ಹೆಚ್ಚು ಆದಾಯ ಸಂಗ್ರಹ ಗುರಿ

7
ಸಾಲ ಮನ್ನಾಕ್ಕಾಗಿ ಸಂಪನ್ಮೂಲ: ರಾಜ್ಯ ಸರ್ಕಾರ ಪರದಾಟ

ಹೆಚ್ಚು ಆದಾಯ ಸಂಗ್ರಹ ಗುರಿ

Published:
Updated:

ಬೆಂಗಳೂರು: ರೈತರ ಸಾಲ ಮನ್ನಾಕ್ಕಾಗಿ ಸಂಪನ್ಮೂಲ ಸಂಗ್ರಹಿಸಲು ಪರದಾಡುತ್ತಿರುವ ರಾಜ್ಯ ಸರ್ಕಾರ, ನಿಗದಿ ಮಾಡಿದ್ದಕ್ಕಿಂತ ಹೆಚ್ಚು ಆದಾಯ ಸಂಗ್ರಹಿಸಿಕೊಡುವಂತೆ ನಾಲ್ಕು ಪ್ರಮುಖ ಇಲಾಖೆಗಳಿಗೆ ತಾಕೀತು ಮಾಡಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇದೇ 5 ರಂದು ಬಜೆಟ್‌ ಮಂಡಿಸಲಿದ್ದು, ಸುಮಾರು ₹ 30,000 ಕೋಟಿ ಸಾಲ ಮನ್ನಾ ಪ್ರಕಟಿಸುವ ಸಾಧ್ಯತೆ ಇದೆ. ಆದ್ದರಿಂದ, ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಹಾಗೂ ಸಾರಿಗೆ ಇಲಾಖೆಗಳಿಗೆ ಅತಿ ಹೆಚ್ಚು ತೆರಿಗೆ ಸಂಗ್ರಹಿಸಲು ಗುರಿ ನಿಗದಿ ಮಾಡಲಾಗಿದೆ.

2018 ರ ಮಾರ್ಚ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ (ಲೇಖಾನುದಾನ) ಬಜೆಟ್‌ ಮಂಡಿಸಿದಾಗ ₹1 .01 ಲಕ್ಷ ಕೋಟಿ ಆದಾಯ ಸಂಗ್ರಹಿಸುವಂತೆ ಈ ಇಲಾಖೆಗಳಿಗೆ ಗುರಿ ನಿಗದಿ ಮಾಡಲಾಗಿತ್ತು. ಅವುಗಳಲ್ಲಿ ಅತ್ಯಧಿಕ ಗುರಿ ವಾಣಿಜ್ಯ ತೆರಿಗೆ ಇಲಾಖೆಗೆ (₹ 65,800 ಕೋಟಿ) ನಿಗದಿ ಮಾಡಲಾಗಿತ್ತು. ಅಬಕಾರಿ ₹ 18,750 ಕೋಟಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ₹ 10,400 ಕೋಟಿ ಮತ್ತು ಸಾರಿಗೆ ಇಲಾಖೆಗೆ ₹ 10,400 ಕೋಟಿ ಸಂಗ್ರಹಿಸಿ ಕೊಡಲು ಕಟ್ಟಪ್ಪಣೆ ಮಾಡಲಾಗಿತ್ತು.

ಇತ್ತೀಚೆಗೆ ಈ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಕುಮಾರಸ್ವಾಮಿ, ಪ್ರತಿಯೊಂದು ಇಲಾಖೆಯೂ ಈಗಾಗಲೇ ನಿಗದಿಯಾಗಿರುವ ಗುರಿಗಿಂತಲೂ ಹೆಚ್ಚುವರಿಯಾಗಿ ₹ 3000 ದಿಂದ ₹3500 ಕೋಟಿ ಸಂಗ್ರಹಿಸಬೇಕು. ಅಲ್ಲದೆ, ತೆರಿಗೆ ಸೋರಿಕೆಯನ್ನು ತಡೆಯಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

‘ಸರ್ಕಾರ ನಿಗದಿ ಮಾಡಿರುವ ಗುರಿ ವಾಸ್ತವಕ್ಕೆ ದೂರವಾಗಿದೆ. ಇಷ್ಟು ಸಂಗ್ರಹಿಸುವುದು ಕಷ್ಟದ ಕೆಲಸ’ ಎಂದು ಈ ಇಲಾಖೆಗಳ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಆರ್ಥಿಕ ವರ್ಷದಲ್ಲಿ ಆದಾಯ ಮಿಗತೆ ಪ್ರಮಾಣ ಹಿಂದೆಂದಿಗಿಂತಲೂ ಕಡಿಮೆಯಾಗುವ ಸಾಧ್ಯತೆಯಿದೆ (₹ 127 ಕೋಟಿ) ಎಂದು ಅಂದಾಜು ಮಾಡಲಾಗಿದೆ. ಆದ್ದರಿಂದ ಸಂಪನ್ಮೂಲ ಸಂಗ್ರಹ ಹೆಚ್ಚಿಸುವುದಕ್ಕಾಗಿ ಕುಮಾರಸ್ವಾಮಿ ಸರ್ವ ಪ್ರಯತ್ನ ನಡೆಸಿದ್ದಾರೆ. ಯೋಜನೆ ಮತ್ತು ಯೋಜನೇತರ ಬಾಬ್ತುಗಳಲ್ಲಿ ಅನಗತ್ಯ ಖರ್ಚುಗಳನ್ನು ತಡೆಯಲೂ ಕ್ರಮ ತೆಗೆದುಕೊಂಡಿದ್ದಾರೆ.

ಈ ಹಿಂದೆ ಜಗದೀಶ ಶೆಟ್ಟರ್‌ ಮುಖ್ಯಮಂತ್ರಿ ಆಗಿದ್ದಾಗ ಅಧಿಕ ಸಂಪನ್ಮೂಲ ಸಂಗ್ರಹಕ್ಕಾಗಿ ಮೌಲ್ಯ ವರ್ಧಿತ ತೆರಿಗೆ ದರವನ್ನು ಹೆಚ್ಚಿಸಿದ್ದರು. ಕುಮಾರಸ್ವಾಮಿಯವರೂ ಅಂತಹುದೇ ಕ್ರಮ ಅನುಸರಿಸುವ ಸಾಧ್ಯತೆ ಇದೆ. ಕೆಲವು ಬಗೆಯ ತೆರಿಗೆಗಳ ದರ ಹೆಚ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಸೇವೆ, ಬಳಕೆದಾರರ ಶುಲ್ಕ, ವಿವಿಧ ಬಗೆಯ ದಂಡಗಳ ದರವನ್ನು ಪರಿಷ್ಕರಿಸಲು ಸರ್ಕಾರ ಉದ್ದೇಶಿಸಿದೆ. ಹಲವು ವರ್ಷಗಳಿಂದ ಇವುಗಳ ಪರಿಷ್ಕರಣೆ ಆಗಿಲ್ಲ. ಈ ಮೂಲಕ ತೆರಿಗೆಯೇತರ ಮೂಲಗಳಿಂದಲೂ ಹೆಚ್ಚು ಸಂಪನ್ಮೂಲ ಸಂಗ್ರಹಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !