ಗುರುವಾರ , ನವೆಂಬರ್ 21, 2019
26 °C
ಸಾರ್ವಜನಿಕರಿಲ್ಲದ ಸಭೆಯಲ್ಲಿ ಒಂದೆ ಒಂದು ದೂರು ಸಲ್ಲಿಕೆ, ಕೇವಲ 20 ನಿಮಿಷಗಳಲ್ಲಿ ಮುಕ್ತಾಯಗೊಂಡ ಸಭೆ

ಅಹವಾಲು ಸಭೆಯಲ್ಲಿ ‘ಕೊರತೆ’ ದರ್ಶನ

Published:
Updated:
Prajavani

ಚಿಕ್ಕಬಳ್ಳಾಪುರ: ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ಅಹವಾಲುಗಳ ಬದಲು ‘ಕೊರತೆ’ಯ ದರ್ಶನವಾಯಿತು.

ಲೋಕಾಯುಕ್ತ ಡಿವೈಎಸ್‍ಪಿ ಮೋಹನ್, ಇನ್‌ಸ್ಪೆಕ್ಟರ್‌ ಹರೀಶ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆರಳೆಣಿಕೆ ಇಲಾಖೆ ಅಧಿಕಾರಿಗಳು ಮಾತ್ರ ಹಾಜರಿದ್ದರು. ಅಧಿಕಾರಿಗಳು, ಸಾರ್ವಜನಿಕರು ಇಲ್ಲದೇ ಖಾಲಿ ಕುರ್ಚಿಗಳೇ ರಾರಾಜಿಸುತ್ತಿದ್ದ ಸಭೆಯಲ್ಲಿ ಕೇಳಿ ಬಂದಿದ್ದು ಒಂದೇ ಒಂದು ಅಹವಾಲು! ಪರಿಣಾಮ, ಸಭೆ ಆರಂಭಗೊಂಡ ಬರೀ 20 ನಿಮಿಷಗಳಲ್ಲಿಯೇ ಸಮಾಪ್ತಿಯಾಯಿತು.

ಸಭೆಯಲ್ಲಿ ತಾಲ್ಲೂಕಿನ ನಲ್ಲಕದಿರೇನಹಳ್ಳಿ ರೈತ ನರಸಿಂಹಪ್ಪ ಅವರು, ‘ನನ್ನ ಸ್ವಂತ ಜಮೀನಿನಲ್ಲಿ ಬೆಳೆ ಬೆಳೆಯಲು ಅಣ್ಣ ತಮ್ಮಂದಿರೇ ಬಿಡದೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಅನೇಕ ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಅಹವಾಲು ಹೇಳಿಕೊಂಡರು. ಬಳಿಕ ಅಹವಾಲು ಹೇಳಿಕೊಳ್ಳುವವರೇ ಇರಲಿಲ್ಲ.

ಸಭೆಯಲ್ಲಿ ಮಾತನಾಡಿದ ಹರೀಶ್ ಅವರು, ‘ಯಾವುದೇ ದೂರು ಬಂದ ಕೂಡಲೇ ಅಧಿಕಾರಿಗಳು ಇತ್ಯರ್ಥ ಪಡಿಸಬೇಕು. ಫಲಾನುಭವಿಗಳನ್ನು ಸರ್ಕಾರಿ ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡಿಸುವುದು ಕೂಡ ಒಂದು ರೀತಿ ಭ್ರಷ್ಟಾಚಾರ. ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ ತೋರಿದರೆ ಸಾರ್ವಜನಿಕರಿಂದಲೇ ಗೌರವ ಸಲ್ಲುತ್ತದೆ’ ಎಂದು ಹೇಳಿದರು.

ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆ ಅಧಿಕಾರಿಗಳು ಚುಟುಕಾಗಿ ತಮ್ಮ ಇಲಾಖೆ ವತಿಯಿಂದ ಕೈಗೊಂಡ ಕೆಲಸಗಳ ಬಗ್ಗೆ ಹೇಳಿಕೊಂಡರು.

ಪ್ರತಿಕ್ರಿಯಿಸಿ (+)