ಗುರುವಾರ , ನವೆಂಬರ್ 21, 2019
26 °C
ಗಾಂಧೀಜಿಯ ರಾಮರಾಜ್ಯ ಎನ್ನುವುದು ಆದರ್ಶಾತ್ಮಕ ರಾಜ್ಯ ಎಂಬ ರೂಪಕ ಮಾತ್ರ

ದೇವರು ಮತ್ತು ಧಾರ್ಮಿಕತೆ

Published:
Updated:
Prajavani

ಧಾರ್ಮಿಕ ಆಚರಣೆಗಳನ್ನು ಹೆಚ್ಚಿಸಿಕೊಂಡು ಮತ್ತು ಧಾರ್ಮಿಕ ಸಂಕೇತಗಳನ್ನು ಜಾಸ್ತಿ ಧರಿಸಿಕೊಂಡು ನಾವು ದೇವರನ್ನು ನಂಬಿದ್ದೇವೆ ಎಂದುಕೊಳ್ಳುವುದು ಸುಲಭ. ಆದರೆ ನಿಜವಾಗಿ ನಂಬಿರುವುದಿಲ್ಲ. ಸಾಮಾನ್ಯವಾಗಿ ವೈದ್ಯರು ಕೈಬಿಟ್ಟ ಬಳಿಕ ಇನ್ನು ಯಾವ ಆಯ್ಕೆಯೂ ಇಲ್ಲವಾದಾಗ ಮಾತ್ರ ದೇವರನ್ನು ನಂಬುವುದು. ಆದರೆ, ಗಾಂಧೀಜಿ- ಕಸ್ತೂರಬಾ ಅವರು ಬೇರೆ ಆಯ್ಕೆ ಇದ್ದಾಗಲೂ ದೇವರನ್ನು ನಂಬಿದ್ದರು.

ಒಮ್ಮೆ ಡರ್ಬನ್‌ನಲ್ಲಿದ್ದಾಗ ಕಸ್ತೂರಬಾ ವಿಪರೀತ ರಕ್ತಸ್ರಾವಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಗಾಂಧಿ ಜೊಹಾನ್ಸ್‌ಬರ್ಗ್‌ನಲ್ಲಿದ್ದರು. ಡಾಕ್ಟರ್ ಫೋನ್ ಮಾಡಿ, ದನದ ಮಾಂಸದ ಟೀ ಕೊಡದಿದ್ದರೆ ಕಸ್ತೂರಬಾ ಮೃತರಾಗುವ ಸಾಧ್ಯತೆ ಹೆಚ್ಚು ಎಂದು ತಿಳಿಸುತ್ತಾರೆ. ಧಾವಿಸಿ ಬಂದ ಗಾಂಧಿ, ಮಾತಾಡುವ ಸ್ಥಿತಿಯಲ್ಲಿಲ್ಲದ ಕಸ್ತೂರಬಾ ಅವರ ಬಳಿ, ‘ಇಂತಹ ಸಂದರ್ಭದಲ್ಲಿ ಅನೇಕರು ದನದ ಮಾಂಸದ ಟೀ ಕುಡಿದಿದ್ದಾರೆ. ನೀನು ಬಯಸಿದರೆ ಕುಡಿಯಬಹುದು’ ಎನ್ನುತ್ತಾರೆ. ಕಸ್ತೂರಬಾ, ‘ಸತ್ತರೂ ಸರಿಯೇ, ದನ‌ ಮಾತ್ರ ಅಲ್ಲ ಯಾವುದೇ ಮಾಂಸದ ಟೀಯನ್ನೂ ಕುಡಿಯಲಾರೆ’ ಎನ್ನುತ್ತಾರೆ. ಅವರನ್ನು ಡಾಕ್ಟರ್ ಕಳಿಸಿಬಿಡುತ್ತಾರೆ. ಕಸ್ತೂರಬಾ ಅವರನ್ನು ಗಾಂಧಿ ಎತ್ತಿ ತಂದು ರೈಲಿನಲ್ಲಿ ಕೂರಿಸುತ್ತಾರೆ. ಗಾಂಧಿ, ‘ನಾನು ದೇವರನ್ನು ನಂಬಿದ್ದೇನೆ’ ಎನ್ನುತ್ತಾರೆ. ಅಂದರೆ ಬದುಕುಳಿಯಲು ಬೇರೊಂದು ಅವಕಾಶ ಇದೆ ಎಂದಾಗಲೂ ಆ ಆಯ್ಕೆಯನ್ನು ತಿರಸ್ಕರಿಸಿ ದೇವರನ್ನು ನಂಬಲು ಅವರಿಗೆ ಸಾಧ್ಯವಾಗಿತ್ತು.

ಹಾಗೆ ಫೀನಿಕ್ಸ್ ಆಶ್ರಮಕ್ಕೆ ಬಂದ ನಂತರ ಒಬ್ಬ ಸ್ವಾಮೀಜಿ ಬಂದು, ಮನುಸ್ಮೃತಿಯ ಆಧಾರದಲ್ಲಿ ಮಾಂಸವನ್ನು ತೆಗೆದುಕೊಳ್ಳುವುದು ಅಧರ್ಮ ಅಲ್ಲ ಎಂದು ಗಾಂಧಿ ದಂಪತಿಯನ್ನು ಒಲಿಸಲು ಪ್ರಯತ್ನಿಸುತ್ತಾರೆ. ಆದರೆ ಕಸ್ತೂರಬಾ ಅಚಲರಾಗಿ, ‘ನನ್ನ ನಿರ್ಧಾರ ಬದಲಾಗುವುದಿಲ್ಲ’ ಎನ್ನುತ್ತಾರೆ. ಗಾಂಧಿ ‘ಇದು ನನ್ನ ಸ್ವಂತ ನಿರ್ಧಾರ. ಸ್ಮೃತಿ ಒಪ್ಪಿದರೂ ನಾನು ಒಪ್ಪುವುದಿಲ್ಲ’ ಎನ್ನುತ್ತಾರೆ. ಗಾಂಧಿ ತನ್ನ ಆಹಾರ ಧರ್ಮಕ್ಕೆ ನಿಷ್ಠ‌. ಆ ಧರ್ಮದ ಆಚರಣೆಗೆ ದೇವರನ್ನೇ ನಂಬಿದವರು. ಆದರೆ ಗೋಹತ್ಯಾ ನಿಷೇಧವನ್ನು ಪ್ರತಿಪಾದಿಸಿದ ಗಾಂಧಿ, ಕಾನೂನಿನ ಮೂಲಕ ಗೋಹತ್ಯಾ ನಿಷೇಧ ಮಾಡುವುದನ್ನು ವಿರೋಧಿಸಿದರು. ತನ್ನ ಧರ್ಮಕ್ಕೆ ನಿಷ್ಠನಾದವನಿಗೆ ಇನ್ನೊಬ್ಬರ ಧರ್ಮಕ್ಕೆ ಅವರು ನಿಷ್ಠರಾಗುವುದನ್ನು ಗೌರವಿಸಬೇಕೆಂಬ ಅರಿವೂ ಗಾಂಧಿಯದಾಗಿತ್ತು.

ಆತ್ಮಸಾಕ್ಷಿಗೆ ನಿಷ್ಠನಾಗಿರುವ ಒಂದು ಧಾರ್ಮಿಕ ವೈಚಾರಿಕತೆಯ ಪ್ರಜ್ಞೆಗೆ ದೀರ್ಘಕಾಲಿಕ ಪರಂಪರೆ ಇದೆ. ಋಗ್ವೇದದ ನಾಸದೀಯ ಸೂಕ್ತವು ಪ್ರಜಾಪತಿ ಪರಮೇಷ್ಠಿ ಋಷಿ ಹೆಸರಿನಲ್ಲಿದ್ದು, ಲೋಕಸೃಷ್ಟಿಯನ್ನು ವಿವರಿಸುವ ಸೂಕ್ತವು ಆತ್ಮಸಾಕ್ಷಿಗೆ ನಿಷ್ಠವಾಗಿ ಹೇಳುವ ಮಾತು ಹೀಗಿದೆ:

‘ಕೋ ಅದ್ದಾ ವೇದಕ ಇಹ ಪ್ರವೋಚತ್ ಕುತ ಆಜಾತಾ ಕುತ ಇಯಂ ವಿಸೃಷ್ಟಿಃ ಅರ್ವಾಗ್ದೇವಾ ಅಸ್ಯ ವಿಸರ್ಜನೇನಾ ಥಾಕೋವೇದ ಯತ ಅಬಭೂವ’

ಅಂದರೆ, ‘ಯಾರದನು ಅರಿತವರು? ಯಾರದನು ಹೇಳುವರು? ಲೋಕ ಜನಿಸಿದ್ದು ಎಂದು? ದೇವರುಗಳು ಕೂಡ ಲೋಕಸೃಷ್ಟಿಯ ನಂತರ ಜನಿಸಿರಲು ನಿಜವನ್ನು ಹೇಳುವವರಾರು?’- ಈ ನಿಷ್ಠುರ ಪ್ರಾಮಾಣಿಕತೆಯು ಧಾರ್ಮಿಕ ವೈಚಾರಿಕತೆಯ ದೊಡ್ಡ ಪರಂಪರೆಯನ್ನು ರೂಪಿಸಿತು. ಗಾಂಧಿ ಪ್ರತಿನಿಧಿಸುವ ಧಾರ್ಮಿಕತೆ ಈ ಬಗೆಯದು. ದೇವಾಲಯಗಳ ಬಗ್ಗೆ ಗಾಂಧಿಗೆ ಆಸಕ್ತಿ ಇಲ್ಲ. ‘ದೇವಾಲಯಗಳ ವೈಭವ ನನಗೆ ಒಪ್ಪಿಗೆ ಆಗಲಿಲ್ಲ. ದೇವಾಲಯಕ್ಕೆ ಹೋಗಿ ಬರುತ್ತಿದ್ದವರ ಅನಾಚಾರಗಳನ್ನು ಕೇಳಿ ಕೇಳಿ ನನಗೆ ಅದರಲ್ಲಿ ಉದಾಸೀನತೆ ಹುಟ್ಟಿತು’ ಎನ್ನುತ್ತಾರೆ ಅವರು. ಹಾಗಿದ್ದರೆ ಅವರು ಗಾಢವಾಗಿ ನಂಬಿದ್ದ ದೇವರು ಯಾರು? ಅವರದೇ ಮಾತಿನಲ್ಲಿ ಹೇಳುವುದಾದರೆ, ‘...ಈ ಮೂವತ್ತು ವರ್ಷಗಳಿಂದ ತೀವ್ರವಾಗಿ ಬಯಸಿ ಸಾಧಿಸಲು ಯತ್ನಿಸುತ್ತಿರುವುದು- ಆತ್ಮಸಾಕ್ಷಾತ್ಕಾರ, ಈಶ್ವರನ ಪ್ರತ್ಯಕ್ಷ ದರ್ಶನ ಅಥವಾ ಮೋಕ್ಷ. ನನ್ನ ಬಾಳು, ಕ್ರಿಯೆ ಮತ್ತು ಇರವು ಎಲ್ಲವೂ ಈ ಗುರಿಯ ಸಾಧನೆಗಾಗಿಯೇ’. ಇಲ್ಲಿ ಯಾವ ದೇವರು ಎಂದು ಗಾಂಧೀಜಿ ಹೇಳುವುದಿಲ್ಲ.

ಗಾಂಧೀಜಿ, ರಾಮನನ್ನು ಆತ್ಮಸಾಕ್ಷಿಯ ಪ್ರತೀಕವಾಗಿ, ಕೃಷ್ಣನನ್ನು ಜ್ಞಾನದ ಪ್ರತೀಕವಾಗಿ ತೆಗೆದುಕೊಂಡದ್ದೇ ಹೊರತು ದೇವರಾಗಿ ಅಲ್ಲ. ಆಚಾರ್ಯ ರಜನೀಶ್ ‘ಅಹಿಂಸಾವಾದಿಯಾದ ನೀವೇಕೆ ಯುದ್ಧವನ್ನು ಬೋಧಿಸುವ ಭಗವದ್ಗೀತೆಯನ್ನು ತಾಯಿ ಎನ್ನುತ್ತೀರಿ’ ಎಂದರೆ ಗಾಂಧಿ, ‘ಗೀತೆಯು ಹಿಂಸೆ ಅಥವಾ ಅಹಿಂಸೆಯನ್ನು ಬೋಧಿಸುವುದಿಲ್ಲ. ಕರ್ಮದ ಬಗ್ಗೆ ಚರ್ಚಿಸುತ್ತದೆ. ಅಸತ್ಯದ ಪ್ರವೇಶವಾದಾಗ ಹಿಂಸೆಯುಂಟಾಗುತ್ತದೆ. ಇದರಿಂದ ಕೃಷ್ಣನೂ ಪಾರಾಗಲು ಆಗಲಿಲ್ಲ ಎಂದು ವ್ಯಾಸರು ಹೇಳಿದ್ದಾರೆ’ ಎನ್ನುತ್ತಾರೆ. ಗಾಂಧೀಜಿಯ ‘ರಾಮ ರಾಜ್ಯ’ ಎನ್ನುವುದು ‘ಆದರ್ಶಾತ್ಮಕ ರಾಜ್ಯ’ ಎಂಬ ರೂಪಕವೇ ಹೊರತು ದೇವರ ರಾಜ್ಯ ಎಂಬರ್ಥದಲ್ಲಿಲ್ಲ. ಗಾಂಧೀಜಿ ಪ್ರಕಾರ, ಮೋಕ್ಷ ಎನ್ನುವುದು ಧಾರ್ಮಿಕವಾಗಿ ಪರಬ್ರಹ್ಮದ ಪರಿಕಲ್ಪನೆಯೇ ಆಗಿದೆ. ಆದರೆ ಗಾಂಧಿ ‘ಬ್ರಹ್ಮ’ ಎಂಬ ಹೆಸರನ್ನು ಎಲ್ಲೂ ಬಳಸದೆ ‘ಸತ್ಯ’ ಎಂಬ ಪದವನ್ನೇ ಬಳಸುತ್ತಾರೆ. ಉಪನಿಷತ್ತುಗಳು ಪರಬ್ರಹ್ಮದ ಬಗ್ಗೆಯೇ ಚರ್ಚಿಸುವುದು. ಸನಾತನ ಧರ್ಮವು ಬ್ರಹ್ಮ ತತ್ವದ ಮೇಲೆ ನಿಂತಿದೆ. ಈಶಾವಾಸಕ್ಯ ಉಪನಿಷತ್ತಿನಿಂದ ಪ್ರಭಾವಿತರಾಗಿದ್ದ ಗಾಂಧಿ, ದೇವರನ್ನು ಈ ರೀತಿ ಕಂಡುಕೊಂಡದ್ದು ಸಹಜವೇ. ಧರ್ಮಶಾಸ್ತ್ರದ ಅನುಸಾರ ಸ್ವಾಮೀಜಿಯೊಬ್ಬರು ಕೊಟ್ಟ ಸಲಹೆಯನ್ನು ನಿರಾಕರಿಸುವ ಶಕ್ತಿ ಬರುವುದು ಕೂಡ ಬ್ರಹ್ಮ ತತ್ವದಲ್ಲಿ ಭಗವಂತನನ್ನು ಕಂಡುಕೊಂಡವರಿಗೇನೆ. ಮಾನವ ಘನತೆಯನ್ನು ಗೌರವಿಸುವವರು ಧಾರ್ಮಿಕರಾಗಿ ಉಳಿದಾಗ ದೇವಾಲಯಗಳ ಚೌಕಟ್ಟನ್ನು ದಾಟಿ, ಬ್ರಹ್ಮತತ್ವದಲ್ಲಿ ಭಗವಂತನನ್ನು ಕಂಡುಕೊಳ್ಳಬೇಕಾಗುತ್ತದೆ.

ಗಾಂಧೀಜಿಗೆ ಧರ್ಮ ಎಂದರೆ ನೈತಿಕತೆ. ಸತ್ಯವನ್ನು ತನ್ನ ಸಾರ್ವಭೌಮ ತತ್ವ ಎನ್ನುವ ಗಾಂಧಿ ‘ಸತ್ಯಶೋಧಕನು ದೂಳಿನ ಕಣಕ್ಕಿಂತಲೂ ನಮ್ರನಾಗಿರಬೇಕು. ವಿಶ್ವಾಮಿತ್ರ- ವಸಿಷ್ಠರ ಸಂವಾದದಲ್ಲಿ ಇದು ಸ್ಪಷ್ಟವಾಗಿದೆ. ಇಸ್ಲಾಂ ಮತ್ತು ಕ್ರೈಸ್ತ ಮತಗಳೂ ಇದನ್ನೇ ಸಾಕಷ್ಟು ಸಿದ್ಧ ಮಾಡಿ ತೋರಿಸಿವೆ’ ಎಂದು ‘ನನ್ನ ಸತ್ಯಾನ್ವೇಷಣೆ’ಯಲ್ಲಿ ಹೇಳುತ್ತಾರೆ.

ನಮ್ರತೆಯ ಮುಖಾಂತರ ಮಾಡಬೇಕಾದ್ದೇನು ಎಂಬ ಪ್ರಶ್ನೆಯಲ್ಲಿ ಗಾಂಧೀಜಿಯ ಧರ್ಮ ಅರ್ಥವಾಗುತ್ತದೆ. ಅದು ದೇಶದ ಧಾರ್ಮಿಕ ಪರಂಪರೆಯ ಪ್ರಧಾನ ಸೂತ್ರವೂ ಹೌದು. ತೀವ್ರವಾದ ಆತ್ಮಶೋಧನೆಯ ಪ್ರಕ್ರಿಯೆಯೇ ಆ ‘ಧರ್ಮ’. ಆದ್ದರಿಂದಲೇ ಗಾಂಧಿ ಹತ್ಯೆಗೆ ಹತ್ತು ದಿನ ಮೊದಲು ಎಚ್ಚರಿಸಲಿಕ್ಕಾಗಿ ಮದನ್ ಲಾಲ್ ಪಹುವ, ಗಾಂಧಿಗೆ ಎಪ್ಪತ್ತು ಅಡಿ ದೂರದಲ್ಲಿ ಸ್ಫೋಟ ಮಾಡಿದಾಗ, ‘ಆತನನ್ನು ಹಿಂಸಿಸಬೇಡಿ ಎಂದು ನಾನು ಇನ್‌ಸ್ಪೆಕ್ಟರ್‌ ಜನರಲ್ ಆಫ್ ಪೊಲೀಸ್ ಅವರಿಗೆ ಮನವಿ ಮಾಡಿಕೊಳ್ಳುತ್ತೇನೆ. ಆದರೆ ಆತ ನಂಬಿರುವುದು ಹಿಂದುತ್ವ ಅಲ್ಲ. ಆತನಿಗೆ ಧರ್ಮದ ಅರಿವು ಬರಲಿ ಎಂದು ಪ್ರಾರ್ಥಿಸೋಣ’ ಎಂದು ಗಾಂಧಿ ಹೇಳುತ್ತಾರೆ. ಇಲ್ಲಿ ಧರ್ಮ ಅಂದರೆ ಹಿಂದೂ, ಇಸ್ಲಾಂ, ಕ್ರೈಸ್ತ ಎನ್ನುವ ಸಂಸ್ಥೆಗಳಲ್ಲ; ಪ್ರಕ್ರಿಯೆ. ಸಾರ್ವತ್ರಿಕವೂ ಅಲ್ಲ. ವೈಯಕ್ತಿಕವಾದದ್ದು, ಅಂತರಂಗಿಕವಾದದ್ದು. ಆದರೆ ಆತ್ಮಶೋಧನೆಯ ಪರಿಣಾಮ ಮಾತ್ರ ವ್ಯಾಪಕವಾದದ್ದು. ಗಾಂಧೀಜಿ ಏನಲ್ಲ? ಋಷಿ, ಶಿಕ್ಷಣತಜ್ಞ, ಅರ್ಥಶಾಸ್ತ್ರಜ್ಞ, ರಾಜಕಾರಣಿ, ಅಸ್ತ್ರ ಸಂಶೋಧಕ, ದಾರ್ಶನಿಕ, ಭಂಗಿ-ಎಲ್ಲವೂ ಹೌದು.

ಗಾಂಧೀಜಿಯ ಬಗ್ಗೆ 13 ವರ್ಷಗಳ ಅಧ್ಯಯನ ಮತ್ತು ಕ್ಷೇತ್ರ ಕಾರ್ಯವನ್ನು ನಡೆಸಿ ಎಂ.ರಾಜಗೋಪಾಲ್ ಅವರು ಬರೆದ ‘ಗಾಂಧೀಜಿಯ ರೂಪಕಗಳು’ ಕೃತಿಯಲ್ಲಿ ‘ಮಹರ್ಷಿ ವ್ಯಾಸರ ನಂತರ ಭಾರತವನ್ನು ಸಮಗ್ರವಾಗಿ ಗ್ರಹಿಸಿದವರು ಗಾಂಧಿ’ ಎನ್ನುತ್ತಾರೆ. ವ್ಯಾಸರು ಕತೆಯೊಳಗಿನ ಪಾತ್ರವಾಗಿದ್ದೂ ಕತೆಯ ಹೊರಗೆ ನಿಂತೇ ಬರೆಯುತ್ತಾರೆ. ದೇಶಭಕ್ತ ತಿಲಕ್, ಸಾಹಸಿ ಬೋಸ್, ಮುತ್ಸದ್ದಿ ನೆಹರೂ, ದಕ್ಷ ಪಟೇಲ್, ಪ್ರತಿಭಾಶಾಲಿ ಗೋಖಲೆ, ತೀಕ್ಷ್ಣಮತಿ ರಾನಡೆ, ಕೆಚ್ಚೆದೆಯ ಭಗತ್ ಸಿಂಗ್, ಕ್ರಾಂತಿಯ ಆಜಾದ್- ಇವರೆಲ್ಲರೊಂದಿಗಿದ್ದೂ ಗಾಂಧಿ ಬೇರೆಯೇ ಆಗಿ ಉಳಿಯುತ್ತಾರೆ. ಈ ಒಂಟಿತನ, ವಿಶ್ವಸಂಸಾರಿಯಾದ ಋಷಿಯ ಲಕ್ಷಣವೂ ಹೌದು. ಅದೇ ಗಾಂಧಿ.

ಪ್ರತಿಕ್ರಿಯಿಸಿ (+)