ಇದು ಪ್ರತಿಕೃತಿಗಳ ಆಲಯ

7

ಇದು ಪ್ರತಿಕೃತಿಗಳ ಆಲಯ

Published:
Updated:
Prajavani

ಅದು ನೆದರ್‌ಲೆಂಡ್‌ನಲ್ಲಿರುವ ಮಡುರೊಡ್ಯಾಂ ಎಂಬ ಉದ್ಯಾನ. ಆ ಪಾರ್ಕ್ ಹೊಕ್ಕಿದರೆ, ಬೃಹತ್ ಸರ್ಕಾರದ ಕಟ್ಟಡಗಳಿವೆ. ಅಂತರರಾಷ್ಟ್ರೀಯ ವಿಮಾನವಿದೆ. ಜಗತ್ತಿನ ಮೂರನೇ ದೊಡ್ಡ ಬಂದರು ರೊಟರ್‌ಡ್ಯಾಂ ಇದೆ. ಡಚ್‌ನ ಪಾರಂಪರಿಕ ಕಟ್ಟಡಗಳು, ಟುಲಿ‍ಪ್ ಹೂವಿನ ತೋಟಗಳು.. ಗಾಳಿಯಂತ್ರಗಳು.. ಸೇತುವೆಗಳು, ಅಣೆಕಟ್ಟುಗಳು, ರೈಲ್ವೆ ನಿಲ್ದಾಣಗಳು.. ಡಚ್‌ಸಂಸ್ಕೃತಿ ಸಾರುವ ಜನಸಮೂಹ.. ಅಯ್ಯೋ ಒಂದೇ ಎರಡೇ, ಇಡೀ ನೆದರ್‌ಲೆಂಡ್ ದೇಶವೇ ಅಲ್ಲಿದೆ !

‘ಅರೆ, ಒಂದು ಉದ್ಯಾನದಲ್ಲಿ ಇಷ್ಟೆಲ್ಲ ಇರಲು ಹೇಗೆ ಸಾಧ್ಯ’ ಅಂತ ಅನ್ನಿಸಿರಬಹುದಲ್ಲವಾ? ನಿಜ. ಈ ಉದ್ಯಾನದಲ್ಲಿರುವ ತಾಣಗಳೆಲ್ಲ ನೈಜವಾದುದಲ್ಲ. ಮೂಲ ತಾಣಗಳ ಪ್ರತಿಕೃತಿಗಳು. ಇದನ್ನು ಪ್ರತಿಕೃತಿಗಳ ಪಾರ್ಕ್‌ (miniature park) ಎಂದೇ ಕರೆಯುತ್ತಾರೆ. ನಾವಿಲ್ಲಿಗೆ ಭೇಟಿ ನೀಡುವ ಮೊದಲು ನಮ್ಮ ಗೈಡ್ ಈ ಊರಿನ ಹೆಸರು ಹೇಳಿದಾಗ, ಇದ್ಯಾವುದೋ ಜಲಾಶಯವಿರಬೇಕು ಎನ್ನಿಸಿತು. ಆದರೆ, ಸಮೀಪ ಹೋದಾಗಲೇ ಗೊತ್ತಾಗಿದ್ದು, ಇದೊಂದು ಉದ್ಯಾನ ಎಂದು.

ಈ ಉದ್ಯಾನ ಆರಂಭವಾಗಿದ್ದು 1952 ರಲ್ಲಿ. ನೆದರ್‌ಲೆಂಡ್‌ನ ಪ್ರಮುಖ ಕಟ್ಟಡ, ತಾಣಗಳ ಪ್ರತಿಕೃತಿಗಳನ್ನು ಅದೆಷ್ಟು ಚೆನ್ನಾಗಿ ತಯಾರಿಸಿ, ಜೋಡಿಸಿದ್ದಾರೆಂದರೆ, ಅವುಗಳನ್ನು ನೋಡುವ ಪ್ರವಾಸಿಗರು ಮಂತ್ರಮುಗ್ಧರಾಗುತ್ತಾರೆ. ಅಷ್ಟು ಸುಂದರವಾಗಿದೆ.

1945ರ ಯುದ್ಧದಲ್ಲಿ ಮಡಿದ ಜಾರ್ಜ್ ಮಡುರೊ ಎಂಬ ಡಚ್‍ನ ಕಾನೂನು ವಿದ್ಯಾರ್ಥಿ ನೆನಪಿಗಾಗಿ ಆತನ ಪೋಷಕರು ಮಡುರೊಡ್ಯಾಂ ಉದ್ಯಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಎಸ್.ಜೆ. ಬೌಮಾ ಎಂಬ ವಾಸ್ತುಶಿಲ್ಪಿಗೆ ಈ ಉದ್ಯಾನವನದ ನಿರ್ಮಾಣದ ಯೋಜನಾ ಜವಾಬ್ದಾರಿ ವಹಿಸಲಾಗಿತ್ತಂತೆ. ಯುರೋ‍ಪ್‌ನ ಹಲವು ಉದ್ಯಾನಗಳು, ಮ್ಯೂಸಿಯಂಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿ, ಅವುಗಳ ಪ್ರತಿಕೃತಿಗಳನ್ನು ಇಲ್ಲಿ ತಂದು ನಿಲ್ಲಿಸಿದ್ದಾನೆ.

ಇಂಗ್ಲೆಂಡ್‍ನ ಬೇಕನ್ಸ್‌ ಫೀಲ್ಡ್‌ನಲ್ಲಿರುವ ಪ್ರತಿಕೃತಿಗಳ ಉದ್ಯಾನವೂ ಆಕರ್ಷಣೀಯವಾಗಿದೆ. ಅಲ್ಲಿಗೆ ಹೋಗಲು ಪ್ರವಾಸಿಗರು ಪ್ರವೇಶ ಶುಲ್ಕ ಪಾವತಿಸಬೇಕು. ಶುಲ್ಕದ ಆದಾಯವನ್ನು ಅನೇಕ ಆಸ್ಪತ್ರೆಗಳಿಗೆ ದೇಣಿಗೆಯಾಗಿ ನೀಡಲಾಗುತ್ತಿದೆ. ಅದೇ ರೀತಿ ಈ ಮಡುರೊಡ್ಯಾಂ ಉದ್ಯಾನದಿಂದ ಬರುವ ಆದಾಯವನ್ನೂ ಅನೇಕ ಸೇವಾ ಸಂಸ್ಥೆಗಳಿಗೆ ಹಂಚಲಾಗುತ್ತದೆಯಂತೆ. ವರ್ಷಕ್ಕೆ ಸುಮಾರು ಏಳು ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಈ ಉದ್ಯಾನದ ವಿಶೇಷತೆಯೆಂದರೆ ಪ್ರತಿವರ್ಷವೂ ಹೊಸ ಹೊಸ ಪ್ರತಿಕೃತಿಗಳನ್ನು ಸೇರಿಸುತ್ತಾರೆ. ತಜ್ಞ ಶಿಲ್ಪಿಗಳು ಇವುಗಳನ್ನು ತಯಾರಿಸುತ್ತಾರೆ. ಶಿಲ್ಪ ತಯಾರಿಕೆಯಲ್ಲಿ ವೈಜ್ಞಾನಿಕ ವಿಧಾನಗಳನ್ನೇ ಅನುಸರಿಸುತ್ತಾರೆ. ಇಲ್ಲಿಯ ಪ್ರತಿಕೃತಿಗಳು ಎಷ್ಟು ನೈಜವಾಗಿದೆಯೆಂದರೆ ರೈಲು ನಿಲ್ದಾಣವಾಗಲಿ, ವಿಮಾನ ನಿಲ್ದಾಣವಾಗಲಿ ಅಥವಾ ಕಟ್ಟಡಗಳಾಗಲಿ ಯಾವುವೂ ಪ್ರತಿಕೃತಿಗಳು ಎಂದೆನಿಸುವುದೇ ಇಲ್ಲ!.

ಇಡೀ ಪಾರ್ಕ್‌ನಲ್ಲಿ ಅಲ್ಲಲ್ಲಿ ಅಣೆಕಟ್ಟುಗಳು, ಸರೋವರಗಳು, ಅದರ ಮೇಲ್ಭಾಗದಲ್ಲಿ ರಸ್ತೆಗಳು, ಅಂಡರ್‌ಪಾಸ್ ಬ್ರಿಡ್ಜ್‌ಗಳು, ಓಡುವ ರೈಲುಗಳು, ಎಲ್ಲವೂ ಇವೆ. ನೆದರ್‌ಲೆಂಡ್ ದೇಶ ಟುಲಿಪ್ ಹೂವಿನ ತೋಟಗಳಿಗೆ ಹೆಸರುವಾಸಿ. ಆದರೆ ನೈಜವಾಗಿ ಟುಲಿಪ್ ಹೂವುಗಳ ಸೌಂದರ್ಯವನ್ನು ಸವಿಯಲು ವರ್ಷದ ಕೆಲವೇ ತಿಂಗಳುಗಳಲ್ಲಿ ಮಾತ್ರ ಸಾಧ್ಯ. ಈ ಉದ್ಯಾನದಲ್ಲಿರುವ ಟುಲಿಪ್ ಗಾರ್ಡನ್(ಪ್ರತಿಕೃತಿ)ನಲ್ಲಿ ವರ್ಷಪೂರ್ತಿ ಹೂವುಗಳಿರುತ್ತವೆ.

ಈ ಹೂವಿನ ತೋಟವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ವಿಭಾಗದ ನಡುವೆ ಪ್ರವಾಸಿಗರು ಮುಕ್ತವಾಗಿ ಸಂಚರಿಸಲು ಅನುಕೂಲವಾಗುವಂತೆ ಪುಟ್‍ಪಾತ್‍ಗಳು ಇವೆ. ನಮಗಿಷ್ಟವಾದ ಜಾಗದಲ್ಲಿ ಎಷ್ಟು ಹೊತ್ತು ಬೇಕಾದರೂ ನಿಂತು ಪ್ರತಿಕೃತಿಗಳನ್ನು ವೀಕ್ಷಿಸಬಹುದು. ಹೆಚ್ಚುವರಿ ಮಾಹಿತಿಗಳು ಬೇಕಾದರೆ ಪಾರ್ಕ್‌ ಪ್ರವೇಶದ್ವಾರದಲ್ಲಿ ನೀಡಲಾಗುವ ಸ್ಮಾರ್ಟ್ ಕಾರ್ಡನ್ನು ಆಯಾ ವಿಬಾಗದ ಮುಂಭಾಗದಲ್ಲಿ ಇರಿಸಿರುವ ಯಂತ್ರಕ್ಕೆ ಫ್ಲಾಷ್ ಮಾಡಿದರೆ ಆಂಗ್ಲಭಾಷೆಯಲ್ಲಿ ವಿವರಗಳು ದೊರಕುತ್ತವೆ.‌ ಇಡೀ ಪಾರ್ಕ್‌ ಸುತ್ತಾಡಿ ಒಂದೊಂದು ವಿಭಾಗದ ಬಗ್ಗೆಯೂ ಮಾಹಿತಿ ಪಡೆಯುವುದಾದಲ್ಲಿ ಕನಿಷ್ಠ ಒಂದು ದಿನವಾದರೂ ಬೇಕಾಗುತ್ತದೆ.

ಈ ಉದ್ಯಾನದಲ್ಲಿ ಸುಸಜ್ಜಿತ ಹೋಟೆಲ್ ಇದೆ. ಐದು ಯುರೋ ಕೊಟ್ಟರೆ ಒಂದು ದೊಡ್ಡ ಕಪ್‌ನಲ್ಲಿ ಕಾಫಿ ಕೊಡುತ್ತಾರೆ. ಪಾರ್ಕ್‌ ಮಧ್ಯಭಾಗದಲ್ಲಿ ಒಂದು ಚಿಕ್ಕ ಫೋಟೊ ಸ್ಟುಡಿಯೊ ಇದೆ. ಇಲ್ಲಿ ತ್ರಿಡಿಯಲ್ಲಿ ಉಚಿತವಾಗಿ ಫೋಟೊ ತೆಗೆಸಿಕೊಳ್ಳಬಹುದು. ಫೋಟೊ ತೆಗೆಸಿಕೊಂಡು ವಿಳಾಸ ನೀಡಿದರೆ, ಆ ವಿಳಾಸಕ್ಕೆ ಉಚಿತವಾಗಿ ಫೋಟೊವನ್ನು ಕಳಿಸಿಕೊಡುತ್ತಾರೆ. ನಾವು ಇಲ್ಲಿಗೆ ಭೇಟಿ ನೀಡಿದಾಗ ಈ ಸ್ಟುಡಿಯೋದ ನಿರ್ವಹಣೆಗೆ ನಿಯುಕ್ತರಾದವರು ಭಾರತೀರಾಗಿದ್ದರು. ಹೀಗಾಗಿ ಹಿಂದಿ ಭಾಷೆಯಲ್ಲಿ ಉತ್ತಮ ಮಾಹಿತಿಯನ್ನು ನೀಡಿದ್ದರು.

ಮಡುರೊಡ್ಯಾಂ ಉದ್ಯಾನ ವೀಕ್ಷಿಸಿ ಹಿಂದಿರುಗಿದಾಗ ನೆದರ್‌ಲೆಂಡ್‌ನ ರಾಷ್ಟ್ರೀಯ ಪುಷ್ಪ ಟುಲಿಪ್ ಮತ್ತು ರಾಷ್ಟ್ರ ಚಿಹ್ನೆ ವಿಂಡ್‍ಮಿಲ್ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ. ಮಾತ್ರವಲ್ಲ ಒಂದು ಉದ್ಯಾನದಲ್ಲಿ ನಿಂತು ಇಡೀ ದೇಶವನ್ನೇ ನೋಡಿದಂತಾಗುತ್ತದೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !