ಸದಾ ಮೆಲುಕು ಹಾಕಬಹುದಾದ ವಿವಾಹ ಭೋಜನ ಕರ್ನಾಟಕದ ಮದುವೆ ಊಟದ ಪ್ರಮುಖ ಖಾದ್ಯಗಳು
ಮಾಯಾ ಬಜಾರ್ ಚಿತ್ರದಲ್ಲಿ ಘಟೋತ್ಕಚನು “ವಿವಾಹ ಭೋಜನವಿದು ವಿಚಿತ್ರ ಭಕ್ಷ್ಯಗಳಿವು...” ಎಂದು ಅಟ್ಟಹಾಸಗೈಯುತ್ತ ಮದುವೆಗೆಂದು ತಯಾರಿಸಿದ ಭಕ್ಷ್ಯಗಳನ್ನು ನೋಡಿ ಹಾಡುವ ದೃಶ್ಯ ಎಲ್ಲರಿಗೂ ಗೊತ್ತು. ಬಾಯಲ್ಲಿ ನೀರೂರಿಸುವ ಈ ಖಾದ್ಯಗಳು ತಲೆತಲಾಂತರದಿಂದಲೂ ಜನಪ್ರಿಯವಾಗಿವೆ. ಕರ್ನಾಟಕದ ಮದುವೆ ಮನೆಗಳಲ್ಲಿ ಮಾಡುವ ಈ ಖಾದ್ಯಗಳನ್ನು ಸವಿದವನೇ ಬಲ್ಲ ಅವುಗಳ ರುಚಿಯನ್ನು. “ಊಟ ಅಂದ್ರೆ ಮದುವೆ ಊಟದ್ ಥರಾ ಇರ್ಬೇಕು,” ಎಂದು ಹೇಳುವ ವಾಡಿಕೆಯು ನಮ್ಮಲ್ಲಿದೆ.
ನಮ್ಮಲ್ಲಿ ಪ್ರತಿ 10 ಕಿಲೋಮೀಟರ್‍ಗೆ ಆಡು ಭಾಷೆ ಬದಲಾಗುತ್ತದೆ ಎಂದು ಹೇಳುತ್ತಾರೆ. ಇದನ್ನು ಊಟಕ್ಕೂ ಅನ್ವಯಿಸಬಹುದು. ಕರ್ನಾಟಕದ ಪ್ರತಿ ಜಿಲ್ಲೆಯ, ಪ್ರತಿ ಪಂಗಡದ ಮದುವೆಯ ಪದ್ಧತಿಗಳು ಹೇಗೆ ವೈವಿಧ್ಯಮಯವಾಗಿವೆಯೋ ಮದುವೆಯ ಊಟ ಕೂಡ ಅಷ್ಟೇ ವೈವಿಧ್ಯಮಯವಾಗಿವೆ.
ಉತ್ತರ ಕರ್ನಾಟಕದ ಬ್ರಾಹ್ಮಣರ ಮದುವೆಗಳಲ್ಲಿ ಮದುವೆಯ ಹಿಂದಿನ ರಾತ್ರಿ ಭೂಮದ ಊಟ ಅಥವಾ ರುಕ್ಕೋತ ಮಾಡುವ ಶಾಸ್ತ್ರವಿದೆ. ಅದಕ್ಕಾಗಿ ಮಾಡಿದ ಸಕ್ಕರೆ ತುಂಬಿದ ತೆಳುವಾಗಿ ಗರಿಗರಿಯಾದ ಮಂಡಿಗೆಗಳನ್ನು ಹಾಲಿನಲ್ಲಿ ಅದ್ದಿ ಬಾಯಲ್ಲಿ ಇಟ್ಟಾಗ ಅದು ಕರಗುವ ಪರಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂದು ಹೇಳಬಹುದು. ಇಲ್ಲಿ ಮಂಡಿಗೆಯೇ ಊಟದ ರಾಜ.
ಅಂತೆಯೇ ಉತ್ತರ ಕರ್ನಾಟಕದ ಇತರ ಸಮಾಜಗಳಲ್ಲಿ ಊಟದ ಅನೇಕ ವೈವಿಧ್ಯತೆಗಳು ಕಂಡುಬರುತ್ತವೆ. ಕೆಲವರು ಮದುವೆಗಳಲ್ಲಿ ಜೋಳದ ರೊಟ್ಟಿ, ಬದನೆಯ ಕಾಯಿ ಎಣ್ಣೆಗಾಯಿ, ಶೇಂಗಾ ಚಟ್ನಿ, ಗುರೆಳ್ಳಿನ ಹಿಂಡಿ, ಮೊಸರು ಮತ್ತು ಬೆಲ್ಲದ ಗೋಧಿ ಹುಗ್ಗಿ ಗಡದ್ದಾಗಿ ತಿಂದು ಮನೆಗೆ ಹೋಗಿ ಸಂಪಾಗಿ ನಿದ್ದಿ ಮಾಡೋ ಕಾರ್ಯಕ್ರಮ ಅವರ್ಣನೀಯ.
ಉತ್ತರ ಕರ್ನಾಟಕದಲ್ಲೇ ಹಿಂದಿನ ಕಾಲದಲ್ಲಿ ಮಧ್ಯಮ ವರ್ಗದವರ ಮದುವೆಗಳಲ್ಲಿ ಅಡುಗೆ ಬಹಳ ಸರಳವಾಗಿರುತ್ತಿತ್ತು. ಅನ್ನ, ರುಚಿಯಾದ ಸಾರು ಮತ್ತು ಬೊಗಸೆ ಬೊಗಸೆಯಾಗಿ ಸುರಿದ ಸಿಹಿ ಬೂಂದಿ ಕೊನೆಗೆ ಮಜ್ಜಿಗೆ ಸವಿದರೆ ಆಹಾಹಾ ಎಂತಹ ಆನಂದ!
ಕಾಲಕ್ರಮೇಣ ಮದುವೆ ಪದ್ಧತಿಗಳಂತೆ ಮದುವೆಯಲ್ಲಿ ಬಡಿಸುವ ಪದಾರ್ಥಗಳೂ ಬದಲಾಗಿವೆ. ಹೆಚ್ಚಿನ ಜನ ಮುಹೂರ್ತದ ನಂತರ ಬಡಿಸುವ ಊಟ ಮಾತ್ರ ಸಾಂಪ್ರದಾಯಿಕವಾಗಿ ಇಡುತ್ತಾರೆ ಎಂಬುದು ಸಮಾಧಾನಕರ ವಿಷಯ.
ಮದುವೆಯ ಊಟದ ಎಲೆಯಲ್ಲಿ ಕರ್ನಾಟಕದ ಪ್ರಮುಖ ಸಿಹಿ ತಿನಿಸಾದ ಶಾವಿಗೆ ಪಾಯಸವಿರಲೇಬೇಕು. ಎಲೆಯ ಮೂಲೆಯಲ್ಲಿ ಬಡಿಸಿದ ಪಾಯಸವನ್ನು ನೆಕ್ಕಿದ ನಂತರವೇ ಅನ್ನಕ್ಕೆ ಮುಂದುವರಿಯುತ್ತಾರೆ.
ಕರ್ನಾಟಕದ ದಕ್ಷಿಣ ಭಾಗದಲ್ಲಿ ಸಿಹಿ ತಿಂಡಿಗಳಲ್ಲಿ ಒಬ್ಬಟ್ಟಿಗೆ ಪ್ರಮುಖ ಸ್ಥಾನವಿದೆ. ಒಬ್ಬಟ್ಟಿನ ಮೇಲೆ ತುಪ್ಪ ಸುರಿದು ಅದನ್ನು ಮೆತ್ತಗೆ ಕಿವುಚಿ ಬಾಯಲ್ಲಿ ಇಟ್ಟು ಅದರ ಸ್ವಾದವನ್ನು ಸಂಭ್ರಮಿಸಿ, ಮದುವೆಗೆ ಬಂದ ಅತಿಥಿಗಳು ಅತಿಥೇಯರನ್ನು ಹರಸದೇ ಇರಲಾರರು. ’ಬಲ್ಲವನೇ ಬಲ್ಲ ಬೆಲ್ಲದ ಸವಿಯ’ ಎಂಬಂತೆ, ಬಲ್ಲವನೇ ಬಲ್ಲ ಒಬ್ಬಟ್ಟಿನ ರುಚಿಯ.
ಸಿಹಿ ಇಲ್ಲದ ಮದುವೆಯಿಲ್ಲ. ಊಟದಲ್ಲಿ ಕೆಲವು ಪದಾರ್ಥಗಳು ಬಿಟ್ಟು ಹೋಗಬಹುದು ಆದರೆ ಆರ್ಥಿಕ ಪರಿಸ್ಥಿತಿ ಏನೇ ಇರಲಿ ಒಂದು ಸಿಹಿಯನ್ನಾದರೂ ಊಟದಲ್ಲಿ ಬಡಿಸುತ್ತಾರೆ. ಕೆಲವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮದುವೆಗಳಲ್ಲಿ ಎರಡು, ಮೂರು, ಐದು ಸಿಹಿ ತಿನಿಸುಗಳನ್ನು ಮಾಡಿಸುತ್ತಾರೆ. ಅವುಗಳಲ್ಲಿ ಜನಪ್ರಿಯವಾದವು ಮೈಸೂರು ಪಾಕ್, ಕೊಬ್ಬರಿ ಹೋಳಿಗೆ, ಜಿಲೇಬಿ, ಜಾಮೂನ್, ಫೇಣಿ, ಬೂಂದಿ ಲಾಡು ಇತ್ಯಾದಿ. ಬೆಳಿಗ್ಗೆ ಮಾಡಿಸಿದ ತಿಂಡಿಯಲ್ಲೂ ಕಾಶಿ ಹಲ್ವಾದಂತಹ ಸಿಹಿ ಇರಲೇ ಬೇಕು.
ಕನ್ನಡ ನಾಡಿನ ಜನರು ಭೋಜನಪ್ರಿಯರು ಎಂಬುದು ಮದುವೆಯ ಊಟದಲ್ಲಿ ನಮಗೆ ಕಾಣಸಿಗುತ್ತದೆ. ಬಿಸಿಬೇಳೆ ಭಾತ್, ಪುಲಾವ್, ಚಿತ್ರಾನ್ನ, ಪುಳಿಯೋಗರೆ, ವಾಂಗೀಭಾತ್ ಅನ್ನದ ವಿವಿಧ ಪ್ರಕಾರಗಳಾದರೆ, ಬಿಳಿ ಅನ್ನದ ಜೊತೆ ಸಾಂಬಾರ್, ಕೂಟು, ಹುಳಿ, ರಸಂ, ಪೈನಾಪಲ್ ಗೊಜ್ಜು ಇವುಗಳು ಸಮ್ಮಿಳನಗೊಂಡು ಭೋಜನಕ್ಕೆ ಪರಿಪೂರ್ಣತೆ ನೀಡುತ್ತವೆ. ಈ ಸಾರು ಸಾಂಬಾರುಗಳಲ್ಲಿ ಎಷ್ಟೊಂದು ವೈವಿಧ್ಯತೆಗಳಿವೆ! ಹವ್ಯಕರ ಮದುವೆ ಅಪ್ಪೆ ಹುಳಿ ಇಲ್ಲದೆ ಆಗುವುದಿಲ್ಲ ಎನ್ನಬಹುದು. ಅಂತೆಯೇ ತೆಂಗಿನ ಕಾಯಿ ಇಲ್ಲದೇ ಕರಾವಳಿ ಮದುವೆಯ ಆಡುಗೆಯಿಲ್ಲ. ಸಾತ್ವಿಕ ಮದುವೆ ಊಟ ಮಾಡಬೇಕಿದ್ದಲ್ಲಿ ಕರ್ನಾಟಕಕ್ಕೆ ಬನ್ನಿ.
ಊಟಕ್ಕೆ ಮೊದಲು ಉಪ್ಪಿನಕಾಯಿ. ಹಾಗೆಯೇ ಕೋಸಂಬರಿ, ಪಚಡಿ ಮತ್ತು ಪಲ್ಯಗಳು ಕೂಡ. ಹೆಸರುಬೇಳೆ ಕೋಸಂಬರಿ, ಕಡಲೆಬೇಳೆ ಕೋಸಂಬರಿ, ಸೌತೆಕಾಯಿ ಪಚಡಿ, ಬೀನ್ಸ್ ಪಲ್ಯ, ಮತ್ತು ಕ್ಯಾಬೇಜ್ ಪಲ್ಯ ಇವು ಕನ್ನಡದ ಮದುವೆಗಳ ಸಾಂಪ್ರದಾಯಿಕ ಭೋಜನಗಳ ಅವಿಭಾಜ್ಯ ಅಂಗಗಳಾಗಿವೆ. ಜೊತೆಗೆ ಪೂರಿ, ಚಪಾತಿಗಳೂ ಇರುವುದುಂಟು. ಊಟದ ಕೊನೆಗೆ ಬಡಿಸುವ ಮೊಸರನ್ನ ಮತ್ತು ಮಜ್ಜಿಗೆಗಳು ವಿವಾಹ ಭೋಜನಕ್ಕೆ ಪರಿಪೂರ್ಣತೆ ನೀಡುತ್ತವೆ.
ಮದುವೆಗಳಲ್ಲಿ ನೆಲದ ಮೇಲೆ ಚಕ್ಕಳ ಮಕ್ಕಳ ಹಾಕಿ ಕುಳಿತು, ಬಾಳೆ ಎಲೆಯ ಮೇಲೆ ಕನ್ನಡದ ಅಡುಗೆ ಸವಿಯುವ ಸಾಂಪ್ರದಾಯಿಕ ಶೈಲಿ ಇನ್ನೂ ಜೀವಂತವಾಗಿದ್ದರೂ ಮದುವೆಯ ವಿವಿಧ ಕಾರ್ಯಕ್ರಮಗಳಿಗೆ ಬೇರೆ ಬೇರೆ ರೀತಿಯ ಅಡುಗೆಗಳನ್ನು ಮಾಡಿಸಲಾಗುತ್ತದೆ. ಮದುವೆಗೆ ಬಂದ ಅತಿಥಿಗಳ ಪ್ರೊಫೈಲ್ ಗಮನದಲ್ಲಿಟ್ಟುಕೊಂಡು ನಾರ್ತ್ ಇಂಡಿಯನ್ ಅಡುಗೆಗೂ ಆದ್ಯತೆಯಿದೆ.
ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಜನರು ಬದಲಾದ ಮದುವೆ ಊಟಕ್ಕೂ ಹೊಂದಿಕೊಳ್ಳುತ್ತಿದ್ದಾರೆ. ಚಾಟ್, ಇಟಾಲಿಯನ್, ಮೆಕ್ಸಿಕನ್ ನಂತಹ ಊಟಗಳ ಕೌಂಟರ್‍ಗಳು, ದೋಸೆ, ಪಿಜಾ ದಂತಹ ತಿನಿಸುಗಳಿಗೆ ಲೈವ್ ಕೌಂಟರ್ಗಳು ಮಕ್ಕಳು ಹಾಗೂ ಯುವಕ ಯುವತಿಯರಿಗೆ ಆಕರ್ಷಣೆಯಾಗಿವೆ.
ವಯಸ್ಸಾದ ಹಿರಿಯರನ್ನು ಅವರ ಮದುವೆಯ ಬಗ್ಗೆ ಒಮ್ಮೆ ಕೇಳಿ ನೋಡಿ. ಅವರ ಮದುವೆಯಲ್ಲಿ ಯಾವ ಅಡುಗೆ ಮಾಡಿಸಿದ್ದರು ಎಂಬುದರ ಬಗ್ಗೆ ಕಥೆಯನ್ನು ವರ್ಣಿಸಿ ಹೇಳದೇ ಇರಲಾರರು. ಮದುವೆಗಳಲ್ಲಿ ಇರುವ ಸಂಪ್ರದಾಯಗಳಲ್ಲಿ ಉಡುಗೆ ತೊಡುಗೆಗಳು, ಆಚರಣೆಗಳೊಂದಿಗೆ ಊಟಕ್ಕೆ ಅಗ್ರಸ್ಥಾನವಿದೆ. ಆಡುಗೆ ಯಾವುದೇ ಇರಲಿ, ಮದುವೆಯ ಭೂರಿ ಭೋಜನ ಸವಿದು ಅತಿಥಿಗಳು ಹರಸಿದಾಗ, ಅನ್ನವೇ (ಆಹಾರ) ಪೂರ್ಣಬ್ರಹ್ಮ ಎಂಬುದರಲ್ಲಿ ಸಂದೇಹವಿಲ್ಲ ಎಂಬುದು ಮನದಟ್ಟಾಗುತ್ತದೆ.
