ಗಣಿ ಗುತ್ತಿಗೆ ನೀತಿ ಸರಳಗೊಳಿಸಲು ಒತ್ತಾಯ

7
ಅಲಂಕಾರಿಕ ಶಿಲೆಗಳ ಕ್ವಾರಿ ಮತ್ತು ಸಂಸ್ಕರಣ ಉದ್ಯಮದ ವಿಚಾರ ಸಂಕಿರಣ

ಗಣಿ ಗುತ್ತಿಗೆ ನೀತಿ ಸರಳಗೊಳಿಸಲು ಒತ್ತಾಯ

Published:
Updated:
Prajavani

ಬೆಂಗಳೂರು: ಗಣಿ ಗುತ್ತಿಗೆ ನೀತಿಯನ್ನು ಸರಳಗೊಳಿಸಬೇಕು. ಉದ್ಯಮವನ್ನು ಉಳಿಸಬೇಕು ಎಂಬ ಒತ್ತಾಯ ನಗರದಲ್ಲಿ ನಡೆದ ಅಲಂಕಾರಿಕ ಶಿಲೆ ಗಣಿಗಾರಿಕೆ ಮತ್ತು ಸಂಸ್ಕರಣಾ ಉದ್ಯಮದ ವಿಚಾರ ಸಂಕಿರಣದಲ್ಲಿ ಕೇಳಿಬಂದಿತು.

ಫೆಡರೇಷನ್‌ ಆಫ್‌ ಇಂಡಿಯನ್‌ ಗ್ರಾನೈಟ್‌ ಆ್ಯಂಡ್‌ ಸ್ಟೋನ್‌ ಇಂಡಸ್ಟ್ರಿ (ಫಿಗ್ಸಿ), ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಯೊಲಾಜಿಕಲ್‌ ಸೊಸೈಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ‘ಅಲಂಕಾರಿಕ ಶಿಲೆಗಳ ಕ್ವಾರಿಗಳು ಮತ್ತು ಸಂಸ್ಕರಣ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳು’ ವಿಷಯದ ಕುರಿತ ವಿಚಾರ ಸಂಕಿರಣ ಮತ್ತು ಸಂವಾದದಲ್ಲಿ ಈ ಧ್ವನಿ ಕೇಳಿಬಂದಿತು. 

ಫಿಗ್ಸಿಯ ಸಂಸ್ಥಾಪಕ ಅಧ್ಯಕ್ಷ ಆರ್‌.ವೀರಮಣಿ ಮಾತನಾಡಿ, ‘ಗ್ರಾನೈಟ್‌ ಉದ್ಯಮ ಹೆಚ್ಚು ಬೆಳಕಿಗೆ ಬಾರದ ಕ್ಷೇತ್ರ. ರಫ್ತು ಕ್ಷೇತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿದೆ. ಅದಕ್ಕಾಗಿ ಈ ಕ್ಷೇತ್ರವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಗಣಿ ಗುತ್ತಿಗೆ ನೀತಿಯನ್ನು ಉದಾರಗೊಳಿಸಬೇಕು. ಅರಣ್ಯ, ಪರಿಸರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪರವಾನಗಿ ಪಡೆಯಲು ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಇವು ನಿವಾರಣೆಗೊಳ್ಳಬೇಕು. ಪರವಾನಗಿ ನವೀಕರಣ ತ್ವರಿತವಾಗಿ ಆಗಬೇಕು ಎಂದು ಅವರು ಕೋರಿದರು. 

ತಾಂತ್ರಿಕ ಸಾಹಿತ್ಯ ಅಗತ್ಯ‌

ಈ ಕ್ಷೇತ್ರದಲ್ಲಿ ಕೌಶಲರಹಿತ ಕಾರ್ಮಿಕರೇ ಹೆಚ್ಚು ಇದ್ದಾರೆ. ಅವರಿಗೆ ಕೌಶಲ ತರಬೇತಿ ನೀಡಬೇಕು. ಅದಕ್ಕಾಗಿ ಸರಿಯಾದ ಪಠ್ಯ ರೂಪಿಸಬೇಕು ಎಂದು ಅವರು ಕೋರಿದರು.

ಕೇಂದ್ರ ಸರ್ಕಾರದ ಗಣಿ ಸಚಿವಾಲಯದ ನಿರ್ದೇಶಕಿ ಡಾ.ವೀಣಾ ಕುಮಾರಿ ಮಾತನಾಡಿ, ‘ಗ್ರಾನೈಟ್‌ ಅಭಿವೃದ್ಧಿ ಸಮಿತಿಯು ಈ ಕ್ಷೇತ್ರದಲ್ಲಿ ಆಗಬೇಕಾದ ಸುಧಾರಣೆಗಳ ಬಗ್ಗೆ ವರದಿಯನ್ನು ಕೊಟ್ಟಿದೆ. ಈ ಸಮಿತಿಯನ್ನು ಪುನರ್‌ರಚನೆ ಆಗಬೇಕಿದೆ. ಬಳಿಕ ಆ ವರದಿಯ ಆಧಾರದ ಮೇಲೆ ಹೊಸ ನಿಯಮಗಳಿಗೆ ತಿದ್ದುಪಡಿ ತರಲಾಗುವುದು. ಇಲ್ಲಿ ರಾಜ್ಯ ಸರ್ಕಾರವೂ ನಿರ್ಧಾರ ಕೈಗೊಳ್ಳಬಹುದು. ಸುಪ್ರೀಂ ಕೋರ್ಟ್‌ನ ಆದೇಶಗಳನ್ನೂ ಪಾಲಿಸಬೇಕಾಗುತ್ತದೆ. ಒಟ್ಟಾರೆ ಉದ್ಯಮ ಕ್ಷೇತ್ರ, ಸರ್ಕಾರ ಜತೆಯಾಗಿ ಸುಸ್ಥಿರ ಗಣಿಗಾರಿಕೆ ಬಗ್ಗೆ ಚಿಂತನೆ ನಡೆಸಬೇಕು’ ಎಂದರು.

ಸಭೆಯಲ್ಲಿ ಕೇಳಿಸಿದ್ದು....

‘ಮರಳುಗಾರಿಕೆ ಮತ್ತು ಗ್ರಾನೈಟ್‌ ಉದ್ಯಮವನ್ನು ಒಂದೇ ರೀತಿ ನೋಡಬೇಡಿ. ನಮ್ಮದು ವಿಶೇಷ ಶಿಲೆಯ ಉದ್ಯಮ. ಇದರಿಂದ ರಫ್ತು ಆದಾಯ ಬರುತ್ತದೆ. ಇಡೀ ದೇಶದಲ್ಲಿ ಏಕರೂಪದ ಗಣಿ ಗುತ್ತಿಗೆ ನೀತಿ ಬೇಕು’ ಎಂದು ಗ್ರಾನೈಟ್‌ ಉದ್ಯಮಿಗಳು ಕೋರಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ, ‘ಕೆಲವು ನಿಯಮ ಗಳು ಕಠಿಣವಾಗಿವೆ ನಿಜ. ಇದು ಸರ್ಕಾರದ ಮಟ್ಟದಲ್ಲಿ ಸರಳಗೊಳ್ಳಬೇಕಿದೆ. ಆದರೆ, ಈ ವಿಚಾರದಲ್ಲಿ ರಾಷ್ಟ್ರೀಯ ಹಸಿರು ಪೀಠ, ಸುಪ್ರೀಂ ಕೋರ್ಟ್‌, ಏಕೆ ಪದೇ ಪದೇ ಮಧ್ಯೆ ಪ್ರವೇಶಿಸುತ್ತಿವೆ?  ಎಲ್ಲೋ ಒಂದೆಡೆ ವೈಫಲ್ಯ  ಆಗಿದೆ ಅಲ್ಲವೇ? ಗಣಿ ತ್ಯಾಜ್ಯದ ನಿರ್ವಹಣೆ ಕ್ರಮ ಹೇಗಿದೆ? ಇಂಥ ಗಂಭೀರ ವಿಷಯಗಳ ಬಗೆಗೂ ಯೋಚಿಸಬೇಕು ಎಂದು ಕಿವಿಮಾತು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !