ರಾಗ(ಧಾ) ಕಲ್ಯಾಣಿ(ಣ)

7

ರಾಗ(ಧಾ) ಕಲ್ಯಾಣಿ(ಣ)

Published:
Updated:
Relaxed young woman listening to music on sofa at homeಹಾಡುಗಳು ...

ಸಂ ಗೀತ ಶಾಲೆಯಲ್ಲಿ ತನ್ನ ಹೆಸರಿನ ರಾಗದ ವರ್ಣವನ್ನು ಹೇಳಿಸಿಕೊಂಡ ಖುಷಿ ಕಲ್ಯಾಣಿಯ ಮುಖದ ತುಂಬಾ ಹರಡಿತ್ತು. ದಾರಿಯಲ್ಲಿ ಉದ್ದಕ್ಕೂ ‘ವನಜಾಕ್ಷಿರೋ ಈ ವಿರಹಮೋರ್ವನೇ ವಾಸುದೇವುನೀ ತೋಡಿತೇವೇ….. ನಿಲುಪರಾನೀ ಮೋಹಮಾಯೇ...’ (ವನಜಾಕ್ಷಿಯೇ, ನನ್ನ ವಾಸುದೇವನನ್ನ ಕರೆಯೇ! ಈ ವಿರಹವನ್ನ ತಾಳಲಾರೆ... ಮೋಹನನ ಕುರಿತಾದ ಮೋಹ ನನ್ನನ್ನು ಇನ್ನಿಲ್ಲದಂತೆ ಆವರಿಸಿಕೊಂಡುಬಿಟ್ಟಿದೆ!) ಗುನುಗಿಕೊಂಡೇ ಬಂದಿದ್ದಳು.

ಮನೆಯಲ್ಲಿ ಚಾಪೆಯ ಮೇಲೆ ಕೂತು ತನ್ನ ಲ್ಯಾಪ್‌ಟಾಪಿನಲ್ಲಿ ಎಂದಿನ ಅಭ್ಯಾಸದಂತೆ ಹೊಸದಾಗಿ ಕಲಿತ ರಾಗದ ಕೃತಿಗಳನ್ನು, ವಿವಿಧ ಗಾಯಕರ ಪ್ರಸ್ತುತಿಯನ್ನೂ ಯೂಟ್ಯೂಬ್‌ನಲ್ಲಿ ಹುಡುಕುತ್ತಾ ಒಂದೊಂದನ್ನೇ ಗಮನವಿಟ್ಟು ಕೇಳುವಾಗ, ಕಿಟಕಿಯ ಗಾಜಿನಾಚೆ ಜಾರುತ್ತಿದ್ದ ಮಳೆಹನಿಗಳು ಮತ್ತು ಅಮ್ಮ ತಂದು ಕೈಗಿತ್ತ ಲೋಟದಲ್ಲಿ ಹಬೆಯಾಡುತ್ತಿದ್ದ ಕಾಫಿಯ ಜುಗಲ್ಬಂದಿಯೂ ಜೊತೆ ಸೇರಿ ನಿಧಾನವಾಗಿ ಸಂಜೆ ಕಳೆಗಟ್ಟುತ್ತಲಿತ್ತು.

ತ್ಯಾಗರಾಜರ ‘ನಿಧಿ ಚಾಲ ಸುಖಮಾ’, ಮುತ್ತುಸ್ವಾಮಿ ದೀಕ್ಷಿತರ ‘ಕಮಲಾಂಬಾಂ ಭಜರೇ’, ಶ್ಯಾಮಾಶಾಸ್ತ್ರಿಗಳ ‘ಹಿಮಾದ್ರಿಸುತೇ ಪಾಹಿಮಾಂ’, ಪುರಂದರದಾಸರ ‘ಕಲ್ಲು ಸಕ್ಕರೆ ಕೊಳ್ಳಿರೋ’ ಒಂದೊಂದೂ ಅದ್ಭುತ ಕೃತಿಗಳು ಬಾಲಮುರಳಿಕೃಷ್ಣ, ಸುಬ್ಬುಲಕ್ಷ್ಮಿ ಅಮ್ಮ ಮತ್ತಿತರರ ಕಂಠಸಿರಿಯಲ್ಲಿ ಶ್ರುತವಾಗುತ್ತಿದ್ದರೆ ಮನಸ್ಸಿನ ತುಂಬಾ ಆನಂದಲಹರಿ!

ಸಂಧ್ಯಾರಾಗವಾದ ಕಲ್ಯಾಣಿಯ ಬಗ್ಗೆ ಗುರುಗಳು ಹೇಳಿದ ವಿಷಯಗಳನ್ನು ಮನನ ಮಾಡಿ ಒಂದರೆ ಘಂಟೆ ಹಾಡಿಕೊಂಡ ಮೇಲೆ ತನ್ನ ಹೆಸರಿನ ರಾಗವಂತಲೋ ಅಥವಾ ಅದರ ಹೆಸರೇ ತನ್ನದೂ ಎಂದೋ ಅವಳಿಗೆ ಅದರ ಮೇಲೆ ಇನ್ನಷ್ಟು ಮಮತೆ.. ರಾಗಗಳ ರಾಣಿಯಂತೆ ಇದು!

ಸ ರಿ2 ಗ3 ಮ2 ಪ ದ2 ನಿ3 ಸ

ಸ ನಿ3 ದ2 ಪ ಮ2 ಗ3 ರಿ2 ಸ

ಆರೋಹಣ ಅವರೋಹಣವೆರಡರಲ್ಲೂ ಸಪ್ತಸ್ವರಗಳನ್ನು ಹೊಂದಿ ಪರಿಪೂರ್ಣವಾಗಿದೆ. ಮಂಗಳವನ್ನುಂಟುಮಾಡುವವಳು, ಶುಭವಾದದ್ದು ಎಂಬರ್ಥದ ಹೆಸರು. ಹಾಡಿಕೊಳ್ಳುವಾಗ, ಆಲಿಸುವಾಗೆಲ್ಲ ಭಕ್ತಿ, ಶೃಂಗಾರ, ವಾತ್ಸಲ್ಯದಂಥ ಮಧುರ ಭಾವ
ಗಳನ್ನು ಉದ್ದೀಪಿಸಿ ಮನಸ್ಸನ್ನು ಅರಳಿಸುತ್ತೆ. ಆದ್ದರಿಂದಲೇ ಸಂಗೀತ
ಕಛೇರಿಗಳ ಆರಂಭದಲ್ಲಿ, ಮದುವೆಗಳಲ್ಲಿ ಇದಕ್ಕೆ ಅಷ್ಟು ಪ್ರಾಮುಖ್ಯ.

ತನ್ನ ಮಗಳೂ ಹೀಗೇ ಆಗಲಿ ಅಂತ ಹಾರೈಸಿಯೇ ಅಪ್ಪ ನನಗೆ ಈ ಹೆಸರಿಟ್ಟಿದ್ದಾ ಅಥವಾ ಊರಲ್ಲಿ ನಮ್ಮ ಮನೆದೇವರ ಗುಡಿಯ ಮುಂದಿರೋ ಕಲ್ಯಾಣಿ ಅವರಿಗೆ ತುಂಬಾ ಇಷ್ಟ ಅಂತಲೋ? ಅವರನ್ನೇ ಕೇಳಬೇಕು. ವಿಚಿತ್ರವೆಂದರೆ ಈಗ ಕಲ್ಯಾಣಿರಾಗವನ್ನ ಕೇಳಿ ಆಗ್ತಿರೋ ಅನುಭವವೇ ಅವತ್ತು ಸಂಜೆ ಗುಡಿಯಲ್ಲಿ ಲಲಿತಮ್ಮನ ದರ್ಶನ ಮಾಡಿ ಕಲ್ಯಾಣಿಯ ಮೆಟ್ಟಿಲ ಮೇಲೆ ಕುಳಿತಾಗಲೂ ಆಗಿತ್ತು! ಗೋಧೂಳಿ ಸಮಯ... ವರ್ಣಮಯ ಆಕಾಶ... ತಂಗಾಳಿಗೆ ಸಣ್ಣಗೆ ಹೊಯ್ದಾಡೋ ನೀರಲ್ಲಿ ಪುಟ್ಟ ಪುಟ್ಟ ಅಲೆಗಳ ನಡುವೆ ಕಂಡು ಮರೆಯಾಗೋ ಮೀನುಗಳು... ಆಗಾಗ ತೂರಿಬರುವ ದೇವಳದ ಗಂಟೆ ಸದ್ದಿಗೆ ಸುತ್ತಲಿನ ಮರಗಳಲ್ಲಿ ಬೆದರಿ ಹಾರುವ ಹಕ್ಕಿಗಳ ಚಿಲಿಪಿಲಿ! ಆಹಾ! ಮುಂದಿನ ಸಲ ಊರಿಗೆ ಹೋದಾಗ ಅದೇ ಮೆಟ್ಟಿಲ ಮೇಲೆ ಕುಳಿತು ಆ ಕಲ್ಯಾಣಿಗೆ ಈ ಕಲ್ಯಾಣಿ ‘ರಾಗ ಕಲ್ಯಾಣಿ’ಯನ್ನು ಹಾಡಿ ಕೇಳಿಸಲೇಬೇಕು!

ಇಂಥ ಸುಂದರ ರಾಗವನ್ನು ಅಳವಡಿಸಿಕೊಂಡಿರುವ ಚಿತ್ರಗೀತೆಗಳು ಅವೆಷ್ಟಿರಬಹುದು! ಊಟಕ್ಕೆ ಕೂರುವ ಮುಂಚೆ ಕೆಲವನ್ನಾದರೂ ಕೇಳೋಣವೆಂದು ಮತ್ತೆ ಲ್ಯಾಪ್‌ಟಾಪ್‌ ತೆರೆದರೆ ಎಂಥೆಂಥ ಒಳ್ಳೆ ಹಾಡುಗಳು! ಒಂದಕ್ಕಿಂತೊಂದು ಸುಮಧುರ! ಹಿಂದೂಸ್ತಾನಿ ಸಂಗೀತದಲ್ಲಿ ರಾಗ ‘ಯಮನ್’ ಇದರ ಸಮಾನ ರಾಗ. ಆ ರಾಗದಲ್ಲಿರುವ ಹಿಂದಿ ಸಿನಿಮಾಹಾಡುಗಳಂತೂ ಅಪ್ಪನಿಗೆ ಬಹಳ ಇಷ್ಟ. ಅವರ ಕಪಾಟಿನಲ್ಲಿರೋ ಕ್ಯಾಸೆಟ್ ಸಂಗ್ರಹದಲ್ಲಿ ಒಂದರ ತುಂಬಾ ಆ ಹಾಡುಗಳೇ ಇವೆಯಲ್ಲ! ಕಾಲೇಜಿಗೆ ಹೋಗ್ತಿದ್ದಾಗ ತಾನೇ ಬೇಕಾದ ಹಾಡುಗಳನ್ನು ಪಟ್ಟಿಮಾಡಿ ಮೈಸೂರಿನ ಮ್ಯೂಸಿಕಲ್ ಹೌಸ್ ಒಂದರಲ್ಲಿ ಖಾಲಿ ಕ್ಯಾಸೆಟ್ಟಿಗೆ ಹಾಕಿಸಿಕೊಂಡು ಬರ್ತಿದ್ದರಂತೆ. ಈಗಲೂ ಅವರು ಆಫೀಸಿನಿಂದ ಬಂದ ಮೇಲೆ ಲಹರಿಯಿದ್ದಾಗ ಟೇಪ್ ರೆಕಾರ್ಡರ್ ಕೋಗಿಲೆಗೆ ಹಳೆಯ ಕ್ಯಾಸೆಟ್ಟುಗಳ ಬೇವು ತಿನ್ನಿಸಿ ಹಾಡಿಸುವುದುಂಟು.

ತಮಿಳಿನಲ್ಲಿ ಇಳಯರಾಜರಂತೂ ಈ ರಾಗದಲ್ಲಿ ಏನೆಲ್ಲ ಪ್ರಯೋಗ ಮಾಡಿದ್ದಾರೆ – ಅಂತ ಕ್ಲಾಸ್ ಮುಗಿದ ಮೇಲೆ ಶಂಕ್ರಣ್ಣ ವಿವರಿಸ್ತಾ ಇದ್ದಾಗ ಬೆರಗಾಯ್ತು! ‘ಕಲೈಮಾಣಿಯೇ..’ ಹಾಡಿನಲ್ಲಿ ಈ ರಾಗದ ಆರೋಹಣ ಸ್ವರಗಳನ್ನಷ್ಟೇ ಬಳಸಿದ್ದಾರೆ. ‘ಉನ್ನಾಲ್ ಮುಡಿಯುಂ ತಂಬಿ’ ಸಿನಿಮಾದ ಒಂದು ಹಾಡಲ್ಲಿ ಎಲ್ಲ ಸ್ವರಗಳು ಮತ್ತು ತಿಂಡಿಗಳ ಹೆಸರಿನ ಆದ್ಯಕ್ಷರ ಹೊಂದುವಂತೆ ಸಂಯೋಜಿಸಿದ್ದಾರೆ. ‘ಅಮ್ಮಾ ಎಂದ್ರೈಕಾದ..’ ಅನ್ನೋ ‘ಮನ್ನನ್’ ಚಿತ್ರದ ಅಮ್ಮ–ಮಗನ ಹಾಡಂತೂ ಎಲ್ಲರಿಗೂ ಆಪ್ತ. ದಳಪತಿ ಸಿನಿಮಾದ ‘ಯಮುನೈ ಆಟ್ರಿಲೇ’ ಹಾಡನ್ನು ಚಿನ್ಮಯಿ ಎಷ್ಟು ಚೆನ್ನಾಗಿ ಅಲ್ಲೇ ಹಾಡಿಬಿಟ್ಳು! ಕೆಲವೇ ಸ್ವರಗಳನ್ನ ಬಳಸಿ ಬೆಳೆಸಿರೋ ಹಾಡು.. ಕೇಳೋಕೆಷ್ಟು ಮುದ! ರಾಧೆಯ ಮುಗಿಯದ ವಿರಹದ ಬಗ್ಗೆ ಇರುವ ಹಾಡು ಇಷ್ಟು ಬೇಗ ಮುಗಿದೇ ಹೋಗತ್ತಲ್ಲ ಅಂತ ಬೇಜಾರು. ಯೂಟ್ಯೂಬಲ್ಲಿ ಹುಡುಕಿ ಮತ್ತೆ ಮತ್ತೆ ಕೇಳಿದ ಮೇಲೆ ಇದ್ದಕ್ಕಿದ್ದಂತೆ ಅದನ್ನು ಕನ್ನಡಕ್ಕೆ ಅನುವಾದಿಸುವ ಹುಕಿ ಬಂತು! ಪೆನ್ನು–ಪೇಪರು ತಗೊಂಡು ಒಂದಷ್ಟು ತಿಣುಕಾಡಿ ಹಾಗೂ ಹೀಗೂ ಕನ್ನಡಕ್ಕೆ ಬರಮಾಡಿಕೊಂಡಿದ್ದಾಯ್ತು. ಅದೂ (ಸಾನೆಟ್) ಸುನೀತವಾಗಿ! ರಾಗವಾಗಿ ಮೂರ್ನಾಲ್ಕು ಸಲ ಹಾಡಿ ಪರೀಕ್ಷಿಸಿದ ಮೇಲೆ ಸ್ವಲ್ಪ ತೃಪ್ತಿ. ನಾಳೆ ಕ್ಲಾಸಿನಲ್ಲಿ ಸಹಪಾಠಿಗಳಿಗೆ ತೋರಿಸಬೇಕು ಅಂತ ಸಂಗೀತದ ಪುಸ್ತಕದ ಕೊನೇ ಪುಟದಲ್ಲಿ ಇನ್ನೊಮ್ಮೆ ಒಪ್ಪವಾಗಿ ಬರೆದು ಅದಕ್ಕೆ ನವಿಲುಗರಿಯೊಂದನ್ನು ಜೊತೆ ಮಾಡಿದಳು.

ಯಮುನೆ ತಟದಿ ತಂಗಾಳಿ ಬೀಸಲು

ರಾಧೆ ಕಾಯ್ವಳು ನೋಡಿ!

ನಾಟ್ಯವಾಡುತ ತನ್ನೇ ಮರೆಯಲು

ಚೆಲುವ ಕೃಷ್ಣನ ಕೂಡಿ!

ಮಳಲ ಹಾಸಲಿ ಮಾರಜನಕನ

ಹೆಜ್ಜೆ ಗುರುತ ಹುಡುಕಾಡಿ

ಅವನ ಬರವಿಗೆ ಕಾದು ಕಾದು ಆ

ಮುಗುದೆ ಮುದುಡುವಳು ಬಾಡಿ

ಚಂದ್ರನೊಂದಿಗೆ ರಾತ್ರಿ ಕಳೆದು

ದಿನ - ಋತುಗಳುರುಳಿದವು ಓಡಿ

ಮಿಲನ ಕಾಲವದು ಏಕೋ ಬಾರದು

ಸಖನ ನೆನಪುಗಳು ಕಾಡಿ

ಕಮಲವದನೆಯ ಸಹನೆ ವಜ್ರವು, ಅದೆಂದೂ ಒಡೆಯದು!

ಧೃತಿಯಗೆಡದೆ ಮಾಧವನ ಅರಸುವವು ಆ ಅರಳು ಕಂಗಳು!

ಅಪ್ಪ ಬಂದ ಮೇಲೆ ಎಲ್ಲರೂ ಒಟ್ಟಿಗೆ ಊಟ ಮಾಡಿ ಒಂದಷ್ಟು ಹರಟಿ ಮಲಗುವ ಹೊತ್ತಿಗೆ ಅದು ಹೇಗೋ ರಾಧೆ ಪೂರ್ತಿಯಾಗಿ ಮನಸ್ಸನ್ನಾವರಿಸಿಕೊಂಡುಬಿಟ್ಟಿದ್ದಳು! ಇವತ್ತು ಹೇಳಿಸಿಕೊಂಡ ‘ವನಜಾಕ್ಷಿ…’ ವರ್ಣದ ವಸ್ತುವೂ ಅವಳ ವಿರಹವೇ! ‘ಯಮುನೈ ಆಟ್ರಿಲೇ’ಯಲ್ಲೂ ಅದೇ.. ಅಮ್ಮ ಆಗಾಗ ಗುನುಗುವ ‘ಕರೆಯೇ ಕೋಗಿಲೆ ಮಾಧವನಾ…’ ದರ್ಬಾರಿ ಕಾನಡ ಇರಬೇಕದು... ಅದರಲ್ಲೂ ರಾಧೆಯ ಪರಿತಾಪ! ಅದೆಷ್ಟು ದಾಸರ ಪದ, ಸಿನಿಮಾಹಾಡು, ಭಾವಗೀತೆಗಳಲ್ಲಿ ವರ್ಣಿಸಲ್ಪಟ್ಟಿದ್ದರೂ ಸಮಾಧಾನವಿಲ್ಲ!

ಈಗೆಲ್ಲ ವರ್ಷಕ್ಕೊಂದು ವಾರಕ್ಕೊಂದು ಲವ್ ಸ್ಟೋರಿ, ಬ್ರೇಕಪ್ ಸಾಂಗ್ ಹಾಡುವವರ ಮಧ್ಯೆ ರಾಧೆಯ ಥರದವರೂ ಇರುವುದು ಸಂಭವವೇ?! ಆ ಸಹನೆ, ಪ್ರೀತಿಯ ರೀತಿ, ಸಮರ್ಪಣಭಾವಕ್ಕೆ ಸಾಟಿಯಿರಲು ಅಸಾಧ್ಯ. ಶ್ಯಾಮನಿಗಾಗಿ ಜೀವನವಿಡೀ ಹಾಗಿರಲಿ – ಯುಗದಾಚೆಗೂ, ಈಗಲೂ ಕಾಯುತ್ತಲೇ ಇದ್ದಾಳೆ ಅನ್ನಿಸುವಂತೆ; ಕೃಷ್ಣನಾದರೂ ಯಾಕಷ್ಟು ಕಟುವಾದನೋ? ಲೋಕೋದ್ಧಾರದ ಕರ್ತವ್ಯದ ಎದುರು ರಾಧೆಯ ಪ್ರೀತಿ ಮರೆಯಾಯಿತೇ?!

ಕಳೆದ ವರ್ಷ ಕೃಷ್ಣಮಠದಲ್ಲಿ ಜನ್ಮಾಷ್ಟಮಿ ಪ್ರಯುಕ್ತ ಭಾಗವತ ಪ್ರವಚನ ಸಪ್ತಾಹ ನಡೆದಿತ್ತಲ್ಲ; ವ್ಯಾಖ್ಯಾನಕಾರರ ಅರ್ಥಗಾರಿಕೆಯೇನೋ ಸೊಗಸಾಗಿತ್ತು. ಭಾಗವತ, ಪುರಾಣಗಳು, ಮಹಾಕಾವ್ಯಗಳೆಲ್ಲ ಇಂದಿನ ನಮ್ಮ ಜೀವನಕ್ಕೆ ಮಾರ್ಗದರ್ಶಕವೂ ಪ್ರಸ್ತುತವೂ ಆಗಿರುವ ಬಗ್ಗೆ; ಗೋಕುಲದಲ್ಲಿ ಕೃಷ್ಣನ ಬಾಲ್ಯಲೀಲೆಯಿಂದ ಹಿಡಿದು ಕುರುಕ್ಷೇತ್ರದ ವಿಶ್ವರೂಪ
ದರ್ಶನದವರೆಗೆ ಏನೆಲ್ಲದರ ಸ್ವಾರಸ್ಯವನ್ನೂ ಪಂಡಿತ-ಪಾಮರ ರಂಜನಿಯಾಗಿ ವಿವರಿಸಿದ್ದರು. ರಾಧೆಯಾದರೂ ಅಲ್ಲಿದ್ದು ಅದನ್ನೆಲ್ಲ ಕೇಳಿದ್ದರೆ ಅವಳ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲವೇನೋ! ಅದೆಲ್ಲ ಸರಿಯೇ... ಆದರೂ ಅವಳಿಗಾಗಿ ಹೃದಯವೇಕೋ ಮಮ್ಮಲ ಮರುಗುತ್ತದೆ. ಯಾವುದಕ್ಕೋ ಪ್ರತೀಕವಾಗಿಸುವ ಸಲುವಾಗಿ ಅವಳನ್ನಷ್ಟು ನೋಯಿಸಬೇಕೇಕೆ; ಅವಳಾದರೂ ಯಾಕಷ್ಟು ಪ್ರೀತಿಸಬೇಕಿತ್ತು ಆ ಗೋಪಾಲನನ್ನ?!

ಹಾಗಂತ ನಾನಾಗಲಿ, ಓರಗೆಯ ಹುಡುಗಿಯರಾಗಲಿ ಅವಳ ಸ್ಥಾನದಲ್ಲಿದ್ದರೆ ಏನು ಮಾಡುತ್ತಿದ್ದೆವೆಂಬ ಪ್ರಶ್ನೆಗೆ ಉತ್ತರ ಸುಲಭವಿಲ್ಲ! ಕೃಷ್ಣನಂಥವನಿಗಷ್ಟೇ ರಾಧೆಯಂಥವಳನ್ನು ಕಾಯಿಸುವ ಯೋಗ್ಯತೆ ಇದೆ. ರಾಧೆಗಷ್ಟೇ ಮಾಧವನಿಗಾಗಿ ಅಖಂಡ, ಅನಂತ ತಪಸ್ಸಿಗೆ ಕೂರುವ ಶಕ್ತಿಯಿದೆ ಅಂತೇನೋ ಅಸ್ಪಷ್ಟವಾಗಿ ಹೊಳೆಯಿತು.

ಮುಂದಿನ ರಜೆಯಲ್ಲಿ ಮಥುರೆ, ಬೃಂದಾವನಕ್ಕೆಲ್ಲ ಒಂದು ಸುತ್ತು ಹೋಗಿಬರಬೇಕು. ಶ್ಯಾಮನಂಥ ಆಕಾಶದಲ್ಲಿ ರಾಧೆಯಂದದ ಬೆಳದಿಂಗಳು ವಿರಹದ ತಾಪ ನೀಗಿಕೊಂಡು ತಂಪು ಕಿರಣಗಳನ್ನ ಸೂಸುವಾಗ ನದಿ ದಂಡೆಯ ಮರಳಲ್ಲಿ ನವಿಲುಗರಿಯ ತುದಿಯಿಂದ ಅವರಿಬ್ಬರ ಹೆಸರ ಬರೆಯಬೇಕು. ಲೋಕದ ದೃಷ್ಟಿಯಲ್ಲಿ ಎಂದೂ ನಡೆಯದಿದ್ದ ಅವರಿಬ್ಬರ ಕಲ್ಯಾಣಕ್ಕೆ ಸಾಕ್ಷಿಯಾಗಿ ಇದೇ ಕಲ್ಯಾಣಿರಾಗದ ಶೃಂಗಾರಕಾವ್ಯವನ್ನು ಹಾಡಬೇಕು.. ಹೀಗೇ ಏನೇನೋ...

ಪಕ್ಕದ ಕೋಣೆಯಲ್ಲಿ ಅಪ್ಪ ಅಪರೂಪಕ್ಕೆ ವಿವಿಧ ಭಾರತಿ ಹಚ್ಚಿದಾಗ ಆಪ್ ಕೀ ಫರ್ಮಾಯಿಷ್ ಕಾರ್ಯಕ್ರಮ.. ‘ಜಬ್ ದೀಪ್ ಜಲೇ ಆನಾ… ಜಬ್ ಶಾಮ್ ಢಲೇ ಆನಾ..’ ಯಮನ್ ರಾಗದಲ್ಲಿ ರೇಡಿಯೊದೊಳಗೆ ಯೇಸುದಾಸ್ ಹಾಡುತ್ತಿದ್ದರೆ ಇಂದೇಕೋ ಅದು ರಾಧೆಯೇ ತನ್ನ ‘ಚಿತ್ತಚೋರ’ನಿಗೆ ಹೇಳ್ತಿರೋದು ಅನ್ನಿಸಿ ಕಣ್ಮುಚ್ಚಿ ಕೇಳುತ್ತಾ…..

ಇದೀಗ ಯಮುನಾತೀರದಲ್ಲಿ ಅವಳ ಸಂಗಡ ಕಲ್ಯಾಣಿಯೂ ಕೃಷ್ಣನಿಗಾಗಿ ಕಾಯುತ್ತಾ, ಅಲೆಯುತ್ತಾ ಇದ್ದಾಳೆ!

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !