ಗುರುವಾರ , ಫೆಬ್ರವರಿ 20, 2020
25 °C

ಕೇಂದ್ರ ಬಜೆಟ್ 2020 Live | ಪ್ರತಿಕ್ರಿಯೆಗಳು: ಸ್ವಲ್ಪ ಹುಳಿ; ಸ್ವಲ್ಪ ಸಿಹಿ

Published:
Updated:
ಆರ್ಥಿಕ ಪುನಶ್ಚೇತನದ ಭರವಸೆ ನೀಡಿದ್ದ ಕೇಂದ್ರ ಬಜೆಟ್‌ ತೆರಿಗೆ ಕಡಿತ, ಕಿಸಾನ್ ಎಕ್ಸ್‌ಪ್ರೆಸ್‌, ಆರೋಗ್ಯ ಯೋಜನೆಗಳ ವಿಸ್ತಾರ ಸೇರಿದಂತೆ ಹಲವು ಜನಕಲ್ಯಾಣ ಯೋಜನೆಗಳನ್ನು ಘೋಷಿಸಿದೆ. ಇದರ ಜೊತೆಜೊತೆಗೆ ಜಿಎಸ್‌ಟಿ, ನೇರ ತೆರಿಗೆ ಪರಿಷ್ಕರಣೆಯ ಭರವಸೆ ನೀಡಿದೆ. ‘ವಿಶ್ವದ ಆರ್ಥಿಕ ಪರಿಸ್ಥಿತಿಯನ್ನು ದೇಶದ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳುವ ಬಗ್ಗೆ ಯೋಚಿಸೋಣ’ ಎಂದು ನಿನ್ನೆಯಷ್ಟೇ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣದಲ್ಲಿ ಹೇಳಿದ್ದರು. ಈ ಆಶಯ ಎಷ್ಟರಮಟ್ಟಿಗೆ ಈಡೇರಿದೆ? ದೇಶದ ಸದ್ಯದ ಪರಿಸ್ಥಿತಿಯನ್ನು ಸುಧಾರಿಸಲು ಈ ಬಜೆಟ್ ಪೂರಕವಾಗಿ ಕೆಲಸ ಮಾಡೀತೇ? ದೇಶದ ವಿವಿಧ ರಾಜಕೀಯ ನಾಯಕರು, ಉದ್ಯಮಿಗಳು ಮತ್ತು ಜನಸಾಮಾನ್ಯರ ಪ್ರತಿಕ್ರಿಯೆ ಇಲ್ಲಿದೆ.
 • 05:08 pm

  ಈ ಬಜೆಟ್‌ ನನಗೆ ಅರ್ಥವೇ ಆಗುತ್ತಿಲ್ಲ: ಪಿ.ಚಿದಂಬರಂ

  ‘ಬಜೆಟ್‌ 2020–21 ಏನು ಸಂದೇಶ ಸಾರುತ್ತಿದೆ ಎಂದು ಅರ್ಥಮಾಡಿಕೊಳ್ಳುವಲ್ಲಿ ನಾನು ಸೋತಿದ್ದೇನೆ. ಬಜೆಟ್‌ ಭಾಷಣದ ಯಾವೊಂದು ಉತ್ತಮ ಯೋಜನೆ ಅಥವಾ ವಾಕ್ಯವನ್ನು ನೆನಪಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಪಿ ಚಿದರಂಬರಂ ಬಜೆಟ್‌ ಕುರಿತು ಪ್ರತಿಕ್ರಿಯಿಸಿದ್ದಾರೆ.
   
  ‘ನನಗಷ್ಟೇ ಅಲ್ಲ, ಬಿಜೆಪಿಯ ನಿಷ್ಠಾವಂತ ಸಂಸದ ಅಥವಾ ಬೆಂಬಲಿಗನೂ ಭಾಷಣದ ಯಾವೊಂದು ಅಂಶವನ್ನು ನೆನಪಿಟ್ಟುಕೊಂಡಿರುತ್ತಾನೆ ಎಂದು ಅನ್ನಿಸುವುದಿಲ್ಲ. ನನ್ನ ಪ್ರಕಾರ ಮುಖ್ಯ ಆರ್ಥಿಕ ಸಲಹೆಗಾರ ಅತ್ಯಂತ ನಿರಾಶೆಗೊಂಡ ವ್ಯಕ್ತಿಯಾಗಿರಬೇಕು’ ಎಂದು ಟೀಕಿಸಿದ್ದಾರೆ.

 • 04:54 pm

  ಎಲ್‌ಐಸಿ ಷೇರು ಮಾರಾಟ ಯೋಜನೆಯನ್ನು ಯುಗಾಂತ್ಯ ಎಂದ ಮಮತಾ

  ಎಲ್‌ಐಸಿ ಷೇರುಗಳನ್ನು ಮಾರಾಟ ಮಾಡುವ ಸರ್ಕಾರದ ಘೋಷಣೆ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಟುವಾಗಿ ಟೀಕಿಸಿದ್ದಾರೆ. ಸಾರ್ವಜನಿಕ ಸಂಸ್ಥೆಗಳ ಪರಂಪರೆಯನ್ನು ಅಳಿಸಿಹಾಕುವ ಯೋಜನೆ ಎಂದು ಬಣ್ಣಿಸಿದ್ದಾರೆ.

   ‘ಸಾರ್ವಜನಿಕ ಸಂಸ್ಥೆಗಳ ಪರಂಪರೆಯನ್ನು ಕೇಂದ್ರ ಸರ್ಕಾರ ಹೇಗೆ ಹಾಳುಮಾಡುತ್ತಿದೆ ಎನ್ನುವುದನ್ನು ನೋಡಿ ಅಚ್ಚರಿ ಮತ್ತು ದಿಗಿಲು ಉಂಟಾಯಿತು. ಭದ್ರತೆ ಭಾವದ ಅಂತ್ಯವಿದು’ ಎಂದು ಟ್ವೀಟ್‌ ಮಾಡಿದ್ದಾರೆ.

   

 • 04:26 pm

  ರೈತರ ಮೂಗಿಗೆ ತುಪ್ಪ ಸವರಿದ ಬಜೆಟ್: ಸಿದ್ದರಾಮಯ್ಯ ಟೀಕೆ

  ಕೃಷಿ ಬೆಳವಣಿಗೆ ಶೇ. 2.5 ಮಾತ್ರ ಮೀಸಲಿಡಲಾಗಿದೆ. ಆದರೆ, ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹೇಳುತ್ತಿದೆ. ರೈತರ ಆದಾಯ ದ್ವಿಗುಣ ಆಗಬೇಕಾದರೆ ಕೃಷಿ ಬೆಳವಣಿಗೆ ಕನಿಷ್ಠ ಶೇ.10 ರಷ್ಟು ಇರಬೇಕು.  ಅಷ್ಟು ಬೆಳವಣಿಗೆ ಆಗುವ ಯಾವುದೇ ಆಶಾ ಭಾವನೆ ಕಾಣುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ರೈತರ ಮೂಗಿಗೆ ತುಪ್ಪ ಸವರುತ್ತಿದೆ ಎಂದು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

  ರೈತರ ಹೆಸರಿನಲ್ಲಿ ವರ್ಣರಂಜಿತ ಹೆಸರುಗಳ ಯೋಜನೆ ಘೋಷಿಸಲಾಗಿದೆ. ಕಿಸಾನ್ ಉಡಾನ್‌ನಿಂದ ಸಾಮಾನ್ಯ ರೈತರಿಗೆ ಅನುಕೂಲ ಆಗುತ್ತಾ? ಎಂದು ಪ್ರಶ್ನಿಸಿರುವ ಅವರು, ಕೃಷಿ ಕ್ಷೇತ್ರವನ್ನೂ ಖಾಸಗೀಕರಣ ಮಾಡಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.

  ಭೂಮಿ ಗುತ್ತಿಗೆ, ಎಪಿಎಂಸಿ ಅಮೂಲಾಗ್ರ ಬದಲಾವಣೆ, ಮಾರುಕಟ್ಟೆ ಬದಲಾವಣೆ ಮಾಡುತ್ತೇವೆ ಅಂತ ಹೇಳಿದ್ದಾರೆ. ಇವೆಲ್ಲವೂ ಕೃಷಿ ವಲಯದ ಖಾಸಗೀಕರಣದ ಭಾಗವಾಗಿದೆ. ಎಲ್ಲ ರೈತರ ಬಳಿ ನೂರಾರು ಎಕರೆ ಜಮೀನು ಇರೋದಿಲ್ಲ. 1- 2 ಎಕರೆ ಜಮೀನು ಇರುವ ಸಣ್ಣ ರೈತರಿಗೆ ಪೂರಕವಾದ ಯಾವುದೇ ಯೋಜನೆ ರೂಪಿಸಿಲ್ಲ ಎಂದು ಟೀಕಿಸಿದರು.

 • 04:05 pm

  ಆರ್ಥಿಕ ಹಿಂಜರಿತ ಸುಧಾರಣೆಗೆ ಯಾವುದೇ ಯೋಜನೆ ಇಲ್ಲ: ಯೆಚೂರಿ

  ‘ಇದು ಬಜೆಟ್‌ ಇಲ್ಲದ, ಅತ್ಯಂತ ವಿಸ್ತೃತ ಬಜೆಟ್‌ ಭಾಷಣವಾಗಿದೆ. ಸದಸ್ಯರು ಊಟಕ್ಕೆ ಹೋಗುವುದಕ್ಕೆ ಬಜೆಟ್‌ ಭಾಷಣವನ್ನು ಮುಗಿಸಿ ಎಂದು ಹೇಳಿಸಿಕೊಂಡಿರುವುದು ಬಹುಶಃ ನಿರ್ಮಲಾ ಸೀತಾರಾಮನ್‌ ಅವರೊಬ್ಬರೇ ಇರಬೇಕು’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟೀಕಿಸಿದರು.

   ‘ಆರ್ಥಿಕ ಹಿಂಜರಿತ ಸುಧಾರಣೆಗೆ ಬಜೆಟ್‌ನಲ್ಲಿ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ. ಇಂತಹ ಆರ್ಥಿಕತೆಯನ್ನು ಸರಿದಾರಿಗೆ ತರುವ ಯಾವುದೇ ಮಾರ್ಗಸೂಚಿಗಳು ಇರಲಿಲ್ಲ’ ಎಂದರು.

 • 03:48 pm

  ದೆಹಲಿಗೆ ಮತ್ತೊಮ್ಮೆ ಮಲತಾಯಿ ಧೋರಣೆ: ಕೇಜ್ರಿವಾಲ್‌

  ಕೇಂದ್ರ ಬಜೆಟ್‌ನಲ್ಲಿ ದೆಹಲಿಗೆ ಈ ಬಾರಿಯೂ ಮಲತಾಯಿ ಧೋರಣೆಯನ್ನು ತೋರಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಟ್ವೀಟ್‌ನಲ್ಲಿ ಬೇಸರ ವ್ಯಕ್ತಪಡಿಸಿದರು.

  ‘ಬಿಜೆಪಿ ಆದ್ಯತೆಯಲ್ಲಿ ದೆಹಲಿ ಇಲ್ಲವಾದಾಗ, ಜನರು ಅದಕ್ಕೆ ಏಕೆ ಮತ ಹಾಕಬೇಕು?’ ಎಂದು ಪ್ರಶ್ನಿಸಿದ್ದಾರೆ.  
   

 • 03:37 pm

  ಹುರುಳಿಲ್ಲದ ಬಜೆಟ್‌ ಇದಾಗಿದೆ: ರಾಹುಲ್‌ ಗಾಂಧಿ

  ಬಹುಶಃ ಸುದೀರ್ಘ ಬಜೆಟ್‌ ಭಾಷಣ ಇದೇ ಆಗಿರಬೇಕು. ಆದರೆ, ಆ ಬಜೆಟ್‌ ಒಳಗೆ ಯಾವುದೇ ಉತ್ತಮ ಅಂಶಗಳೂ ಇಲ್ಲ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಟೀಕಿಸಿದರು.

  ಕಾರ್ಯತಂತ್ರದ ಕಲ್ಪನೆ ಅಥವಾ ಯಾವುದೇ ಸದೃಢ ಅಂಶವನ್ನು ಈ ಬಜೆಟ್‌ ಹೊಂದಿಲ್ಲ. ಮುಖ್ಯವಾಗಿ ಯುವ ಜನತೆಗೆ ಹೆಚ್ಚು ಅಗತ್ಯವಿರುವ ಉದ್ಯೋಗ ಕುರಿತು ಏನೂ ಹೇಳಿಲ್ಲ ಎಂದರು.

 • 03:15 pm

  ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಬಜೆಟ್‌ –ಅಮಿತ್‌ ಶಾ

  ಬ್ಯಾಂಕ್‌ ವ್ಯವಸ್ಥೆಯನ್ನು ಸದೃಢ‍ ಪಡಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಹೆಜ್ಜೆಗಳನ್ನು ಈ ಬಜೆಟ್‌ನಲ್ಲಿ ಇಡಲಾಗಿದೆ ಎಂದು ಬಜೆಟ್‌ ಕುರಿತು ಗೃಹ ಸಚಿವ ಸಂತಸ ವ್ಯಕ್ತಪಡಿಸಿದ್ದಾರೆ
 • 03:05 pm

  ರೈತರು, ಬಡವರು, ಗ್ರಾಮೀಣ ಭಾಗಕ್ಕೆ ಹೆಚ್ಚು ಒತ್ತು-ಯಡಿಯೂರಪ್ಪ

  ಪ್ರಧಾನಿ ಹಾಗೂ ಹಣಕಾಸು ಸಚಿವರಿಗೆ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ‘ದೇಶದ ಜಿಡಿಪಿ ಪ್ರಗತಿಗೆ ಕಾರಣವಾಗುವ ಬಜೆಟ್‌ ಇದಾಗಿದೆ’ ಎಂದರು.

  ‘ರೈತರು, ಬಡವರು ಮತ್ತು ಗ್ರಾಮೀಣ ಭಾಗಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ರೈತನ ಆದಾಯ ಹೆಚ್ಚಳಕ್ಕೆ ಕ್ರಮಕೈಗೊಳ್ಳಲಾಗಿದೆ. ವಿದ್ಯುತ್ ಸ್ವಾವಲಂಬನೆ ಸಾಧಿಸಲು, ಸೌರ ಪಂಪ್ ಸೆಟ್ ಒದಗಿಸಲು ಯೋಜನೆಗಳನ್ನು ರೂಪಿಸಲಾಗಿದೆ’ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

 • 02:52 pm

  ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಆರಂಭಕ್ಕೆ ಸದಾನಂದ ಗೌಡ ಅಭಿನಂದನೆ

  ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಆರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ನಿರ್ಮಲಾ ಸೀತಾರಾಮನ್‌ ಮತ್ತು ನಿತಿಗ್‌ ಗಡ್ಕರಿ ಅವರಿಗೆ ಅಭಿನಂದನೆ ಸಲ್ಲಿಸಿ ಸಂಸದ ಸದಾನಂದ ಗೌಡ ಅವರು ಟ್ವೀಟ್‌ ಮಾಡಿದ್ದಾರೆ. 

   

 • 02:50 pm

  ಆರ್ಥಿಕತೆ ಗುರಿ ತಲುಪುವ ಬಜೆಟ್‌ –ನಿತಿನ್ ಗಡ್ಕರಿ

  ಮೂಲಸೌಕರ್ಯದಿಂದ ಉದ್ಯಮಕ್ಕೆ, ರೈತನಿಂದ ಉದ್ಯೋಗ ಸೃಷ್ಟಿಗೆ... ನನಗೆ ವಿಶ್ವಾಸವಿದೆ ಈ ಬಜೆಟ್‌, 1 ಲಕ್ಷ ಕೋಟಿ ಆರ್ಥಿಕತೆಯ ಗುರಿಯನ್ನು ಸಾಧಿಸುತ್ತದೆ ಎಂದು ನಿತಿಗ್‌ ಗಡ್ಕರಿ ಟ್ವೀಟ್‌ ಮಾಡಿದ್ದಾರೆ.