ಹಸ್ತಾಂತರ ಆಗದ ಗ್ರಂಥಾಲಯಕ್ಕೆ ಬೀಗ !

ಬುಧವಾರ, ಮಾರ್ಚ್ 27, 2019
26 °C
ಬೆಂಗಳೂರು ವಿ.ವಿ ಮತ್ತು ಕೇಂದ್ರ ವಿ.ವಿ ಮಧ್ಯೆ ತಿಕ್ಕಾಟ

ಹಸ್ತಾಂತರ ಆಗದ ಗ್ರಂಥಾಲಯಕ್ಕೆ ಬೀಗ !

Published:
Updated:

ಬೆಂಗಳೂರು: ಗ್ರಂಥಾಲಯದ ವರ್ಗಾವಣೆಗೆ ಸಂಬಂಧಿಸಿದಂತೆ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಮಧ್ಯೆ ‘ಕೋಳಿ ಜಗಳ’ ನಡೆದಿದೆ!

ಬೆಂಗಳೂರು ವಿಶ್ವವಿದ್ಯಾಲಯದ ತ್ರಿಭಜನೆ ಬಳಿಕ ಹಲವು ಕಟ್ಟಡಗಳು ಮತ್ತು ಮೂಲ ಸೌಕರ್ಯಗಳ ಹಸ್ತಾಂತರ ಆಗದೇ ಇರುವುದರಿಂದ ಆಗಿಂದ್ದಾಗ್ಗೆ ಮೂರೂ ವಿಶ್ವವಿದ್ಯಾಲಯಗಳ ಮಧ್ಯೆ ತಿಕ್ಕಾಟ ನಡೆಯುತ್ತಲೇ ಇದೆ. ಗ್ರಂಥಾಲಯ ವರ್ಗಾವಣೆ ಆಗದೇ ಇರುವುದು ಹೊಸ ತಲೆ ನೋವಿಗೆ ಕಾರಣವಾಗಿದೆ.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಆವರಣದಲ್ಲಿರುವ ಗ್ರಂಥಾಲಯ ಇನ್ನೂ ಬೆಂಗಳೂರು ವಿಶ್ವವಿದ್ಯಾಲಯ ಸುಪರ್ದಿಯಲ್ಲೇ ಇದೆ. ಅದನ್ನು ಬಿಟ್ಟುಕೊಡುವಂತೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹಲವು ಪತ್ರಗಳನ್ನು ಬರೆದರೂ ಕ್ರಮ ತೆಗೆದುಕೊಳ್ಳದ ಕಾರಣ ಕೇಂದ್ರ ವಿಶ್ವವಿದ್ಯಾಲಯದ ಸಿಬ್ಬಂದಿ ಗ್ರಂಥಾಲಯಕ್ಕೆ ಬೀಗ ಹಾಕಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ ಎಂದು ಮೂಲಗಳು ತಿಳಿಸಿವೆ. 

ಬೆಂಗಳೂರು ವಿಶ್ವವಿದ್ಯಾಲಯ ಹೇಳಿದ್ದೇನು: ‘ಗ್ರಂಥಾಲಯ ಕಟ್ಟಡವನ್ನು ನಾವು ಅವರಿಗೆ ಬಿಟ್ಟುಕೊಡಬೇಕು. ಆದರೆ, ಗ್ರಂಥಾಲಯದಲ್ಲಿ ನಮ್ಮ ವಿಶ್ವ ವಿದ್ಯಾಲಯಕ್ಕೆ ಸಂಬಂಧಿಸಿದ ಸಾವಿರಾರು ಗ್ರಂಥಗಳಿವೆ. ಪುಸ್ತಕಗಳ ಸಾಗಣೆ ಬಳಿಕ ಮೇ ಕೊನೆಯಲ್ಲಿ ಹಸ್ತಾಂತರಿಸುವ ಉದ್ದೇಶವಿದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಆರ್‌.ವೇಣುಗೋಪಾಲ್‌ ತಿಳಿಸಿದರು.

‘ಅಲ್ಲದೆ, ನಮ್ಮ ವಿಶ್ವವಿದ್ಯಾಲಯಕ್ಕೆ ಸೇರಿದ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಅಲ್ಲಿ ಓದುತ್ತಿದ್ದಾರೆ. ಗ್ರಂಥಾಲಯಕ್ಕೆ ಬೀಗ ಹಾಕುವುದರಿಂದ ಪ್ರಯೋಜನ ಆಗುವುದಿಲ್ಲ. ಗ್ರಂಥಾಲಯ ವಿದ್ಯಾರ್ಥಿಗಳ ಬಳಕೆಗಾಗಿ ಇರುವುದು. ವಿಶ್ವವಿದ್ಯಾಲಯ ತ್ರಿಭಜನೆ ಆದರೂ ವರ್ಗಾವಣೆ ಪ್ರಕ್ರಿಯೆ ಕಾರಣಾಂತರಗಳಿಂದ ವಿಳಂಬ ಆಗುವುದು ಸಹಜ. ಗ್ರಂಥಾಲಯ ರಾತ್ರೊರಾತ್ರಿ ಬಿಟ್ಟುಕೊಡಿ ಎಂದರೆ ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವಾದ: ‘ನಮ್ಮ ವಿಶ್ವವಿದ್ಯಾಲಯದ ಎರಡನೇ ಸೆಮಿಸ್ಟರ್‌ ಆರಂಭವಾಗಿದೆ. ಗ್ರಂಥಾಲಯ ಬಿಟ್ಟುಕೊಡಲು ಬೆಂಗಳೂರು ವಿ.ವಿಗೆ ಮೂರು– ನಾಲ್ಕು ಪತ್ರ ಬರೆದಿದ್ದೆವು. ಆದರೆ, ಎರಡು ದಿನಗಳ ಹಿಂದೆ ಯಾರೋ ಬೀಗ ಹಾಕಿದ್ದಾರೆ, ತಕ್ಷಣವೇ ಕುಲಸಚಿವರ ಜತೆ ಮಾತನಾಡಿ ಬೀಗ ತೆಗೆಯಲು ಸೂಚಿಸಿದ್ದೇನೆ’ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಾಫೆಟ್‌ ತಿಳಿಸಿದರು.

ನ್ಯಾಚುರಲ್‌ ಸೈನ್ಸ್‌ ವಿಭಾಗ, ವಾಣಿಜ್ಯ ವಿಭಾಗವನ್ನೂ ಬೆಂಗಳೂರು ವಿಶ್ವವಿದ್ಯಾಲಯ ಬಿಟ್ಟುಕೊಟ್ಟಿಲ್ಲ. ಅದರ ಬಗ್ಗೆಯೂ ಅವರಿಗೆ ಪತ್ರ ಬರೆದಿದ್ದೇವೆ ಎಂದೂ ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !