ಟೀ ಅಂಗಡಿ ವ್ಯಾಪಾರದಿಂದ ಬದುಕು ಹಸನು

7

ಟೀ ಅಂಗಡಿ ವ್ಯಾಪಾರದಿಂದ ಬದುಕು ಹಸನು

Published:
Updated:
Deccan Herald

ನನ್ನ ಹೆಸರು ಸುರೇಶ್. ವಯಸ್ಸು 52. ನನ್ನದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಒಂದು ಹಳ್ಳಿ. ಬೆಂಗಳೂರಿಗೆ ಬಂದು 16 ವರ್ಷ ಆಯ್ತು. ದೊಮ್ಮಲೂರಿನಲ್ಲಿ ಟೀ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೇನೆ. ನಮ್ಮೂರಲ್ಲಿ ಸ್ವಂತ ಜಮೀನಿದೆ, ಆದ್ರೆ ಸರಿಯಾಗಿ ಮಳೆ ಆಗಲ್ಲ. ಹಾಗಾಗಿ ಬೆಳೆನೂ ಕೈಗ್ಹತ್ತಲ್ಲ. ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿತ್ತು. ಅಪ್ಪ-ಅಮ್ಮರನ್ನು ಊರಲ್ಲೇ ಬಿಟ್ಟು 19ನೇ ವಯಸ್ಸಿಗೆ ಮುಂಬೈಗೆ ಹೋದೆ. ಐದಾರು ವರ್ಷ ಕೆಲಸ ಮಾಡಿದೆ. ಯಾಕೋ ಸರಿ ಹೋಗಲಿಲ್ಲ. ವಾಪಸ್ ಊರಿಗೆ ಬಂದೆ.

ಊರಲ್ಲಿ ಜೀವನ ನಡೆಸೋದು ಕಷ್ಟ ಅನ್ನಿಸ್ತು. ಎಲ್ಲಾದ್ರು ಕೆಲಸ ಮಾಡುವ ಅಂತ ನಿರ್ಧರಿಸಿದೆ. ಆಗ ನೆನಪಿಗೆ ಬಂದಿದ್ದು ಬೆಂಗಳೂರು. ಮದುವೆಯಾದ ನಂತರ ಹೆಂಡತಿ ಮಕ್ಕಳೊಂದಿಗೆ ಬೆಂಗಳೂರಿಗೆ ಬಂದೆ. ಗೊತ್ತಿದ್ದವರ ಸಹಾಯದಿಂದ ಇಲ್ಲಿ ಒಂದು ಟೀ ಅಂಗಡಿ ಪ್ರಾರಂಭಿಸಿದೆ. ನಾನು ಓದಿದ್ದು ಒಂಬತ್ತನೇ ಕ್ಲಾಸು. ಈ ಕಾಲದಲ್ಲಿ 9ನೇ ಕ್ಲಾಸ್ ಓದಿದವರಿಗೆ ಯಾವ ಕೆಲಸ ಕೊಟ್ಟಾರು. ಕೆಲಸ ಸಿಕ್ಕರು ಬರೋ ಸಂಬಳದಿಂದ ಬೆಂಗಳೂರಲ್ಲಿ ಜೀವನ ನಡೆಸೋದು ಬಹಳ ಕಷ್ಟ ಅನ್ನಿಸಿ ಟೀ ಅಂಗಡಿ ಶುರುಮಾಡಿದೆ. ಬೆಳಗ್ಗೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಅಂಗಡಿಯಲ್ಲಿ ದುಡಿತೀವಿ. ಪಕ್ಕದಲ್ಲಿರುವ ಎರಡು ಆಫೀಸ್‍ಗೆ ಎರಡು ಬಾರಿ ಟೀ ಕೊಡ್ತಿನಿ. ಹಾಗಾಗಿ ಒಂದಷ್ಟು ಸಂಪಾದನೆ ಆಗ್ತಿದೆ. ಇಲ್ಲೇ ಒಂದು ಬಾಡಿಗೆ ಮನೆ ಮಾಡ್ಕೊಂಡಿದ್ದೀವಿ. ನಮ್ಮ ಮನೆಯಲ್ಲಿ ನಾನು, ಹೆಂಡತಿ, ಇಬ್ಬರು ಮಕ್ಕಳು ಇದ್ದೀವಿ. ಹೆಂಡತಿ ಅಂಗಡಿಯಲ್ಲಿ ವ್ಯಾಪಾರಕ್ಕೆ ನನಗೆ ಸಹಾಯ ಮಾಡ್ತಾಳೆ. ಮಕ್ಕಳಿಬ್ಬರನ್ನೂ ಬಿ.ಕಾಂ ಓದಿಸಿದ್ದೇನೆ. ಮಗಳಿಗೆ ಕಳೆದ ವರ್ಷ ಮದುವೆ ಮಾಡಿದೆ.

ಮಗನ ಓದು ಮುಗಿದ್ಮೇಲೆ ಬೈಯಪ್ಪನಹಳ್ಳಿ ಹತ್ರ ಉದ್ಯೋಗಕ್ಕೆ ಸೇರಿಕೊಂಡ. ಹಾಗಾಗಿ ಈಗ ಕುಟುಂಬದ ಆದಾಯ ಹೆಚ್ಚಾಯ್ತು. ಊರಲ್ಲಿ ನನ್ನ ಅಪ್ಪ-ಅಮ್ಮ ಇಬ್ಬರೆ ಇದ್ದಾರೆ. ಅವರಿಗೆ ವಯಸ್ಸಾಗಿದೆ. ದುಡಿಯೋಕೆ ಆಗಲ್ಲ, ಅವರನ್ನೂ ಚೆನ್ನಾಗಿ ನೋಡ್ಕೋಬೇಕು. ಆಗಾಗ ಊರಿಗೆ ಹೋಗಿ ಅವರ ಜೀವನಕ್ಕೂ ಒಂದಿಷ್ಟು ದುಡ್ಡು ಕೊಟ್ಟು ಬರ್ತೇವೆ. ಮೊದಲೆಲ್ಲಾ ವ್ಯಾಪಾರ ಕಡಿಮೆ ಇರ್ತಿತ್ತು. ಎಲ್ಲಾದ್ರು ಹೋಗಿ ಬರೋಣ ಅಂದ್ರೆ ಅಂಗಡಿಗೆ ಒಂದು ದಿನ ರಜಾ ಹಾಕಂಗಿಲ್ಲ, ರಜಾ ಮಾಡಿದ್ರೆ ಬರೋ ಆದಾಯ ಕಡಿಮೆ ಆಗಿ ಮನೆ ಬಾಡಿಗೆ, ಖರ್ಚು ಎಲ್ಲವನ್ನೂ ಹೊಂದಿಸೋಕೆ ಕಷ್ಟ ಆಗ್ತಿತ್ತು. ಈಗ ಪರವಾಗಿಲ್ಲ ಚೆನ್ನಾಗಿ ವ್ಯಾಪಾರ ಆಗ್ತಿದೆ. ಬಂದ ಆದಾಯದಲ್ಲಿ ಪ್ರತಿ ತಿಂಗಳು ಒಂದಷ್ಟು ಉಳಿಸ್ತಿನಿ.

ಈ 16 ವರ್ಷದಲ್ಲಿ ಕೂಡಿಟ್ಟ ಹಣದಲ್ಲಿ ಈಚೆಗೆ ಒಂದು ಬೇಕರಿ ಮಾಡಿಕೊಂಡೆ. ಆದರೆ ಟೀ ಅಂಗಡಿ ಹಾಗೂ ಬೇಕರಿ ಎರಡನ್ನೂ ನಿರ್ವಹಿಸಲು ಕಷ್ಟವಾಯಿತು. ಬೇಕರಿಯನ್ನು ಮಾರಿದೆ. ಆ ದುಡ್ಡಲ್ಲಿ ನೆಲಮಂಗಲ ಬಳಿ ಒಂದು ಚಿಕ್ಕ ಸೈಟು ಕೊಂಡುಕೊಂಡೆ. ಈಗ ಅಂಗಡಿಯ ವ್ಯಾಪಾರದಲ್ಲಿ ಜೀವಕ್ಕೇನು ತೊಂದ್ರೆ ಇಲ್ಲ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !