‘ಅಪಸ್ವರಕ್ಕೆ ನೋವಾಗಿದೆ; ಮುಂದಾಲೋಚನೆ ಮಾಡಿದ್ದೇ ತಪ್ಪಾ..?’

ಮಂಗಳವಾರ, ಏಪ್ರಿಲ್ 23, 2019
33 °C
ಸಾಬೀತುಪಡಿಸಿ; ಇಲ್ಲವೇ ಜೈಲಿಗೆ ಹೋಗಿ: ಶಾಸಕ ನಡಹಳ್ಳಿ ಆರೋಪಕ್ಕೆ ಗೃಹಸಚಿವ ಎಂ.ಬಿ.ಪಾಟೀಲ ಸವಾಲು

‘ಅಪಸ್ವರಕ್ಕೆ ನೋವಾಗಿದೆ; ಮುಂದಾಲೋಚನೆ ಮಾಡಿದ್ದೇ ತಪ್ಪಾ..?’

Published:
Updated:

ವಿಜಯಪುರ: ‘ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ಮಾಡಬೇಕಿದ್ದ ಕೆಲಸವನ್ನು, ಮುಂದಾಲೋಚನೆಯಿಂದ ಮಾಡಿದೆ. ಕಾಲುವೆಗಳು ಹಾಳಾಗದಂತೆ ನೀರು ಹರಿಸಿ ಕೆರೆಗೆ ತುಂಬಲಾಗುತ್ತಿದೆ. ಊಟ–ಮನೆ ಬಿಟ್ಟು ಕೆಲಸ ಮಾಡಿದ್ದಕ್ಕೆ ಈ ರೀತಿಯ ಅಪಸ್ವರವೇ ? ಇದರಿಂದ ನೋವಾಗಿದೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.

‘ಶಾಸಕ ನಡಹಳ್ಳಿಯ ಟೀಕೆಗಳಿಗೆ ಇನ್ಮುಂದೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಈ ಹಿಂದೆ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಬೇಕು. ಇಲ್ಲದಿದ್ದರೆ ಜೈಲಿಗೆ ಹೋಗಲು ಸಿದ್ಧರಾಗಿರಬೇಕು’ ಎಂದು ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವರು ಗುಡುಗಿದರು.

‘ಕೃಷ್ಣಾ ನ್ಯಾಯಾಧೀಕರಣದ ಅಂತಿಮ ತೀರ್ಪಿನ ಅಧಿಸೂಚನೆ ಹೊರಡಿಸಲು ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದೆ ಹೊರತು, ನೀರು ಬಳಸಿಕೊಳ್ಳಲು ತಡೆ ನೀಡಿಲ್ಲ ಎನ್ನುವುದು ತಪ್ಪು ಗ್ರಹಿಕೆ. ಅಧಿಸೂಚನೆ ಪ್ರಕಟಗೊಳ್ಳುವ ತನಕವೂ; ರಾಜ್ಯಕ್ಕೆ ಹಂಚಿಕೆಯಾಗಿರುವ ಹೊಸ ನೀರಿನ ಪ್ರಮಾಣವನ್ನು ಬಳಸಲು ಯಾವುದೇ ರೀತಿಯ ಹಕ್ಕಿಲ್ಲ. ಇದು ಕಾಯ್ದೆ. ಇದನ್ನು ನೀವೇ ನಡಹಳ್ಳಿಗೆ ತಿಳಿಸಿ ಹೇಳಿ. ಇಲ್ಲದಿದ್ದರೆ ನಾನೇ ಒಂದು ಕಾಪಿಯನ್ನು ಕಳುಹಿಸಿಕೊಡುವೆ’ ಎಂದು ಎಂ.ಬಿ.ಪಾಟೀಲ ತಿಳಿಸಿದರು.

‘ರಾಜ್ಯಕ್ಕೆ ಹಂಚಿಕೆಯಾಗಿರುವ 173 ಟಿಎಂಸಿ ನೀರಿನ ಪ್ರಮಾಣವನ್ನು ಬಳಸಿಕೊಳ್ಳಲು ಅಂತರ ರಾಜ್ಯ ಜಲ ವಿವಾದ ಕಾಯ್ದೆ 1956 ಸೆಕ್ಷನ್‌ 6(1)ರ ಅಡಿಯಲ್ಲಿ, ಕೃಷ್ಣಾ ನ್ಯಾಯಾಧೀಕರಣ -2ರ ಅಂತಿಮ ಆದೇಶವು ಗೆಜೆಟ್ ಪ್ರಕಟಣೆಯಾದ ನಂತರ ಸಾಧ್ಯವಾಗುತ್ತದೆ. ಅಂತಿಮ ಆದೇಶವನ್ನು ಕೇಂದ್ರ ಸರ್ಕಾರ ಹೊರಡಿಸುವವರೆಗೂ ಅದು ಜಾರಿಯಾಗುವುದಿಲ್ಲ’ ಎಂದು ಪಾಟೀಲ ವಿವರಿಸಿದರು.

ಮುಖ್ಯಮಂತ್ರಿಗಳಿಂದಲೂ ಮನವರಿಕೆ:

‘ಕೃಷ್ಣಾ ನ್ಯಾಯಾಧೀಕರಣ 2ರ ಅಂತಿಮ ವರದಿ ಹಾಗೂ ಮುಂದುವರೆದ ವರದಿಗಳಲ್ಲಿರುವ ಅಂಶಗಳ ಬಗ್ಗೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ ಸಲ್ಲಿಸಿವೆ. ಈ ಎಲ್ಲ ಅರ್ಜಿಗಳು ಇತ್ಯರ್ಥವಾಗದ ಹೊರತು ಗೆಜೆಟ್‌ ನೋಟಿಫಿಕೇಶನ್‌ ಮಾಡಲು ಕೇಂದ್ರದಿಂದಲೂ ಸಾಧ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಈ ಎಲ್ಲ ಬೆಳವಣಿಗೆಗಳ ಮಧ್ಯೆಯೂ ಮುಖ್ಯಮಂತ್ರಿ ಪ್ರಧಾನಮಂತ್ರಿಗೆ 2018ರ ಡಿ.27ರಂದು ಸುದೀರ್ಘವಾದ ಪತ್ರ ಬರೆದಿದ್ದಾರೆ. ನ್ಯಾಯಾಧೀಕರಣದಿಂದ ಹಂಚಿಕೆಯಾಗಿರುವ ನೀರನ್ನು ಉದ್ದೇಶಿತ ಉಪಯೋಗಗಳಿಗಾಗಿ ಬಳಸಿಕೊಳ್ಳಲು ಅನುಕೂಲವಾಗುವಂತೆ ಕೃಷ್ಣಾ ಜಲ ವಿವಾದ ನ್ಯಾಯಾಧೀಕರಣದ ಅಂತಿಮ ಆದೇಶವನ್ನು ಅಧಿಸೂಚನೆ ಮಾಡುವಂತೆ ಕೋರಿದ್ದಾರೆ.’

‘ಇದರಂತೆಯೇ ಹಂಚಿಕೆಯಾಗಿರುವ ನೀರಿನ ಬಳಕೆಗೆ ಈಗಾಗಲೇ ಯೋಜನೆಗಳನ್ನು ಕೈಗೆತ್ತಿಕೊಂಡಿರುವುದಾಗಿ ಹಾಗೂ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆರ್ಥಿಕ ಸಂಪನ್ಮೂಲವನ್ನು ಖರ್ಚು ಮಾಡಿರುವುದಾಗಿ ಪತ್ರದಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ’ ಎಂದು ಎಂ.ಬಿ.ಪಾಟೀಲ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !