ನೀರಾವರಿಯ ಬದ್ಧತೆಯಿದೆ; ಕಳಕಳಿಯಿದೆ: ಎಂ.ಬಿ.ಪಾಟೀಲ ಪರೋಕ್ಷ ವಾಗ್ದಾಳಿ

ಬುಧವಾರ, ಏಪ್ರಿಲ್ 24, 2019
31 °C
ಬಿಜೆಪಿ ಶಾಸಕರಾದ ನಡಹಳ್ಳಿ, ಕಾರಜೋಳ ವಿರುದ್ಧ ಗೃಹಸಚಿವ ಆ‍ಪಾದನೆ

ನೀರಾವರಿಯ ಬದ್ಧತೆಯಿದೆ; ಕಳಕಳಿಯಿದೆ: ಎಂ.ಬಿ.ಪಾಟೀಲ ಪರೋಕ್ಷ ವಾಗ್ದಾಳಿ

Published:
Updated:

ವಿಜಯಪುರ: ‘ಅರೆಹುಚ್ಚ ಹಾಗೂ ನಾನೇ ಬುದ್ದಿವಂತ ಎಂಬ ಹೊಟ್ಟೆಕಿಚ್ಚಿನ ಇಬ್ಬರು ಶಾಸಕರು ನೀರಾವರಿ ವಿಷಯದಲ್ಲಿ ಚಿಲ್ಲರೆ, ಭಂಡತನದ ಹೇಳಿಕೆ ನೀಡುವ ಮೂಲಕ ಜಿಲ್ಲೆಯ ಜನರನ್ನು ತಪ್ಪು ದಾರಿಗೆ ಕರೆದೊಯ್ಯುವ ಕೆಲಸದಲ್ಲಿ ನಿರತರಾಗಿದ್ದಾರೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದರು.

ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹಾಗೂ ಮುಧೋಳ ಶಾಸಕ ಗೋವಿಂದ ಕಾರಜೋಳ ಹೆಸರು ಪ್ರಸ್ತಾಪಿಸದೆ ಪರೋಕ್ಷ ವಾಗ್ದಾಳಿ ನಡೆಸಿದ ಎಂ.ಬಿ. ‘ಇವರ ಸರ್ಟಿಫಿಕೇಟ್‌ ನನಗೆ ಬೇಕಿಲ್ಲ. ಆಧುನಿಕ ಭಗೀರಥ ಎಂದು ನಾನು ಕರೆದುಕೊಂಡಿಲ್ಲ. ಬಸನಗೌಡ ಪಾಟೀಲ ಯತ್ನಾಳ ಲಕ್ಷ ಜನರ ಎದುರು ನೀಡಿದ ಬಿರುದದು’ ಎಂದು ಶುಕ್ರವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮನ್ನು ಟೀಕಿಸಿದವರಿಗೆ ತಿರುಗೇಟು ನೀಡಿದರು.

‘ಜನರ ಸಮಸ್ಯೆಗೆ ಸ್ಪಂದಿಸಿರುವೆ. ರೈತರ ಸಂಕಷ್ಟಕ್ಕೆ ಧ್ವನಿಯಾಗಿರುವೆ. ನನ್ನ ಈ ಹಿಂದಿನ ಐದು ವರ್ಷದ ಆಡಳಿತದಲ್ಲಿ ಜಿಲ್ಲೆಗೆ ₹ 15,000 ಕೋಟಿ ಮೊತ್ತದ ನೀರಾವರಿ ಕಾಮಗಾರಿ ಮಂಜೂರು ಮಾಡಿಸಿ, ಕೆಲಸ ನಡೆಸಿರುವೆ. ಇತಿಹಾಸದಲ್ಲಿ ಯಾರಾದರೂ ಇಷ್ಟೊಂದು ಬೃಹತ್ ಮೊತ್ತದ ಕಾಮಗಾರಿ ನಡೆಸಿದ್ದರಾ’ ಎಂದು ಪಾಟೀಲ ಪ್ರಶ್ನಿಸಿದರು.

‘ಬಳೂತಿ ಜಾಕ್‌ವೆಲ್‌ನ ವಿದ್ಯುತ್‌ ಉಪಕರಣ ಸುಟ್ಟಾಗ ರೈತರ ನೋವಿಗೆ ಧ್ವನಿಯಾದೆ. ಕೂಡಗಿ ರೈಲ್ವೆ ಕ್ರಾಸಿಂಗ್‌ ಬಳಿ ನಿರಂತರವಾಗಿ ಒತ್ತಡ ಹಾಕಿದ ಪರಿಣಾಮ ವಾರದೊಳಗೆ 39 ಕೆರೆಗಳಿಗೆ ನೀರು ಹರಿಸಬಹುದು. ಗಲಗಲಿ, ಕೊರ್ತಿ–ಕೊಲ್ಹಾರ ಬ್ಯಾರೇಜ್ ಎತ್ತರ ಹೆಚ್ಚಳಗೊಂಡಿರುವುದರಿಂದ ಅವಿಭಜಿತ ಜಿಲ್ಲೆಗೆ ಆರು ಟಿಎಂಸಿ ಅಡಿ ನೀರು ಕುಡಿಯಲಿಕ್ಕಾಗಿಯೇ ಸಿಗಲಿದೆ.

ವಿಜಯಪುರ ಜಿಲ್ಲೆಗೆ 100 ಟಿಎಂಸಿ ಅಡಿ ನೀರನ್ನು ಮೀಸಲಿಡಲಾಗಿದೆ. ಮುಳವಾಡ, ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ಹೊಲಗಳಿಗೆ ಇದೀಗ ಯಾವ ಕಾರಣಕ್ಕೂ ನೀರು ಹರಿಸಲು ಸಾಧ್ಯವಿಲ್ಲ. ಆಂಧ್ರಪ್ರದೇಶ ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದೆ.

ಇದರ ವಿಚಾರಣೆ ಜುಲೈನಲ್ಲಿ ನಡೆಯಲಿದೆ. ನಾನೇ ಖುದ್ದು ಆಸಕ್ತಿಯಿಂದ ಕಾನೂನು ತಜ್ಞರ ಜತೆ ಚರ್ಚಿಸುವೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಜತೆ ಚರ್ಚಿಸಿ, ತಾರ್ಕಿಕ ಅಂತ್ಯ ಕಾಣಿಸಲಾಗುವುದು. ಇದರ ಬಳಿಕ ಕೇಂದ್ರ ಸರ್ಕಾರ ಗೆಜೆಟ್‌ ನೋಟಿಫಿಕೇಶನ್‌ ಮಾಡಬೇಕು. ಅದರ ನಂತರವೇ ಹೊಲಗಳಿಗೆ ನೀರು ಹರಿಸಲು ಸಾಧ್ಯ.

ಈ ಎಲ್ಲವೂ ಗೊತ್ತಿದ್ದರೂ ಇಬ್ಬರು ಶಾಸಕರು ಜನರ ಹಾದಿ ತಪ್ಪಿಸುತ್ತಿದ್ದಾರೆ. ಜಲಸಿ ಹೆಚ್ಚಿರುವ, ನಾನೇ ಬುದ್ದಿವಂತ ಎಂದುಕೊಂಡಿರುವ ಭಂಡ ಶಾಸಕರೊಬ್ಬರು ವಿಧಾನಸಭೆಯ ಒಳಗೂ, ಹೊರಗೂ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ’ ಎಂದು ಎಂ.ಬಿ.ಪಾಟೀಲ ತೀವ್ರ ವಾಗ್ದಾಳಿ ನಡೆಸಿದರು.

‘ನಮ್ಮ ಗೋವಿಂದಣ್ಣ ಕಾರಜೋಳರ ಬಿಜೆಪಿ ಸರ್ಕಾರ ಜಿಲ್ಲೆಯ ನೀರಾವರಿಗೆ ಖರ್ಚು ಮಾಡಿದ್ದು ₹ 530 ಕೋಟಿ. ನನ್ನ ಅವಧಿಯಲ್ಲಿ ನಾವು ಖರ್ಚು ಮಾಡಿರುವುದು ₹ 10,000 ಕೋಟಿ. ಅಭಿವೃದ್ಧಿಯಲ್ಲಿ ಯಾವುದೇ ರಾಜಕಾರಣ ಬೆರೆಸುವುದು ಬೇಕಿಲ್ಲ.

ಇದೀಗ ಶಾಸಕರೊಬ್ಬರು ತಮ್ಮ ಕ್ಷೇತ್ರದ ಕೆರೆಗಳಿಗೆ ನೀರು ಹರಿಸುವುದಾಗಿ ಹೇಳುತ್ತಿದ್ದಾರೆ. ಇದಕ್ಕೆ ನೀರು ಬರುವುದು ಎಲ್ಲಿಂದ. ಅದನ್ನು ಸರಿಪಡಿಸಿದವರು ಯಾರು ? ನೀರು ಹರಿಯುವುದು ಸಹ ಎಂ.ಬಿ.ಪಾಟೀಲ ಆಡಳಿತದಲ್ಲಿ ನಿರ್ಮಿಸಿದ ಕಾಲುವೆಗಳಲ್ಲಿ ಎಂಬುದು ನೆನಪಿರಲಿ. ನನ್ನ ಈ ಉತ್ತರ ಜಿಲ್ಲೆಯ ಸಾಮಾನ್ಯ ಜನರಿಗೆ’ ಎಂದು ಗೃಹ ಸಚಿವರು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !