ಸೋಮವಾರ, ಡಿಸೆಂಬರ್ 16, 2019
26 °C
ಪಕ್ಷಗಳಲ್ಲಿ ಲೆಕ್ಕಾಚಾರ ಆರಂಭ, ಅಭ್ಯರ್ಥಿಗಳ ಆಯ್ಕೆಗೆ ತೆರೆಮರೆಯಲ್ಲಿ ಕಸರತ್ತು

ಲೋಕಸಭಾ ಚುನಾವಣೆ: ಬಿಜೆಪಿ ಟಿಕೆಟ್‌ಗೆ ಆಕಾಂಕ್ಷಿಗಳ ಸಾಲು!

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ಲೋಕಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವಂತೆಯೇ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಲು ಆರಂಭಿಸಿವೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಾಮರಾಜನಗರ ಕ್ಷೇತ್ರದಿಂದ ಯಾವ ಪಕ್ಷ, ಯಾರಿಗೆ ಟಿಕೆಟ್‌ ನೀಡಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಚುನಾವಣೆಗಾಗಿ ಪಕ್ಷಗಳು ತಂತ್ರಗಾರಿಕೆ ಆರಂಭಿಸಿವೆ. ಗೆಲ್ಲುವ ಅಭ್ಯರ್ಥಿಯ ಆಯ್ಕೆಗೆ ಪಕ್ಷಗಳು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವುದು ಸುಳ್ಳಲ್ಲ. ಆದರೆ, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್‌ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಹಾಲಿ ಸಂಸದ ಆರ್.ಧ್ರುವನಾರಾಯಣ ಅವರೇ ಮತ್ತೆ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಅದು ಈಗಾಗಲೇ ಖಚಿತಪಡಿಸಿದೆ.

ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಗದ್ದುಗೆಯಲ್ಲಿ ಕೂರಿಸಬೇಕು ಎಂದು ಪಣತೊಟ್ಟಿರುವ ಬಿಜೆಪಿಗೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸುವ ಎಲ್ಲ ಸಾಧ್ಯತೆ ಗೋಚರಿಸುತ್ತಿದೆ. ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ 10ರಿಂದ 12 ಮಂದಿ ಇದ್ದಾರೆ. ಸ್ಥಳೀಯ ಹಲವು ನಾಯಕರು ತಾವು ಟಿಕೆಟ್‌ ಆಕಾಂಕ್ಷಿಗಳು ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದಾರೆ. ಚುನಾವಣೆಯ ಹೊತ್ತಿಗೆ ಅಭ್ಯರ್ಥಿಯನ್ನು ಅಂತಿಮಗೊಳಿಸುವಾಗ ಆಕಾಂಕ್ಷಿಗಳ ಬಂಡಾಯ ಎದುರಿಸಬೇಕಾಗಬಹುದೇನೋ ಎಂಬ ಆತಂಕ ಸ್ಥಳೀಯ ನಾಯಕತ್ವವನ್ನು ಕಾಡುತ್ತಿದೆ.

ಆಕಾಂಕ್ಷಿಗಳು ಯಾರು?: ರಾಜಕೀಯದಲ್ಲಿ ಭದ್ರವಾಗಿ ತಳವೂರಲು ಪ್ರಯತ್ನಿಸುತ್ತಿರುವ ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಂ ಅವರು ‘ಈ ಬಾರಿ ನಾನೇ ಬಿಜೆಪಿ ಅಭ್ಯರ್ಥಿ’ ಎಂದು ಹೇಳಿಕೊಂಡು ಕ್ಷೇತ್ರದಲ್ಲಿ ತಿರುಗಾಡುತ್ತಿದ್ದಾರೆ. ಹಲವು ಕಡೆಗಳಲ್ಲಿ ಕಾರ್ಯಕರ್ತರ ಸಭೆಯನ್ನೂ ನಡೆಸಿದ್ದಾರೆ‌.

ಕಳೆದ ವಾರ ಚಾಮರಾಜನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಮಾಜಿ ಸಚಿವ, ಬಿಜೆಪಿ ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್‌. ನಂಜುಂಡಸ್ವಾಮಿ, ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷ ಎಸ್‌.ಮಹದೇವಯ್ಯ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಸಿ.ರಮೇಶ್‌ ಅವರು, ‘ನಾ‌ವು ಕೂಡ ಟಿಕೆಟ್‌ ಆಕಾಂಕ್ಷಿಗಳು. ನಮ್ಮಲ್ಲಿ ಯಾರಿಗಾದರೂ ಟಿಕೆಟ್‌ ನೀಡಿದರೆ ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ಶ್ರಮಿಸುತ್ತೇವೆ’ ಎಂದು ಹೇಳಿದ್ದಾರೆ.

‘ಹೈಕಮಾಂಡ್‌ ಅ‌ಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸುವವರೆಗೂ,  ತಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಮತದಾರರಲ್ಲಿ ಗೊಂದಲ ಮೂಡಿಸುವುದು ಸರಿ ಅಲ್ಲ’ ಎಂದು ಹೇಳುವ ಮೂಲಕ ಕೆ.ಶಿವರಾಂ ವಿರುದ್ಧ ಪರೋಕ್ಷವಾಗಿ ಅಸಮಾಧಾನವನ್ನೂ ಹೊರಹಾಕಿದ್ದಾರೆ.

ಇವರು ಐವರಲ್ಲದೇ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕರಾದ ಭಾರತಿ ಶಂಕರ್‌, ನಿವೃತ್ತ ಅರಣ್ಯ ಅಧಿಕಾರಿ ಆರ್‌.ರಾಜು, ಮೈಸೂರಿನ ವಕೀಲ ಅರುಣ್‌ ಕುಮಾರ್‌, ಆಹಾರ ಇಲಾಖೆಯ ನಿವೃತ್ತ ಅಧಿಕಾರಿ ಮಹದೇವಪ್ಪ, ವಿ.ಶ್ರೀನಿವಾಸ್‌ ಪ್ರಸಾದ್‌ ಅವರ ಅಳಿಯ ಡಾ. ಮೋಹನ್‌ ಮತ್ತು ಹುಣಸೂರಿನ ಜ್ಯೋತಿಷ್‌ ಕುಮಾರ್‌ ಕೂಡ ಆಕಾಂಕ್ಷಿಗಳು ಎಂದು ಹೇಳಲಾಗುತ್ತಿದೆ.

ಶ್ರೀನಿವಾಸ್‌ ಪ್ರಸಾದ್‌ ಪರ ಒಲವು: ಕ್ಷೇತ್ರದಲ್ಲಿ ರಾಜಕೀಯವಾಗಿ ಬಲಿಷ್ಠವಾಗಿರುವ ಆರ್‌.ಧ್ರುವನಾರಾಯಣ ಅವರಿಗೆ ಪೈಪೋಟಿ ನೀಡಲು ಪ್ರಬಲ ಅಭ್ಯರ್ಥಿಯೇ ಬೇಕು ಎಂಬುದು ಬಿಜೆಪಿಯ ಸ್ಥಳೀಯ ನಾಯಕತ್ವದ ಅಭಿಪ್ರಾಯ. ವಿಧಾನಸಭೆ ಹಾಗೂ ಲೋಕಸಭೆಗೆ ತಲಾ ಎರಡು ಬಾರಿ ಆಯ್ಕೆ ಆಗಿರುವ ಧ್ರುವನಾರಾಯಣ ಅವರು ಕ್ಷೇತ್ರದಾದ್ಯಂತ ಬಿಗಿ ಹಿಡಿತ ಹೊಂದಿದ್ದಾರೆ. ಅವರಿಗೆ ಸಮಾಜದ ಎಲ್ಲ ವರ್ಗಗಳ, ಧರ್ಮಗಳ ಜನರೊಂದಿಗೆ ಉತ್ತಮ ಸಂಬಂಧ ಇದೆ. ಬಿಜೆಪಿ ಸೇರಿದಂತೆ ಇನ್ನಿತರ ಪಕ್ಷಗಳ ಮುಖಂಡರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಾಗಾಗಿ, ಅವರಿಗೆ ಕಠಿಣ ಪೈಪೋಟಿ ನೀಡಬಲ್ಲ ಅಭ್ಯರ್ಥಿಗಳು ಯಾರಿದ್ದಾರೆ ಎಂಬ ಹುಡುಕಾಟದಲ್ಲಿ ಬಿಜೆಪಿ ಮುಖಂಡರಿದ್ದಾರೆ.

‘ಈಗ ಆಕಾಂಕ್ಷಿಗಳ ಪಟ್ಟಿಯಲ್ಲಿರುವ ಬಹುತೇಕ ನಾಯಕರು ಪ್ರಭಾವಿಗಳೇ. ಅವರವರ ಕ್ಷೇತ್ರದಲ್ಲಿ ಒಳ್ಳೆಯ ಹೆಸರಿದೆ. ಆದರೆ, ಅವರಿಗೆ ಇಡೀ ಚಾಮರಾಜನಗರ ಕ್ಷೇತ್ರದ ಮತದಾರರನ್ನು ಒಲಿಸಿಕೊಳ್ಳುವುದು ಕಷ್ಟವಾಗಬಹುದು’ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ಷೇತ್ರದಲ್ಲಿ ಲಿಂಗಾಯತ ಮತದಾರರಷ್ಟೇ ಸಂಖ್ಯೆಯಲ್ಲಿ ದಲಿತ ಮತದಾರರೂ ಇದ್ದಾರೆ. ಸದ್ಯಕ್ಕೆ ನಮಗೆ ಲಿಂಗಾಯತ ಮತ್ತು ನಾಯಕ ಸಮುದಾಯವರ ಬೆಂಬಲ ಮಾತ್ರ ಇದೆ. ಇಲ್ಲಿ ಗೆಲ್ಲಬೇಕಾದರೆ ದಲಿತರ ಮತಗಳೂ ಮುಖ್ಯ. ಹಾಗಾಗಿ, ಅವರನ್ನು ಸೆಳೆಯಬಲ್ಲ ನಾಯಕನೇ ಅಭ್ಯರ್ಥಿಯಾಗಬೇಕು. ಆಗ ಮಾತ್ರ ಪಕ್ಷಕ್ಕೆ ಗೆಲುವು ಸಾಧಿಸಬಹುದು’ ಎಂದು ಅವರು ಹೇಳಿದರು.  

ಈ ಭಾಗದಲ್ಲಿ ದಲಿತ ಸಮುದಾಯದ ಮೇಲೆ ಪ್ರಭಾವ ಬೀರಬಲ್ಲ ಬಿಜೆಪಿ ಮುಖಂಡ ಶ್ರೀನಿವಾಸ್‌ ಪ್ರಸಾದ್‌ ಅವರು ಮಾತ್ರ ಧ್ರುವನಾರಾಯಣ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಬಲ್ಲರು ಎಂಬ ಅಭಿಪ್ರಾಯ ಸ್ಥಳೀಯ ಮುಖಂಡರಲ್ಲಿದೆ. ಇದನ್ನು ರಾಜ್ಯ ನಾಯಕರಿಗೂ ಅವರು ಮನವರಿಕೆ ಮಾಡಿದ್ದಾರೆ. ಶ್ರೀನಿವಾಸ್ ಪ್ರಸಾದ್‌ ಅವರನ್ನೂ ಭೇಟಿ ಮಾಡಿ ಅಭ್ಯರ್ಥಿಯಾಗುವಂತೆ ಮುಖಂಡರು ಮನವಿ ಮಾಡಿದ್ದಾರೆ. ಆದರೆ, ಆರೋಗ್ಯದ ಕಾರಣವೊಡ್ಡಿ ಅವರು ನಿರಾಕರಿಸುತ್ತಲೇ ಬಂದಿದ್ದಾರೆ. ಹಲವಾರು ಬಹಿರಂಗ ಸಭೆಗಳಲ್ಲಿ ‘ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದು ಅವರೇ ಘೋಷಿಸಿದ್ದಾರೆ.

‘ಶ್ರೀನಿವಾಸ್‌ ಪ್ರಸಾದ್‌ ಅಭ್ಯರ್ಥಿ ಆದರೆ ಪಕ್ಷಕ್ಕೆ ಒಳ್ಳೆಯದೇ. ಆದರೆ, ಅವರು ಆರೋಗ್ಯದ ಕಾರಣ ನೀಡಿ ಸ್ಪರ್ಧಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶ್ರೀನಿವಾಸ್‌ ಪ್ರಸಾದ್‌ ಅವರು ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಿರುವುದಕ್ಕೆ ಟಿಕೆಟ್‌ ಆಕಾಂಕ್ಷಿಗಳು ಹೆಚ್ಚುತ್ತಿದ್ದಾರೆ. ಒಂದು ವೇಳೆ ಅವರು ಕಣಕ್ಕಿಳಿದರೆ ಇವರೆಲ್ಲ ಹಿಂದೆ ಸರಿಯುವುದು ಖಚಿತ’ ಎಂದು ‍ಹೇಳುತ್ತವೆ ಪಕ್ಷದ ಮೂಲಗಳು. ಕೊನೆಯ ಹಂತದಲ್ಲಿ ಅವರು ಸ್ಪರ್ಧಿಸಲು ಒಪ್ಪಲೂ ಬಹುದು ಎಂಬ ವಿಶ್ವಾಸದಲ್ಲಿ ಮುಖಂಡರಿದ್ದಾರೆ.

8 ವಿಧಾನಸಭಾ ಕ್ಷೇತ್ರಗಳು

ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳ ಎಂಟು ವಿಧಾನಸಭಾ ಕ್ಷೇತ್ರಗಳು (ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ, ಹನೂರು, ತಿ.ನರಸೀಪುರ, ನಂಜನಗೂಡು, ಎಚ್‌.ಡಿ.ಕೋಟೆ ಮತ್ತು ವರುಣಾ) ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.

‘ವರಿಷ್ಠರಿಂದ ಅಂತಿಮ ತೀರ್ಮಾನ’

ಟಿಕೆಟ್‌ ಆಕಾಂಕ್ಷಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರೊ. ಮಲ್ಲಿಕಾರ್ಜುನಪ್ಪ ಅವರು, ‘ಜನಾಭಿಪ್ರಾಯ ಮತ್ತು ಗೆಲ್ಲುವ ಸಾಮರ್ಥ್ಯವನ್ನು ನೋಡಿಕೊಂಡು ಪಕ್ಷದ ವರಿಷ್ಠರು ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ’ ಎಂದರು.

ಕೆ.ಶಿವರಾಂ ಅವರು ತಾವೇ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದಾರಲ್ಲ ಎಂದು ಕೇಳಿದ್ದಕ್ಕೆ, ‘ಆಕಾಂಕ್ಷಿಗಳು ರಾಜ್ಯ ಘಟಕದ ಅಧ್ಯಕ್ಷರನ್ನು ಭೇಟಿಯಾಗಿ ಟಿಕೆಟ್‌ ನೀಡುವಂತೆ ಕೇಳುವುದು ಸಹಜ. ಆಗ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಎಂದು ಸಲಹೆ ನೀಡುತ್ತಾರೆ. ಅಂತಿಮವಾಗಿ ಜನಾಭಿಪ್ರಾಯದ ಮೇಲೆಯೇ ಟಿಕೆಟ್‌ ನೀಡಲಾಗುತ್ತದೆ’ ಎಂದು ಉತ್ತರಿಸಿದರು.

ಬಿಎಸ್‌ಪಿಯಿಂದಲೂ ಅಭ್ಯರ್ಥಿ

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬಹುಜನ ಸಮಾಜ ಪಕ್ಷವೂ (ಬಿಎಸ್‌ಪಿ) ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಹೇಳಿದೆ. ಆದರೆ, ಯಾರನ್ನು ಕಣಕ್ಕಿಳಿಸಲಾಗುವುದು ಎಂಬುದನ್ನು ಇನ್ನೂ ಘೋಷಣೆ ಮಾಡಿಲ್ಲ.

ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ಗೆದ್ದಿರುವ ಬಿಎಸ್‌ಪಿ, ಜಿಲ್ಲೆಯಲ್ಲಿ ತನ್ನದೇ ಆದ ಬೆಂಬಲಿಗರನ್ನು ಹೊಂದಿದೆ. 

ರಾಷ್ಟ್ರೀಯ ಮಟ್ಟದಲ್ಲಿ ಮಹಾಘಟಬಂಧನದಿಂದ ದೂರ ಉಳಿದಿರುವ ಬಿಎಸ್‌ಪಿ, ಅಲ್ಲಿ ಬಿಜೆಪಿ ಜೊತೆ ಕೈಜೋಡಿಸಿದರೆ, ಇಲ್ಲಿ ಬಿಜೆಪಿ–ಬಿಎಸ್‌ಪಿ ನಡುವೆ ಮೈತ್ರಿ ಆಗುವ ಸಾಧ್ಯತೆಯನ್ನೂ ಮುಖಂಡರು ತಳ್ಳಿ ಹಾಕುತ್ತಿಲ್ಲ.

ಆದರೆ, ಸದ್ಯಕ್ಕೆ ಅಂತಹ ಯಾವ ಸಾಧ್ಯತೆಯೂ ಗೋಚರಿಸುತ್ತಿಲ್ಲ. ಬಿಎಸ್‌ಪಿಯೂ ಚುನಾವಣೆಗೆ ಸಜ್ಜಾಗುತ್ತಿದೆ.

ಪ್ರತಿಕ್ರಿಯಿಸಿ (+)