ಮಂಗಳವಾರ, ನವೆಂಬರ್ 12, 2019
19 °C
ಸೆಪ್ಟೆಂಬರ್‌ 14ರಂದು ಜಿಲ್ಲೆಯ ನ್ಯಾಯಾಲಯಗಳಲ್ಲಿ ಲೋಕ ಅದಾಲತ್‌

1,982 ಪ್ರಕರಣಗಳ ಶಿಫಾರಸು

Published:
Updated:
Prajavani

ಚಾಮರಾಜನಗರ: ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಇದೇ 14ರಂದು ಲೋಕ ಅದಾಲತ್‌ ನಡೆಯಲಿದೆ. 

ಪ್ರಾಧಿಕಾರವು ಅದಾಲತ್‌ಗಾಗಿ ಇತ್ಯರ್ಥವಾದ 1,155 ಸಿವಿಲ್‌ ಹಾಗೂ 827 ಕ್ರಿಮಿನಲ್‌ ಪ್ರಕರಣಗಳನ್ನು ಗುರುತಿಸಿದೆ. ಎರಡೂ ಪಡೆಯ ಅರ್ಜಿದಾರರು ಸಮ್ಮತಿಸಿದರೆ, ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಈ ಪ್ರಕರಣಗಳು ಇತ್ಯರ್ಥಗೊಳ್ಳಲಿವೆ.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಬಸವರಾಜ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಲೋಕ ಅದಾಲತ್‌ ಬಗ್ಗೆ ಮಾಹಿತಿ ನೀಡಿದರು. 

‘ರಾಷ್ಟ್ರೀಯ ಕಾನೂನು ಸೇವೆಗಳ ಪ‍್ರಾಧಿಕಾರದ ನಿರ್ದೇಶನದ ಮೇರೆಗೆ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು ಮತ್ತು ಗುಂಡ್ಲುಪೇಟೆಗಳಲ್ಲಿರುವ ನ್ಯಾಯಾಲಯಗಳಲ್ಲಿ ಲೋಕ ಅದಾಲತ್‌ ನಡೆಯಲಿದೆ. ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ, ರಾಜಿ ಆಗಬಹುದಾದ ಸಿವಿಲ್‌ ಹಾಗೂ ಕ್ರಿಮಿನಲ್‌ ಪ್ರಕರಣಗಳನ್ನು ಈ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಬಹುದಾಗಿದೆ’ ಎಂದರು. 

‘ರಾಜಿ ಆಗಬಹುದಾದ ಎಲ್ಲ ಕ್ರಿಮಿನಲ್‌ ಪ್ರಕರಣ, ಚೆಕ್‌ ಬೌನ್ಸ್‌ ಪ್ರಕರಣಗಳು, ವಿಚ್ಚೇದನ ಬಿಟ್ಟು, ಎಲ್ಲ ರೀತಿಯ ಕೌಟುಂಬಿಕ ವ್ಯಾಜ್ಯಗಳು, ಜೀವನಾಶಂದ ಪ್ರಕರಣ, ಮೋಟಾರ್‌ ವಾಹನ ಅಪಘಾತ ಪ್ರಕರಣ, ಅಕ್ರಮ ಗಣಿಗಾರಿಕೆ (ಸದ್ಯ ಮರಳು ಮಾತ್ರ) ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನೂ ಇತ್ಯರ್ಥಗೊಳಿಸಹುದು. ಲೋಕಾ ಅದಾಲತ್‌ ಪ್ರಕರಣಗಳನ್ನು ಇತ್ಯರ್ಥಗೊಳಿಸಿದಲ್ಲಿ ಶೇ 75ರಷ್ಟು ನ್ಯಾಯಾಲಯದ ಶುಲ್ಕವನ್ನು ವಾಪಸ್‌ ನೀಡಲಾಗುವುದು’ ಎಂದು ಅವರು ವಿವರಿಸಿದರು. 

522 ಪ್ರಕರಣ ಇತ್ಯರ್ಥ: ‘ಜುಲೈ 13ರಂದು ನಡೆದಿದ್ದ ಅದಾಲತ್‌ನಲ್ಲಿ 383 ಸಿವಿಲ್‌ ಹಾಗೂ ಕ್ರಿಮಿನಲ್‌ ಪ್ರಕರಣಗಳನ್ನು ಹಾಗೂ 139 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಇದರಲ್ಲಿ 20 ಮೇಲ್ಮನವಿ ಪ್ರಕರಣಗಳೂ ಸೇರಿವೆ’ ಎಂದು ಅವರು ಹೇಳಿದರು. 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌, ಪ್ರಧಾನ ಕಾರ್ಯದರ್ಶಿ ಮಂಜು ಎಸ್‌. ಹರವೆ ಇದ್ದರು.

ಪ್ರಯೋಜನಗಳೇನು?

ಲೋಕ ಅದಾಲತ್‌ನಲ್ಲಿ ವ್ಯಾಜ್ಯಗಳ ಇತ್ಯರ್ಥವಾದರೆ ಆಗುವ ಪ್ರಯೋಜನಗಳ ಬಗ್ಗೆಯೂ ನ್ಯಾಯಾಧೀಶರು ವಿವರಿಸಿದರು. 

‘ಇಲ್ಲಿ ಇತ್ಯರ್ಥಗೊಂಡ ಪ್ರಕರಣಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಇಲ್ಲ. ಹಲವು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳು ಶೀಘ್ರದಲ್ಲಿ ವಿಲೇವಾರಿ ಆಗುತ್ತದೆ. ನ್ಯಾಯಾಲಯಕ್ಕೆ ಅಲೆದಾಡುವ ಪ್ರಮೇಯವೂ ಇರುವುದಿಲ್ಲ. ಹೆಚ್ಚು ಖರ್ಚು ಮಾಡಬೇಕಾದ ಅಗತ್ಯವೂ ಇಲ್ಲ. ಎರಡೂ ಕಡೆಯವರು ಪರಸ್ಪರ ರಾಜಿ ಆಗುವುದರಿಂದ ಸಮಾಜದಲ್ಲಿ ಸಾಮರಸ್ಯವೂ ಉಂಟಾಗುತ್ತದೆ’ ಎಂದು ಜಿ.ಬಸವರಾಜ ಅವರು ಹೇಳಿದರು.

**

ಅಂಕಿ ಅಂಶ

17,598 – ಜಿಲ್ಲೆಯಲ್ಲಿ ಇತ್ಯರ್ಥಕ್ಕೆ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ

8,984 – ಕ್ರಿಮಿನಲ್‌ ಪ್ರಕರಣಗಳು

8,614– ಸಿವಿಲ್‌ ಪ್ರಕರಣಗಳು

ಪ್ರತಿಕ್ರಿಯಿಸಿ (+)