ಚಾಮರಾಜನಗರ: 1.11 ಲಕ್ಷ ಹೆಚ್ಚು ಮತದಾರರು

ಮಂಗಳವಾರ, ಮಾರ್ಚ್ 19, 2019
26 °C
ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ, ಅಂತಿಮ ಮತದಾರರ ಪಟ್ಟಿಯಲ್ಲಿ 16.67 ಲಕ್ಷ ಮಂದಿ

ಚಾಮರಾಜನಗರ: 1.11 ಲಕ್ಷ ಹೆಚ್ಚು ಮತದಾರರು

Published:
Updated:
Prajavani

ಚಾಮರಾಜನಗರ ಚುನಾವಣಾ ವೇಳಾಪಟ್ಟಿ

ಮಾರ್ಚ್‌ 19– ಅಧಿಸೂಚನೆ

ಮಾರ್ಚ್‌ 26– ನಾಮಪತ್ರ ಸಲ್ಲಿಸಲು ಕೊನೆಯ ದಿನ

ಮಾರ್ಚ್‌ 27–ನಾಮಪತ್ರ ಪರಿಶೀಲನೆ

ಮಾರ್ಚ್‌ 29– ನಾಮಪತ್ರ ವಾಪಸಿಗೆ ಕೊನೆಯ ದಿನ

ಏಪ್ರಿಲ್‌ 18– ಮತದಾನ

ಮೇ 23– ಮತ ಎಣಿಕೆ

ಚಾಮರಾಜನಗರ: ಮೀಸಲು ಲೋಕಸಭಾ ಕ್ಷೇತ್ರವಾದ ಚಾಮರಾಜನಗರದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು 16,67,044 ಮಂದಿ ಅರ್ಹತೆ ಗಳಿಸಿದ್ದಾರೆ. ಈ ಪೈಕಿ 8,34,392 ಪುರುಷರು ಮತ್ತು 8,32,541 ಮಹಿಳೆಯರು. 111 ಲೈಂಗಿಕ ಅಲ್ಪಸಂಖ್ಯಾತರು‌ ಕೂಡ ಅಂತಿಮ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳು ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಸೇರಿಕೊಂಡಿದ್ದು, 2014ರ ಚುನಾವಣೆಗೆ ಹೋಲಿಸಿದರೆ ಈ ಸಲ ಹೆಚ್ಚುವರಿಯಾಗಿ 1,11,504 ಮಂದಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಹಿಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದಲ್ಲಿ 15,55,540 ಮಂದಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಅರ್ಹತೆ ಪಡೆದಿದ್ದರು. ಈ ಪೈಕಿ 7,81,971 ಪುರುಷರು, 7,66,308 ಮಹಿಳೆಯರು. 61 ಮಂದಿ ಇತರ (ಲೈಂಗಿಕ ಅಲ್ಪಸಂಖ್ಯಾತರು) ಮತದಾರರು ಇದ್ದರು. 2014ರಲ್ಲಿ 11,32,549 ಮಂದಿ ಮತ ಚಲಾಯಿಸಿದ್ದರು. ಶೇಕಡಾವಾರು ಲೆಕ್ಕಾಚಾರದಲ್ಲಿ 72.82‌ರಷ್ಟು ಮತದಾನವಾಗಿತ್ತು.

ಸಕಲ ಸಿದ್ಧತೆ: ಈ ಮಧ್ಯೆ, ಚುನಾವಣೆಗಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಪ್ರಕ್ರಿಯೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

‘ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿ ವಿತರಿಸಲಾಗಿದೆ’ ಎಂದರು.

ದಾಖಲೆಗಳು ಕಡ್ಡಾಯ: ಮತದಾರರ ಗುರುತಿನ ಚೀಟಿ ನೀಡಿ ಮತದಾನ ಮಾಡಲು ಸಾಧ್ಯವಾಗದಿದ್ದಲ್ಲಿ, ಇತರೆ 11 ದಾಖಲೆಗಳ (ಪಾಸ್‌ಪೋರ್ಟ್‌, ವಾಹನ ಚಾಲನೆ ಪರವಾನಗಿ, ಕೇಂದ್ರ/ರಾಜ್ಯ/ಸಾರ್ವಜನಿಕ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಸಂಬಂಧಿಸಿದ ಪ್ರಾಧಿಕಾರ ನೀಡಿರುವ ಗುರುತಿನ ಚೀಟಿ, ಬ್ಯಾಂಕ್‌/ಅಂಚೆ ಕಚೇರಿ ಪಾಸ್‌ಬುಕ್‌, ಪ್ಯಾನ್‌ ಕಾರ್ಡ್‌, ಕಾರ್ಮಿಕ ಸಚಿವಾಲಯ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ, ನರೇಗಾ ಉದ್ಯೋಗ ಕಾರ್ಡ್‌, ಆರೋಗ್ಯ ವಿಮಾ ಕಾರ್ಡ್‌, ಪಿಂಚಣಿ ದಾಖಲೆ, ಸಂಸದರು/ಶಾಸಕರು/ವಿಧಾನಪರಿಷತ್‌ ಸದಸ್ಯರಿಗೆ ನೀಡಲಾಗಿರುವ ಗುರುತಿನ ಚೀಟಿ ಮತ್ತು ಆಧಾರ್‌ ಕಾರ್ಡ್‌) ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಿ ಮತದಾನ ಮಾಡಬಹುದು. ಆದರೆ, ಭಾವಚಿತ್ರ ಇರುವ ಮತದಾರರ ಚೀಟಿಯನ್ನು (ಫೋಟೊ ವೋಟರ್‌ ಸ್ಲಿಪ್‌) ಗುರುತಿನ ದಾಖಲೆ ಎಂದು ಪರಿಗಣಿಸಲು ಆಗುವುದಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ನೀತಿ ಸಂಹಿತೆ ಪಾಲನೆಗೆ ತಂಡಗಳು: ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಪಾಲನೆ ಸಂಬಂಧ ಹಲವು ತಂಡಗಳನ್ನು ರಚಿಸಲಾಗಿದೆ ಎಂದು ಕಾವೇರಿ ಹೇಳಿದರು.

12 ಫ್ಲೈಯಿಂಗ್‌ ತಂಡಗಳು ಮೂರು ಪಾಳಿಗಳಲ್ಲಿ ಕಾರ್ಯನಿರ್ವಹಿಸಲಿವೆ. ಅದೇ ರೀತಿ ಸ್ಪ್ಯಾಟಿಕ್‌ ಸರ್ವೇಲೆನ್ಸ್‌ನ 12 ತಂಡಗಳು ಮೂರು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲಿವೆ. ಜೊತೆಗೆ 63 ಸೆಕ್ಟರ್‌ ಅಧಿಕಾರಿಗಳು, ಅಭ್ಯರ್ಥಿಗಳ ಚುನಾವಣಾ ವೆಚ್ಚ ಪರಿಶೀಲನೆಗಾಗಿ ಅಧಿಕಾರಿಗಳ ತಂಡ, ವಿಡಿಯೊ ಸರ್ವೇಲೆನ್ಸ್‌ನ 12 ತಂಡಗಳು, ವಿಡಿಯೊ ಪರಿಶೀಲಿಸುವ 4 ತಂಡಗಳನ್ನು ನೇಮಿಸಲಾಗಿದೆ. ಪೊಲೀಸ್‌ ಇಲಾಖೆಯ ನೆರವಿನೊಂದಿಗೆ 10 ಅಂತರರಾಜ್ಯ ಮತ್ತು 8 ಅಂತರಜಿಲ್ಲಾ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗುವುದು ಎಂದು ಅವರು ವಿವರಿಸಿದರು.

ಹಣ ಮುಟ್ಟುಗೋಲು: ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ದಾಖಲೆಗಳಿಲ್ಲದ ₹ 50 ಸಾವಿರಕ್ಕಿಂತ ಹೆಚ್ಚು ಮೊತ್ತದ ನಗದು ಹಣ ಸಿಕ್ಕಿದರೆ ಅದನ್ನು ವಶಪಡಿಸಿಕೊಂಡು ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಅಭ್ಯರ್ಥಿಯ ವೆಚ್ಚದ ಮಿತಿಯನ್ನು ₹ 78 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಪ್ರತಿ ದಿನ ತಮ್ಮ ಖರ್ಚು–ವೆಚ್ಚಗಳನ್ನು ಸಲ್ಲಿಸಬೇಕು. ಪ್ರತಿಯೊಬ್ಬ ಅಭ್ಯರ್ಥಿಯು ಫಲಿತಾಂಶ ಪ್ರಕಟಗೊಂಡ 30 ದಿನಗಳಲ್ಲಿ ಚುನಾವಣಾ ವೆಚ್ಚಗಳ ಲೆಕ್ಕದ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

16ರವರೆಗೆ ಹೆಸರು ಸೇರ್ಪಡೆಗೆ ಅವಕಾಶ

‘ಚುನಾವಣಾ ಅಧಿಸೂಚನೆ ಹೊರಡಿಸುವವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅವಕಾಶ ಇರುತ್ತದೆ. ಜಿಲ್ಲೆಯಲ್ಲಿ ಮಾರ್ಚ್‌ 16ರ ವರೆಗೆ ಜನರಿಂದ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಆದರೆ, ಪಟ್ಟಿಯಿಂದ ಹೆಸರು ತೆಗೆಯುವುದು, ತಿದ್ದುಪಡಿ ಮಾಡುವುದಕ್ಕೆ ಅವಕಾಶ ಇಲ್ಲ’ ಎಂದು ಬಿ.ಬಿ. ಕಾವೇರಿ ತಿಳಿಸಿದರು.

24 ಗಂಟೆಗಳ ಸಹಾಯವಾಣಿ

ಮತದಾರರ ಪಟ್ಟಿ ಹಾಗೂ ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಅಹವಾಲು ಸಲ್ಲಿಸಲು ಭಾರತೀಯ ಚುನಾವಣಾ ಆಯೋಗ ದೇಶದಾದ್ಯಂತ ಮತದಾರರ ಸಹಾಯವಾಣಿ –1950 ಆರಂಭಿಸಿದೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ಇದು 24X7 ಅವಧಿಯಲ್ಲಿ ಕಾರ್ಯನಿರ್ವಹಿಸಲಿದೆ. ಸಾರ್ವಜನಿರಕರು ಈ ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿ ಮತದಾರರ ಪಟ್ಟಿ, ಮತದಾನ ಮತ್ತು ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಗಳನ್ನು ಪಡೆಯಬಹುದು. 

ಅಧಿಕಾರಿಗಳು ಕೇಂದ್ರ ಸ್ಥಾನ ಬಿಡುವಂತಿಲ್ಲ

ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ಅಧಿಕಾರಿಗಳು ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲೇ ಇರಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಕಾವೇರಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಚುನಾವಣಾ ಕೆಲಸದ ಮೇಲೆ ನಿಯೋಜನೆಗೊಂಡಿರುವ ಅಧಿಕಾರಿ, ನೌಕರರು ತಮ್ಮ ಕೆಲಸದಲ್ಲಿ ನಿರ್ಲಕ್ಷ್ಯ, ಬೇಜವಾಬ್ದಾರಿ ತೋರಿದಲ್ಲಿ ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ಚುನಾವಣಾ ಕೆಲಸದಲ್ಲಿ ನಿರತರಾಗಿರುವ ಅಧಿಕಾರಿಗಳಿಗೆ ಯಾರಾದರೂ ಅಡ್ಡಿಪಡಿಸಿದರೆ ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಮತದಾರರ ವಿವರ

* 16,67,044 ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿರುವ ಮತದಾರರ ಸಂಖ್ಯೆ

* 8,34,392 ಪುರುಷ ಮತದಾರರು

* 8,32,541 ಮಹಿಳಾ ಮತದಾರರು

ಮತದಾರರ ಸಂಖ್ಯೆ: ಯಾವ ಕ್ಷೇತ್ರ ಎಷ್ಟು?

ವಿಧಾನಸಭಾ ಕ್ಷೇತ್ರ;  ಪುರುಷರು;  ಮಹಿಳೆಯರು;  ಇತರೆ; ಒಟ್ಟು

ಎಚ್‌.ಡಿ.ಕೋಟೆ;    1,07,046;  1,05,201;  7;  2,12,254

ನಂಜನಗೂಡು;       1,04,610;  1,03,382;  11;  2,08,003

ವರುಣಾ;            1,11,348;  1,08,849;  19;  2,20,216

ತಿ.ನರಸೀಪುರ;      98,032;  98,831;  12;  1,96,875

ಹನೂರು;          1,05,569;  1,02,123;  14;  2,07,706

ಕೊಳ್ಳೇಗಾಲ;    1,04,568;  1,06,001;  18;  2,10,587

ಚಾಮರಾಜನಗರ;   1,01,125;  1,04,069;  16;  2,05,210

ಗುಂಡ್ಲುಪೇಟೆ;   1,02,094;  1,04,085;  14;  2,06,193

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !