ಅತ್ಯದ್ಭುತ ಕನ್ನಡ ವಿವಾಹಗಳ ಖರೀದಿಗಳ ಪಟ್ಟಿ

ಅತ್ಯದ್ಭುತ ಕನ್ನಡ ವಿವಾಹಗಳ ಖರೀದಿಗಳ ಪಟ್ಟಿ

Published on

ಮದುವೆ ಮನೆಯೆಂದರೆ ಗಡಿಬಿಡಿಯ ತಾಣ. ಮಾಡಲು ಎಷ್ಟೊಂದು ಕೆಲಸಗಳಿರುತ್ತವೆ. ಕೆಲವರು ಬ್ಯಾಂಕ್ವೆಟ್ ಹಾಲ್ ಅಥವಾ ಚೌಲ್ಟ್ರಿಗಳಲ್ಲಿ ಮದುವೆ ಮಾಡಿಸಿದರೆ ಸಣ್ಣ ಶಹರಗಳಲ್ಲಿ ಅಥವಾ ಹಳ್ಳಿಗಳಲ್ಲಿ ಮನೆಯ ಮುಂದೆ ಹಂದರ ಹಾಕಿ ಮದುವೆ ನೆರವೇರಿಸುತ್ತಾರೆ. ಬಟ್ಟೆಬರೆಯಿಂದ ಹಿಡಿದು ಆಭರಣಗಳವರೆಗೆ ಖರೀದಿಸಲು ಅನೇಕ ವಸ್ತುಗಳಿರುತ್ತವೆ. ಮದುವೆಯ ದಿನಾಂಕ ನಿಗದಿಯಾದ ತಕ್ಷಣ ಎರಡೂ ಕಡೆಯ ಮನೆಯಲ್ಲಿ ಮೊದಲು ಶುರುವಾಗುವುದೇ ಖರೀದಿಗಳ ಪಟ್ಟಿ. ಖರೀದಿಯ ನಿಯೋಜನೆ ಮುಂಚಿತವಾಗಿ ಮಾಡದಿದ್ದರೆ ಗೊಂದಲವುಂಟಾಗುತ್ತದೆ. ಕನ್ನಡ ವಿವಾಹಗಳಿಗೆ ಬೇಕಾಗುವ ವಸ್ತುಗಳೂ ಬೇರೆಯಾಗಿರುತ್ತವೆ.

ಸಂಪ್ರದಾಯ ಅಥವಾ ಶಾಸ್ತ್ರಗಳಿಗೆ ಬೇಕಾಗುವ ವಸ್ತುಗಳು, ಹೂವು, ಹಣ್ಣುಗಳು, ಆಭರಣಗಳು, ಅಲಂಕಾರಕ್ಕೆ ಬೇಕಾಗುವ ವಸ್ತುಗಳು, ವಧುವಿಗೆ ಬೇಕಾಗುವ ಆಭರಣಗಳು, ಬಟ್ಟೆಗಳು ಮತ್ತು ವರನ ಖರೀದಿ, ಅತಿಥಿಗಳಿಗೆ ಉಡುಗೊರೆಗಳು ಇತ್ಯಾದಿ ಇವುಗಳನ್ನು ಮುಂಚಿತವಾಗಿ ಪಟ್ಟಿ ಮಾಡಬೇಕು.

ಕನ್ನಡ ವಿವಾಹದಲ್ಲಿ ಶಾಸ್ತ್ರಗಳಿಗೆ ವಿಶೇಷವಾದ ಪ್ರಾಧಾನ್ಯವಿದೆ. ಮದುವೆ ಸಾಮಗ್ರಿಗಳ ಪಟ್ಟಿ ಪೂರ್ವಭಾವಿಯಾಗಿ ತಯಾರಿಸಿಕೊಳ್ಳುವುದು ಅತ್ಯಂತ ಮುಖ್ಯ. ನಾಂದಿ ಪೂಜೆಗೆ ಕಳಸ, ತೆಂಗಿನಕಾಯಿ, ಅಕ್ಕಿ, ಅರಿಶಿಣ, ಕುಂಕುಮ, ಹೂವುಗಳು, ವೀಳ್ಯದೆಲೆ, ಅಡಿಕೆ, ಮತ್ತು ವಿವಿಧ ಬಗೆಯ ಹಣ್ಣುಗಳು ಮತ್ತು ಎಲೆಗಳು, ದೀಪ, ಬತ್ತಿ, ಎಣ್ಣೆ, ಶ್ರೀಗಂಧ, ಅಕ್ಷತೆ, ಮತ್ತು ಕರ್ಪೂರ, ಬಾಳೆಹಣ್ಣು, ಪಂಚಾಮೃತದ ಪದಾರ್ಥಗಳು ಇವುಗಳನ್ನು ಸರಿಯಾದ ಪ್ರಮಾಣದಲ್ಲಿ ಖರೀದಿಸಬೇಕು. ಧಾರೆ ಶಾಸ್ತ್ರಕ್ಕೆ ಬೆಳ್ಳಿ ಅಥವಾ ತಾಮ್ರದ ಅಲಂಕೃತ ಚೊಂಬು ಹಾಗೂ ತುಪ್ಪ, ಸೌದೆ, ಹವನ ಸಾಮಗ್ರಿ ಮತ್ತು ಹೂಬತ್ತಿ ಇವೆಲ್ಲವೂ ಮಹತ್ವದ್ದಾಗಿವೆ.

ಕನ್ನಡ ಮದುವೆಗಳಲ್ಲಿ ಕೆಲವು ಸಮಾಜಗಳಲ್ಲಿ 'ಕಾಶಿ ಯಾತ್ರೆ' ಒಂದು ಮೋಜಿನ ಶಾಸ್ತ್ರ. ಇದಕ್ಕೆ ವಿಶೇಷ ವಸ್ತುಗಳ ಅಗತ್ಯವಿದೆ. ಕಾಶಿ ಯಾತ್ರೆ ಕಿಟ್‍ನಲ್ಲಿ ಅಲಂಕೃತ ಛತ್ರಿ, ಕೈಬೆತ್ತ, ಬೀಸಣಿಗೆ, ಮತ್ತು ಧೋತರ ಬೇಕಾಗುತ್ತವೆ. ವಧು-ವರರಿಬ್ಬರಿಗೂ ಹಣೆ ಮೇಲೆ ಕಟ್ಟಲು ಸುಂದರವಾದ ಬಾಸಿಂಗಗಳು ಮತ್ತು ವರಮಾಲೆಗೆ ವಿಶೇಷವಾದ ಗುಲಾಬಿ ಅಥವಾ ಮಲ್ಲಿಗೆ ಹೂವಿನ ಹಾರಗಳು ಇರಬೇಕು.

ಮದುವೆ ಮಂಟಪದ ಅಲಂಕಾರವು ವಿವಾಹದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮುಂಚೆ ಉತ್ತರ ಕರ್ನಾಟಕದಲ್ಲಿ 4- 5 ಕಂಬಗಳನ್ನು ನೆಟ್ಟು ಮೇಲೆ ತಾಡಪತ್ರಿ ಹಾಕಿ ಮಾವಿನ ತೊಳಲಿನಿಂದ ಹಂದರವನ್ನು ಅಲಂಕರಿಸಿ, ಹಂದರಗಂಬ ಹಾಲಗಂಬದ ಶಾಸ್ತ್ರ ಮಾಡುತ್ತಿದ್ದರು. ಈಗ ಬಣ್ಣ ಬಣ್ಣದ ಬಟ್ಟೆಗಳಿಂದ ಹಂದರವನ್ನು ಅಲಂಕರಿಸುತ್ತಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮನೆ ಜನರೇ ಸೇರಿ ಸುಂದರವಾಗಿ ಮಂಟಪವನ್ನು ಅಲಂಕರಿಸುತ್ತಾರೆ. ಇದಕ್ಕಾಗಿ ಬಣ್ಣ ಬಣ್ಣದ ಕಾಗದಗಳ ಅವಶ್ಯಕತೆಯಿರುತ್ತದೆ, ಹೂವಿನ ಹಾರಗಳು, ತೋರಣಗಳು, ವೇದಿಕೆ ಅಲಂಕಾರ, ಕುರ್ಚಿ ಕವರ್‌ಗಳು, ಬೆಳಕು ವ್ಯವಸ್ಥೆ ಇವುಗಳಿಗೂ ಮುಂಚಿತ ಖರೀದಿ ಅಥವಾ ಬುಕ್ಕಿಂಗ್ ಅಗತ್ಯ. ಇತ್ತೀಚೆಗೆ ಸರಳ ಹಾಗೂ ಪರಿಸರ ಸ್ನೇಹಿ ಅಲಂಕಾರಗಳು ಹೆಚ್ಚು ಜನಪ್ರಿಯವಾಗುತ್ತಿವೆ.

ಇತ್ತೀಚೆಗೆ ವಧು-ವರರು ಮದುವೆಯ ನಂತರ ತಮ್ಮ ಮನೆಯನ್ನು ಸೆಟ್ ಮಾಡಿಕೊಳ್ಳುವ ರೂಢಿಯಿದೆ. ಅದಕ್ಕಾಗಿ ಮೊದಲೇ ಆಫ್ ಸೀಸನ್‍ನಲ್ಲಿ ಖರೀದಿ ಮಾಡಿ ಇಡಬೇಕು.ಪಾತ್ರೆಗಳು, ಪೂಜೆ ಸಾಮಗ್ರಿಗಳು, ಹಾಸಿಗೆ ಸಾಮಗ್ರಿಗಳು ಮತ್ತು ದಿನನಿತ್ಯದ ಬಳಕೆಯ ವಸ್ತುಗಳು ಕೂಡ ಖರೀದಿಗಳ ಪಟ್ಟಿಯಲ್ಲಿ ಸೇರಿಸಬೇಕು.

ಇನ್ನು ವಧು-ವರರ ಖರೀದಿಗಳು ವಿವಾಹದ ಬಹುಮುಖ್ಯ ಅಂಶ. ಕನ್ನಡ ವಿವಾಹದಲ್ಲಿ ವಧುವಿನ ಅಲಂಕಾರಕ್ಕೆ ಬೇರೆ ರೀತಿಯದ್ದಾಗಿರುತ್ತದೆ. ಕೇವಲ ಬಟ್ಟೆಯಷ್ಟೇ ಅಲ್ಲದೆ ಹಲವು ಸಣ್ಣಪುಟ್ಟ ವಸ್ತುಗಳೂ ಬೇಕು. ಒಂದು ಸಣ್ಣ ಸೇಫ್ಟಿ ಪಿನ್‍ನಿಂದ ಹಿಡಿದು ದೊಡ್ಡ ಕಂಠೀ ಹಾರದವರೆಗೆ ಜಾಗರೂಕತೆಯಿಂದ ಶಾಪಿಂಗ್ ಮಾಡಬೇಕು..

ವಧುವಿನ ಸೀರೆಗಳು ಕರ್ನಾಟಕದಾದ್ಯಂತ ವೈವಿಧ್ಯಮಯವಾಗಿರುತ್ತವೆ. ಆಯಾ ಪ್ರಾಂತ್ಯದ ವೈಶಿಷ್ಟ್ಯದಂತೆ ವಧುವಿಗೆ ಸೀರೆಗಳನ್ನು ಕೊಳ್ಳಬೇಕು. ಬಳೆ ಶಾಸ್ತ್ರಕ್ಕೆ, ಮುಹೂರ್ತಕ್ಕೆ, ರಿಸೆಪ್ಶನ್‍ಗೆ, ಹೊಂದುವಂತೆ ಸೀರೆಗಳನ್ನು ಖರೀದಿಸಲಾಗುತ್ತದೆ. ಇತ್ತೀಚಿನ ಟ್ರೆಂಡ್ ಪ್ರಕಾರ ಲೆಹೆಂಗಾಗಳು ಮತ್ತು ಇಂಡೋ ವೆಸ್ಟರ್ನ್ ಬಟ್ಟೆಗಳನ್ನೂ ಯುವತಿಯರು ಖರೀದಿಸುತ್ತಾರೆ. ಕಾಂಚೀಪುರಂ, ಮೈಸೂರು ಸಿಲ್ಕ್, ಧಾರವಾಡ ಕಸೂತಿ ಸೀರೆಗಳು ಕನ್ನಡ ವಿವಾಹಗಳಲ್ಲಿ ಹೆಚ್ಚು ಜನಪ್ರಿಯ.

ಮದುವೆಯಲ್ಲಿ ಅತಿ ಮುಖ್ಯವಾಗಿರುವುದು ಮತ್ತು ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವುದು ಆಭರಣಗಳು. ಮಂಗಳಸೂತ್ರ, ಮೂಗುತಿ, ಕಿವಿಯೋಲೆ, ಹಾರ, ಬಳೆ, ಕಾಲುಬೆರಳ ಉಂಗುರ, ಕಾಲ್ಗೆಜ್ಜೆ, ಒಡ್ಯಾಣ, ವಂಕಿ ಮತ್ತು ತಲೆ ಬೊಟ್ಟು ಮುಂತಾದವುಗಳು ಅಗತ್ಯ. ಉತ್ತರ ಕರ್ನಾಟಕದಲ್ಲಿ ಚಪಲ ಹಾರ, ಅವಲಕ್ಕಿ ಹಾರ, ಬೋರ್ ಮಾಳ ಇತ್ಯಾದಿಗಳನ್ನು ವಧುವು ಧರಿಸುತ್ತಾಳೆ. ಇತ್ತೀಚೆಗೆ ಬಾಡಿಗೆ ಆಭರಣಗಳೂ ಜನಪ್ರಿಯವಾಗಿವೆ. ಹಸಿರು ಗಾಜಿನ ಬಳೆಗಳು (ಬಳೆ ಶಾಸ್ತ್ರಕ್ಕೆ) ಬೇಕೇ ಬೇಕು.

ಲಿಪ್‌ಸ್ಟಿಕ್, ಕಾಡಿಗೆ, ಫೌಂಡೇಶನ್, ಬಿಂದಿ ಮತ್ತು ಕನ್ನಡಿ-ಬಾಚಣಿಗೆ ಒಳಗೊಂಡ ಸಂಪೂರ್ಣ ಮೇಕ್‍ಅಪ್ ಕಿಟ್ ಖರೀದಿ ಪಟ್ಟಿಯಲ್ಲಿ ಇರುತ್ತದೆ. ಹೂವಿನ ಅಲಂಕಾರಕ್ಕೆ ಅಗತ್ಯವಾದ ಸಾಮಗ್ರಿಗಳು, ಹೆರಳಿನ ಹೂವು ಹಾಗೂ ಪಾದರಕ್ಷೆಗಳು ಸಹ ಖರೀದಿಗಳ ಪಟ್ಟಿಯಲ್ಲಿ ಇರಬೇಕು.

ವಧುವಿನಷ್ಟೇ ವರನ ಖರೀದಿ ಪಟ್ಟಿಯು ಅತಿ ಮುಖ್ಯ. ವರನ ಉಡುಪುಗಳು ಸರಳವಾಗಿರುತ್ತವೆ ಆದರೆ ಇತ್ತೀಚೆಗೆ ವಧುವಿನ ಜೊತೆ ಕೊ-ಆರ್ಡಿನೇಟ್ ಮಾಡಿ ಬಟ್ಟೆಗಳನ್ನು ಖರೀದಿಸಲಾಗುತ್ತಿದೆ. ಶಾಸ್ತ್ರಗಳು ಹಾಗು ಕಾರ್ಯಕ್ರಮಗಳಿಗುಣವಾಗಿ  ಪಂಚೆ, ಶರ್ಟ್, ಅಂಗವಸ್ತ್ರ, ಸೂಟ್ ಅಥವಾ ಶೆರ್ವಾನಿಗಳನ್ನು ಖರೀದಿಸಬೇಕು. ದಕ್ಷಿಣ ಕರ್ನಾಟಕದಲ್ಲಿ ಕನ್ನಡ ವಿವಾಹದ ಪ್ರತೀಕವಾಗಿ ಮೈಸೂರು ಪೇಟ ಮತ್ತು ಬಾಸಿಂಗ ಇರಲೇಬೇಕಿದ್ದರೆ ಉತ್ತರ ಕರ್ನಾಟಕದಲ್ಲಿ ಧೋತರ, ಮಕಮಲ್ ಟೋಪಿ ಕೆಲವರು ಖರೀದಿಸುತ್ತಾರೆ. ಕೈಗಡಿಯಾರ, ಚಪ್ಪಲಿ ಅಥವಾ ಮೊಜರಿ, ಮತ್ತು ಪರ್ಫ್ಯೂಮ್ ಇವು ಬೇಕಾಗುವ ಇನ್ನಿತರ ವಸ್ತುಗಳು.

ಅತಿಥಿಗಳಿಗೆ ನೀಡುವ ರಿಟರ್ನ್ ಗಿಫ್ಟ್‌ಗಳಲ್ಲಿ ಬೆಳ್ಳಿ ನಾಣ್ಯ, ಕೈಮಗ್ಗದ ವಸ್ತುಗಳು, ಧೂಪದ ಪ್ಯಾಕೆಟ್, ಸಸ್ಯದ ಕುಂಡ ಇವೆಲ್ಲ ಜನಪ್ರಿಯ ಆಯ್ಕೆಗಳು. ಅರಿಶಿನ-ಕುಂಕುಮದ ಪ್ಯಾಕೆಟ್, ತೆಂಗಿನಕಾಯಿ, ಮತ್ತು ವೀಳ್ಯದೆಲೆ ಇವು ಬೇಕೇ ಬೇಕು.

ಮದುವೆಗೆ ಕನಿಷ್ಠ 3- 4 ತಿಂಗಳು ಮೊದಲೇ ಈ ಪಟ್ಟಿಯನ್ನು ಸಿದ್ಧಪಡಿಸಿ ಶಾಪಿಂಗ್ ಆರಂಭಿಸುವುದು ಉತ್ತಮ. ಇದರಿಂದ ಕೊನೆಯ ಕ್ಷಣದ ಗಡಿಬಿಡಿಯನ್ನು ತಪ್ಪಿಸಬಹುದು.

Maduve Habba
www.prajavani.net