ಎರಡನೇ ನೋಟದಲ್ಲೂ ‘ಮಹರ್ಷಿ’ ಪ್ರಿನ್ಸ್‌ಗೆ ಫಿದಾ

7

ಎರಡನೇ ನೋಟದಲ್ಲೂ ‘ಮಹರ್ಷಿ’ ಪ್ರಿನ್ಸ್‌ಗೆ ಫಿದಾ

Published:
Updated:
Prajavani

ಟಾಲಿವುಡ್‌ನ ‘ಪ್ರಿನ್ಸ್‌’ ಮಹೇಶ್‌ಬಾಬು ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಭರ್ಜರಿ ಕೊಡುಗೆಯಾಗಿ ಬಿಡುಗಡೆ ಮಾಡಿರುವ ‘ಮಹರ್ಷಿ’ ಸಿನಿಮಾದ ಎರಡನೇ ಲುಕ್‌ (ಪೋಸ್ಟರ್) ಭಾರಿ ಸುದ್ದಿಯಲ್ಲಿದೆ.

‘ಮಹರ್ಷಿ’ಯ ಫಸ್ಟ್‌ ಲುಕ್‌ನಲ್ಲಿ ಚಾಕೊಲೇಟ್‌ ಹೀರೊನಂತೆ, ಮೋಜಿನ ಹುಡುಗನಂತೆ ಕಾಣಿಸಿಕೊಂಡಿದ್ದ ಪ್ರಿನ್ಸ್‌, ಎರಡನೇ ನೋಟದಲ್ಲಿ ಸಂಪೂರ್ಣ ಗಂಭೀರ ನೋಟದೊಂದಿಗೆ ಗಮನ ಸೆಳೆದಿದ್ದಾರೆ. ಬಾಡಿ ಗಾರ್ಡ್‌ಗಳ ಮಧ್ಯೆ ಬೆಂಕಿಯುಂಡೆಯಂತೆ ನಡೆದುಬರುವ ಮಹೇಶ್‌ಬಾಬು ನೋಟ ಸಿನಿಮಾದ ಬಗ್ಗೆ ಕಾತರ ಹೆಚ್ಚುವಂತೆ ಮಾಡಿದೆ.

ಇಷ್ಟೇ ಅಲ್ಲ, ಮಹೇಶ್‌ಬಾಬು ಈ ಚಿತ್ರದಲ್ಲಿ ವಿಶ್ವದ ಐದನೇ ಅತಿ ದೊಡ್ಡ ಶ್ರೀಮಂತ ವ್ಯಕ್ತಿಯ ಪಾತ್ರ ಮಾಡಿದ್ದಾರೆ ಎಂದು ಹೇಳಲಾಗಿದೆ. ವಂಶಿ ಪೈಡಿಪಳ್ಳಿ ನಿರ್ದೇಶನದ ಈ ಚಿತ್ರದ ಎರಡನೇ ಪೋಸ್ಟರ್‌ ಬಿಡುಗಡೆಯಾಗುತ್ತಲೇ ಸಾವಿರಾರು ಮಂದಿ ಮುಗಿಬಿದ್ದಂತೆ ವೀಕ್ಷಿಸಿದ್ದಾರೆ.

ಹೈದರಾಬಾದ್‌ನ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ಅನೇಕ ದಿನಗಳಿಂದ ನಡೆಯುತ್ತಿದ್ದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ವರ್ಷಾಂತ್ಯ ಮತ್ತು ಹೊಸ ವರ್ಷಾಚರಣೆಯ ನಿಮಿತ್ತ ಚಿತ್ರತಂಡಕ್ಕೆ ವಿಶ್ರಾಂತಿ ನೀಡಲಾಗಿತ್ತು. ಹಾಗಾಗಿ ಎರಡನೆ ಹಂತದ ಚಿತ್ರೀಕರಣ ಮತ್ತೆ ಅಲ್ಲೇ ಆರಂಭಗೊಳ್ಳಲಿದ್ದು, ಮಾರ್ಚ್‌ ಹೊತ್ತಿಗೆ ಪೂರ್ಣಗೊಳ್ಳಲಿದೆ. ಏಪ್ರಿಲ್‌ನಲ್ಲಿ ‘ಮಹರ್ಷಿ’ಯನ್ನು ತೆರೆಗೆ ತರುವ ಲೆಕ್ಕಾಚಾರ ನಿರ್ದೇಶಕರದ್ದು. 

ಮಹೇಶ್‌ಬಾಬು ಜೊತೆಗೆ ನಾಯಕಿಯಾಗಿ ನಟಿಸಿರುವುದು ಪೂಜಾ ಹೆಗ್ಡೆ. ವೈಜಯಂತಿ ಮೂವೀಸ್‌, ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್‌ ಮತ್ತು ಪಿವಿಪಿ ಸಿನೆಮಾಸ್‌ ನಿರ್ಮಾಣದಲ್ಲಿ ಅತ್ಯಂತ ಅದ್ದೂರಿಯಾಗಿ ಚಿತ್ರ ಮೂಡಿಬರಲಿದೆ. ದೇವಿ ಶ್ರೀ ಪ್ರಸಾದ್‌ ಅವರ ಸಂಗೀತವೂ ಇದೆ.

2018ರ ದೊಡ್ಡ ಹಿಟ್‌ ಚಿತ್ರ ‘ಭರತ್‌ ಅನೆ ನೇನು’ ಚಿತ್ರದ ನಂತರ ಸಣ್ಣ ಬ್ರೇಕ್‌ ತೆಗೆದುಕೊಂಡಿದ್ದ ಮಹೇಶ್‌ಬಾಬು ‘ಮಹರ್ಷಿ’ಯನ್ನು ಸರ್ವಾಂಗ ಸುಂದರವಾಗಿ ತೆರೆಮೇಲೆ ತರುವ ಉದ್ದೇಶದಿಂದ ಇತರ ಪ್ರಾಜೆಕ್ಟ್‌ಗಳಿಂದ ದೂರವಿದ್ದರು. ತಮ್ಮ ನೆಚ್ಚಿನ ‘ಭರತ್‌...’ನ ಎರಡನೇ ಆವೃತ್ತಿ ಮಾಡುವುದಾದರೆ ತಮ್ಮ ಸಂಪೂರ್ಣ ಸಹಕಾರವಿದೆ ಎಂದು ಪ್ರಿನ್ಸ್‌ ಹೇಳಿದ್ದಾರೆ. 

ಅದೇನೇ ಇರಲಿ, ಎರಡೂ ಪೋಸ್ಟರ್‌ಗಳ ಮೂಲಕ ಕುತೂಹಲ ಹೆಚ್ಚಿಸಿರುವ ‘ಮಹರ್ಷಿ’ಯಲ್ಲಿ ಪ್ರಿನ್ಸ್‌ ಜೊತೆಗೆ ಅಲ್ಲರಿ ನರೇಶ್‌ ಮತ್ತು ಪೂಜಾ ಹೆಗ್ಡೆ ಅವರ ಆಕರ್ಷಣೆಯೂ ಇದೆ. ಚಿತ್ರ ನಿರೀಕ್ಷೆಯಂತೆ ಸೂಪರ್‌ ಹಿಟ್‌ ಆದೀತೇ? ಕಾದು ನೋಡಬೇಕಷ್ಟೇ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !