ಪ್ರಬಲ ಪೈಪೋಟಿ ನೀಡುವುದೇ ಬಿಎಸ್‌ಪಿ?

ಭಾನುವಾರ, ಏಪ್ರಿಲ್ 21, 2019
25 °C
ಎರಡು ಲೋಕಸಭಾ ಚುನಾವಣೆಗಳಲ್ಲಿ ನೀರಸ ಪ್ರದರ್ಶನ, ವಿಧಾನಸಭಾ ಚುನಾವಣೆಯಲ್ಲಿ ಗಮನಾರ್ಹ ಸಾಧನೆ

ಪ್ರಬಲ ಪೈಪೋಟಿ ನೀಡುವುದೇ ಬಿಎಸ್‌ಪಿ?

Published:
Updated:
Prajavani

ಚಾಮರಾಜನಗರ: ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿರುವ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಎರಡೂ ಪಕ್ಷಗಳ ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿ ನೀಡಲಿದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. 

ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದರಲ್ಲಿ (ಕೊಳ್ಳೇಗಾಲ) ಶಾಸಕರನ್ನು ಹೊಂದಿರುವ ಬಿಎಸ್‌ಪಿ, ಸ್ಪರ್ಧಾತ್ಮಕ ಪರೀಕ್ಷೆ ತರಬೇತುದಾರ ಡಾ.ಎಂ.ಶಿವಕುಮಾರ್‌ ಅವರನ್ನು ಕಣಕ್ಕಿಳಿಸಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ತನ್ನದೇ ಆದ ಕಾರ್ಯಕರ್ತರ ಪಡೆಯನ್ನು ಹೊಂದಿರುವ ಪಕ್ಷವು ಈ ಬಾರಿ ಕಾಂಗ್ರೆಸ್‌ನ ಆರ್‌.ಧ್ರುವನಾರಾಯಣ ಹಾಗೂ ಬಿಜೆಪಿಯ ವಿ.ಶ್ರೀನಿವಾಸ ಪ್ರಸಾದ್‌ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಲಿದೆ ಎಂಬ ದೃಢವಿಶ್ವಾಸದಲ್ಲಿ ಮುಖಂಡರು ಇದ್ದಾರೆ.

ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಯಲು ಬಯಸಿದ್ದ ಬಿಎಸ್‌ಪಿ, ನಿವೃತ್ತ ಐಎಎಸ್‌ ಅಧಿಕಾರಿ ರತ್ನಪ್ರಭಾ ಹಾಗೂ ಮತ್ತೊಬ್ಬ ನಿವೃತ್ತ ಐಎಎಸ್‌ ಅಧಿಕಾರಿ ಹಾಗೂ ಬಿಜೆಪಿಯ ಟಿಕೆಟ್‌ ಆಕಾಂಕ್ಷಿಯಾಗಿದ್ದ ಕೆ.ಶಿವರಾಂ ಅವರನ್ನು ಸಂಪರ್ಕಿಸಿ ಅಭ್ಯರ್ಥಿಯಾಗುವಂತೆ ಕೇಳಿಕೊಂಡಿತ್ತು. ಆದರೆ, ಅವರು ಒಪ್ಪದಿದ್ದಾಗ, ಪಕ್ಷದೊಂದಿಗೆ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ಶಿವಕುಮಾರ್‌ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತು. ಸದ್ಯ, ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಕಡಿಮೆ ಇಲ್ಲದಂತೆ ಕ್ಷೇತ್ರದಾದ್ಯಂತ ಪಕ್ಷದ ಮುಖಂಡರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. 

ಸಾಧಾರಣ ಪ್ರದರ್ಶನ: ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಿಎಸ್‌ಪಿ ಗಳಿಸಿರುವ ಮತಗಳನ್ನು ನೋಡಿ ಹೇಳುವುದಾದರೆ, ಅದರ ಸಾಧನೆ ಗಮನಾರ್ಹವಾಗಿಲ್ಲ. 2009ರಲ್ಲಿ ಈಗಿನ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಬಿಎಸ್‌ಪಿ ಅಭ್ಯರ್ಥಿಯಾಗಿದ್ದರು. ಚಲಾವಣೆಯಾಗಿದ್ದ 9,73,593 ಮತಗಳಲ್ಲಿ  ಮಹೇಶ್‌ ಅವರು ಪಡೆದಿದ್ದು 68,447 ಮಾತ್ರ. ಶೇಕಡಾವಾರು ಲೆಕ್ಕಾಚಾರದಲ್ಲಿ ಬಿಎಸ್‌ಪಿ ಗಳಿಸಿದ್ದು 7.03.

2014ರ ಲೋಕಸಭಾ ಚುನಾವಣೆಯ ಹೊತ್ತಿಗೆ ಬಿಎಸ್‌ಪಿ ಪಡೆದ ಮತಗಳ ಸಂಖ್ಯೆ ಮತ್ತಷ್ಟು ಕುಸಿದಿತ್ತು. ಆಗ ಶಿವಮಲ್ಲು ಅವರು ಪಕ್ಷದ ಅಭ್ಯರ್ಥಿಯಾಗಿದ್ದರು. ಚಲಾವಣೆಯಾದ 11,33,029 ಮತಗಳಲ್ಲಿ ಬಿಎಸ್‌ಪಿಗೆ ಬಿದ್ದಿದ್ದು ಕೇವಲ 34,846 ಮತಗಳು. ಅಂದರೆ ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇ 3.07 ಮತಗಳು ಮಾತ್ರ ಬಿಎಸ್‌ಪಿ ಅಭ್ಯರ್ಥಿ ಪರ ಬಿದ್ದಿದ್ದವು.

2018ರ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಬಿಎಸ್‌ಪಿ, ಕ್ಷೇತ್ರವನ್ನು ಗೆದ್ದುಕೊಳ್ಳಲು ಯಶಸ್ವಿಯಾಗಿತ್ತು. ಚಲಾವಣೆಯಾಗಿದ್ದ 1,68,871 ಮತಗಳಲ್ಲಿ ಬಿಎಸ್‌ಪಿ ಅಭ್ಯರ್ಥಿ ಎನ್‌.ಮಹೇಶ್‌ ಅವರು 71,792 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದರು. ಚಾಮರಾಜನಗರ (7,134 ಮತಗಳು), ಗುಂಡ್ಲುಪೇಟೆ (6,412 ಮತಗಳು) ಕ್ಷೇತ್ರಗಳಲ್ಲಿ ಬಿಎಸ್‌ಪಿ ಸ್ಪರ್ಧಿಸಿತ್ತಾದರೂ, (ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಅಭ್ಯರ್ಥಿಗಳನ್ನು ಹಾಕಿದ್ದ ಕಡೆಯಲ್ಲಿ ಬಿಎಸ್‌ಪಿ ಕಣಕ್ಕಿಳಿದಿರಲಿಲ್ಲ) ಹೇಳಿಕೊಳ್ಳುವಷ್ಟು ಮತಗಳನ್ನು ಪಡೆದಿರಲಿಲ್ಲ.

‘2014ರ ಚುನಾವಣೆಯ ನಂತರ ಚಾಮರಾಜನಗರ ಲೋಕಸಭಾ ಕ್ಷೇತ್ರ, ಅದರಲ್ಲೂ ಚಾಮರಾಜನಗರ ಜಿಲ್ಲೆಯಲ್ಲಿ ಪಕ್ಷವನ್ನು ಪ್ರಬಲವಾಗಿ ಸಂಘಟಿಸಲಾಗಿದೆ. ಕಾರ್ಯಕರ್ತರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ’ ಎಂದು ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಪಕ್ಷದ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿದ್ದಾರೆ. 

ಪಕ್ಷದ ಬಲವರ್ಧನೆ ಖಚಿತ: ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿ ವಿರುದ್ಧ ಗೆಲುವು ಸುಲಭವಲ್ಲ ಎಂಬುದು ಮುಖಂಡರಿಗೆ ತಿಳಿಯದಿರುವ ವಿಚಾರ ಅಲ್ಲ.

ಚುನಾವಣೆಯಲ್ಲಿ ಗೆಲುವು ಸಾಧ್ಯವಾಗದಿದ್ದರೂ ಪಕ್ಷ ಇನ್ನಷ್ಟು ಪ್ರಬಲವಾಗಲಿದೆ ಮತ್ತು ಮತ ಬ್ಯಾಂಕ್‌ ವಿಸ್ತರಣೆಯಾಗಲಿದೆ ಎಂದು ಮುಖಂಡರು ಖಾಸಗಿಯಾಗಿ ಹೇಳುತ್ತಾರೆ.  ‘ಸೋಲನ್ನು ಸುಲಭವಾಗಿ ಒಪ್ಪುವುದಿಲ್ಲ, ಎರಡೂ ಪಕ್ಷಗಳ ಅಭ್ಯರ್ಥಿಗಳ ಬೆವರು ಇಳಿಸುತ್ತೇವೆ’ ಎಂಬುದು ಅವರ ಮಾತು. 

ವಿಭಜನೆಯಾಗಲಿವೆಯೇ ಮತಗಳು?

ಬಿಎಸ್‌ಪಿ ಅಭ್ಯರ್ಥಿಯಿಂದಾಗಿ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ ಎಂಬುದು ರಾಜಕೀಯ ಬಲ್ಲವರ ಮಾತು.

ಬಿಎಸ್‌ಪಿಗೆ ಕಳೆದ ಬಾರಿಗಿಂತ ಹೆಚ್ಚು ಮತಗಳು ಬೀಳಲಿವೆ. ಬಿಎಸ್‌ಪಿ ಬೆಂಬಲಿಗರಲ್ಲಿ ದಲಿತ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ದಲಿತರು ನಿರ್ಣಾಯಕರಾಗಿದ್ದು, ಫಲಿತಾಂಶದ ಮೇಲೆ ಪ್ರಭಾವ ಬೀರುವ ಶಕ್ತಿ ಇದೆ. ಒಂದು ವೇಳೆ, ಬಿಎಸ್‌ಪಿ ಅಭ್ಯರ್ಥಿ ಹೆಚ್ಚು ಮತಗಳನ್ನು ಗಳಿಸಿದರೆ ಅದು ಕಾಂಗ್ರೆಸ್‌ ಮತಬ್ಯಾಂಕ್‌ಗೆ ಕೈ ಹಾಕಿದೆ ಎಂದರ್ಥ. ಒಂದು ವೇಳೆ ಹಾಗೇನಾದರೂ ಆದರೆ, ಬಿಜೆಪಿಗೆ ಅನುಕೂಲವಾಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.

ಆದರೆ, ಕಾಂಗ್ರೆಸ್‌ ಮುಖಂಡರು ಈ ವಾದವನ್ನು ನಿರಾಕರಿಸುತ್ತಾರೆ. ಈ ಬಾರಿ ಜೆಡಿಎಸ್‌ ಬೆಂಬಲ ನೀಡಿರುವುದರಿಂದ ಒಂದು ವೇಳೆ ಬಿಎಸ್‌ಪಿಗೆ ಪಕ್ಷದ ಸಾಂಪ್ರದಾಯಿಕ ಮತಗಳು ಹೋದರೂ ಜೆಡಿಎಸ್‌ನ ಮತಗಳು ಪಕ್ಷದ ಅಭ್ಯರ್ಥಿಗೆ ಬೀಳಲಿವೆ ಎಂಬುದು ಅವರ ಲೆಕ್ಕಾಚಾರ.  

‌ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಪಡೆದ ಮತಗಳು

68,447

2009ರಲ್ಲಿ ಎನ್‌.ಮಹೇಶ್‌ ಅವರು ಪಡೆದ ಮತಗಳು

34,846

2014ರಲ್ಲಿ ಶಿವಮಲ್ಲು ಅವರು ಗಳಿಸಿದ ಮತಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !