ಬದುಕೂ ನನ್ನದೆ.. ಆಯ್ಕೆಯೂ ನನ್ನದೆ..

7

ಬದುಕೂ ನನ್ನದೆ.. ಆಯ್ಕೆಯೂ ನನ್ನದೆ..

Published:
Updated:
Prajavani

ರಿಯಾ ಫರ್ನಾಂಡಿಸ್‌ (ಹೆಸರು ಬದಲಾಯಿಸಲಾಗಿದೆ) ಇಪ್ಪತ್ತಾರರ ಯುವತಿ. ಬೆಂಗಳೂರಿನ ಮಾಧ್ಯಮ ಸಂಸ್ಥೆಯೊಂದರಲ್ಲಿ ಸಾಕಷ್ಟು ವೇತನ ಸಿಗುವ ಉದ್ಯೋಗ. ಸೆಲೆಬ್ರಿಟಿಗಳ ಸಂದರ್ಶನ, ಮನರಂಜನ ಕಾರ್ಯಕ್ರಮಗಳನ್ನು ವರದಿ ಮಾಡುವ ಆಸಕ್ತಿದಾಯಕ ಕೆಲಸ. ಬದುಕಿನಲ್ಲೂ ಸಾಕಷ್ಟು ಜೋಶ್‌ ಇಟ್ಟುಕೊಂಡಿರುವ ಆಕೆಗೆ ಪ್ರವಾಸ, ಚಾರಣ ಎಂದರೆ ಪಂಚಪ್ರಾಣ. ಒಂದೆರಡು ದಿನಗಳ ರಜೆ ಸಿಕ್ಕರೆ ಸಾಕು, ಬ್ಯಾಕ್‌ಪ್ಯಾಕ್‌ ಏರಿಸಿ ಚಾರಣದ ಹೆಸರಲ್ಲಿ ಸಾಹಸದ ರುಚಿ ನೋಡುವಾಕೆ.

ಇಂತಹ ಚುರುಕಿನ ಹುಡುಗಿ ರಿಯಾ ಕೆಲಸಕ್ಕೆ ಇದ್ದಕ್ಕಿದ್ದಂತೆ ರಾಜೀನಾಮೆ ಕೊಟ್ಟು ಹೊರನಡೆದಾಗ ಸ್ನೇಹಿತರು, ಪರಿಚಯಸ್ಥರಿಗೆ ಅಚ್ಚರಿಯಾಗಿದ್ದು ಸಹಜ. ಇನ್ನೊಂದು ಉದ್ಯೋಗಕ್ಕೂ ಯತ್ನಿಸದ ಆಕೆ  ‘ಹಿಮಾಲಯದ ಚಾರಣಕ್ಕೆ ಹೋಗಲು ಒಟ್ಟಿಗೇ ಎರಡು ವಾರಗಳ ರಜೆ ಬೇಕಿತ್ತು. ಅನುಮತಿ ಸಿಗಲಿಲ್ಲ. ಈಗ ಯಾವಾಗ ಬೇಕಾದರೂ, ಎಲ್ಲಿಗೆ ಬೇಕಾದರೂ ಹೋಗಿ ಎಂಜಾಯ್‌ ಮಾಡಬಹುದು’ ಎಂದು ಕೂಲಾಗಿ ಉತ್ತರಿಸಿದ್ದು ಹಿರಿಯರಿಗೆ ಅಪಥ್ಯವೆನಿಸಿದರೂ ಇಂದಿನ ಯುವತಿಯರ ಮನಸ್ಥಿತಿಗೆ ಕನ್ನಡಿ ಹಿಡಿದಿದ್ದಂತೂ ನಿಜ.  

ಕಳೆದ 5–6 ತಿಂಗಳಲ್ಲಿ ಆಕೆ ಹಿಮಾಲಯ, ಕಾಶ್ಮೀರ, ನೇಪಾಳ, ಶ್ರೀಲಂಕಾ.. ಎಂದೆಲ್ಲ ಸುತ್ತಿದ್ದಾಳೆ. ‘ಹೌದು, ಹಣ ಬೇಕು. ಸದ್ಯಕ್ಕೆ ನನ್ನ ಬಳಿ ಇರುವ ಹಣ ಖರ್ಚಾಗುವ ತನಕ ತಿರುಗಿ ಆಮೇಲೆ ಬೇರೆ ಕೆಲಸ ನೋಡಿದ್ರಾಯ್ತು ಬಿಡಿ. ಕೆಲಸವೇನು ಆರಾಮಾಗಿ ಸಿಗುತ್ತೆ’ ಎಂದು ನಮಗೇ ಸಮಾಧಾನ ಹೇಳುವ ಪರಿಯಲ್ಲಿ ಪ್ರಪಂಚ ಸುತ್ತುವ ಕನಸು ಮಾತ್ರ ಇತ್ತು.

ಹೌದು, ಜಗತ್ತು ಬದಲಾಗುತ್ತಿದೆ, ಯಾರೂ ಊಹಿಸದಷ್ಟು ವೇಗವಾಗಿ. ಹುಡುಗಿಯರೆಂದರೆ ಓದು, ಉದ್ಯೋಗ, ಮದುವೆ, ಮಕ್ಕಳು, ಸಂಸಾರ.. ಎಂಬ ಸಾಂಪ್ರದಾಯಕ ನಿಲುವಿಗೆ ತಡೆಬಿದ್ದು ದೊಡ್ಡ ತಿರುವು ತೆಗೆದುಕೊಂಡು ಬಿಟ್ಟಿದೆ. ದುಡಿಯುವ ಸಲುವಾಗಿ ಮುಂದಕ್ಕೆ ದೂಡಿಸಿಕೊಂಡು ಹೋಗುವ ಮದುವೆ ವಯಸ್ಸು, ವಿವಾಹಕ್ಕಿದು ಪಕ್ವ ಕಾಲವಲ್ಲ, ಒಂದಿಷ್ಟು ಹಣ ಕೂಡಿಡುವವರೆಗೆ ಗೆಳೆಯನೊಡನೆ ಕೂಡಿಕೆ ಜೀವನ.. ಎಂದೆಲ್ಲ ಹೊಸ ನಮೂನೆಗಳನ್ನು, ಪ್ರಯೋಗಗಳನ್ನು ಪರಿಚಯಿಸಿದ ಇಂದಿನ ಮಿಲೆನಿಯಲ್‌ ತಲೆಮಾರಿನ ಯುವತಿಯರ ಇತ್ತೀಚಿನ ಟ್ರೆಂಡ್‌ ಒಳ್ಳೆಯ ನೌಕರಿಗೆ ಬೈ ಹೇಳುವುದು.

ರಿಯಾಳದ್ದು ಈ ಕಥೆಯಾದರೆ, ಬಹುರಾಷ್ಟ್ರೀಯ ಕಂಪೆನಿಯಲ್ಲಿ ಟೆಕಿಯಾಗಿದ್ದ ರಂಜನಾ ರಾಯಕರ್‌ಳದ್ದು ಧಾರಾವಾಹಿ ತರಹ. ಫೋಟೊಗ್ರಾಫಿಗೆ ಮನಸೋತು ಆರಂಕಿ ಸಂಬಳಕ್ಕೆ ವಿದಾಯ ಹೇಳಿ ಕ್ಯಾಮೆರಾ ಹಿಡಿದು ಒಂದಿಷ್ಟು ಹಕ್ಕಿ, ಮರ ಎಂದೆಲ್ಲ ಕ್ಲಿಕ್‌ ಮಾಡಿ ಬ್ಲಾಗ್‌ನಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿ ಖುಷಿಪಟ್ಟಿದ್ದೇ ಬಂತು. ಒಂದಿಷ್ಟು ಲೈಕ್‌ಗಳು, ‘ವಾವ್‌.. ಸೂಪರ್‌..’ ಎಂಬ ಪ್ರಕ್ರಿಯೆಗಳು ಮುದ ನೀಡಿದ್ದು ಬಿಟ್ಟರೆ ಮತ್ತೆ ಧುತ್ತೆಂದು ಕಾಲಿಟ್ಟಿದ್ದು ಏಕತಾನತೆಯ ಭಾವ. ಪರಿಣಾಮ ಕ್ಯಾಮೆರಾ ಮೂಲೆ ಸೇರಿ, ಒಂದಿಷ್ಟು ದಿನ ಕಂಟೆಂಟ್‌ ರೈಟಿಂಗ್‌ ಮಾಡಿದ್ದಾಯ್ತು. ಈಗ ಅದನ್ನೂ ಬಿಟ್ಟು ವಿದೇಶಿ ಗೆಳೆಯನ ಜೊತೆ ಹಂಪಿಯ ಕಲ್ಲು ಕಲ್ಲನ್ನೂ ಕೆದಕುತ್ತ ಇತಿಹಾಸಕಾರರು ಏನನ್ನಾದರೂ ಉಳಿಸಿದ್ದಾರೆಯೇ ಎಂದು ಹುಡುಕಾಡುತ್ತಿದ್ದಾಳೆ. 

‘ನಾನ್ಯಾಕೆ 8–10 ತಾಸು ಕಚೇರಿಯಲ್ಲಿ ಕೂತು ನನ್ನ ಜೀವನ ಕಳೆಯಬೇಕು. ಮನೆಗೆ ಬಂದರೂ ಪ್ರಾಜೆಕ್ಟ್‌ ಪೂರ್ಣಗೊಳಿಸಬೇಕು ಎಂಬ ಆತಂಕ. ಇದೇ ರೀತಿ ಮುಂದುವರಿಸಿಕೊಂಡು ಹೋದರೆ ಬಿಪಿ, ಶುಗರ್‌ ಎಂದೆಲ್ಲ ಬರಲು ಹೆಚ್ಚು ಸಮಯ ಬೇಡ. ಜೊತೆಗೆ ಖಾಲಿತನದ ಭಾವ. ಅದಕ್ಕೇ ಬಿಟ್ಟುಬಿಟ್ಟೆ. ಹಣ.. ಹೇಗೋ ಹೊಂದಿಸಿದರಾಯಿತು ಬಿಡಿ. ಮದುವೆ, ಮಕ್ಕಳೂ ಬೇಕು. ಆದರೆ ಸದ್ಯಕ್ಕಿಲ್ಲ. ಒಂದಿಷ್ಟು ಮಳೆ, ಚಳಿಯ ಸುಖ ಅನುಭವಿಸುವೆ’ ಎಂಬ ಮಾತಿನಲ್ಲಿ ಭವಿಷ್ಯದ ಚಿಂತೆ ಎಳ್ಳಷ್ಟೂ ಇರಲಿಲ್ಲ. ಈ ಹುಡುಗಿಯರು ಮುಂದೇನು ಮಾಡಬೇಕು; ಭವಿಷ್ಯದ ಪ್ರಶ್ನೆಯಿದು ಎಂದೆಲ್ಲ ತಲೆಕೆಡಿಸಿಕೊಳ್ಳದೇ ಉದ್ಯೋಗ ತ್ಯಜಿಸುತ್ತ ಹೋಗುತ್ತಿರುವುದು ಸಾಮಾಜಿಕ ವ್ಯವಸ್ಥೆಯಲ್ಲಿ ತುಸು ಸಂಚಲನ ಮೂಡಿಸಿದೆ. 

‘ಈಗ ನಾಲ್ಕೈದು ವರ್ಷಗಳಿಂದ ಇದ್ದಕ್ಕಿದ್ದಂತೆ ಉದ್ಯೋಗ ತ್ಯಜಿಸುವುದು ಯುವಕರಲ್ಲಿ ಕಂಡು ಬಂದಿರುವ ಪ್ರವೃತ್ತಿ. ಇದು ಪಾಶ್ಚಾತ್ಯೀಕರಣ ಪ್ರಭಾವ ಎಂದುಕೊಂಡಿದ್ದೆವು. ಯುವತಿಯರಲ್ಲಿ ಸ್ವಾವಲಂಬನೆಯ ಮನಸ್ಥಿತಿ, ಸಾಮಾಜಿಕ, ಆರ್ಥಿಕ ಭದ್ರತೆಗೆ ಹೆಚ್ಚು ಒತ್ತು ಕೊಡುವ ಪ್ರವೃತ್ತಿ ಇರುವುದರಿಂದ ಉದ್ಯೋಗಕ್ಕೆ ಅಂಟಿಕೊಂಡಿರುತ್ತಾರೆ ಎಂದರೆ ಅದೂ ಈಗ ಸುಳ್ಳಾಗುತ್ತಿದೆ’ ಎನ್ನುತ್ತಾರೆ ಮಾನವ ಸಂಪನ್ಮೂಲ ಸಂಸ್ಥೆಯೊಂದರಲ್ಲಿ 15–20 ವರ್ಷಗಳಿಂದ ಕೆಲಸ ಮಾಡುತ್ತಿರುವ ಪಮೇಲಾ ಜಾರ್ಜ್‌.      

ಕ್ವಿಟರ್‌’ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವ ಇಂಥವರಿಗೆ ಉದ್ಯೋಗ ಸಾಂಪ್ರದಾಯಕವಾಗಿರಬಾರದಂತೆ. ಅಂದರೆ ಹೇಗೆ ಬೇಕೋ ಹಾಗೆ ಒಗ್ಗಿಕೊಳ್ಳುವಂತಿರಬೇಕು. ತಮ್ಮ ಆಸಕ್ತಿಯನ್ನು ಮುಂದುವರಿಸಲು ಹೆಚ್ಚಿನ ರಜಾ ದಿನಗಳು, ಮಧ್ಯೆ 3–4 ತಿಂಗಳು ಬ್ರೇಕ್‌ ತೆಗೆದುಕೊಂಡು ಮತ್ತೆ ಅದೇ ಉದ್ಯೋಗದಲ್ಲಿ ಮುಂದುವರಿಯುವುದು, ಯಾವುದೇ ಒಪ್ಪಂದ ಅಥವಾ ನಿಯಮಗಳನ್ನು ಹೇರಬಾರದು, ಹುಡುಗಿಯರು ಎಂಬ ತಾರತಮ್ಯವಂತೂ ಇರಲೇ ಕೂಡದು.. ಹೀಗೆ ಅವರ ಬೇಡಿಕೆಗಳು ಮುಂದುವರಿಯುತ್ತವೆ.

ಉಳಿದಿರುವ ಆಯಸ್ಸು ಬಹಳ ಕಮ್ಮಿಯಾದರೂ, ಜಗತ್ತು ವಿಶಾಲವಾಗಿದೆ. ನಮಗೆ ಏನು ಇಷ್ಟವೋ ಅದನ್ನು ಮಾಡುವ ಸ್ವಾತಂತ್ರ್ಯವೂ ಇದೆ. ಜೀವನ ನಿರ್ವಹಣೆಗೆ ಪರ್ಯಾಯ ಮಾರ್ಗ ಹುಡುಕಿಕೊಳ್ಳಬಹುದು. ಹಣ ಕೂಡಿಟ್ಟು ಏನಾಗಬೇಕಾಗಿದೆ. ನನ್ನ ಬದುಕು, ನನ್ನ ಆಯ್ಕೆ... ಈ ಮನೋಧರ್ಮ ಹಲವರದ್ದು. ಸಂಪ್ರದಾಯಸ್ಥರಿಗೆ ವಿಚಿತ್ರವೆನಿಸಿದರೂ ಸ್ವತಂತ್ರ ಮನೋಭಾವದ ಹುಡುಗಿಯರಿಗಿದು ಮಾಮೂಲು.  

* ಮಿಲೆನಿಯಲ್‌ ಯುವತಿಯರು ಹಣ, ಭವಿಷ್ಯದ ಭದ್ರತೆಗಿಂತ ವೈಯಕ್ತಿಕ ಆಸಕ್ತಿ, ಆಸೆಗಳನ್ನು ಪೂರೈಸಿಕೊಳ್ಳುವತ್ತ ಮುಖ ಮಾಡುತ್ತಿದ್ದಾರೆ. ಕೌಟುಂಬಿಕ ವ್ಯವಸ್ಥೆಯ ಕೊಂಡಿಯನ್ನು ಕಳಚಿಕೊಂಡಿರುವುದು, ಸ್ವತಂತ್ರ ಮನೋಭಾವ ಬೆಳೆಸಿಕೊಂಡಿರುವುದರ ಜೊತೆಗೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವವೂ ಇದಕ್ಕೆ ಕಾರಣ ಎನ್ನಬಹುದು.

– ಡಾ.ಎಸ್‌.ವಿ.ಬೋರಾ, ಸಾಮಾಜಿಕ ಬದಲಾವಣೆ ವಿಶ್ಲೇಷಕ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !