ಕಾಡ ದಾರಿಯಲ್ಲಿ ಕಳೆದು ಹೋಗಿದ್ದು...

7

ಕಾಡ ದಾರಿಯಲ್ಲಿ ಕಳೆದು ಹೋಗಿದ್ದು...

Published:
Updated:
Deccan Herald

ಬಹಳ ವರ್ಷಗಳ ಹಿಂದಿನ ಘಟನೆ. ಶಿವಮೊಗ್ಗ ಜಿಲ್ಲೆಯ ಹೊರಬೈಲು ನನ್ನೂರು. ಊರು ಸುತ್ತಲೂ ದಟ್ಟ ಕಾಡು. ಆಗ ನಾನು ಅಜ್ಜಿಮನೆಯಲ್ಲಿದ್ದುಕೊಂಡು 10ನೇ ತರಗತಿಯಲ್ಲಿ ಓದುತ್ತಿದ್ದೆ. ಹಬ್ಬಗಳಲ್ಲಿ ಊರಿಗೆ ಹೋಗಿ ಬರುತ್ತಿದ್ದೆ. ಅಜ್ಜಿ ಮನೆಯಿಂದ ನಮ್ಮೂರಿಗೆ ಎರಡು ದಾರಿಗಳಿದ್ದವು.

ಒಂದು ಬಸ್ಸಿನ ದಾರಿ, ಇನ್ನೊಂದು ದಟ್ಟ ಕಾನನದ ಕಾಲು ದಾರಿ. ಆಗಿನ್ನೂ ಬೈಕು, ಕಾರುಗಳ ಭರಾಟೆಯಿಲ್ಲದ್ದರಿಂದ ಎತ್ತಿನ ಗಾಡಿ, ಸೈಕಲ್ಲುಗಳಲ್ಲಿ ಅದೇ ಕಾಡ ಹಾದಿಯಲ್ಲಿ ಸಾಗುತ್ತಿದ್ದರು. ಬಸ್ಸಿನ ದಾರಿಯಾದರೆ 25 ಕಿ.ಮೀ ಸುತ್ತಿ ಹೋಗಬೇಕು. ಕಾಲುದಾರಿಯಾದರೆ 10 ಕಿ.ಮೀ ಕಡಿಮೆಯಾಗುತ್ತಿತ್ತು. ಈ ದಾರಿಯನ್ನೇ ಹೆಚ್ಚಿನವರು ಆಯ್ದುಕೊಳ್ಳುತ್ತಿದ್ದರು.

ನಮ್ಮೂರಿನಲ್ಲಿ ಗ್ರಾಮದ ಹಬ್ಬ ಅಥವಾ ನೋನಿ ಎಂಬ ವಿಶೇಷ ಹಬ್ಬ. ದೀಪಾವಳಿಗಿಂತ ಒಂದು ವಾರ ಮೊದಲು ನಡೆಯುವ ಈ ಹಬ್ಬದಲ್ಲಿ ಊರಿನ ಎಲ್ಲಾ ದೇವರುಗಳನ್ನೂ ಸ್ಮರಿಸಿ, ಪೂಜಿಸಿ, ಹರಕೆ ತೀರಿಸುತ್ತಾರೆ. ಹಾಗಾಗಿ ಊರಿನವರು ಎಲ್ಲೇ ಇದ್ದರೂ ಆ ದಿನ ಬರಲೇಬೇಕೆಂಬ ನಂಬಿಕೆ.

ನಾನು ಆ ದಿನ ಪೂರ್ವಸಿದ್ಧತಾ ಪರೀಕ್ಷೆ ಮುಗಿಸಿ, ಮಾವನ ಜೊತೆ ಹಬ್ಬಕ್ಕೆ ಹೊರಡುವುದರೊಳಗೇ ಸಂಜೆ ಐದೂವರೆಯಾಗಿತ್ತು. ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಬೇಗ ಕತ್ತಲಾಗುತ್ತದೆ. ಇದು ಗೊತ್ತಿದ್ದರೂ ಸ್ವಲ್ಪ ವೇಗವಾಗಿ ಹೋದರೆ ಒಂದು ಗಂಟೆಯೊಳಗೆ ಊರು ಸೇರುತ್ತೇವೆ ಎಂದು ಧೈರ್ಯವಾಗಿ, ಡೈನಮೊ ಇಲ್ಲದ ಲಟಕಾಸಿ ಸೈಕಲ್ ಏರಿ ಕಾಡಿನ ದಾರಿಯಲ್ಲಿ ಹೊರಟೆವು. ನಾವು ಹೋಗುವ ದಾರಿ ಮಳೆಗಾಲದ ಹುಚ್ಚು ಮಳೆಗೆ ಕೊಚ್ಚಿಹೋಗಿತ್ತು.

ಯಾವಾಗಲೂ ಓಡಾಡುವ ರಸ್ತೆಯಾದರೂ, ಮಳೆಗಾಲದ ಅವಾಂತರದಲ್ಲಿ ರಸ್ತೆ ಮತ್ತೊಂದು ಕವಲು ಒಡೆದು, ಗೊಂದಲ ಸೃಷ್ಟಿಸಿತು. ಕತ್ತಲಾಗುವುದರೊಳಗೆ ಹೇಗಾದರೂ ಬೇಗ ಊರು ತಲುಪಿಬಿಡಬೇಕೆಂದು, ಮಾವ ಯಾವುದೋ ಒಂದು ರಸ್ತೆ ಆಯ್ದುಕೊಂಡು ಸೈಕಲ್ ಓಡಿಸಿಯೇಬಿಟ್ಟರು. ಸ್ವಲ್ಪ ದೂರ ಹೋಗಿದ್ದಷ್ಟೇ. ಆ ದಾರಿ ಬೇರೆಯೇ ಆಗಿತ್ತು. ಅದು ಅರಿವಿಗೆ ಬರುವಷ್ಟರಲ್ಲಿ ಸಂಪೂರ್ಣ ಕತ್ತಲಾವರಿಸಿ, ಯಾವ ಕಡೆಗೆ ಹೋಗಬೇಕೆಂಬುದೇ ತಿಳಿಯದಾಗಿ ಬೆಪ್ಪಾಗಿ ನಿಂತುಬಿಟ್ಟೆವು.

ಒಂದು ಹೆಜ್ಜೆ ಇಡಲಾರದಷ್ಟು ಕತ್ತಲು. ಒಬ್ಬರ ಮುಖ ಒಬ್ಬರಿಗೆ ಕಾಣದಷ್ಟು ಕತ್ತಲು, ದಟ್ಟ ಕಾನನ, ಕಾಡುಪ್ರಾಣಿಗಳಿರುವ ಸೂಚನೆ ಸಿಗುತ್ತಿತ್ತು. ಕಾಡಿನ ತುಂಬಾ ಬಿದಿರು ಮೆಳೆ. ಇಂಥ ಸನ್ನಿವೇಶದಲ್ಲಿ ಸೈಕಲ್ ಅನ್ನು ಹತ್ತು ಹೆಜ್ಜೆ ಮುಂದಕ್ಕೆ ಓಡಿಸಿದರೂ, ಯಾವುದೋ ಬಿದಿರಿನ ಮಟ್ಟಿಗೆ ಡಿಕ್ಕಿ ಹೊಡೆಯುತ್ತಿದ್ದೆವು. ಸಹಾಯಕ್ಕಾಗಿ ಕೂಗಿ, ಕೂಗಿ ಗಂಟಲು ಹರಿದುಕೊಂಡೆವು. ನಮ್ಮ ದನಿಗೆ ಯಾರೂ ಓಗೊಡಲಿಲ್ಲ. ಮುಂದಡಿ ಇಟ್ಟಲ್ಲೆಲ್ಲಾ ಮುಳ್ಳುಗಳು ಚುಚ್ಚಿ, ಮರಕ್ಕೆ, ಬಿದಿರಿನ ಮೆಳೆಗೆ ಡಿಕ್ಕಿ ಹೊಡೆದು, ಹಳ್ಳ-ಗುಂಡಿಗಳಲ್ಲಿ ಪಲ್ಟಿಹೊಡೆದು, ಯಾವತ್ತೂ ಪ್ರಾರ್ಥಿಸದ ಎಲ್ಲಾ ಧರ್ಮದ, ಜಾತಿಯ ದೇವರುಗಳನ್ನೂ ಗೋಗರೆದು ಕರೆದಿದ್ದಾಯಿತು.

ಎಲ್ಲ ಪ್ರಯತ್ನಗಳು ಮುಗಿದ ಮೇಲೆ, ಆದಷ್ಟು ಬೇಗ ಬೆಳಕಾಗಲಪ್ಪಾ ಎಂಬುದು ನಮ್ಮ ಪ್ರಾರ್ಥನೆಯಾಗಿತ್ತು. ಅದ್ಯಾವ ಜನ್ಮದ ಪುಣ್ಯವೋ ಏನೋ ಯಾವ ಪ್ರಾಣಿಗೂ ನಮ್ಮ ವಾಸನೆ ತಗುಲಲಿಲ್ಲ ಎನ್ನಿಸುತ್ತದೆ. ಅವುಗಳಿಂದ ನಮಗೆ ತೊಂದರೆಯಾಗಲಿಲ್ಲ.

ಆದರೆ ಭಯದಲ್ಲಿ ಸಮಯ ಕಳೆಯುವುದು ಹೇಗೆ? ಏನಾದರೂ ಮಾಡಲೇಬೇಕೆಂದು ತೀರ್ಮಾನಿಸಿ, ಏನಾದರಾಗಲಿ ಸುಮ್ಮನೆ ನಡೆಯುತ್ತಿರೋಣ. ಯಾವುದಾದರೂ ಒಂದು ಊರು ಸಿಗಬಹುದು ಎಂದುಕೊಂಡು ಹೆಜ್ಜೆ ಹಾಕಿದೆವು. ಮರಗಳಿಗೆ ಡಿಕ್ಕಿ ಹೊಡೆಯುತ್ತಾ, ಸಿಕ್ಕಲ್ಲಿ ನುಗ್ಗುತ್ತಾ, ಹಾಕಿದ್ದ ಬಟ್ಟೆಗಳೆಲ್ಲ ಹರಿದು ಹರಿದು ಹೋಗಿ, ಮೈಯೆಲ್ಲ ಮುಳ್ಳಗಳು ಚುಚ್ಚಿ, ರಕ್ತ ಸುರಿಯುವುದನ್ನೂ ಲೆಕ್ಕಿಸದೆ ಹೊರಟೆವು.

ಅರ್ಧ ಗಂಟೆಯ ನಡಿಗೆಯ ನಂತರ ದೂರದಲ್ಲಿ ಸಣ್ಣ ಬೆಳಕು, ಮನುಷ್ಯರ ಮಾತು ಕೇಳಿಸಿತು. ಬದುಕಿದೆಯಾ ಬಡಜೀವವೇ ಎನ್ನುತ್ತಾ, ಅಲ್ಲಿಯವರೆಗೆ ಆಗಿದ್ದ ಎಲ್ಲಾ ನೋವು, ಆಯಾಸಗಳನ್ನು ಬದಿಗೊತ್ತಿ ಓಡಿದೆವು. ಆಗಲೇ ಗೊತ್ತಾಗಿದ್ದು, ನಾವು ಎಲ್ಲಿಂದ ಹೊರಟಿದ್ದೆವೋ, ಅಲ್ಲಿಗೇ ವಾಪಸ್ ಬಂದಿದ್ದೇವೆ ಎಂದು. ನಾವು ಸಂಜೆ ಕಾಡಿನೊಳಗೆ ಹೋಗುವ ಮೊದಲೇ ಸಿಕ್ಕಿದ್ದ ಭಟ್ಟರ ಮನೆಯದು. ಅವರ ಮನೆಗೆ ಹೋಗಿ, ನಡೆದದ್ದನ್ನೆಲ್ಲಾ ತಿಳಿಸಿದೆವು.

ಕನಿಕರ ತೋರಿಸಿ ಶುಶ್ರೂಷೆ ಮಾಡಿದರು. ಅಂದು ಅವರ ಮನೆ ನಮಗೆ ಪುನರ್ಜನ್ಮ ನೀಡಿದ, ಸಾವಿನ ದವಡೆಯಿಂದ ಪಾರು ಮಾಡಿದ ಜೀವದಾತ ಮನೆಯಾಗಿತ್ತು. ‘ಈಗಲೇ ನಾವು ಹೊರಡುತ್ತೇವೆ, ದಾರಿ ಬೆಳಕಿಗೆ ಏನಾದರೂ ವ್ಯವಸ್ಥೆ ಮಾಡಿ’ ಎಂದು ನಾವು ಕೇಳಿದ ತಕ್ಷಣ ಅವರು ಒಂದೆರಡು ಹಳೆಯ ಸೈಕಲ್‌ಟೈರುಗಳನ್ನು ಸೂಡಿ ಮಾಡಿಕೊಟ್ಟರು. ಅವುಗಳನ್ನು ಬೆಳಕಿನ ಸಹಾಯದಿಂದ ನಮ್ಮೂರು ಸೇರಿದೆವು.

ಸಾಯಂಕಾಲವೇ ಮನೆಗೆ ಬರಬೇಕಾದವರು ಮಧ್ಯರಾತ್ರಿಯಲ್ಲಿ, ಮೈಕೈ ಪರಚಿಸಿಕೊಂಡು ಬಂದದ್ದನ್ನು ನೋಡಿ ಅಮ್ಮ ಅಪ್ಪ ಗಾಬರಿ ಬಿದ್ದರೂ, ಇಂಥ ಒಂದು ದಿನ ನನ್ನ ಮನಸ್ಸಿನೊಳಗೆ ಎಂದೂ ಮಾಸದ ಚಿರ ನೆನಪನ್ನು ಉಳಿಸಿಹೋಗಿದೆ. ಈಗ ಆ ದಾರಿಯಲ್ಲಿ ಓಡಾಡುವುದು ತೀರಾ ಅಪರೂಪ. ಯಾವಾಗಲಾದರೂ ಹೋದರೆ ಹಳೆಯ ನೆನಪುಗಳು ಬಿಚ್ಚಿಕೊಂಡು ರೋಮಾಂಚನಗೊಳಿಸುತ್ತವೆ. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !