ಸೌಲಭ್ಯ ಪಡೆದು ಮುಖ್ಯವಾಹಿನಿಗೆ ಬನ್ನಿ

7
ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಡಿವಾಳ ಸಮುದಾಯದವರಿಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಸಲಹೆ

ಸೌಲಭ್ಯ ಪಡೆದು ಮುಖ್ಯವಾಹಿನಿಗೆ ಬನ್ನಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಕೆಳವರ್ಗದ ಜನರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಡಿವಾಳ ಸಮುದಾಯದವರು ಸಹ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವತ್ತ ಗಮನ ಹರಿಸಬೇಕು. ಈ ಸಮಾಜದಲ್ಲಿ ಪ್ರತಿಭಾನ್ವಿತರು ಜಾತಿಯ ಕೀಳರಿಮೆ ತೊಡೆದು ಉತ್ತಮ ಅವಕಾಶಗಳನ್ನು ಪಡೆದುಕೊಳ್ಳಬೇಕು. ಮಡಿವಾಳ ಸಮುದಾಯ ಅಭಿವೃದ್ಧಿಗಾಗಿ ಸರ್ಕಾರ ಹಲವು ಸವಲತ್ತುಗಳನ್ನು ಒದಗಿಸಿದೆ. ಅವುಗಳನ್ನು ಸಧ್ಬಳಕೆ ಮಾಡಿಕೊಂಡು ಆರ್ಥಿಕ ಅಭಿವೃದ್ಧಿ ಕಾಣಬೇಕು’ ಎಂದು ಹೇಳಿದರು.

ಮಡಿವಾಳ ಸಂಘದ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಆರ್.ರಾಜಶೇಖರ್ ಮಾತನಾಡಿ, ‘ನಮ್ಮ ಸಮುದಾಯದಲ್ಲಿ ಶೇ 5 ರಷ್ಟು ವಿದ್ಯಾವಂತರು ಇದ್ದಾರೆ. ಆದರೆ ಅವರು ತಮ್ಮ ಜಾತಿಯನ್ನು ಹೇಳಿಕೊಳ್ಳುವುದಿಲ್ಲ. ವಿದ್ಯಾವಂತ ಯುವಕರು ಹಾಗೂ ನೌಕರರು ತಮ್ಮಲ್ಲಿರುವ ಕೀಳರಿಮೆ ಮೊದಲು ಬಿಡಬೇಕು’ ಎಂದರು.

‘12ನೇ ಶತಮಾನದಲ್ಲಿ ಬಸವಣ್ಣನವರ ಆದರ್ಶಗಳಿಗೆ ಮಾರುಹೋದ ಮಡಿವಾಳ ಮಾಚಿದೇವ ಅಂದಿನ ದಿನಗಳಲ್ಲಿ ಬಡವರು, ದೀನ ದಲಿತರ, ಮಹಿಳಾ ಸಬಲೀಕರಣ, ಸರ್ವರಿಗೂ ಸಮಪಾಲು– ಸಮಬಾಳು ಒದಗಿಸುವ ನಿಟ್ಟಿನಲ್ಲಿ ತಮ್ಮ ವಚನಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು. ಸಾಮಾಜಿಕ ಬಹಿಷ್ಕಾರ ಹಾಗೂ ಶೋಷಣೆಗೆ ಒಳಗಾದವರ ಬಗ್ಗೆ ಚಿಂತಿಸಿ ಸಮಾಜದೊಳಗಿನ ತಾರತಮ್ಯ ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದರು’ ಎಂದು ಅಭಿಪ್ರಾಯಪಟ್ಟರು.

‘ಶರಣ ಸಂಸ್ಕೃತಿ ಮೈಗೂಡಿಸಿಕೊಂಡು ಭಕ್ತಿ ಪ್ರಧಾನ ಚಿಂತನೆಯುಳ್ಳ ಮೂರು ಲಕ್ಷ ಕ್ಕೂ ಹೆಚ್ಚು ವಚನಗಳನ್ನು ಬರೆದ ಮಾಚಿ ದೇವರು ಸಮಾಜದ ತಳಮಟ್ಟದ ಜನರನ್ನು ಮೇಲೆತ್ತುವ ಕಾಯಕಕ್ಕಾಗಿ ಅಹಿಂಸೆ ತತ್ವ ಅಳವಡಿಸಿಕೊಂಡ ಅವರ ವಿಶಾಲತೆ ಸರ್ವರಿಗೂ ಮಾದರಿ’ ಎಂದು ಹೇಳಿದರು.‘ಹಿಂದುಳಿದ ವರ್ಗಗಳ ಇಲಾಖೆಯಿಂದ ನಮಗೆ ₹1 ಕೋಟಿ ವೆಚ್ಚದ ವಿದ್ಯಾರ್ಥಿ ವಸತಿ ನಿಲಯ ಮಂಜೂರಾಗಿದೆ. ಮಡಿವಾಳ ಸಮುದಾಯಕ್ಕಾಗಿ ಜಿಲ್ಲಾ ಕೇಂದ್ರದಲ್ಲಿ ದೋಬಿ ಘಾಟ್ ನಿರ್ಮಾಣ ಮಾಡಲು ಜಿಲ್ಲಾಡಳಿತ ಎರಡು ಎಕರೆ ಜಮೀನು ಮಂಜೂರು ಮಾಡಬೇಕು’ ಎಂದು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷ ಎಂ.ಮುನಿಕೃಷ್ಣ, ತಹಶೀಲ್ದಾರ್‌.ಕೆ.ನರಸಿಂಹಮೂರ್ತಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾರಾಯಣಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ, ವಾರ್ತಾ ಇಲಾಖೆಯ ಸಹಾಯಕ ಅಧಿಕಾರಿ ಮೈನಶ್ರೀ, ಮಡಿವಾಳ ಸಂಘದ ಜಿಲ್ಲಾ ಘಟಕ ಅಧ್ಯಕ್ಷೆ ಪದ್ಮಾವತಿ , ಸಂಘದ ರಾಜ್ಯ ಘಟಕದ ನಿರ್ದೇಶಕ ಮುನಿನಾರಾಯಣಪ್ಪ, ಮುಖಂಡರಾದ ಕೊಳವನಹಳ್ಳಿ ವೆಂಕಟರಾಯಪ್ಪ, ವೆಂಕಟೇಶ್‌, ಕೃಷ್ಣಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !