17ರಲ್ಲಿ ‘ಮೈತ್ರಿ’ಗೆ ಗೆಲುವು: ‘ಕೈ’ ವಿಶ್ವಾಸ

ಶುಕ್ರವಾರ, ಏಪ್ರಿಲ್ 19, 2019
22 °C
ಚುನಾವಣಾ ಪ್ರಚಾರ ರಣತಂತ್ರ ಚರ್ಚೆ; ಒಗ್ಗಟ್ಟು ಪ್ರದರ್ಶಿಸಲು ‘ಉಸ್ತುವಾರಿ’ ಸೂಚನೆ

17ರಲ್ಲಿ ‘ಮೈತ್ರಿ’ಗೆ ಗೆಲುವು: ‘ಕೈ’ ವಿಶ್ವಾಸ

Published:
Updated:

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಗೆಲ್ಲುವ ಬಗ್ಗೆ ರಾಜ್ಯ ನಾಯಕರು ಪಕ್ಷದ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಗೆ ಮಾಹಿತಿ ನೀಡಿದ್ದಾರೆ.

ಅಶೋಕ ಹೋಟೆಲ್‌ನಲ್ಲಿ ಭಾನುವಾರ ಕಾಂಗ್ರೆಸ್‌ ನಾಯಕರ ಸಭೆ ನಡೆಯಿತು. ಚುನಾವಣಾ ಪ್ರಚಾರ, ಸದ್ಯದ ಸ್ಥಿತಿಗತಿಗಳ ಬಗ್ಗೆ ಸಭೆಯಲ್ಲಿ ವಿಚಾರ ವಿನಿಮಯ ನಡೆಸಿದರು. ಹೆಚ್ಚು ಸ್ಥಾನಗಳನ್ನು ಗೆಲ್ಲುವ ಕುರಿತಂತೆ ರೂಪಿಸಿರುವ ರಣತಂತ್ರಗಳ ಕುರಿತು ವೇಣುಗೋಪಾಲ್‌ ಅವರಿಗೆ ನಾಯಕರು ಮಾಹಿತಿ ನೀಡಿದರು.

‘ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲೇ ಬೇಕಿದೆ. ಯಾವುದೇ ಅಸಮಾಧಾನಗಳಿದ್ದರೂ ಬಗೆಹರಿಸಿಕೊಂಡು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಕಾರ್ಯಕರ್ತರನ್ನು ಹುರಿದುಂಬಿಸಬೇಕು. ಎಲ್ಲ ಕಡೆಗಳಲ್ಲಿ ಜಂಟಿಯಾಗಿ ಪ್ರಚಾರಕ್ಕೆ ಹೋಗಬೇಕು’ ಎಂದು ಪಕ್ಷದ ರಾಜ್ಯ ನಾಯಕರಿಗೆ ವೇಣುಗೋಪಾಲ್‌ ಸೂಚಿಸಿದರು.

‘ಬಿಜೆಪಿ ಅಭ್ಯರ್ಥಿಗಳ ನಕಾರಾತ್ಮಕ ಅಂಶಗಳನ್ನು ಗುರುತಿಸಿ, ಅವರ ಮೇಲಿರುವ ಆರೋಪಗಳನ್ನು ಮತ್ತಷ್ಟು ಕೆದಕಬೇಕು. ಮತದಾರರ ಮುಂದೆ ಎಲ್ಲವನ್ನೂ ಮನವರಿಕೆ ಮಾಡಿಕೊಟ್ಟರೆ ಮತ್ತಷ್ಟು ಸೀಟುಗಳನ್ನು ಗೆಲ್ಲಬಹುದು’ ಎಂದೂ ಸಲಹೆ ನೀಡಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಮಂಡ್ಯ, ಮೈಸೂರು, ಹಾಸನ ಕ್ಷೇತ್ರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಕೆಲವು ಕಡೆ ಸಣ್ಣಪುಟ್ಟ ಸಮಸ್ಯೆಗಳಿವೆ. ಆದರೆ, ಈ ಸಮಸ್ಯೆಗಳು ಬಗೆಹರಿಯಲಿವೆ. ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರ ವಿರುದ್ಧ ದೇವೇಗೌಡರು ದೂರು ನೀಡಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ವೇಣುಗೋಪಾಲ್, ‘ಅವರು ನನಗೆ ದೂರು ನೀಡಿಲ್ಲ. ಎಲ್ಲರೂ ಒಟ್ಟಾಗಿಯೇ ಪ್ರಚಾರ ಮಾಡುತ್ತಿದ್ದಾರೆಂದು ರಾಜ್ಯದ ಕಾಂಗ್ರೆಸ್‌ ನಾಯಕರ ಬಗ್ಗೆ ದೇವೇಗೌಡರು ಹೊಗಳಿದ್ದಾರೆ. ಅಸಮಾಧಾನ ಇದೆ ಎನ್ನುವುದು ಮಾಧ್ಯಮಗಳ ಸೃಷ್ಟಿ’’ ಎಂದರು.

ಸಿದ್ದರಾಮಯ್ಯ ಮಾತನಾಡಿ, ‘ಎಲ್ಲ 28 ಲೋಕಸಭಾ ಕ್ಷೇತ್ರಗಳ ಕುರಿತು ಚರ್ಚೆ ಮಾಡಿದ್ದೇವೆ. ಮಂಡ್ಯದಲ್ಲಿ 12ರಂದು ನಾನು ಪ್ರಚಾರದಲ್ಲಿ ಭಾಗವಹಿಸುತ್ತೇನೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಮಾತನಾಡಿ, ‘ರಾಜ್ಯದಲ್ಲಿ ಎಲ್ಲೆಲ್ಲಿ ಗೆಲ್ಲುತ್ತೇವೆ ಮತ್ತು ಎಲ್ಲೆಲ್ಲಿ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ’ ಎಂದರು.

‘ಇದೇ 13ರಂದು ರಾಜ್ಯಕ್ಕೆ ಬರಲಿರುವ ರಾಹುಲ್ ಗಾಂಧಿ, ಮೂರು ಕಡೆಗಳಲ್ಲಿ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ. ಅದರ ಸಿದ್ಧತೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಏಪ್ರಿಲ್ 18ರಂದು ಮತ್ತೆ ರಾಹುಲ್ ಬರಲಿದ್ದಾರೆ’ ಎಂದರು.

‘ಕಾಂಗ್ರೆಸ್– ಜೆಡಿಎಸ್ ಪರಸ್ಪರ ಮೂವತ್ತು ವರ್ಷ ಪರಸ್ಪರ ಹೊಡೆದಾಡಿದ್ದೇವೆ. ಒಮ್ಮೆಗೆ ಕಾರ್ಯಕರ್ತರು ಒಂದಾಗುವುದು ಕಷ್ಟ. ಮೈತ್ರಿಯ ಅಗತ್ಯದ ಬಗ್ಗೆ ಎಲ್ಲರಿಗೂ ಮನವರಿಕೆ ಮಾಡಿಕೊಡುತ್ತೇವೆ. ದೇಶದ ಹಿತಕ್ಕಾಗಿ ಮತ್ತು ಪಕ್ಷಕ್ಕಾಗಿ ಒಂದಾಗುತ್ತೇವೆ. ಸ್ವಾಭಿಮಾನ ಎಲ್ಲರಿಗೂ ಇರುತ್ತೆ’ ಎಂದು ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

ಅಲೆಗ್ಸಾಂಡರ್‌ ಮನವೊಲಿಕೆ: ಇಂದಿರಾನಗರದಲ್ಲಿರುವ ಕಾಂಗ್ರೆಸ್‌ ಮುಖಂಡ ಜೆ. ಅಲೆಗ್ಸಾಂಡರ್ ಅವರ ಮನೆಗೆ ಭೇಟಿ ನೀಡಿದ ಕೆ.ಸಿ. ವೇಣುಗೋಪಾಲ್, ಪಕ್ಷಕ್ಕೆ ನೀಡಿದ ರಾಜೀನಾಮೆಯನ್ನು ವಾಪಸು ಪಡೆಯುವಂತೆ ಮನವೊಲಿಸಿದರು.

ಸಚಿವರಾದ ಕೆ.ಜೆ. ಜಾರ್ಜ್, ಡಿ.ಕೆ. ಶಿವಕುಮಾರ್ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !