‘ಕೈ’ಗೆ ಅನಿರೀಕ್ಷಿತ ಸೋಲಿನ ಆಘಾತ; ಮೋದಿ ಅಲೆಯಲ್ಲಿ ತೇಲಿದ ಕಮಲ ಪಾಳಕ್ಕೆ ಉತ್ಸಾಹ

ಗುರುವಾರ , ಜೂನ್ 27, 2019
29 °C

‘ಕೈ’ಗೆ ಅನಿರೀಕ್ಷಿತ ಸೋಲಿನ ಆಘಾತ; ಮೋದಿ ಅಲೆಯಲ್ಲಿ ತೇಲಿದ ಕಮಲ ಪಾಳಕ್ಕೆ ಉತ್ಸಾಹ

Published:
Updated:
Prajavani

ಚಾಮರಾಜನಗರ: ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಅದಮ್ಯ ಉತ್ಸಾಹದಲ್ಲಿದ್ದ ಕಾಂಗ್ರೆಸ್‌ ಮುಖಂಡರಿಗೆ ಅನಿರೀಕ್ಷಿತ ಸೋಲು ಆಘಾತ ತಂದಿದೆ.

18ನೇ ಸುತ್ತಿನವರೆಗೂ ಮುನ್ನಡೆಯಲ್ಲಿದ್ದ ಪಕ್ಷದ ಅಭ್ಯರ್ಥಿ ಆರ್‌‌.ಧ್ರುವನಾರಾಯಣ ಅವರು ಕೊನೆಯ ನಾಲ್ಕು ಸುತ್ತುಗಳಲ್ಲಿ ಹಿನ್ನಡೆ ಅನುಭವಿಸಿ ಸೋಲು ಕಂಡಿದ್ದನ್ನು ಜೀರ್ಣಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಎಷ್ಟೇ ಅಡೆತಡೆ ಬಂದರೂ ಕನಿಷ್ಠ ಒಂದು ಅಥವಾ ಎರಡು ಮತಗಳಿಂದಾದರೂ ಗೆದ್ದೇ ಗೆಲ್ಲುತ್ತೇವೆ ಎಂದು ವಾದಿಸುತ್ತಿದ್ದ ಮುಖಂಡರು ಈಗ ಮೌನಕ್ಕೆ ಶರಣಾಗಿದ್ದಾರೆ. ಹೇಗೆ ಸೋಲಾಯಿತು ಎಂಬುದರ ಪರಾಮರ್ಶೆಯಲ್ಲಿ ತೊಡಗಿದ್ದಾರೆ.

‘ಇಷ್ಟೆಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿದವರಿಗೆ ಸಿಕ್ಕುವ ಪ್ರತಿಫಲವಾ ಇದು? ಅಭಿವೃದ್ಧಿ ಕೆಲಸ ಮಾಡಲೇ ಬಾರದು’ ಎಂದು ಫಲಿತಾಂಶದ ದಿನ ಸ್ಥಳೀಯ ಮುಖಂಡರೊಬ್ಬರು ಹೇಳಿದ್ದು ಫಲಿತಾಂಶ ತಂದ ನೋವನ್ನು ತೋರಿಸುತ್ತದೆ.

2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಅಲೆ ಇದ್ದರೂ 1.41 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಧ್ರುವನಾರಾಯಣ ಅವರು ಈ ಬಾರಿ ಸುಲಭದಲ್ಲಿ ಗೆಲುವಿನ ದಡ ಸೇರುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಬಿಜೆಪಿಯು ವಿ.ಶ್ರೀನಿವಾಸ ಪ್ರಸಾದ್‌ ಅವರನ್ನು ಕಣಕ್ಕಿಳಿಸಿದ್ದರಿಂದ ಸಮಬಲದ ಹೋರಾಟವನ್ನು ಕಾಂಗ್ರೆಸ್‌ ನಾಯಕರು ನಿರೀಕ್ಷಿಸಿದ್ದರು. ಹಾಗಿದ್ದರೂ ಗೆಲುವಿಗೆ ಏನೂ ತೊಂದರೆ ಇಲ್ಲ ಎಂಬ ಆತ್ಮವಿಶ್ವಾಸದಲ್ಲೇ ಇದ್ದರು. ಮತ ಎಣಿಕೆಯ ಸಂದರ್ಭದಲ್ಲೂ ಮುಖಂಡರು ಪದೇ ಪದೇ ಒಂದು ಮತದಿಂದಾರೂ ಗೆಲ್ಲುತ್ತೇವೆ ಎಂದೇ ಹೇಳಿದ್ದರು. ಆದರೆ, ಸಂಜೆಯ ಹೊತ್ತಿಗೆ ನಡೆದಿದ್ದೇ ಬೇರೆ.

ಮುಳುವಾದ ಆತ್ಮವಿಶ್ವಾಸ: ಧ್ರುವನಾರಾಯಣ ಅವರು ಗೆಲ್ಲುವ ಬಗ್ಗೆ ಕಾಂಗ್ರೆಸ್‌ನವರು ಎಷ್ಟು ದೃಢ ವಿಶ್ವಾಸ ಹೊಂದಿದ್ದರು ಎಂದರೆ, ‘ರಾಜ್ಯದಲ್ಲಿ ಬೇರೆ ಯಾವ ಕ್ಷೇತ್ರದಲ್ಲಿಯಾದರೂ ಪಕ್ಷ ಸೋಲಬಹುದು. ಆದರೆ, ಇಲ್ಲಿ ಸಾಧ್ಯವೇ ಇಲ್ಲ’ ಎಂದು ಮುಖಂಡರು ಹೇಳುತ್ತಿದ್ದರು. 

ಸಂಸದರಾಗಿ ಹತ್ತು ವರ್ಷಗಳ ಅವಧಿಯಲ್ಲಿ ಧ್ರುವನಾರಾಯಣ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸ ವಿಜಯಲಕ್ಷ್ಮಿ ಒಲಿಯುವಂತೆ ಮಾಡುತ್ತದೆ ಎಂದು ನಂಬಿದ್ದರು. ಧ್ರುವನಾರಾಯಣ ಅವರು ಕೂಡ ಚುನಾವಣೆಗೆ ನಾಲ್ಕು ತಿಂಗಳು ಇರುವಾಗಲೇ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವಂತೆ ಸುತ್ತಾಡಿದ್ದರು. ಗ್ರಾಮಮಟ್ಟಕ್ಕೆ ಹೋಗಿ ಪ್ರಚಾರವನ್ನೂ ನಡೆಸಿದ್ದರು. ಮೈತ್ರಿ ಧರ್ಮ ಪೂರ್ಣ ಪ್ರಮಾಣದಲ್ಲಿ ಪಾಲನೆಯಾಗದಿದ್ದರೂ ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲಗಳು ಇದ್ದರೂ ಗೆಲುವಿಗೆ ಧಕ್ಕೆ ಇಲ್ಲ ಎಂಬ ಆತ್ಮವಿಶ್ವಾಸದಲ್ಲಿದ್ದರು. ಈಗ ಅದೇ ಮುಳುವಾಗಿದೆ. 

ಎಚ್‌.ಡಿ.ಕೋಟೆ, ತಿ.ನರಸೀಪುರ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಮೈತ್ರಿ ಧರ್ಮ ಸರಿಯಾಗಿ ಪಾಲನೆಯಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಎಚ್‌.ಡಿ.ಕೋಟೆಯಲ್ಲಿ 10 ಸಾವಿರಕ್ಕೂ ಹೆಚ್ಚು ಮುನ್ನಡೆ ಬರುತ್ತದೆ ಎಂದು ಕಾಂಗ್ರೆಸ್‌ ನಂಬಿತ್ತು. ಆದರೆ, ಅಲ್ಲಿ ಸಿಕ್ಕಿದ್ದು 3,780 ಮತಗಳ ಮುನ್ನಡೆ. ತಿ.ನರಸೀಪುರದಲ್ಲೂ 6,500 ಮತಗಳ ಮುನ್ನಡೆ ಪಡೆಯಲು ಮಾತ್ರ ಧ್ರುವನಾರಾಯಣ ಯಶಸ್ವಿಯಾಗಿದ್ದಾರಷ್ಟೆ. ತಿ.ನರಸೀಪುರದಲ್ಲಿ ಪಕ್ಷದೊಳಗಡೆಯೂ ಸ್ವಲ್ಪ ಗೊಂದಲ ಇತ್ತು ಎಂಬುದನ್ನು ಮುಖಂಡರು ಈಗ ಒಪ್ಪಿಕೊಳ್ಳುತ್ತಿದ್ದಾರೆ.

‌ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ತಮ್ಮ ಕ್ಷೇತ್ರ ಚಾಮರಾಜನಗರದಲ್ಲಿ ಪಕ್ಷಕ್ಕೆ ಉತ್ತಮ ಮುನ್ನಡೆ ದೊರಕಿಸಿಕೊಡಬಹುದು ಎಂದು ಮುಖಂಡರು ನಿರೀಕ್ಷಿಸಿದ್ದರು. ಅದೂ ಹುಸಿಯಾಗಿದೆ. ಇಲ್ಲಿ ಧ್ರುವನಾರಾಯಣ ಅವರು ಶ್ರೀನಿವಾಸ ಪ್ರಸಾದ್‌ ಅವರಿಗಿಂತ 9,681ರಷ್ಟು ಕಡಿಮೆ ಮತಗಳನ್ನು ಪಡೆದಿದ್ದಾರೆ.

‘ವಿಧಾನಸಭಾ ಚುನಾವಣೆಯಲ್ಲಿ ಪುಟ್ಟರಂಗಶೆಟ್ಟಿ ಅವರ ಬೆನ್ನಿಗೆ ನಿಲ್ಲುತ್ತಿದ್ದ ಉಪ್ಪಾರ ಸಮುದಾಯ, ಈ ಲೋಕಸಭಾ ಚುನಾವಣೆಯಲ್ಲಿ ಧ್ರುವನಾರಾಯಣ ಅವರನ್ನು ಬೆಂಬಲಿಸಿಲ್ಲ. ಸಮುದಾಯದ ಮತಗಳನ್ನು ಧ್ರುವನಾರಾಯಣ ಅವರಿಗೆ ಹಾಕಿಸುವಲ್ಲಿ ಶೆಟ್ಟರು ಪೂರ್ಣ ಯಶಸ್ಸುಕಂಡಿಲ್ಲ’ ಎಂದು ಪಕ್ಷದ ಮುಖಂಡರು ಖಾಸಗಿಯಾಗಿ ಹೇಳುತ್ತಿದ್ದಾರೆ. 

ಸಮುದಾಯದ ಕೆಲವರು ಮೋದಿ ಅವರನ್ನು ಬೆಂಬಲಿಸಿರುವುದನ್ನು ಸ್ವತಃ ಪುಟ್ಟರಂಗಶೆಟ್ಟಿ ಅವರೇ ಒಪ್ಪಿಕೊಳ್ಳುತ್ತಾರೆ.

‘ಸಮುದಾಯದ ಕೆಲವು ಯುವ ಜನರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಚೆನ್ನೀಪುರದ ಮೋಳೆಯಲ್ಲಿ ನನ್ನ ಎದುರೇ ಮೋದಿ ಅವರಿಗೆ ಜೈಕಾರ ಹಾಕಿದ್ದಾರೆ. ಹಾಗಿದ್ದರೂ ಎರಡು ಮೂರು ಕಡೆಗಳಲ್ಲಿ ಮಾತ್ರ ಪಕ್ಷಕ್ಕೆ ಕೊಂಚ ಹಿನ್ನಡೆಯಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೈಜಾರಿದ ದಲಿತ ಮತಗಳು: ದಲಿತ ಸಮುದಾಯ ಕೈ ಬಿಡುವುದಿಲ್ಲ ಎಂಬ ದೃಢ ನಂಬಿಕೆಯೂ ಕಾಂಗ್ರೆಸ್‌ಗೆ ದುಬಾರಿಯಾಗಿದೆ. ದಲಿತ ಸಮುದಾಯದ ಮೇಲೆ ತಮ್ಮದೇ ಪ್ರಭಾವವನ್ನು ಹೊಂದಿರುವ ವಿ.ಶ್ರೀನಿವಾಸ ಪ್ರಸಾದ್‌ ಅವರು ದಲಿತರನ್ನು ಸೆಳೆಯಲು ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಬಿಎಸ್‌ಪಿ ಹೆಚ್ಚು ಮತ ಗಳಿಸಿರುವುದು ಕಾಂಗ್ರೆಸ್‌ಗೆ ಏಟು ನೀಡಿದೆ.

‘ಒಟ್ಟು ದಲಿತ ಮತಗಳಲ್ಲಿ ಶೇ 50ರಷ್ಟು ಬಿಜೆಪಿಗೆ ಬಿದ್ದಿವೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಮೋದಿ ಅಲೆಯೇ ಕಾರಣ: ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯೇ ಸೋಲಿಗೆ ಕಾರಣ ಎಂದು ಕಾಂಗ್ರೆಸ್‌ ಮುಖಂಡರು ಈಗ ಹೇಳುತ್ತಿದ್ದಾರೆ. 

‘ಧ್ರುವನಾರಾಯಣ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳಿಂದಾಗಿ ಗೆಲ್ಲುತ್ತೇವೆ ಎಂದುಕೊಂಡಿದ್ದೆವು. ಕರ್ನಾಟಕವೂ ಸೇರಿದಂತೆ ಇಡೀ ದೇಶದಾದ್ಯಂತ ಪ‍್ರಧಾನಿ ಮೋದಿ ಅವರ ಅಲೆ ಇತ್ತು. ಅದರಲ್ಲೂ ಯುವ ಜನತೆ ಬಿಜೆಪಿ ಪರ ಒಲವು ತೋರಿತ್ತು. ಇದರಿಂದಾಗಿ ನಮಗೆ ಅಲ್ಪ ಮತಗಳ ಸೋಲಾಗಿದೆ. ಇಡೀ ದೇಶದಲ್ಲಿ ನಾವೇ ಅತಿ ಕಡಿಮೆ ಮತಗಳ ಅಂ‌ತರದಿಂದ ಸೋತವರು’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. 

ಬಿಜೆಪಿ ಉತ್ಸಾಹ ಇಮ್ಮಡಿ

ಗುರುವಾರ ಮಧ್ಯಾಹ್ನದವರೆಗೂ ಸೋಲು ಖಚಿತ ಎಂದು ನಂಬಿದ್ದ ಬಿಜೆಪಿಗೆ ಕೊನೆ ಹಂತದಲ್ಲಿ ಗೆಲುವು ದಾಖಲಾಗಿರುವುದು ಅತ್ಯುತ್ಸಾಹಕ್ಕೆ ಕಾರಣವಾಗಿದೆ. ಚಾಮರಾಜನಗರದಲ್ಲಿ ಇದುವರೆಗೂ ಗೆಲ್ಲಲು ಸಾಧ್ಯವಾಗದ ಬಿಜೆಪಿಗೆ ಈಗ ಗೆಲುವು ಸಿಕ್ಕಿರುವುದು ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಸಂಭ್ರಮ ಉಂಟು ಮಾಡಿದೆ. 

‘ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಇತ್ತು. ಆದರೆ, ಮತಗಳ ಅಂತರದ ಬಗ್ಗೆ ಲೆಕ್ಕ ಹಾಕಿರಲಿಲ್ಲ. ಈಗ ಅದು ನಿಜವಾಗಿದೆ. ಪ್ರಧಾನಿ ಮೋದಿ ಅವರ ಸಮಗ್ರ ಅಭಿವೃದ್ಧಿ ಕಾರ್ಯಕ್ರಮ, ದೇಶದ ಸುರಕ್ಷತೆ ವಿಚಾರ, ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅಭಿವೃದ್ಧಿ ಕಾರ್ಯಕ್ರಮಗಳು, ಅವರ ಸಂಘಟನಾ ಶಕ್ತಿ ಪಕ್ಷದ ಕಾರ್ಯಕರ್ತರ ಒಗ್ಗಟ್ಟಿನ ಮತ್ತು ಪ್ರಾಮಾಣಿಕ ಕಾರ್ಯತತ್ಪರತೆ ಗೆಲುವಿಗೆ ಕಾರಣ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನಪ್ಪ ಅವರು ‘ಪ್ರಜಾವಾಣಿ’ಗೆ ವಿವರಿಸಿದರು. 

‘ನಮ್ಮ ಅಭ್ಯರ್ಥಿ ವಿ.ಎಸ್‌.ಶ್ರೀನಿವಾಸ ಪ್ರಸಾದ್‌ ಅವರ ಪ್ರಾಮಾಣಿಕ ಹಾಗೂ ಕಳಂಕರಹಿತ ರಾಜಕೀಯ ಜೀವನಾನುಭವ ಕೂಡ ಗೆಲುವಿನಲ್ಲಿ ಪಾತ್ರವಹಿಸಿದೆ’ ಎಂದು ಅವರು ಹೇಳಿದರು. 

ಅಂಕಿ ಅಂಶ

5,68,537 ವಿ.ಶ್ರೀನಿವಾಸ ಪ್ರಸಾದ್‌ ಪಡೆದ ಮತಗಳು

5,66,720 ಧ್ರುವ‌ನಾರಾಯಣಗೆ ಬಿದ್ದ ಮತಗಳು

87,631 ಬಿಎಸ್‌ಪಿ ಅಭ್ಯರ್ಥಿ ಡಾ.ಶಿವಕುಮಾರ್‌ ಗಳಿಸಿದ ಮತಗಳು 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !