ಧರ್ಮದ ನೆಲೆಗಟ್ಟು ಮಹಾವೀರರು ಹಾಕಿಕೊಟ್ಟ ಬುನಾದಿ: ಸಿಇಒ ಕೆ.ಎಸ್.ಲತಾಕುಮಾರಿ

ಭಾನುವಾರ, ಏಪ್ರಿಲ್ 21, 2019
24 °C
ಭಗವಾನ್‌ ಮಹಾವೀರ ಜಯಂತಿ

ಧರ್ಮದ ನೆಲೆಗಟ್ಟು ಮಹಾವೀರರು ಹಾಕಿಕೊಟ್ಟ ಬುನಾದಿ: ಸಿಇಒ ಕೆ.ಎಸ್.ಲತಾಕುಮಾರಿ

Published:
Updated:
Prajavani

ಚಾಮರಾಜನಗರ: ‘ಮಹಾವೀರರು ಜನರಿಗಾಗಿ ದೀಕ್ಷೆ ತೊಟ್ಟು ಧರ್ಮದ ನೆಲೆಗಟ್ಟಿನಲ್ಲಿ ಸಮಾಜಕ್ಕೆ ಬುನಾದಿ ಕಟ್ಟುವ ಕೆಲಸ ಮಾಡಿದರು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಸ್.ಲತಾಕುಮಾರಿ ಅಭಿಪ್ರಾಯಪಟ್ಟರು.

ನಗರದ ಜೆ.ಎಚ್.ಪಟೇಲ್‌ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಭಗವಾನ್‌ ಮಹಾವೀರ ಜಯಂತಿಯಲ್ಲಿ ಅವರು ಮಾತನಾಡಿದರು.

ನಮ್ಮ ರಾಷ್ಟ್ರದಲ್ಲಿ ಎರಡೂವರೆ ಸಾವಿರ ವರ್ಷಗಳ ಹಿಂದೆ ತಾಂಡವವಾಡುತ್ತಿದ್ದ ಬಡತನ, ಅನಕ್ಷರತೆ ಹೋಗಲಾಡಿಸಲು ಸಮಾಜಕ್ಕೆ ದಾರಿದೀಪವಾಗಿದ್ದ ಶರಣ, ಸಂತರ ಸಾಲಿಗೆ ಮಹಾವೀರರು ಸೇರುತ್ತಾರೆ. ಇವರು ಹುಟ್ಟಿನಿಂದಲೂ ಆರ್ಥಿಕವಾಗಿ ಸಂಪನ್ನರು. ಆದರೆ, ಅನಕ್ಷರತೆ, ಬಡತನದಿಂದ ನೊಂದ ಸಮಾಜಕ್ಕಾಗಿ ತಮ್ಮ 30ನೇ ವಯಸ್ಸಿನಲ್ಲಿ ದೀಕ್ಷೆ ಪಡೆದು ಜನರ ಸೇವೆಗೆ ಜೀವನ ಮುಡಿಪಾಗಿಸಿದರು ಎಂದು ಹೇಳಿದರು.

ಇತಿಹಾಸ ಮತ್ತು ಧರ್ಮವನ್ನು ಎಲ್ಲರೂ ಅರಿಯಬೇಕು. ಸತ್ಯ, ಅಹಿಂಸೆ ಎಲ್ಲದಕ್ಕೂ ಬುನಾದಿಯಾಗಿದೆ. ಸುಳ್ಳಿನಿಂದ ನೆಮ್ಮದಿ ಬದುಕು ಅಸಾಧ್ಯ ಎಂದು ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಉಪದೇಶ ನೀಡುತ್ತಿದ್ದರು. ಜ್ಞಾನ, ಅಹಿಂಸೆ, ಸತ್ಯದ ಹಾದಿಯಲ್ಲಿ ಸದೃಢ ಸಮಾಜ ನಿರ್ಮಾಣಕ್ಕೆ ಮಹಾವೀರರು ವಿಶ್ವಕ್ಕೆ ಕೊಟ್ಟ ಸಂದೇಶವಾಗಿದೆ ಎಂದು ಹೇಳಿದರು.

ಅಹಿಂಸೆಯ ಪ್ರತಿಪಾದನೆಯಲ್ಲಿ ಮೆಲುಗೈ: ಅಹಿಂಸೆಯಿಂದಲೇ ಶಾಂತಿ, ಸುಖ, ನೆಮ್ಮದಿ ಸಾಧ್ಯ ಎಂದು ತಿಳಿದಿದ್ದ ಮಹಾವೀರರು ಅಹಿಂಸಾ ಪ್ರತಿಪಾದನೆಯಲ್ಲಿ ಮೆಲುಗೈ ಸಾಧಿಸಿದ್ದರು. ಅಂತಹ ಮಹಾವೀರರು ನಮ್ಮ ದೇಶದಲ್ಲಿ ಹುಟ್ಟಿರುವುದು ಹಾಗೂ ಅವರು ನಡೆದಾಡಿದ ನೆಲದಲ್ಲಿ ನಾವಿದ್ದೇವೆ ಎಂದರೆ ಅದು ನಮ್ಮ ಹೆಮ್ಮೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹನೂರು ಚನ್ನಪ್ಪ ಮಾತನಾಡಿ, ‘ತಮ್ಮ ಆಚಾರ ವಿಚಾರಗಳ ಮೂಲಕ ಜನಸಾಮಾನ್ಯರ ಮನದಲ್ಲಿ ನೆಲೆಯೂರಿದ್ದ ವರ್ಧಮಾನ ಮಹಾವೀರರು ಪ್ರಾಚೀನ ಧರ್ಮಗಳಲ್ಲೊಂದಾದ ಜೈನಧರ್ಮವನ್ನು ವಿಶ್ವವ್ಯಾಪಿಗೊಳಿಸಿದರು’ ಎಂದು ಹೇಳಿದರು.

ಇವರು ರಾಜರ ಮಗನಾಗಿದ್ದರೂ ವೈಭೋಗದಲ್ಲಿ ಆಸಕ್ತಿ ಹೊಂದಿರಲಿಲ್ಲ. ಧರ್ಮದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ತಮ್ಮ 30ನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು ದೇಶ ಸಂಚಾರಕ್ಕೆ ಮುಂದಾದರು. ಇವರ ತಂದೆ ಸಿದ್ಧಾರ್ಥ ಪ್ರಜಾಪ್ರಭುತ್ವದ ತಳಹದಿಯಲ್ಲಿ ಗೆದ್ದು ಬಂದಿದ್ದನ್ನು ಕಂಡು ಸ್ವತಂತ್ರದ ಕಲ್ಪನೆ ಮನಗಂಡಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೃಷ್ಣಪ್ಪ, ವಾರ್ತಾ ಮತ್ತು ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !