ಚುನಾವಣೆ: ಪುಟ್ಟರಂಗಶೆಟ್ಟಿ ಮುಂದಿದೆ ಭಾರಿ ಸವಾಲು

ಗುರುವಾರ , ಏಪ್ರಿಲ್ 25, 2019
21 °C
ಕಳೆದ ಲೋಕಸಭಾ ಚುನಾವಣೆಯಲ್ಲಿ ನಾಲ್ಕೂ ಕ್ಷೇತ್ರಗಳಲ್ಲಿ ಕೈಗೆ ಮುನ್ನಡೆ, ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಹಿನ್ನಡೆ

ಚುನಾವಣೆ: ಪುಟ್ಟರಂಗಶೆಟ್ಟಿ ಮುಂದಿದೆ ಭಾರಿ ಸವಾಲು

Published:
Updated:
Prajavani

ಚಾಮರಾಜನಗರ: ಈ ಬಾರಿಯ ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಪ್ರತಿಷ್ಠೆಯ ವಿಚಾರವಾಗಿದೆ. 

ಹ್ಯಾಟ್ರಿಕ್‌ ಗೆಲುವಿನ ಹೊಸ್ತಿಲಲ್ಲಿರುವ ಪಕ್ಷದ ಅಭ್ಯರ್ಥಿ ಆರ್‌.ಧ್ರುವನಾರಾಯಣ ಅವರನ್ನು ಗೆಲ್ಲಿಸುವ ಹೊಣೆ, ಜಿಲ್ಲೆಯಲ್ಲಿ ‘ಹ್ಯಾಟ್ರಿಕ್‌ ವೀರ’ ಶಾಸಕ ಪುಟ್ಟರಂಗಶೆಟ್ಟಿ ಅವರ ಮೇಲಿದೆ.

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಚ್‌.ಎಸ್‌.ಮಹದೇವ ಪ್ರಸಾದ್‌ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ (ಚಾಮರಾಜನಗರ, ಕೊಳ್ಳೇಗಾಲ, ಹನೂರು ಮತ್ತು ಗುಂಡ್ಲುಪೇಟೆ) ಪಕ್ಷದ ಅಭ್ಯರ್ಥಿ ಧ್ರುವನಾರಾಯಣ ಅವರಿಗೆ ಮುನ್ನಡೆ ಸಿಗುವಂತೆ ನೋಡಿಕೊಂಡಿದ್ದರು. ಅವರ ನಿಧನದ ನಂತರ ಅವರ ಸ್ವಕ್ಷೇತ್ರ ಗುಂಡ್ಲುಪೇಟೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಾಜಕೀಯ ಚಿತ್ರಣ ಬದಲಾಗಿದೆ. 

2018ರ ವಿಧಾನಸಭಾ ಚುನಾವಣೆಯಲ್ಲಿ ಗುಂಡ್ಲುಪೇಟೆಯಲ್ಲಿ ಬಿಜೆಪಿಯ ಸಿ.ಎಸ್‌.ನಿರಂಜನ್‌ಕುಮಾರ್‌ ಗೆದ್ದಿದ್ದರೆ, ಕೊಳ್ಳೇಗಾಲದಲ್ಲಿ ಬಿಎಸ್‌ಪಿಯ ಎನ್‌.ಮಹೇಶ್‌ ಗೆದ್ದಿದ್ದರು. ಚಾಮರಾಜನಗರ ಕ್ಷೇತ್ರದಲ್ಲಿ ಪುಟ್ಟರಂಗಶೆಟ್ಟಿ ಹಾಗೂ ಹನೂರಿನಲ್ಲಿ ಕಾಂಗ್ರೆಸ್‌ನ ಆರ್‌.ನರೇಂದ್ರ ಅವರು ಗೆದ್ದಿದ್ದರಾದರೂ ಗೆಲುವಿನ ಅಂತರ ಕ್ರಮವಾಗಿ 4,913 ಮತ್ತು 3,513 ಮತಗಳು ಮಾತ್ರ.

ಸಚಿವರ ಮುಂದಿದೆ ಸವಾಲು: ಒಂದು ಕಾಲದಲ್ಲಿ ಕಾಂಗ್ರೆಸ್‌ನ ‘ಭದ್ರಕೋಟೆ’ ಎಂದೇ ಬಿಂಬಿತವಾಗಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ಈಗ ಅಂತಹ ವಾತಾವರಣ ಇಲ್ಲ. ನಾಲ್ಕು ಕ್ಷೇತ್ರಗಳ ಪೈಕಿ ಎರಡು ಮಾತ್ರ ಕಾಂಗ್ರೆಸ್‌ ಹಿಡಿತದಲ್ಲಿವೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷದ ಅಭ್ಯರ್ಥಿಗೆ ಜಿಲ್ಲೆಯಲ್ಲಿ ಹೆಚ್ಚಿನ ಅಂತರದ ಮುನ್ನಡೆ ಸಿಗುವಂತೆ ಮಾಡುವ ಗುರುತರ ಸವಾಲು ಸಿ.ಪುಟ್ಟರಂಗಶೆಟ್ಟಿ ಅವರ ಮೇಲಿದೆ.

ನಾಲ್ಕು ಕ್ಷೇತ್ರಗಳ ಪೈಕಿ ಗುಂಡ್ಲುಪೇಟೆಯಲ್ಲಿ ಮಾತ್ರ ಶಾಸಕರನ್ನು ಹೊಂದಿದ್ದರೂ, ಜಿಲ್ಲೆಯಲ್ಲಿ ಬಿಜೆಪಿಯ ಅಸ್ತಿತ್ವ ಭದ್ರವಾಗಿದೆ. 

ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕಮಲ ‍ಪಾಳಯ, ನಗರಸಭೆ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದೆ. 31 ಸದಸ್ಯ ಬಲದ ಚಾಮರಾಜನಗರ ನಗರಸಭೆಗೆ ನಡೆದ ಚುನಾವಣೆಯಲ್ಲಿ 15 ಸ್ಥಾನಗಳನ್ನು ಗಳಿಸಿ, ಒಂದು ಸ್ಥಾನದಿಂದ ಸರಳ ಬಹುಮತದಿಂದ ವಂಚಿತವಾಗಿದೆ. ಕಳೆದ ಬಾರಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ಗೆ (ಮೈತ್ರಿ ಮಾಡಿಕೊಂಡು) ದಕ್ಕಿದ್ದು 8 ಸ್ಥಾನಗಳು ಮಾತ್ರ.

ಅತ್ತ ಕೊಳ್ಳೇಗಾಲ ನಗರಸಭೆಯ ಹಿಂದಿನ ಆಡಳಿತದಲ್ಲಿ 21 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್‌ ಸಂಪೂರ್ಣ ಬಹುಮತದೊಂದಿಗೆ ಆಡಳಿತ ನಡೆಸಿತ್ತು. ಈ ಬಾರಿಯ ಚುನಾವಣೆಯಲ್ಲಿ 10 ಸ್ಥಾನಗಳನ್ನು ಕಳೆದುಕೊಂಡು 11 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. 

ವಿಧಾನಸಭಾ ಚುನಾವಣೆಯ ನಂತರ ಬಿಎಸ್‌ಪಿ ಕೂಡ ಜಿಲ್ಲೆಯಲ್ಲಿ ಹೆಚ್ಚು ಪ್ರಬಲವಾಗಿದೆ. ಕೊಳ್ಳೇಗಾಲದಲ್ಲಿ ಗೆಲ್ಲುವ ಮೂಲಕ ರಾಜ್ಯದಲ್ಲಿ ಖಾತೆ ತೆರೆದಿದ್ದ ಬಿಎಸ್‌ಪಿ, ಜಿಲ್ಲೆಯಾದ್ಯಂತ ಪಕ್ಷವನ್ನು ಸಂಘಟಿಸಿದೆ. ಕೊಳ್ಳೇಗಾಲ ನಗರಸಭೆಯಲ್ಲಿ ಮೂರು ಸ್ಥಾನಗಳನ್ನು ಹೊಂದಿದ್ದ ಪಕ್ಷ ಕಳೆದ ಬಾರಿ ಚುನಾವಣೆಯಲ್ಲಿ 9 ಸ್ಥಾನಗಳನ್ನು ಗೆದ್ದು ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ.  

ಸೋಲಿನ ಅಂತರ ಹೆಚ್ಚು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದರೂ ಗೆಲುವಿನ ಅಂತರ 5,000 ಮತಗಳ ಒಳಗೆ ಇದೆ. ಆದರೆ, ಉಳಿದ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸೋಲಿನ ಅಂತರ ಹೆಚ್ಚಿದೆ. ಕೊಳ್ಳೇಗಾಲದಲ್ಲಿ 19,454 ಮತಗಳಿಂದ ಸೋತಿದ್ದರೆ, ಗುಂಡ್ಲುಪೇಟೆಯಲ್ಲಿ 16,684 ಮತಗಳಿಂದ ಬಿಜೆಪಿ ಮುಂದೆ ಮಂಡಿಯೂರಿದೆ.

ರಣತಂತ್ರ: ಪುಟ್ಟರಂಗಶೆಟ್ಟಿ ಅವರು ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂಬ ಮಾತು ಇತ್ತೀಚೆಗೆ ಜಿಲ್ಲೆಯ ರಾಜಕೀಯದಲ್ಲಿ ಕೇಳಿ ಬಂದಿದ್ದರೂ, ಅದು ಸುಳ್ಳು ಎನ್ನುವ ರೀತಿಯಲ್ಲಿ ಧ್ರುವನಾರಾಯಣ ಅವರೊಂದಿಗೆ ಸಕ್ರಿಯವಾಗಿ ಪ್ರಚಾರ‌ದಲ್ಲಿ ತೊಡಗಿದ್ದಾರೆ. ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಸ್ವತಃ ಪ್ರಚಾರ ನಡೆಸುತ್ತಿದ್ದಾರೆ. 

ಜಿಲ್ಲಾ ಉಸ್ತುವಾರಿ ಸಚಿವರಾಗಿ ತಮ್ಮ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದು ಒಪ್ಪಿಕೊಳ್ಳುವ ಪುಟ್ಟರಂಗಶೆಟ್ಟಿ ಅವರು, ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳುತ್ತಿದ್ದಾರೆ.

ತಮ್ಮ ಮುಂದಿರುವ ಸವಾಲಿನ ಬಗ್ಗೆ ಅವರಿಗೆ ಸಂಪೂರ್ಣ ಸವಾಲು ಇದೆ. ಶಾಸಕರಿಲ್ಲದ ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆಯಲ್ಲಿ ತಮ್ಮ ಉಪ್ಪಾರ ಸಮುದಾಯದ ಮುಖಂಡರು, ಗಡಿಯಜಮಾನರೊಂದಿಗೆ ಸಭೆ ನಡೆಸಿ ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಸಭೆಗಳನ್ನು ನಡೆಸಿ, ಸಮುದಾಯದ ಎಲ್ಲರೂ ಧ್ರುವನಾರಾಯಣ ಅವರನ್ನು ಬೆಂಬಲಿಸಬೇಕು ಎಂದು ಕೇಳಿಕೊಂಡಿದ್ದಾರೆ. ತಮ್ಮ ಮನೆಯಲ್ಲೂ ಮುಖಂಡರೊಂದಿಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಖಚಿತ’

ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಆರ್‌.ಧ್ರುವನಾರಾಯಣ ಅವರಿಗೆ ಎಲ್ಲರಿಗಿಂತಲೂ ಹೆಚ್ಚು ಮತಗಳು ಬೀಳುವುದು ಖಚಿತ ಎಂಬ ದೃಢ ವಿಶ್ವಾಸದಲ್ಲಿ ಸಿ.ಪುಟ್ಟರಂಗಶೆಟ್ಟಿ ಇದ್ದಾರೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ನಾಲ್ಕು ಕ್ಷೇತ್ರಗಳಲ್ಲಿ ನಾವು ಮುನ್ನಡೆ ಸಾಧಿಸುತ್ತೇವೆ. ಅದರಲ್ಲಿ ಯಾವುದೇ ಸಂಶಯ ಇಲ್ಲ. ಗುಂಡ್ಲುಪೇಟೆ, ಕೊಳ್ಳೇಗಾಲದಲ್ಲಿ ನಮ್ಮ ಶಾಸಕರು ಇಲ್ಲದಿರಬಹುದು. ಆದರೆ, ನಮ್ಮ ಮತದಾರರು ಅಲ್ಲಿದ್ದಾರೆ. ಕೈ ಹಿಡಿದೇ ಹಿಡಿಯುತ್ತಾರೆ’ ಎಂದರು. 

‘ಮುನ್ನಡೆ ಸಾಧಿಸುವುದಕ್ಕಾಗಿ ಕಾರ್ಯತಂತ್ರ ರೂಪಿಸಿದ್ದೇವೆ. ಅದರಲ್ಲಿ ಯಶಸ್ವಿಯಾಗುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಂಕಿ ಅಂಶ

8,49,379 ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿರುವ ಒಟ್ಟು ಮತದಾರರ ಸಂಖ್ಯೆ

4,26,516 ಪುರುಷರು

4,22,815 ಮಹಿಳೆಯರು

48 ಇತರ ಮತದಾರರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !