ನಷ್ಟದಿಂದ ಲಾಭದತ್ತ ನಂದಿ: ದೇಸಾಯಿ ತಿರುಗೇಟು

7
ಚುನಾವಣೆಗಾಗಿ ಮಿಥ್ಯಾರೋಪ; ಹಲವು ದಾಖಲೆಗಳ ಮೈಲುಗಲ್ಲು

ನಷ್ಟದಿಂದ ಲಾಭದತ್ತ ನಂದಿ: ದೇಸಾಯಿ ತಿರುಗೇಟು

Published:
Updated:

ವಿಜಯಪುರ: ‘ಚುನಾವಣೆಗಾಗಿ ಮಾಜಿ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ ಮಿಥ್ಯಾರೋಪ ಮಾಡಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ. ಎಲ್ಲವೂ ಪಾರದರ್ಶಕವಾಗಿದೆ. ಯಾರು ಬೇಕಾದರೂ ಪರಿಶೀಲಿಸಬಹುದು’ ಎಂದು ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಕುಮಾರ ಚಂದ್ರಕಾಂತ ದೇಸಾಯಿ ಹೇಳಿದರು.

‘ನನ್ನ ಸಾಮರ್ಥ್ಯ, ನಿರ್ದೇಶಕರು, ಬೆಳೆಗಾರರ ಸಹಕಾರದಿಂದಲೇ ಐದು ವರ್ಷದ ಅವಧಿಯಲ್ಲಿ ಹಲವು ನೂತನ ಮೈಲುಗಲ್ಲು ಸ್ಥಾಪಿಸಿದ್ದೇವೆ. ಹಣಕಾಸಿನ ನಿರ್ವಹಣೆಗಾಗಿ 2016–17ರಲ್ಲಿ ರಾಷ್ಟ್ರ ಮಟ್ಟದ ದ್ವಿತೀಯ ಪ್ರಶಸ್ತಿ ಪಡೆದಿದ್ದೇವೆ. ಇವೆಲ್ಲವೂ ದಾಖಲೆಗಳೇ’ ಎಂದು ಭಾನುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ವಿರೋಧಿ ಬಣದ ಆರೋಪಗಳಿಗೆ ತಿರುಗೇಟು ನೀಡಿದರು.

‘ನನ್ನ ನೇತೃತ್ವದ ಆಡಳಿತ ಮಂಡಳಿ ನಂದಿಯ ಚುಕ್ಕಾಣಿ ಹಿಡಿದ ಸಂದರ್ಭ ಕಾರ್ಖಾನೆ ಸಾಲದಲ್ಲಿತ್ತು. ಬೆಳೆಗಾರರಿಗೆ ₹ 8 ಕೋಟಿ ಬಾಕಿ ನೀಡಬೇಕಿತ್ತು. ಎಲ್ಲಿಯೂ ಬಿಡಿಗಾಸು ಹುಟ್ಟದ ಸ್ಥಿತಿ ನಿರ್ಮಾಣಗೊಂಡಿತ್ತು. 2017–18ನೇ ಸಾಲಿನಲ್ಲಿ ₹ 10 ಲಕ್ಷ ಲಾಭ ಗಳಿಸಿದೆ. ಉತ್ತಮ ನಿರ್ವಹಣೆ, ಆಡಳಿತಕ್ಕೆ ಹಲವು ಪ್ರಶಸ್ತಿ ಸಿಕ್ಕಿವೆ.

ಇದೀಗ ಕಬ್ಬು ಅರೆಯುವ ಸಾಮರ್ಥ್ಯ ಹೆಚ್ಚಳ, ಡಿಸ್ಟಿಲರಿ, ವಿದ್ಯುತ್‌ ಉತ್ಪಾದನಾ ಘಟಕ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಿದ್ದೇವೆ. ಇವು ಪೂರ್ಣಗೊಂಡರೆ, ನಮ್ಮ ಅಸ್ತಿತ್ವವೇ ಇರುವುದಿಲ್ಲ ಎಂಬ ಕಾರಣಕ್ಕೆ ವಿರೋಧಿ ಪಾಳೆಯದವರು ಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ದೇಸಾಯಿ ಹರಿಹಾಯ್ದರು.

‘ನನ್ನ ವಿರುದ್ಧ ಶಶಿಕಾಂತಗೌಡ ಪಾಟೀಲ ಮಾಡಿರುವ ಆರೋಪ ರಾಜಕೀಯ ಪ್ರೇರಿತ. ನಾನು ಮೂಲತಃ ರೈತ. ಕಬ್ಬು ಕಡಿಯುವ ಗ್ಯಾಂಗ್‌ ನಿರ್ವಹಣೆ ಮಾಡುತ್ತಿರುವೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಶಶಿಕಾಂತ ಸಕ್ಕರೆ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಸದಸ್ಯತ್ವ ಸ್ಥಾನ ವಜಾಗೊಂಡಿರುವುದು ಸತ್ಯ. ಇದಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವೆ. ಯಾವುದೇ ಭ್ರಷ್ಟಾಚಾರವನ್ನು ನಾನು ಎಸಗಿಲ್ಲ’ ಎಂದು ಸುಭಾಸ ಸಾಹುಕಾರ ಪ್ರತಿಕ್ರಿಯಿಸಿದರು.

‘ಪಾರದರ್ಶಕ ಆಡಳಿತ ನೀಡಿದ್ದೇವೆ. ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವ ಹಪಾಹಪಿ ನಮಗಿಲ್ಲ. ಮತದಾರರು ಆಶೀರ್ವದಿಸಿದರೆ ಮಾತ್ರ ಮತ್ತೊಮ್ಮೆ ಆಡಳಿತದಲ್ಲಿರುತ್ತೇವೆ. ನಿರ್ದೇಶಕರ ಮಂಡಳಿ ಎಲ್ಲೂ ತಪ್ಪು ಎಸಗಿಲ್ಲ. ಯಾವ ನಿಯಮಾವಳಿ ಉಲ್ಲಂಘಿಸಿಲ್ಲ. ಪ್ರತಿಯೊಂದಕ್ಕೂ ದಾಖಲೆಗಳಿವೆ. ಯಾರೂ ಬೇಕಾದರೂ ಪರಿಶೀಲಿಸಬಹುದು’ ಎಂದು ನಿರ್ದೇಶಕ ಎಚ್‌.ಎಸ್‌.ಕೋರಡ್ಡಿ ಇದೇ ಸಂದರ್ಭ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !