‘ಸುಳ್ಳಿನ ಭರವಸೆ– ಜನರಿಗೆ ಮನವರಿಕೆ’

7
ಚಿಕ್ಕಜಾಲ: ಲೋಕಸಭಾ ಚುನಾವಣೆಯ ಪೂರ್ವಭಾವಿ ಸಮಾವೇಶ

‘ಸುಳ್ಳಿನ ಭರವಸೆ– ಜನರಿಗೆ ಮನವರಿಕೆ’

Published:
Updated:
Deccan Herald

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಬೆಲೆ ಇಳಿಕೆ, ಉದ್ಯೋಗ ಸೃಷ್ಟಿ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸೇರಿದಂತೆ ಎಲ್ಲ ಭರವಸೆಗಳು ಸುಳ್ಳು ಎಂಬುದು ಜನರಿಗೆ ಮನವರಿಕೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಯಲಹಂಕ ಸಮೀಪದ ಚಿಕ್ಕಜಾಲದಲ್ಲಿ ಆಯೋಜಿಸಿದ್ದ ಬ್ಯಾಟರಾಯನಪುರ ಕ್ಷೇತ್ರ, ಜಾಲಾ ಹೋಬಳಿ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಘಟಕದ ಪದಾಧಿಕಾರಿಗಳ ನೇಮಕಾತಿ ಹಾಗೂ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಮಾವೇಶದಲ್ಲಿ ಅವರು ಮಾತನಾಡಿದರು.

ರಾಜಸ್ಥಾನ ಮತ್ತು ಮಧ್ಯಪ್ರದೇಶದ ಚುನಾವಣೆಗಳ ಸಮೀಕ್ಷೆಯೂ ಬಿಜೆಪಿ ವಿರುದ್ಧದ ಅಲೆ ಇದೆ ಎಂದು ಹೇಳುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡ ನಂತರ, ಬಡವರು, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದಬ್ಬಾಳಿಕೆಗಳು ನಡೆಯುತ್ತಿವೆ. ಈ ಎಲ್ಲಾ ವಿಚಾರಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದರು.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ತಮ್ಮ ತತ್ವ, ಸಿದ್ಧಾಂತಗಳನ್ನು ಅನುಸರಿಸುವಂತೆ ಇಡೀ ರಾಷ್ಟ್ರದ ಜನತೆಗೆ ಒತ್ತಾಯ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿ-ವರ್ಗದವರ ರಕ್ಷಣೆಗಾಗಿ ಸಂವಿಧಾನದಲ್ಲಿ ಅಳವಡಿಸಿರುವ ವಿಧೇಯಕವನ್ನು ದುರ್ಬಲಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜಕ್ಕಪ್ಪ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಿಸಿದರು. ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಬೆಂಗಳೂರು ಉತ್ತರಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ್, ಬೆಂಗಳೂರು ನಗರ ಪರಿಶಿಷ್ಟಜಾತಿ ವಿಭಾಗದ ಅಧ್ಯಕ್ಷ ಎಂ.ವೆಂಕಟೇಶ್, ಕಾಂಗ್ರೆಸ್ ಮುಖಂಡರಾದ ರವಿಕುಮಾರ್, ಕುದುರೆಗೆರೆ ಕೃಷ್ಣಮೂರ್ತಿ ಇದ್ದರು. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !