ಎನ್‌.ಮಹೇಶ್ ರಾಜೀನಾಮೆ: ಕಾರ್ಯಕರ್ತರಿಗೆ ದಿಗ್ಭ್ರಮೆ

7
ದಿಢೀರ್‌ ನಿರ್ಧಾರದ ಹಿಂದಿನ ಕಾರಣ ತಿಳಿಯದೆ ಮುಖಂಡರ ತೊಳಲಾಟ

ಎನ್‌.ಮಹೇಶ್ ರಾಜೀನಾಮೆ: ಕಾರ್ಯಕರ್ತರಿಗೆ ದಿಗ್ಭ್ರಮೆ

Published:
Updated:
Deccan Herald

ಚಾಮರಾಜನಗರ: ಕೊಳ್ಳೇಗಾಲ ಕ್ಷೇತ್ರದ ಶಾಸಕ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌.ಮಹೇಶ್‌ ಅವರು ದಿಢೀರ್‌ ಆಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಜಿಲ್ಲೆಯ ಬಿಎಸ್‌ಪಿ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ದಿಗ್ಭ್ರಮೆ ಮೂಡಿಸಿದೆ.

ಗುರುವಾರ ಸಂಜೆ ರಾಜೀನಾಮೆ ಸುದ್ದಿ ಹೊರಬೀಳುತ್ತಿದ್ದಂತೆಯೇ ಕಾರ್ಯಕರ್ತರಿಗೆ ದೊಡ್ಡ ಆಘಾತವಾಯಿತು. ಮಹೇಶ್‌ ರಾಜೀನಾಮೆ ನೀಡುತ್ತಾರೆ ಎಂಬ ಸಂಗತಿ ಜಿಲ್ಲೆಯ ಪಕ್ಷದ ಮುಖಂಡರು, ಕೊಳ್ಳೇಗಾಲ ಕ್ಷೇತ್ರದ ಕಾರ್ಯಕರ್ತರಿಗೆ ಗೊತ್ತಿರಲಿಲ್ಲ. ಎನ್‌.ಮಹೇಶ್‌ ಅವರ ಪರಮಾಪ್ತರಾಗಿರುವ ಐದಾರು ಮಂದಿಗೆ ಮಾತ್ರ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ರಾಜೀನಾಮೆಯ ನೀಡುವ ಸುಳಿವು ಸಿಕ್ಕಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾರಣ ನಿಗೂಢ: ‘ಕ್ಷೇತ್ರಕ್ಕೆ ಮತ್ತು ರಾಜ್ಯದಲ್ಲಿ ಪ‍ಕ್ಷ ಸಂಘಟನೆಗೆ ಹೆಚ್ಚು ಗಮನ ನೀಡಬೇಕು ಎಂಬ ಎರಡೇ ಕಾರಣಗಳಿಗಾಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಎನ್‌.ಮಹೇಶ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರೂ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅದನ್ನು ಸಂಪೂರ್ಣವಾಗಿ ನಂಬುತ್ತಿಲ್ಲ. ರಾಜೀನಾಮೆ ಹಿಂದೆ ಏನೋ ಕಾರಣ ಇದೆ ಎಂದೇ ವಿಶ್ಲೇಷಿಸುತ್ತಿದ್ದಾರೆ. ಆದರೆ, ಅದೇನು ಎಂಬುದು ಅವರಿಗೂ ಸ್ಪಷ್ಟವಾಗಿ ತಿಳಿದಿಲ್ಲ.

ಪಕ್ಷದ ಜಿಲ್ಲಾ ಅಧ್ಯಕ್ಷ ಮಾದಪ್ಪ ಹಾಗೂ ಇತರ ಪ್ರಮುಖ ಮುಖಂಡರನ್ನು ದೂರವಾಣಿ ಮೂಲಕ ಸಂಪರ್ಕಿದಾಗ ತಮಗೆ ಇದು ಆಘಾತಕಾರಿ ಸುದ್ದಿ ಎಂದು ಹೇಳಿದರು.

‘ರಾಜೀನಾಮೆ ನೀಡುತ್ತಾರೆ ಎಂಬ ಸುಳಿವು ಕೂಡ ಇರಲಿಲ್ಲ. ಕಾರಣ ಏನು ಎಂಬುದು ಗೊತ್ತಿಲ್ಲ. ಮಹೇಶ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ’ ಎಂದು ಮಾದಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಒಬ್ಬೊಬ್ಬರದು ಒಂದೊಂದು ಕಾರಣ: ರಾಜೀನಾಮೆಗೆ ಕಾರಣ ಏನಿರಬಹುದು ಎಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈಗ ಚರ್ಚೆಯಲ್ಲಿ ತೊಡಗಿದ್ದಾರೆ. ಜಿಲ್ಲೆಯ ರಾಜಕೀಯ ವಲಯದಲ್ಲೂ ಈ ಬಗ್ಗೆ ಗಂಭೀರ ಚರ್ಚೆಯಾಗುತ್ತಿದೆ. 

ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರ ಸೂಚನೆಯಂತೆ ರಾಜೀನಾಮೆ ನೀಡಿರುವ ಸಾಧ್ಯತೆಯೇ ಹೆಚ್ಚು ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ. ಅವರ ನಿರ್ದೇಶನ ಇಲ್ಲದೇ ಹೋದರೆ ಅವರು ರಾಜೀನಾಮೆ ನೀಡಲು ಸಾಧ್ಯವೇ ಇಲ್ಲ ಎಂಬುದು ಬಹುತೇಕ ಮುಖಂಡರ ವಾದ.

‘ಎನ್‌. ಮಹೇಶ್‌ ಅವರು ಮಂಗಳವಾರ ದೆಹಲಿಗೆ ಹೋಗಿದ್ದರು. ಅಲ್ಲಿ ಮಯಾವತಿಯವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಹತ್ವದ ಮಾತುಕತೆ ನಡೆದಿರಬಹುದು. ರಾಜೀನಾಮೆ ನೀಡುವಂತೆ ಅವರು ಸೂಚನೆ ನೀಡಿರುವ ಸಾಧ್ಯತೆ ಇದೆ’ ಎಂದು ಮುಖಂಡರೊಬ್ಬರು ತಿಳಿಸಿದರು.

‘ಆದರೆ, ಜಿಲ್ಲೆಯ ಯಾವ ಮುಖಂಡರ ಜೊತೆಗೂ ಅವರು ಈ ಬಗ್ಗೆ ಚರ್ಚೆ ನಡೆಸಿಲ್ಲ. ಹಠಾತ್‌ ಆಗಿ ರಾಜೀನಾಮೆ ನೀಡಬಾರದಿತ್ತು. ಇದರಿಂದ ಪಕ್ಷದ ಕಾರ್ಯಕರ್ತರ ಆತ್ಮಸ್ಥೈರ್ಯಕ್ಕೆ ಧಕ್ಕೆಯಾಗುತ್ತದೆ’ ಎಂದು ಅವರು ಹೇಳಿದರು.

ಲೋಕಸಭೆಯಲ್ಲಿ ಸ್ಪ‍ರ್ಧೆ?: ಮುಂಬರುವ ಲೋಕಸಭೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕಾಗಿ ಅವರು ರಾಜೀನಾಮೆ ನೀಡಿರುವ ಸಾಧ್ಯತೆ ಇದೆ ಎಂದು ಇನ್ನು ಕೆಲವರು ಹೇಳುತ್ತಾರೆ.

ಜಿಲ್ಲೆಯಲ್ಲಿ ಪಕ್ಷಕ್ಕೆ ಉತ್ತಮ ತಳಹದಿ ಇದೆ. ಬೆಂಬಲಿಗರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಗೆದ್ದಿರುವುದು ಲೋಕಸಭಾ ಚುನಾವಣೆಯಲ್ಲಿ ನೆರವಾಗಬಹುದು. ಜೆಡಿಎಸ್‌ ಬೆಂಬಲ ನೀಡಿದರೆ ಇನ್ನೂ ಹೆಚ್ಚಿನ ಅನುಕೂಲವಾಗಬಹುದು ಎಂಬ ಲೆಕ್ಕಾಚಾರ ಅವರದ್ದು ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.

ಸರ್ಕಾರದ ಕಾರ್ಯವೈಖರಿಗೆ ಬೇಸತ್ತಿದ್ದರೇ?

ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಂದು ನಾಲ್ಕು ತಿಂಗಳು ಕಳೆದರೂ ಏನೂ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ತಮ್ಮನ್ನು ಕಡೆಗಣಿಸಲಾಗುತ್ತಿದೆ. ನಿರ್ಧಾರಗಳಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿಲ್ಲ ಎಂಬ ಭಾವನೆ ಎನ್‌.ಮಹೇಶ್‌ ಅವರಿಗಿತ್ತು ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹಾಗೂ ಅವರ ನಡುವೆ ಹೇಳಿಕೆ ಪ್ರತಿ ಹೇಳಿಕೆಗಳೂ ನಡೆದಿದ್ದವು. ಮೈತ್ರಿಯಲ್ಲಿದ್ದುಕೊಂಡೇ ಮಹೇಶ್‌ ಅವರು ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದ್ದಕ್ಕೆ, ಕೈ ಪಕ್ಷದ ಸಚಿವರು ಮತ್ತು ಮುಖಂಡರಿಂದಲೂ ವಿರೋಧ ವ್ಯಕ್ತವಾಗಿತ್ತು.

‘ಮಂಗಳವಾರ ಮಾಯಾವತಿ ಅವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಈ ಎಲ್ಲ ವಿಚಾರಗಳನ್ನು ಮಹೇಶ್‌ ಅವರು ಪ್ರಸ್ತಾಪಿಸಿದ್ದರು. ಒಂದು ವೇಳೆ, ‘ನಿಮಗೆ ನೋವಾ‌ಗಿದ್ದರೆ ರಾಜೀನಾಮೆ ನೀಡಿ’ ಎಂದು ಮಾಯಾವತಿ ಸೂಚಿಸಿದ್ದರು. ಹೀಗಾಗಿ ಅವರು ರಾಜೀನಾಮೆ ನೀಡಿದ್ದಾರೆ’ ಎಂದೂ ಪಕ್ಷದ ಕೆಲವು ಮುಖಂಡರು ಹೇಳುತ್ತಿದ್ದಾರೆ.

ಸಚಿವ ಎನ್.‌ಮಹೇಶ್ ಸಂಪುಟಕ್ಕೆ ರಾಜೀನಾಮೆ

2 ತಿಂಗಳು ಗದಗ ಉಸ್ತುವಾರಿಯಾಗಿದ್ದ ಮಹೇಶ್‌ 3 ಬಾರಿ ಭೇಟಿ, 10ಕ್ಕೂ ಹೆಚ್ಚು ಸಭೆ..!

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !