ಜಿಗಜಿಣಗಿ ಮನೆ ಮುಂದಿನ ರಸ್ತೆ ಮಾಡಿಸಿದ್ದು ನಾನೇ: ಎಂ.ಬಿ.ಪಾಟೀಲ ವಾಗ್ದಾಳಿ

ಶುಕ್ರವಾರ, ಏಪ್ರಿಲ್ 26, 2019
36 °C
ಜಿಲ್ಲೆಗೆ ರಮೇಶ ಕೊಡುಗೆ ಶೂನ್ಯ; ಗೃಹ ಸಚಿವ

ಜಿಗಜಿಣಗಿ ಮನೆ ಮುಂದಿನ ರಸ್ತೆ ಮಾಡಿಸಿದ್ದು ನಾನೇ: ಎಂ.ಬಿ.ಪಾಟೀಲ ವಾಗ್ದಾಳಿ

Published:
Updated:
Prajavani

ಸಿಂದಗಿ: ‘ಕೇಂದ್ರ ಸಚಿವರಾಗಿ ಅಧಿಕಾರ ಅನುಭವಿಸಿದ ರಮೇಶ ಜಿಗಜಿಣಗಿ ಜಿಲ್ಲೆಗೆ ಮಾಡಿದ್ದೇನು’ ಎಂದು ಗೃಹಸಚಿವ ಎಂ.ಬಿ.ಪಾಟೀಲ ಖಾರವಾಗಿ ಪ್ರಶ್ನಿಸಿದರು.

‘ಕುಡಿಯುವ ನೀರಿನ ಕೇಂದ್ರ ಸಚಿವರಾಗಿದ್ದರೂ, ಜಿಲ್ಲೆಯಲ್ಲಿ ನೀರಿನ ದಾಹ ತಣಿಸಲಿಲ್ಲ. ಬಹು ಹಳ್ಳಿಗಳ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಿಲ್ಲ’ ಎಂದು ಶನಿವಾರ ರಾತ್ರಿ ಪಟ್ಟಣದಲ್ಲಿ ನಡೆದ ಮೈತ್ರಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಕಿಡಿಕಾರಿದರು.

‘ಜಿಗಜಿಣಗಿ ಮನೆ ಮುಂದಿನ ರಸ್ತೆಯನ್ನು ಕೊನೆಗೆ ನಾವೇ ಮಾಡಿಸಬೇಕಾಯಿತು. ಅವರ ದ್ರಾಕ್ಷಿ ತೋಟಕ್ಕಾಗಿ ಭೂತನಾಳ ಕೆರೆಗೆ ನೀರು ತುಂಬಿಸಿದ್ದು ನಾವೇ... ಇನ್ಮುಂದೆ ಜಿಗಜಿಣಗಿ ಮೊಮ್ಮಕ್ಕಳೊಂದಿಗೆ ತುಂಬಿದ ಭೂತನಾಳ ಕೆರೆಯ ದಂಡೆಯಲ್ಲಿ ಆಟವಾಡುತ್ತ ಕಾಲ ಕಳೆಯಲಿ’ ಎಂದು ಎಂ.ಬಿ.ಪಾಟೀಲ ಲೇವಡಿ ಮಾಡಿದರು.

‘ಜಿಗಜಿಣಗಿ ಆಯ್ಕೆ ಮಾಡಿಕೊಂಡಿದ್ದ ಮಾದರಿ ಗ್ರಾಮ ಮಖಣಾಪುರ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಒಮ್ಮೆ ನೋಡಿಕೊಳ್ಳಲಿ. ಒಬ್ಬ ಸಮಾಜಸೇವಾ ಕಾರ್ಯಕರ್ತ, ಯುವಕ ಸಿದ್ದಾಪುರ ಕೆ. ಎಂಬ ಗ್ರಾಮವನ್ನು ದತ್ತು ಪಡೆದು ಮಾದರಿ ಗ್ರಾಮ ರೂಪಿಸಿರುವುದನ್ನು ಹೋಗಿ ನೋಡಲಿ’ ಎಂದು ಕಟಕಿಯಾಡಿದರು.

ನೋಡೀಗ ನಾ ಮಾತನಾಡುತ್ತಿದ್ದಂತೆ, ಮಳೆ ಆರಂಭವಾಯ್ತು. ಇದು ಶುಭ ಲಕ್ಷಣ ಎನ್ನುತ್ತಿದ್ದಂತೆ ಮಳೆ ನಿಂತೆ ಬಿಟ್ಟಿತು.

ಸೈನ್ಯದ ಬಳಕೆ: ‘ಬಿಜೆಪಿ ಅಭ್ಯರ್ಥಿಗಳಿಗೆ ಸ್ವಂತ ಬಂಡವಾಳವಿಲ್ಲ. ಮೋದಿ ನೋಡಿ ಮತ ಹಾಕಿ ಎಂಬ ಮಾತೇ ಎಲ್ಲೆಲ್ಲೂ ಕೇಳಿ ಬರುತ್ತಿದೆ. ಸರ್ಜಿಕಲ್ ಸ್ಟ್ರೈಕ್ ಹೆಸರಿನಲ್ಲಿ ಮತಯಾಚನೆ ಮಾಡುತ್ತಾರೆ. ಅಭಿವೃದ್ಧಿ ಹೆಸರೇ ಇಲ್ಲ. ಸೈನಿಕರನ್ನು ರಾಜಕೀಯಕ್ಕೆ ಬಳಸಿಕೊಂಡ ಮೊದಲ ವ್ಯಕ್ತಿ ಮೋದಿ’ ಎಂದು ಪಶು ಸಂಗೋಪನಾ ಸಚಿವ ವೆಂಕಟರಾವ ನಾಡಗೌಡ ವಾಗ್ದಾಳಿ ನಡೆಸಿದರು.

ಸಹಕಾರ ಸಚಿವ ಬಂಡೆಪ್ಪ ಕಾಶಂಪುರ ಮಾತನಾಡಿ, ‘ಮೋದಿ... ಮೋದಿ... ಮೋದಿ ಎಂದರೇ ಹೊಟ್ಟೆ ತುಂಬುತ್ತಾ..? ಮೋದಿ ಗಾಳಿಯಲ್ಲಿಯೇ ಹಿಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 17 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಈಗ 22 ಸ್ಥಾನಗಳ ಕನಸು ಕಾಣುತ್ತಿದ್ದಾರೆ ಯಡಿಯೂರಪ್ಪ’ ಎಂದು ವ್ಯಂಗ್ಯವಾಡಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಜೆಡಿಎಸ್ ಯುವ ಮುಖಂಡ ಅಶೋಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿದರು. ಮೈತ್ರಿ ಅಭ್ಯರ್ಥಿ ಡಾ.ಸುನೀತಾ ದೇವಾನಂದ ಚವ್ಹಾಣ ಮಾತಯಾಚಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಅಧ್ಯಕ್ಷತೆ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !