ಬುಧವಾರ, ಏಪ್ರಿಲ್ 21, 2021
33 °C

ಪ್ರೇಮವೆನ್ನುವ ಮಾನವೀಭಕ್ತಿ

ಮಂಜುನಾಥ ಕೊಳ್ಳೇಗಾಲ Updated:

ಅಕ್ಷರ ಗಾತ್ರ : | |

Prajavani

ಈ ಹುಡುಗಿ ವಿಲ್ಲಿಪುತ್ತೂರಿನ ವಟಪತ್ರಶಾಯಿಯ ಪರಮಭಕ್ತೆ. ಭಕ್ತಿಯೇ? ಪ್ರೀತಿ, ಹುಚ್ಚುಪ್ರೀತಿ - ದೇವರಿಗಾಗಿ ಕಟ್ಟಿದ ಮಾಲೆಯನ್ನು ಮೊದಲು ತಾನು ಮುಡಿದು ಸುಖಿಸಿ ಅವನಿಗೆ ಕಳಿಸುವಷ್ಟು. ಲೋಕದ ಕಣ್ಣಿಗವ ಪರಮಾತ್ಮ. ಈ ಮುಗ್ಧೆಗೋ ಮಾನಸಪತಿ. ಪೆರುಮನ ಕೈಂಕರ್ಯಕ್ಕೊಯ್ಯುತ್ತಿದ್ದ ಹೂಮಾಲೆಯಲ್ಲೊಮ್ಮೆ ಉದ್ದನೆಯ ಕೂದಲನ್ನು ನೋಡಿದ ತಂದೆ ಹಾವು ತುಳಿದವರಂತೆ ಮೆಟ್ಟಿಬಿದ್ದರು. ಸ್ವತಃ ಪರಮಭಕ್ತರಾದ ಅವರಿಗೆ ಹುಡುಗಿಯ ಭಕ್ತಿಯ ಪರಿ ಅರಿವಿಗೆಟುಕಲಿಲ್ಲ. ಭಗವಂತನಿಗಾದ ಅಪಚಾರಕ್ಕೆ ಪೇಚಾಡಿ, ಆ ಮಾಲೆಯನ್ನು ಪಕ್ಕಕ್ಕಿಟ್ಟು ಬೇರೊಂದನ್ನರ್ಪಿಸಿದ್ದಾಯಿತು. ರಾತ್ರಿ, ರಂಗನಾಥನ ದರ್ಶನ ಕನಸಿನಲ್ಲಿ – ಬಾಡಿದ ಮೊಗವೊತ್ತ ಪರಮಾತ್ಮ ‘ನೀನಿವತ್ತು ಮಾಡಿದ್ದು ನನಗಿಷ್ಟವಾಗಲಿಲ್ಲ’ ಎಂದ. ಆಕೆ ಮುಡಿದು ಕೊಟ್ಟದ್ದೇ ಪ್ರಿಯವಂತೆ ಅವನಿಗೆ – ಆ ಭಕ್ತಿಯೋ ಈ ಸ್ವಾಮಿಯೋ, ಈ ಹೊಸ ಪರಿಗೆ ದಂಗಾದರು ಈ ತಂದೆ - ಇವರೇ ಪೆರಿಯಾಳ್ವಾರ್ ಎಂದು ಖ್ಯಾತರಾದ ವಿಷ್ಣುಚಿತ್ತರು, ತಮಿಳುನಾಡಿನ ಭಕ್ತಿಪಂಥಕ್ಕೆ ಆದ್ಯರು. ಹೀಗೆ ತಾನು ಮುಡಿದದ್ದನ್ನು ಸ್ವಾಮಿಗರ್ಪಿಸಿದ ಮಗಳು ಗೋದೆಯೇ ‘ಶೂಡಿಕುಡುತ್ತ ನಾಚ್ಚಿಯಾರ್’ (ಮುಡಿದುಕೊಟ್ಟ ದೇವಿ) ಎಂದು ಪ್ರಸಿದ್ಧಳಾದ ಆಂಡಾಳ್. ರಂಗನಾಥನನ್ನು ಕುರಿತ ಈಕೆಯ ಉತ್ಕಟಪ್ರೇಮಾಲಾಪವೈವಿಧ್ಯವೇ ತಿರುಪ್ಪಾವೈ ಎಂದು ಪ್ರಸಿದ್ಧವಾದ ದಿವ್ಯಪ್ರಬಂಧ.

ಇರಲಿ, ಗೋದಾದೇವಿಯಲ್ಲಿ ಭಾಗವತಪರಿಸರದಿಂದ ಬಂದ ದೈವಪ್ರಜ್ಞೆಯಾದರೂ ಇತ್ತು. ಇಲ್ಲಿನ್ನೊಬ್ಬಳಿದ್ದಾಳೆ ನೋಡಿ, ಎಲ್ಲೋ ಹುಟ್ಟಿ ಬೆಳೆದು ನಮ್ಮ ಮಣ್ಣಿಗೆ ಸಂದವಳು, ದಿಲ್ಲಿಯ ಸುಲ್ತಾನನ ಮಗಳು. ದಕ್ಷಿಣದೇಶದ ಲೂಟಿಯೊಂದರಲ್ಲಿ ತಂದೆ ಹೊತ್ತುತಂದ ಬೊಂಬೆಯೊಂದರ ಮೇಲೆ ಇವಳಿಗದೇನೋ ಮೋಹ. ಮುದ್ದುಸುರಿವ ಈ ಬೊಂಬೆಚಲುವನನ್ನು ಪತಿಯೆಂದು ವರಿಸಿಬಿಟ್ಟಳು ಮುಗ್ಧೆ - ಜೊತೆಗೇ ಆಟ, ಊಟ, ಬೇಟ. ರಾಜಕುಮಾರಿ ಬೆಳೆಬೆಳೆಯುತ್ತಾ ಒಲವೂ ಬೇರೂರಿನಿಂತಿತ್ತು. ಆದರೆ ದೈವೇಚ್ಛೆ. ಒಮ್ಮೆ ದಕ್ಷಿಣದಿಂದ ಸನ್ಯಾಸಿಯೊಬ್ಬರು, ಹೆಸರು ರಾಮಾನುಜರಂತೆ, ಈ ಬೊಂಬೆಯನ್ನು ಹುಡುಕಿಕೊಂಡು ಬಂದರು. ಬಂದವರೇ ಕರುಳಕರೆಯಂತೆ ‘ವಾರಾಯ್ ಎನ್ ಶೆಲ್ವಪಿಳ್ಳೆಯೇ’ ಎಂದುಲಿದರೆ, ಈ ಚೆಲುವ ಇವಳ ತೆಕ್ಕೆಬಿಟ್ಟು ಪುಟಪುಟನೆ ಹೋಗಿಯೇ ಬಿಡುವುದೇ? ಬಾಲ್ಯದಿಂದ ಜೊತೆಯಲ್ಲೇ ಕೂಡಿಯಾಡಿದವಳಿಗೆ ಹೇಗನಿಸಬೇಡ. ಅದೇನೋ ಆ ಬೊಂಬೆ ಅವರ ದೇವರಂತೆ, ಅವರೂರ ದೇವಸ್ಥಾನದಲ್ಲಿ ಉತ್ಸವವಂತೆ. ತನಗೇನು ಗೊತ್ತು? ಇವನಿಗೆ ತನ್ನಬಿಟ್ಟು ಹೋಗಲು ಮನಸ್ಸಾದರೂ ಹೇಗೆ ಬಂತು? ಬಾಲೆ ಕಣ್ಣೀರಾದಳು, ನಿಟ್ಟುಸಿರಾದಳು, ಕೊನೆಗೆ ಹೊರಟೇಬಿಟ್ಟಳು ತನ್ನವನನ್ನು ಹುಡುಕಿಕೊಂಡು. ಎಲ್ಲಿಯ ದಿಲ್ಲಿ, ಎತ್ತಣ ಮೇಲುಕೋಟೆ? ಊಟವಿಲ್ಲ ನಿದ್ದೆಯಿಲ್ಲ ನಡೆನಡೆದು ದಣಿದಣಿದು ಬಂದು ಸೇರಿದರೆ ಅವನೆಲ್ಲಿ? ದೇವರಾಗಿಬಿಟ್ಟಿದ್ದಾನೆ! ನಡುವಣ ಗೋಡೆಗಳನ್ನು ದಾಟಲಾರದೇ, ತಡೆಯಾದ ದೇಹವನ್ನೇ ತೊರೆದು ಅವನಲ್ಲೇ ಐಕ್ಯವಾಗಿಬಿಟ್ಟಳು ವರನಂದಿ. ಇರುವಾಗ ಒಳಬಿಟ್ಟುಕೊಳ್ಳದ ಅದೇ ಸಮಾಜ, ಅವಳನ್ನು ದೇವಿಯೆಂದು ಪೂಜಿಸತೊಡಗಿತು - ಇದು ಮೇಲುಕೋಟೆಯ ಬೀಬಿನಾಚ್ಚಿಯಾರಳ ಕತೆ, ಪರಂಪರೆಯಲ್ಲಿ ಬಂದದ್ದು.

ಆದರೆ ಜಾನಪದಕ್ಕಿದು ಮೆಚ್ಚಲಿಲ್ಲ. ಏಕಮುಖಪ್ರೀತಿಯಿಲ್ಲಿ ವಿಷಾದದ ವಸ್ತು. ಆಕೆ ಚೆಲುವನನ್ನು ನೆನೆಯುತ್ತಾ ದೇಹಬಿಟ್ಟೆಡೆ ಪುಟ್ಟಗುಡಿಯೊಂದಿದೆ, ಹೊಗರಮ್ಮನಗುಡಿಯೆನ್ನುತ್ತಾರೆ, ಊರೂರಿನ ಹತ್ತುಜಾತಿಗಳು ನಡೆದುಕೊಳ್ಳುತ್ತಾರೆ. ವರ್ಷಕ್ಕೊಮ್ಮೆ ಜಾತ್ರೆ ನಡೆಸುತ್ತಾರೆ. ಆದರೆ ವರನಂದಿ-ಚೆಲುವರ ಕತೆ ಸ್ವಾರಸ್ಯಕರವಾದ ಜನಪದಕಾವ್ಯವಾಗುತ್ತದೆ. ವರನಂದಿಯಿಲ್ಲಿ ದುರಂತನಾಯಕಿಯಲ್ಲ. ಚಲುವ ಖಳದೈವವಲ್ಲ; ದಾಸಯ್ಯನಾಗಿ ಆಕೆಯನ್ನರಸಿ ಹೋಗಿ ಪ್ರೇಮಭಿಕ್ಷೆ ಬೇಡುವವನೇ ಅವನು. ಹೀಗೆ ಚಿಗುರಿಡುವ ಪ್ರಣಯವನ್ನು ಜನಪದಕಾವ್ಯ ಸೊಗಸಾಗಿ ಬೆಳೆಸುತ್ತದೆ. ಮುಸಲ್ಮಾನರ ಹೆಣ್ಣನ್ನು ಕಟ್ಟಿಕೊಂಡು ಬಂದು ಕುಲಸ್ಥರ ಭರ್ತ್ಸನೆಗೊಳಗಾಗುವ ಚೆಲುವನ ಪರದಾಟ, ಸವತಿಯರ ಕಚ್ಚಾಟ, ಒಲವುನಲಿವುಗಳು ಎಲ್ಲವನ್ನೂ ನಗುನಗುತ್ತಲೇ ವರ್ಣಿಸುವ ವರನಂದಿಕಾವ್ಯ ಬಲುಮುದ್ದಾದ ಪ್ರಣಯಕಾವ್ಯಗಳಲ್ಲೊಂದು.

ವಿಲ್ಲಿಪುತ್ತೂರಿನ ಗೋದಾದೇವಿಯಿರಲಿ, ಮೇಲುಕೋಟೆಯ ವರನಂದಿಯಿರಲಿ, ದಿವ್ಯನಿಸ್ಸಾರವಾದ ದೇವತ್ವವನ್ನು ರಾಗಭಾವಪೂರಿತವಾದ ಮಾನವತ್ವವು ಅಪ್ಪಿ ರುಚಿಗಾಣಿಸುವ ಪರಿಯೇ ಅದ್ಭುತ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು