27 ಸಾವಿರ ಅರ್ಹ ರೈತರು, ಶೇ 73ರಷ್ಟು ದೃಢೀಕರಣ ಪೂರ್ಣ

7
ವಾಣಿಜ್ಯ ಬ್ಯಾಂಕುಗಳ ಬೆಳೆ ಸಾಲ ಮನ್ನಾ: ರೈತರ ಸ್ವಯಂ ದೃಢೀಕರಣಕ್ಕೆ ಇನ್ನು 3 ದಿನ ಬಾಕಿ

27 ಸಾವಿರ ಅರ್ಹ ರೈತರು, ಶೇ 73ರಷ್ಟು ದೃಢೀಕರಣ ಪೂರ್ಣ

Published:
Updated:
Prajavani

ಚಾಮರಾಜನಗರ: ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಬೆಳೆ ಸಾಲದಲ್ಲಿ ₹2 ಲಕ್ಷದವರೆಗಿನ ಮೊತ್ತ ಮನ್ನಾ ಮಾಡುವ ಯೋಜನೆ ಭಾಗವಾಗಿ ಜಿಲ್ಲೆಯಾದ್ಯಂತ ಬ್ಯಾಂಕುಗಳಲ್ಲಿ ರೈತರ ಸ್ವಯಂ ದೃಢೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಹ ರೈತರ ಪೈಕಿ ಶೇ 73ರಷ್ಟು ಮಂದಿ ಈಗಾಗಲೇ ಸ್ವಯಂ ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದಾರೆ. 

ಜಿಲ್ಲೆಯಲ್ಲಿ ಸಾಲಮನ್ನಾ ಯೋಜನೆಗೆ 27,002 ಅರ್ಹ ರೈತರನ್ನು ಜಿಲ್ಲಾಡಳಿತ ಗುರುತಿಸಿದೆ. ರೈತರು ಆಯಾ ಬ್ಯಾಂಕುಗಳಿಗೆ ತೆರಳಿ ಸಾಲ ಇರುವುದನ್ನು ದೃಢೀಕರಿಸಿಕೊಳ್ಳಲು ಡಿಸೆಂಬರ್‌ 15ರಿಂದ ಅವಕಾಶ ನೀಡಲಾಗಿದೆ. ಜನವರಿ 10ರವರೆಗೆ ಈ ಪ್ರಕ್ರಿಯೆ ನಡೆಯಲಿದೆ. 

ಗುರುತಿಸಲಾಗಿರುವ ಅರ್ಹ ರೈತರ ಪೈಕಿ 19,678 (ಶೇ 72.87) ಮಂದಿ ಈಗಾಗಲೇ (ಶನಿವಾರದವರೆಗೆ) ಬ್ಯಾಂಕುಗಳಿಗೆ ತೆರಳಿ ಸ್ವಯಂ ದೃಢೀಕರಣ ಮಾಡಿದ್ದಾರೆ. ಇನ್ನೂ ಮೂರು ದಿನವಷ್ಟೇ ಬಾಕಿ ಉಳಿದಿದ್ದು, ಎಲ್ಲ ರೈತರಿಗೂ ಸ್ವಯಂ ದೃಢೀಕರಣ ಮಾಡಲು ಸಾಧ್ಯವಾಗಲಿದೆಯೇ ಎಂಬ ಪ‍್ರಶ್ನೆ ಎದ್ದಿದೆ.

ಸಮರೋಪಾದಿ ಕಾರ್ಯ: ಶೇ 100ರಷ್ಟು ದೃಢೀಕರಣ ಆಗಬೇಕು ಎಂಬ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಬ್ಯಾಂಕುಗಳು  ಶ್ರಮಿಸುತ್ತಿವೆ. ಸರ್ಕಾರದಿಂದಲೂ ಜಿಲ್ಲಾಡಳಿತದ ಮೇಲೆ ಒತ್ತಡ ಇದೆ. ಪ್ರತಿ ವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಅವರು ಜಿಲ್ಲಾಡಳಿತದೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಯೋಜನೆ ಪ್ರಗತಿಯನ್ನು ಪರಿಶೀಲಿಸುತ್ತಿದ್ದಾರೆ.

‌ರೈತರ ಸ್ವಯಂ ದೃಢೀಕರಣ ಪ್ರಕ್ರಿಯೆ ಅನುಷ್ಠಾನಕ್ಕಾಗಿ ಜಿಲ್ಲಾ, ತಾಲ್ಲೂಕು ಮಟ್ಟಗಳಲ್ಲಿ ಕೋಶಗಳನ್ನು ರಚಿಸಲಾಗಿದೆ. ಬ್ಯಾಂಕುಗಳಿಗೆ ನೆರವಾಗಲು ಗ್ರಾಮ ಲೆಕ್ಕಿಗರನ್ನೂ ಬಳಸಿಕೊಳ್ಳಲಾಗುತ್ತಿದೆ. ರೈತರ ಧೃಢೀಕರಣ ಸಂದರ್ಭದಲ್ಲಿ ಸಮಸ್ಯೆ ಎದುರಾದರೆ ಬ್ಯಾಂಕ್‌ ಸಿಬ್ಬಂದಿಗೆ ಇವರು ಸಹಾಯ ಮಾಡುತ್ತಿದ್ದಾರೆ. 

ಜಾಗೃತಿಗೆ ಕ್ರಮ: ‘ಎಲ್ಲ ಅರ್ಹ ರೈತರೂ ಬ್ಯಾಂಕುಗಳಿಗೆ ಬಂದು ನೋಂದಣಿ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಬ್ಯಾಂಕುಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಗ್ರಾಮ ಲೆಕ್ಕಿಗರು ಕೂಡ ನಮಗೆ ಸಹಾಯ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಸುನಂದಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ರೈತರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಕ್ರಮಕೈಗೊಳ್ಳಲಾಗಿದೆ. ಸಂಪನ್ಮೂಲ ವ್ಯಕ್ತಿಗಳ ಮೂಲಕ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಗ್ರಾಮ ಲೆಕ್ಕಿಗರು ಕೂಡ ರೈತರನ್ನು ಬ್ಯಾಂಕುಗಳಿಗೆ ಕರೆ ತರಲು ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಏನೆಲ್ಲ ದಾಖಲೆಗಳು ಬೇಕು?: ರೈತರು ವಾಣಿಜ್ಯ ಬ್ಯಾಂಕುಗಳಿಗೆ ತೆರಳಿ ಬೆಳೆ ಸಾಲ ಇರುವ ಬಗ್ಗೆ ಸ್ವಯಂ ದೃಢೀಕರಣ ಮಾಡಿಕೊಳ್ಳುವ ಸಂದರ್ಭದಲ್ಲಿ ಜಮೀನು ಸರ್ವೆ ನಂಬರ್‌ (ಪಹಣಿ), ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್‌ಗಳನ್ನು ದಾಖಲೆಗಳಾಗಿ ಸಲ್ಲಿಸಬೇಕು.

ಪ್ರತ್ಯೇಕ ತಂತ್ರಾಂಶ: ಸಾಲಮನ್ನಾ ಯೋಜನೆಗಾಗಿಯೇ ಕಂದಾಯ ಇಲಾಖೆ ತಂತ್ರಾಂಶವೊಂದನ್ನು ಅಭಿವೃದ್ಧಿ ಪಡಿಸಿದ್ದು, ಸರ್ಕಾರ ಗುರುತಿಸಿರುವ ಅರ್ಹ ರೈತರ ಸಂಖ್ಯೆ ಹಾಗೂ ಬ್ಯಾಂಕುಗಳಿಗೆ ತೆರಳಿ ನೋಂದಣಿ/ಸ್ವಯಂ ದೃಢೀಕರಣ ಮಾಡಿಕೊಂಡಿರುವವರ ವಿವರಗಳನ್ನೆಲ್ಲ ಇದರಲ್ಲಿ ದಾಖಲಿಸಲಾಗುತ್ತಿದೆ. 

‘ರೈತರು ಸಲ್ಲಿಸಿರುವ ದಾಖಲೆಗಳನ್ನು ಹಾಗೂ ಬೆಳೆ ಸಾಲಗಳನ್ನು ಪರಿಶೀಲಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ನಾಡಕಚೇರಿಗಳಲ್ಲೂ ನೋಂದಣಿಗೆ ಅವಕಾಶ

ಈ ಮಧ್ಯೆ, ರೈತರು ನಾಡಕಚೇರಿಗಳಲ್ಲೂ ದಾಖಲೆಗಳನ್ನು ಹಾಜರು ಪಡಿಸಿ ನೋಂ‌ದಣಿ ಮಾಡುವುದಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.

‘ರೈತರು ಆಧಾರ್, ರೇಷನ್ ಕಾರ್ಡ್, ಪಹಣಿ ದಾಖಲೆಗಳೊಂದಿಗೆ ಸಂಬಂಧಪಟ್ಟ ಬ್ಯಾಂಕಿಗೆ ಖುದ್ದು ಹಾಜರಾಗಿ ಸ್ವಯಂ ಘೋಷಣಾ ಪತ್ರಕ್ಕೆ ಸಹಿ ಮಾಡಬೇಕು. ಸದರಿ ದಾಖಲೆಗಳನ್ನು ಹತ್ತಿರದ ನಾಡ ಕಚೇರಿಯಲ್ಲೂ ಕೂಡ ಸಲ್ಲಿಸಿ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಹೇಳಿದ್ದಾರೆ.

ಶೇ 100ರಷ್ಟು ದೃಢೀಕರಣ ಅನುಮಾನ

ರೈತರ ಸ್ವಯಂ ದೃಢೀಕರಣಕ್ಕೆ ನೀಡಿರುವ ಗಡುವು ಕೊನೆಗೊಳ್ಳಲು ಇನ್ನು ಮೂರು ದಿನಗಳಷ್ಟೇ ಬಾಕಿ ಉಳಿದಿದ್ದು, ಇನ್ನೂ 7,324 ರೈತರು ದೃಢೀಕರಣ ಮಾಡಬೇಕಿದೆ. ಹಾಗಾಗಿ ಶೇ 100ರಷ್ಟು ಪ್ರಗತಿ ಸಾಧಿಸುವುದು ಕಷ್ಟ ಸಾಧ್ಯ ಎಂದು ಹೇಳುತ್ತಾರೆ ಅಧಿಕಾರಿಗಳು.

ಸದ್ಯಕ್ಕೆ ಟೋಕನ್‌ ವ್ಯವಸ್ಥೆಯಲ್ಲಿ ದಿನಕ್ಕೆ ಒಂದು ಬ್ಯಾಂಕ್‌ನಲ್ಲಿ 40ರಿಂದ 50ರಷ್ಟು ರೈತರಿಗೆ ಸ್ವಯಂ ದೃಢೀಕರಣಕ್ಕೆ ಅವಕಾಶ ಕೊಡಲಾಗುತ್ತಿದೆ.

ಬಾರದ ರೈತರು: ಕೆಲವು ರೈತರು ಸ್ವಯಂ ದೃಢೀಕರಣಕ್ಕೆ ಮುಂದಾಗುತ್ತಿಲ್ಲ ಎಂದು ಹೇಳುತ್ತಾರೆ ಬ್ಯಾಂಕ್‌ ಅಧಿಕಾರಿಗಳು.

‘ಸಹಕಾರ ಸಂಘಗಳ ಸಾಲ ಮನ್ನಾ ಮಾಡುವ ಪ್ರಕ್ರಿಯೆಯಲ್ಲಿ ರೈತರ ದೃಢೀಕರಣ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಸರ್ಕಾರದ ನಿಯಮದ ಪ್ರಕಾರ, ಒಬ್ಬ ರೈತ ‌ಸಹಕಾರ ಸಂಘದಲ್ಲಿ ಮಾಡಿದ್ದ ಸಾಲ ಮನ್ನಾವಾದರೆ, ವಾಣಿಜ್ಯ ಬ್ಯಾಂಕಿನಲ್ಲಿ ಆತ ಮಾಡಿರುವ ಸಾಲ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ. ಜೊತೆಗೆ, ಒಂದು ಕುಟುಂಬದಲ್ಲಿ ಒಬ್ಬರ ಸಾಲ ಮಾತ್ರ ಮನ್ನಾ ಆಗುತ್ತದೆ. ಕೆಲವು ಕುಟುಂಬಗಳಲ್ಲಿ ಎರಡು ಮೂರು ಮಂದಿ ಪಡಿತರ ಚೀಟಿ ಹೊಂದಿರುತ್ತಾರೆ. ಪ್ರತ್ಯೇಕ ಬೆಳೆಸಾಲವನ್ನೂ ಮಾಡಿರುತ್ತಾರೆ. ಆದರೆ, ಅವರನ್ನೆಲ್ಲ ಪರಿಗಣಿಸಲಾಗುವುದಿಲ್ಲ’ ಎಂದು ಹಿರಿಯ ಬ್ಯಾಂಕ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

**

ಅಂಕಿ ಅಂಶ

27,002 - ಸಾಲ ಮನ್ನಾ ಯೋಜನೆಗೆ ಅರ್ಹರಾಗಿರುವ ರೈತರ ಸಂಖ್ಯೆ

19,678 - ಶನಿವಾರದವರೆಗೆ ಬ್ಯಾಂಕುಗಳಲ್ಲಿ ಸ್ವಯಂ ದೃಢೀಕರಣ ಮಾಡಿಸಿಕೊಂಡ ರೈತರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !