ಚುನಾವಣೆ, ಸಿನಿಕತನ ಮತ್ತು ವಸ್ತುಸ್ಥಿತಿ

ಶನಿವಾರ, ಏಪ್ರಿಲ್ 20, 2019
32 °C
ಪರಿಪಕ್ವ ನಾಯಕರನ್ನು ರೂಪಿಸಲು ಪ್ರಜ್ಞಾವಂತಿಕೆಯಿಂದ ಯೋಚಿಸುವ ಕೌಶಲ ಬೇಕು

ಚುನಾವಣೆ, ಸಿನಿಕತನ ಮತ್ತು ವಸ್ತುಸ್ಥಿತಿ

Published:
Updated:

ದೇಶದ ಬುದ್ಧಿಜೀವಿ ವಲಯದಲ್ಲಿ ಮೂರು ವರ್ಷಗಳ ಹಿಂದೆ ಅಸಹಿಷ್ಣುತೆಯ ಕೂಗು ಕೇಳಿಬಂದಿತ್ತು. ಅದಕ್ಕೆ ನಿರ್ದಿಷ್ಟ ಕಾರಣ ನೀಡಲು ಅವರಿಗೆ ಸಾಧ್ಯವಾಗದಿದ್ದರೂ ದೇಶದಾದ್ಯಂತ ಎಂಥದೋ ವಿಷಮ ಬೆಳವಣಿಗೆಯಾಗುತ್ತಿದೆ ಎಂದು ಅವರಿಗೆ ಬಲವಾಗಿ ಅನ್ನಿಸಿತ್ತು. ಇದರ ಪರಿಣಾಮವಾಗಿ ಕೆಲವು ಸಾಹಿತಿಗಳು ಪ್ರಶಸ್ತಿ ವಾಪಸಾತಿ ಅಭಿಯಾನವನ್ನೂ ಪ್ರಾರಂಭಿಸಿದ್ದರು. ಹೀಗೆ ಅಭಿಯಾನ ಪ್ರಾರಂಭಿಸಿದವರನ್ನು ಮುಂದೆ ಪ್ರಶಸ್ತಿಗಳು ಅರಸಿಬಂದಾಗ ಅವರೇನೂ ಆ ಪ್ರಶಸ್ತಿಗಳನ್ನು ನಿರಾಕರಿಸಲಿಲ್ಲವಾದ ಕಾರಣ ಅವರ ಅಭಿಯಾನಕ್ಕೆ ತಾರ್ಕಿಕ ಅಂತ್ಯ ಸಿಗಲಿಲ್ಲ. ಈಗ ಪ್ರಶ್ನೆ ಅದಲ್ಲ. ಆ ಅಸಹಿಷ್ಣುತೆ ಈಗಲೂ ಇದೆಯೇ ಅಥವಾ ಇಲ್ಲವೇ ಎಂಬುದು ಇಂದಿನ ಪ್ರಶ್ನೆ. ಸಾಹಿತಿ, ಬುದ್ಧಿಜೀವಿಗಳ ತಾತ್ಕಾಲಿಕ ಕೂಗು ಹಾಗಿರಲಿ; ಸಾಮಾನ್ಯ ಮತದಾರನಲ್ಲಿ ಈ ಅಸಹಿಷ್ಣುತೆ ಎಲ್ಲ ಕಾಲಕ್ಕೂ ಇದ್ದೇ ಇತ್ತು, ಈಗಲೂ ಇದೆ.

ಹಿಂದೆ, ಸಮೂಹ ಮಾಧ್ಯಮಗಳ ಈ ಮಟ್ಟದ ಪ್ರಭಾವವಿರದಿದ್ದ 1980–90ರ ದಶಕಗಳಲ್ಲಿ, ಚುನಾವಣೆ ಬಂದಾಗಲೆಲ್ಲ ಸಾಮಾನ್ಯ ಮತದಾರನ ಬಾಯಲ್ಲಿ ‘ಯಾರಿಗೆ ವೋಟು ಹಾಕಿದರೂ ನಾವಂತೂ ದುಡಿಮೆ ಮಾಡಲೇಬೇಕು; ಅಕ್ಕಿ, ಸೀಮೆಎಣ್ಣೆಗೆ ಸಾಲುಗಟ್ಟಿ ನಿಲ್ಲುವುದಂತೂ ತಪ್ಪುವುದಿಲ್ಲ’ ಎಂಬ ಹಳಹಳಿಕೆಯ ಮಾತು ಕೇಳಿಬರುತ್ತಿತ್ತು. ಹಾಗೆ ಮಾತಾಡುವವರು ವೋಟು ಹಾಕುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಒಟ್ಟಾರೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ಅವರಲ್ಲಿದ್ದ ಉದಾಸೀನ ಭಾವ ಮತ್ತು ರಾಜಕಾರಣಿಗಳ ಬಗ್ಗೆ ಅವರು ಬೆಳೆಸಿಕೊಂಡಿದ್ದ ಅಸಹಿಷ್ಣುತೆ ಅಂತಹ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಇಂದು ಪರಿಸ್ಥಿತಿ ಬದಲಾಗಿದ್ದರೂ ಆ ಅಸಹನೆ ಬೇರೆ ರೀತಿಯಲ್ಲಿ, ಇನ್ನೂ ನಕಾರಾತ್ಮಕ ರೀತಿಯಲ್ಲಿ ಅಭಿವ್ಯಕ್ತಿ ಪಡೆದುಕೊಂಡಿದೆ.

‘ದುಡಿಮೆ’ಗೆ ಸಂಬಂಧಿಸಿದ ಆ ಮಾತಿನಲ್ಲಿ ದುಡಿಯದೆಯೇ ದುಡಿಮೆಯ ಫಲವನ್ನು ಪಡೆಯಬೇಕೆಂಬ ಆಸೆ ಇದ್ದಿರಬಹುದು. ಅದು ಮುಂದೆ ನಗದು ಮತ್ತು ವಸ್ತು ರೂಪದ ಆಮಿಷಗಳಿಗೆ ಬಲಿ ಬೀಳುವ ಸ್ಥಿತಿಗೆ ಕಾರಣವಾಗಿರಬಹುದು. ಹಾಗಿದ್ದರೆ ನಾವು ಆರಿಸಿ ಕಳಿಸುವ ರಾಜಕಾರಣಿಯೂ ನಮ್ಮಂತೆಯೇ ಯೋಚಿಸಿದರೆ ತಪ್ಪೇನು? ರಾಜಕಾರಣಿಗಳು ನಮ್ಮ ಪ್ರಲೋಭನೆಗಳನ್ನು ಬೆಂಬಲಿಸಿದರೆ ಅದು ನಮಗೆ ಹಿತಕರವೇ? ಮತದಾರನ ಈ ಕ್ಷಣಿಕ ಲಾಭದಾಸೆ ಮತ್ತು ಸಿನಿಕತನವನ್ನು ರಾಜಕಾರಣಿಗಳು ತಮ್ಮ ರಾಜಕೀಯ ಹಿತಕ್ಕಾಗಿ ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಳ್ಳುತ್ತಿದ್ದಾರೆ. ಸಮಾಜಕ್ಕೆ ನೀಡದೆ ಸಮಾಜದ ಲಾಭಗಳನ್ನು ಪೂರ್ಣವಾಗಿ ಪಡೆದುಕೊಳ್ಳಬೇಕು ಎಂಬ ಬುದ್ಧಿ, ಯಾರಿಗೆ ವೋಟು ಹಾಕಿದರೂ ನಮ್ಮ ಕಾರ್ಪಣ್ಯ ತಪ್ಪುವುದಿಲ್ಲ ಎಂಬ ಸಿನಿಕತನ ನಮ್ಮಲ್ಲಿ ಇರುವವರೆಗೂ ಅರ್ಥಪೂರ್ಣವಾದ ಪ್ರಜಾಪ್ರಭುತ್ವ ಸಾಕಾರಗೊಳ್ಳದು.

ಇಂದು ಮಾಹಿತಿ ತಂತ್ರಜ್ಞಾನ ವ್ಯಾಪಕವಾಗಿ ಬೆಳೆದಿದೆ. ಸಾಮಾಜಿಕ ಜಾಲತಾಣಗಳ ನೆರವಿನಿಂದ ಪ್ರತಿಯೊಬ್ಬ ಮತದಾರನಿಗೂ ತನ್ನ ಮನದಾಳದ ರೋಷವನ್ನು ಜಗತ್ತಿನ ಮೂಲೆ ಮೂಲೆಗೆ ಪಸರಿಸುವಂತೆ ಮಾಡಲು ಸಾಧ್ಯವಾಗಿದೆ. ಇದು ಮತದಾರನಿಗೆ ಒಂದು ವಿಚಿತ್ರ ಧೈರ್ಯ ಮತ್ತು ಸ್ವತಂತ್ರ ಭಾವ ನೀಡಿದೆ. ಹಿಂದೆ, ಮತದಾರರಿಗೆ ಈ ಸೌಲಭ್ಯವಿರದಿದ್ದ ಕಾರಣ, ಇಂದಿನವರಲ್ಲಿ ಕಾಣಿಸುವ ನಿರ್ಭೀತ ಭಾವ ಅವರಲ್ಲಿ ಕಾಣಿಸುತ್ತಿರಲಿಲ್ಲ. ಹಿಂದಿನ ತಲೆಮಾರಿನ ಮತದಾರ ತಾನು ಯಾರಿಗೆ ಮತ ಹಾಕಿದೆ ಎಂಬುದನ್ನು ಪಕ್ಕದವನಿಗೆ ಹೇಳಲು ಸಹ ಹಿಂಜರಿಯುತ್ತಿದ್ದ. ತನ್ನ ಹತಾಶೆ, ಅಸಹಿಷ್ಣುತೆ ಅಭಿವ್ಯಕ್ತಿಗೆ ಅವಕಾಶ ಇರದಿದ್ದಾಗ ಹಳಹಳಿಕೆಯ ಮಾತುಗಳನ್ನಾಡಿ ಸುಮ್ಮನಾಗುತ್ತಿದ್ದ. ಆದರೆ, ಇಂದಿನ ಮತದಾರ ತಾನು ಇಂತಹವರಿಗೆ ಮತ ಹಾಕುತ್ತೇನೆ ಎಂದು ಹೇಳಿಕೊಳ್ಳಬಲ್ಲ. ಜಾಲತಾಣದಲ್ಲಿರುವ ಉಳಿದವರಿಗೂ ಇಂತಹವರಿಗೇ ಮತ ಹಾಕಬೇಕೆಂದು ಆಗ್ರಹಿಸಬಲ್ಲ. ತಾನು ಇಷ್ಟಪಡದ ಅಭ್ಯರ್ಥಿಗಳನ್ನು ವಾಚಾಮಗೋಚರವಾಗಿ ನಿಂದಿಸಬಲ್ಲ. ಜಾಲತಾಣಗಳಲ್ಲಿ ಇವರ ಕಾಮೆಂಟುಗಳನ್ನು ಓದುತ್ತಿದ್ದರೆ ಇದು ಪ್ರಜ್ಞಾವಂತ ಮತದಾರನ ಅನಿಸಿಕೆಯಲ್ಲ, ಯಾವುದೋ ಪಕ್ಷದ ಕಾರ್ಯಕರ್ತನ ಅಥವಾ ರಾಜಕಾರಣಿಯೊಬ್ಬನ ಅನುಯಾಯಿಯ ವಿತಂಡವಾದವೆಂದು ಭಾಸವಾಗುತ್ತದೆ.

ಇಂದು ಜಾಲತಾಣಿಗರು ನಮ್ಮ ರಾಜಕಾರಣಿಗಳ ಬಗ್ಗೆ ಆಡುತ್ತಿರುವ ದುಡುಕಿನ ಮಾತುಗಳನ್ನು ಓದಿದರೆ ಗಾಬರಿಯಾಗುತ್ತದೆ. ಉದಾಹರಣೆಗೆ ‘ಪಪ್ಪು’, ‘ಮಾ ಕಾ ಲಾಡ್ಲಾ’, ‘ಜೋಕರ್’, ‘ಪ್ರಿನ್ಸ್’, ‘ಶಹಜಾದಾ’, ‘ಬುದ್ದು’, ‘ಸಾವಿನ ದಲ್ಲಾಳಿ’, ‘ನರಹಂತಕ’ ಇತ್ಯಾದಿ ಸಂಬೋಧನೆಗಳಲ್ಲಿ ವಿಮರ್ಶೆ, ವಿಡಂಬನೆ ಅಥವಾ ಸಾತ್ವಿಕ ಆಕ್ರೋಶಕ್ಕಿಂತಲೂ ಹೆಚ್ಚಾಗಿ ನಮ್ಮೊಳಗಿನ ಅಸಹನೆಯನ್ನು ಹೊರಗೆ ಕಾರಿಕೊಳ್ಳುವ ವ್ಯಸನವೇ ಕಾಣಿಸುತ್ತದೆ.

ಮತದಾರನ ದುಡುಕುತನಕ್ಕೆ ಸಣ್ಣ ಉದಾಹರಣೆ ಕೊಡುವುದಾದರೆ, 2014ರ ಚುನಾವಣೆಗೆ ಮುನ್ನ ಮೋದಿ ವಿರೋಧಿಗಳು ಮತ್ತು ಮೋದಿ ಭಕ್ತರು ಸೇರಿಕೊಂಡು ದೇಶದಾದ್ಯಂತ ಮೋದಿ ಅಲೆ ಸೃಷ್ಟಿಸಿದ್ದರು. ಮೋದಿ ಅಧಿಕಾರಕ್ಕೆ ಬಂದರೆ ಗುಜರಾತಿನಲ್ಲಿ ನಡೆದಂಥ ಕೋಮು ಹಿಂಸಾಚಾರ ದೇಶದ ಉದ್ದಗಲಕ್ಕೂ ವ್ಯಾಪಿಸಿ ಬಿಡುತ್ತದೆ ಎಂದು ಮೋದಿ ವಿರೋಧಿಗಳು ಆತಂಕ ವ್ಯಕ್ತಪಡಿಸಿದರೆ, ಇಡೀ ದೇಶವನ್ನೇ ಮೋದಿ ಭೂಸ್ವರ್ಗ ಮಾಡಿಬಿಡುತ್ತಾರೆಂದು ಅವರ ಭಕ್ತರು ಹೇಳಿದ್ದರು. ಆದರೆ, ಈ ಎರಡೂ ಭವಿಷ್ಯವಾಣಿಗಳು ಇಂದು ಸುಳ್ಳಾಗಿವೆ. ಇತರ ಪ್ರಧಾನಿಗಳಿಗಿಂತ ಮೋದಿ ಯಾವುದೇ ರೀತಿಯಲ್ಲೂ ಭಿನ್ನರಲ್ಲ (ಈಗಿನ ಹಲವು ಪ್ರಮುಖ ರಾಜಕಾರಣಿಗಳಿಗಿಂತ ಆಕರ್ಷಕವಾಗಿ ಮಾತನಾಡಬಲ್ಲರು ಎಂದಂತೂ ಒಪ್ಪಬಹುದೇನೋ!). ಮೋದಿ ಆಡಳಿತ ಯಾವ ‘ಅಚ್ಛೇ ದಿನ’ವನ್ನೂ ನಮಗೆ ದಯಪಾಲಿಸಲಿಲ್ಲ. ಹಾಗೆಯೇ, ಕರಾಳ ದುರ್ದಿನವನ್ನೂ ಕೊಡಲಿಲ್ಲ.

ಆರಕ್ಕೇರಲಾರದ ಮೂರಕ್ಕಿಳಿಯಲಾರದ ನಮ್ಮ ರಾಜಕಾರಣಿಗಳ ಬಗ್ಗೆ ಅತಿಯಾದ ಆತಂಕ ಅಥವಾ ಭರವಸೆ ಇರಿಸಿಕೊಂಡಲ್ಲಿ ಅಂತಿಮವಾಗಿ ಭ್ರಮೆಯಲ್ಲಿ ನವೆಯಬೇಕಾಗುತ್ತದೆ. ನಾವು ದುಡುಕುತನ, ಸಿನಿಕತನಗಳನ್ನು ನೀಗಿಕೊಂಡು ಪ್ರಜ್ಞಾವಂತಿಕೆಯಿಂದ ಯೋಚಿಸುವ ಕೌಶಲ ಗಳಿಸುವವರೆಗೂ ಅಪಕ್ವ ನಾಯಕರೇ ಮತ್ತೆ ಮತ್ತೆ ಅಧಿಕಾರಕ್ಕೆ ಬರುತ್ತಿರುತ್ತಾರೆ. ರಾಜಕಾರಣಿಗಳ ಬಗ್ಗೆ ನಾವು ವ್ಯಕ್ತಪಡಿಸುವ ನಮ್ಮ ಹತಾಶೆ, ಅಸಹಿಷ್ಣುತೆಗಳು ನಮ್ಮದೇ ಮುಖದ ಕುರೂಪವನ್ನು ಕನ್ನಡಿಯಲ್ಲಿ ನೋಡಿಕೊಂಡು ಸಿಡಿಮಿಡಿಗೊಳ್ಳುವ ಪರಿಯದ್ದಾಗಿವೆ.

ಅಡಿಗರು ‘ಸಾಮಾಜಿಕ ಪ್ರಜ್ಞೆ’ ಎಂಬ ತಮ್ಮ ಲೇಖನದಲ್ಲಿ ಮತದಾರನಿಗೆ ಹೇಳಿರುವ ಕಿವಿಮಾತು ಇಂದಿಗೂ ಪ್ರಸ್ತುತವೆನಿಸುತ್ತದೆ: ‘ಈಗ ಸಮಾಜವನ್ನು ಟೀಕೆ ಮಾಡುವ ಅನೇಕರು ಈ ಮಾತನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮೇಲು. ಇನ್ನೊಬ್ಬರನ್ನು ಲೇವಡಿ ಮಾಡಿದರೆ ಕೇಳುವುದಕ್ಕೆ ಎಲ್ಲರಿಗೂ ಸಂತೋಷ; ಓದುವುದಕ್ಕೂ ಸಂತೋಷ ಆಗಬಹುದು. ಸಾಮಾಜಿಕ ಪ್ರಜ್ಞೆಯ ಟೀಕಾಕಾರ ಕೇವಲ ಮನರಂಜನೆ ನೀಡುವ ಹಾಸ್ಯಗಾರನಾಗಬಾರದು. ಸಮಾಜದ ಅನ್ಯಾಯವೊಂದನ್ನೇ ಗಮನದಲ್ಲಿಟ್ಟುಕೊಂಡು ತಾನಾಡುವ ಮಾತನ್ನು ತೂಕ ಮಾಡಿ ಅಂಕಿ ಸಂಖ್ಯೆ ಸಂಗತಿಗಳ ಜೊತೆಗೆ ವೈಜ್ಞಾನಿಕವಾಗಿ ನಿರೂಪಿಸಬೇಕು. ಆಗ ಜನ ಅದನ್ನು ಓದಿಯೋ ಕೇಳಿಯೋ ನಕ್ಕು ಮರೆಯುವುದಿಲ್ಲ. ಅಂಥ ಕೆಲಸದಿಂದ ಓದಿದ್ದು ಬುದ್ಧಿಗತವಾಗಿ ಸಾರ್ವಜನಿಕ ಅಭಿಪ್ರಾಯ ರೂಪಿಸುವುದಕ್ಕೆ ಸಹಾಯವಾಗುತ್ತದೆ’.

ಮಹಾಭಾರತದ ಶಾಂತಿಪರ್ವದಲ್ಲಿ ‘ರಾಜನು ಬದಲಾವಣೆ ತರುತ್ತಾನೋ ಅಥವಾ ಬದಲಾವಣೆಯೇ ರಾಜನನ್ನು ತರುತ್ತದೋ’ ಎಂಬ ಜಿಜ್ಞಾಸೆ ಇದೆ. ಇದು ಪ್ರಜಾಯುಗವಾದ ಕಾರಣ ಪ್ರಜೆಯೇ ತನ್ನಿಚ್ಛೆಯಂತೆ ತನ್ನ ಯುಗವನ್ನು ರೂಪಿಸಿಕೊಳ್ಳಬೇಕಾಗಿದೆ. ನಮ್ಮದೇ ಪಡಿಯಚ್ಚುಗಳಂತಿರುವ ರಾಜಕಾರಣಿಗಳನ್ನು ಹಳಿವುದರಿಂದಲಾಗಲೀ ಅಥವಾ ಅವರನ್ನು ತಲೆಮೇಲೆ ಹೊತ್ತು ಮೆರೆಸುವುದರಿಂದಲಾಗಲೀ ಬದಲಾವಣೆ ತರಲಾಗದು.

ಲೇಖಕ: ಸಹಾಯಕ ಪ್ರಾಧ್ಯಾಪಕ, ಜ್ಯೋತಿನಿವಾಸ್‌ ಕಾಲೇಜ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !