ಮಹಾಲಯ ಅಮಾವಾಸ್ಯೆ: ಮಾದಪ್ಪನಿಗೆ ಅನ್ನದ ಬುತ್ತಿ ಅರ್ಪಿಸಿದ ಭಕ್ತರು

7
ಎಣ್ಣೆಮಜ್ಜನ ಸೇವೆ; ಹರಿದು ಬಂದ ಭಕ್ತರು

ಮಹಾಲಯ ಅಮಾವಾಸ್ಯೆ: ಮಾದಪ್ಪನಿಗೆ ಅನ್ನದ ಬುತ್ತಿ ಅರ್ಪಿಸಿದ ಭಕ್ತರು

Published:
Updated:
Deccan Herald

ಮಹದೇಶ್ವರ ಬೆಟ್ಟ: ಮಹಾಲಯ ಅಮಾವಾಸ್ಯೆ ಪ್ರಯುಕ್ತ ಇಲ್ಲಿನ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ಎಣ್ಣೆಮಜ್ಜನ ಸೇವೆ ನೆರವೇರಿತು.

ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರು, ಅನ್ನ, ಉರಿಗಡಲೆ, ಪಂಚಾಮೃತದ ಪ್ರಸಾದವನ್ನು ಸ್ವಾಮಿಗೆ ಅರ್ಪಿಸಿ ಹರಕೆ ತೀರಿಸಿದರು.

ಮೈಸೂರಿನ ಸುತ್ತೂರು ಗ್ರಾಮದಿಂದ ಸುಮಾರು 300 ಮಂದಿ ದೇವಸ್ಥಾನಕ್ಕೆ ಬಂದಿದ್ದರು. ಅವರು ತಂದಿದ್ದ ಪುಳಿಯೊಗರೆ, ಮೊಸರನ್ನ, ಇನ್ನಿತರೆ ತಿನಿಸುಗಳ ಪ್ರಸಾದವನ್ನು ಒಂದೆಡೆ ಇಟ್ಟು ಪೂಜೆ ಸಲ್ಲಿಸಿದರು. ಮಾದಪ್ಪನಿಗೆ ಮೀಸಲಿಟ್ಟು ಸಾಮೂಹಿಕವಾಗಿ ಪ್ರಸಾದ ಸ್ವೀಕರಿಸಿದರು.

‘ಎಣ್ಣೆಮಜ್ಜನದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುವ ಗ್ರಾಮದ ಎಲ್ಲರೂ ಬುತ್ತಿಯನ್ನು ತರುವುದು ಕಡ್ಡಾಯ. ಹರಕೆ ಹೊರುವ ಪ್ರತಿ ಕುಟುಂಬವು ಊರಿನಿಂದ ಮಾದಪ್ಪನ ಸನ್ನಿಧಿವರೆಗೆ ಬರುವವರೆಗೂ ಉಪವಾಸ ಇರಬೇಕು. ಬುತ್ತಿಗೆ ಪೂಜೆ ಸಲ್ಲಿಸಿದ ಬಳಿಕ ಸಾಮೂಹಿಕವಾಗಿ ಪ್ರಸಾದ ಸೇವಿಸುತ್ತೇವೆ. ಇದು, ಅನೇಕ ದಶಕಗಳಿಂದ ನಡೆದುಕೊಂಡು ಬಂದಿದೆ’ ಎಂದು ಸುತ್ತೂರಿನ ಗ್ರಾಮಸ್ಥರು ಹೇಳಿದರು.

ಹನೂರು ತಾಲ್ಲೂಕಿನ ಬೆಳ್ತೂರಿನಿಂದ ಬಂದಿದ್ದ ಕೆಂಪರಾಜು ಮಾತನಾಡಿ, ‘ಪ್ರತಿ ವರ್ಷ ಮಹಾಲಯ ಅಮಾವಾಸ್ಯೆಯ ಎಣ್ಣೆಮಜ್ಜನದ ದಿನದಂದು ಕುಟುಂಬ ಸಮೇತರಾಗಿ ಬರುತ್ತೇವೆ. ಊರಿನಿಂದ ತಂದ ಉರಿಗಡಲೆಯನ್ನು ಮಾದಪ್ಪನ ಬಳಿ ಇಟ್ಟು ಪೂಜೆ ಸಲ್ಲಿಸುತ್ತೇವೆ. ಬಳಿಕ, ಎಲ್ಲರಿಗೂ ಹಂಚುತ್ತೇವೆ. ಇದರಿಂದ ನಮ್ಮ ಕಷ್ಟಗಳು ಪರಿಹಾರ ಆಗುತ್ತವೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !