ಶುಕ್ರವಾರ, ಸೆಪ್ಟೆಂಬರ್ 24, 2021
26 °C
ಗುಂಡ್ಲುಪೇಟೆ ಪುರಸಭೆ, ಯಳಂದೂರು, ಹನೂರು ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ

ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆ ಚುನಾವಣಾ ಕಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಲೋಕಸಭಾ ಚುನಾವಣೆಯ ಫಲಿತಾಂಶದ ನಿರೀಕ್ಷೆಯಲ್ಲಿರುವ ಜಿಲ್ಲೆಯ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಮತದಾರರು ಈಗ ಮತ್ತೊಂದು ಚುನಾವಣೆಗೆ ಸಜ್ಜಾಗಬೇಕಿದೆ. 

ಸ್ಥಳೀಯ ಸಂಸ್ಥೆಗಳ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಗುರುವಾರ ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಗುಂಡ್ಲುಪೇಟೆ ಪುರಸಭೆ, ಯಳಂದೂರು ಮತ್ತು ಹನೂರು ಪಟ್ಟಣ ಪಂಚಾಯಿತಿಗಳಿಗೆ‌ ಚುನಾವಣೆ ನಡೆಯಲಿದೆ. ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಗಳಿಗೆ ಕಳೆದ ವರ್ಷದ ಆಗಸ್ಟ್‌ನಲ್ಲೇ ಚುನಾವಣೆ ನಡೆದಿತ್ತು.

ಸ್ಥಳೀಯ ಸಂಸ್ಥೆಗಳ ಚುನಾವಣಾ ನೀತಿಸಂಹಿತೆ ಗುರುವಾರದಿಂದಲೇ ಆರಂಭವಾಗಿದ್ದು, ಫಲಿತಾಂಶ ಪ್ರಕಟವಾಗುವ ದಿನ ಮೇ 31ರವರೆಗೆ ಇರಲಿದೆ. 

ಲೋಕಸಭಾ ಕ್ಷೇತ್ರಕ್ಕೆ ಮತದಾನ ಮುಗಿದು 14 ದಿನ ಕಳೆಯುವುದರಲ್ಲೇ ಮತ್ತೊಂದು ಚುನಾವಣೆ ಬಂದಿರುವುರಿಂದ ಪಕ್ಷಗಳು ಇದಕ್ಕೆ ಸಿದ್ಧತೆ ನಡೆಸಬೇಕಾಗಿದೆ. 

ಈ ವರ್ಷದ ಮಾರ್ಚ್‌ ತಿಂಗಳಲ್ಲೇ ಮೂರೂ ಸ್ಥಳೀಯ ಸಂಸ್ಥೆಗಳ ಅಧಿಕಾರದ ಅವಧಿ ಮುಗಿದಿತ್ತು. ಕರಡು ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಆರಂಭಿಸಿತ್ತು. ಚುನಾವಣೆ ದಿನಾಂಕ ನಿಗದಿಯಾಗದೆ ಇದ್ದುದರಿಂದ ಸರ್ಕಾರ ಆಡಳಿತಾಧಿಕಾರಿಗಳನ್ನೂ ನೇಮಿಸಿತ್ತು. 

ಗುಂಡ್ಲುಪೇಟೆ ಪುರಸಭೆ: ಗುಂಡ್ಲುಪೇಟೆ ಪುರಸಭೆಯು 23 ಸದಸ್ಯರ ಬಲವನ್ನು ಹೊಂದಿದೆ. ಕಳೆದ ಸಾಲಿನಲ್ಲಿ (2014ರಲ್ಲಿ ನಡೆದ ಚುನಾವಣೆಯಲ್ಲಿ) ಕಾಂಗ್ರೆಸ್‌ 14 ವಾರ್ಡ್‌ಗಳಲ್ಲಿ ಹಾಗೂ ಕೆಜೆಪಿ (ನಂತರ ಬಿಜೆಪಿಯೊಂದಿಗೆ ವಿಲೀನ ಆಯಿತು) 9 ಸ್ಥಾನಗಳನ್ನು ಗೆದ್ದಿದ್ದವು. ಆರಂಭದಲ್ಲಿ ಕಾಂಗ್ರೆಸ್‌ ಪುರಸಭೆಯ ಅಧಿಕಾರ ಪಡೆದಿತ್ತು. ಮಹದೇವ ಪ್ರಸಾದ್‌ ಅವರ ನಿಧನ ಹಾಗೂ ವಿಧಾನಸಭಾ ಚುನಾವಣಾ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ನ ಕೆಲವು ಸದಸ್ಯರು ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಕಮಲ ಪಾಳಯಕ್ಕೆ ಅಧಿಕಾರ ಸಿಕ್ಕಿತ್ತು.

ಯಳಂದೂರು ಪಟ್ಟಣ ಪಂಚಾಯಿತಿ: 11 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 5, ಬಿಜೆಪಿ 4, ಜೆಡಿಎಸ್‌ 1 ಮತ್ತು ಪಕ್ಷೇತರರು ಒಂದು ಸ್ಥಾನ ಹೊಂದಿದ್ದರು. ಜೆಡಿಎಸ್‌ ಸದಸ್ಯ ಹಾಗೂ ಪಕ್ಷೇತರ ಬೆಂಬಲ ನೀಡಿದ್ದರಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಏರಿತ್ತು.

ಹನೂರು ಪಟ್ಟಣ ಪಂಚಾಯಿತಿ: 13 ಸ್ಥಾನಗಳನ್ನು ಹೊಂದಿರುವ ಈ ಪಂಚಾಯಿತಿಗೆ 2014ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 9 ಸ್ಥಾನಗಳಲ್ಲಿ ಜಯಗಳಿಸಿದ್ದ ಕಾಂಗ್ರೆಸ್‌ ಆಡಳಿತ ನಡೆಸಿತ್ತು. 4 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿತ್ತು. 

ಮತದಾನ: ಮೇ 29ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. 31ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಕಾಂಗ್ರೆಸ್‌–ಬಿಜೆಪಿ ಜಿದ್ದಾಜಿದ್ದಿ

ಮೂರೂ ಸ್ಥಳೀಯ ಸಂಸ್ಥೆಗಳಲ್ಲೂ ಕಾಂಗ್ರೆಸ್‌ ಹಾಗೂ ಬಿಜೆಪಿ ಪ್ರಾಬಲ್ಯ ಇರುವುದರಿಂದ ಈ ಎರಡು ಪಕ್ಷಗಳ ನಡುವೆಯೇ ನೇರ ಜಿದ್ದಾಜಿದ್ದಿ ನಡೆಯುವುದು ಖಚಿತ. 

2014ರ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿತ್ತು. ಜಿಲ್ಲೆಯಲ್ಲಿ ಕೂಡ ಕಾಂಗ್ರೆಸ್‌ನ ಹಿಡಿತ ಇತ್ತು. ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಶಾಸಕರಿದ್ದರು. ಹಾಗಾಗಿ, ಮೂರೂ ಕಡೆಗಳಲ್ಲಿ ಕಾಂಗ್ರೆಸ್‌ ಗೆಲುವು ಸುಲಭವಾಗಿತ್ತು.

ಎಚ್‌.ಎಸ್‌. ಮಹದೇವ ಪ್ರಸಾದ್‌ ಅವರು ನಿಧನರಾದ ಬಳಿಕ ಮತ್ತು 2018ರ ವಿಧಾನಸಭಾ ಚುನಾವಣೆಯ ನಂತರ ಜಿಲ್ಲೆಯ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿದೆ. ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಚಾಮರಾಜನಗರ ಮತ್ತು ಹನೂರಲ್ಲಿ ಕಾಂಗ್ರೆಸ್‌ ಶಾಸಕರಿದ್ದರೆ, ಗುಂಡ್ಲುಪೇಟೆಯಲ್ಲಿ ಬಿಜೆಪಿ ಮತ್ತು ಕೊಳ್ಳೇಗಾಲದಲ್ಲಿ ಬಿಎಸ್‌ಪಿ ಶಾಸಕರಿದ್ದಾರೆ. ಹೀಗಾಗಿ ಈ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆ ಕುತೂಹಲ ಮೂಡಿಸಿದೆ. 

ಗುಂಡ್ಲುಪೇಟೆಯಲ್ಲಿ ಬಿಜೆಪಿ ಹೆಚ್ಚಿನ ಪ್ರಾಬಲ್ಯ ಹೊಂದಿದೆ. ವಿಧಾನಸಭೆ ಚುನಾವಣಾ ನಂತರ ಕಾಂಗ್ರೆಸ್‌ ತೆಕ್ಕೆಯಲ್ಲಿದ್ದ ಪುರಸಭೆಯನ್ನು ಅದು ತನ್ನತ್ತ ಸೆಳೆದುಕೊಂಡಿತ್ತು. ಹಾಗಾಗಿ, ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಬಿರುಸಿನ ಪೈಪೋಟಿ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.

ಹನೂರಿನಲ್ಲಿ ಕಾಂಗ್ರೆಸ್‌ ಶಾಸಕರೇ ಇದ್ದಾರೆ. ಇಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಪೈಪೋಟಿ ನಡೆಯಲಿದೆ. 

ಕೊಳ್ಳೇಗಾಲ ವ್ಯಾಪ್ತಿಗೆ ಬರುವ ಯಳಂದೂರಿನಲ್ಲಿ ಇದುವರೆಗೂ ಕಾಂಗ್ರೆಸ್‌ ಪ್ರಾಬಲ್ಯ ಹೊಂದಿತ್ತು. ಈ ಬಾರಿ ಏನಾಗುತ್ತದೆಯೋ ನೋಡಬೇಕು.

ಪ್ರಭಾವ ಬೀರಲಿದೆಯೇ ಲೋಕಸಭಾ ಫಲಿತಾಂಶ?

ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಇದೇ ತಿಂಗಳ 23ರಂದು ಹೊರಬೀಳಲಿದೆ. ಅಂದಿನ ಫಲಿತಾಂಶ 29ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಮತದಾನದ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. 

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಸಮಬಲದ ಹೋರಾಟ ನಡೆದಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕಾಂಗ್ರೆಸ್‌ ಗೆದ್ದರೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾರರು ‘ಕೈ’ನತ್ತ ವಾಲಬಹುದು. ಅದೇ ರೀತಿ ಬಿಜೆಪಿ ಗೆದ್ದರೆ, ಆ ಪಕ್ಷದ ಮುಖ ಮಾಡಿದರೂ ಮಾಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.