ ಮುಂದೆ ಬರುವ ಕೆಲವರನ್ನು ಎಲ್ಲಾ ಕುಯುಕ್ತಿಗಳಿಂದ ಹಿಮ್ಮೆಟ್ಟಿಸಿ ದಮನಗೊಳಿಸುವ ಶಕ್ತಿಗಳು ದಿನೇ ದಿನೇ ಪ್ರಬಲಗೊಳ್ಳುತ್ತಿವೆ. ಈ ವ್ಯವಸ್ಥೆಯಲ್ಲಿ ಕಿಂಚಿತ್ತು ಬದಲಾವಣೆಗೊಂಡರೂ ಸಂಪ್ರದಾಯ, ಧರ್ಮ, ದೇವರ ನಾಶ ಎಂದು ಗುಲ್ಲು ಎಬ್ಬಿಸಿ ಜನರನ್ನು ಎತ್ತಿ ಕಟ್ಟುತ್ತಿರುವುದು ಎಲ್ಲಾ ಧರ್ಮಗಳ ಮೂಲಭೂತವಾದಿಗಳ ರೂಢಿಯಾಗಿದೆ. ಈ ಬಗ್ಗೆ ಜನಜಾಗೃತಿ ಮೂಡುವುದು ಯಾವಾಗ? ಕಡಿಮೆ ಸಂಖ್ಯೆಯಲ್ಲಿರುವ ಪ್ರಗತಿಪರ ಗುಂಪುಗಳಾದರೂ ಪ್ರತಿಭಟಿಸಬಾರದೇ?

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !