ಆಳಾಗಿದ್ದ ಮಾಳಿಂಗರಾಯ ಮಾಲೀಕನಾದ..!

ಮಂಗಳವಾರ, ಏಪ್ರಿಲ್ 23, 2019
31 °C
ಬಿಎ, ಬಿ.ಇಡಿ ಪದವೀಧರನ ಸ್ವಾವಲಂಬಿ ಉದ್ಯಮದ ಯಶೋಗಾಥೆ

ಆಳಾಗಿದ್ದ ಮಾಳಿಂಗರಾಯ ಮಾಲೀಕನಾದ..!

Published:
Updated:
Prajavani

ಸಿಂದಗಿ: ಬಿಎ, ಬಿ.ಇಡಿ ಪದವೀಧರ. ಉದ್ಯೋಗ ಅರಸಿ ಸೋತು ಸುಣ್ಣವಾದ ಬಳಿಕ, ಸ್ವಾವಲಂಬಿ ಉದ್ಯಮದತ್ತ ಚಿತ್ತ ಹರಿಸಿದ ಪೋರನೀತ. ಇದೀಗ ತಾನೇ ಏಳೆಂಟು ಜನರಿಗೆ ಉದ್ಯೋಗದಾತ...

ಸಿಂದಗಿ ತಾಲ್ಲೂಕಿನ ಕಕ್ಕಳಮೇಲಿ ಗ್ರಾಮದ ಮಾಳಿಂಗರಾಯ ಗುರಪ್ಪ ಪೂಜಾರಿ ಯಶೋಗಾಥೆಯಿದು.

2012ರಲ್ಲಿ ಬಿ.ಇಡಿ ಪದವಿ ಪಡೆದ ಬಳಿಕ ಸರ್ಕಾರಿ ನೌಕರಿ ಅರಸಿ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯಲು ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿಗೆ ಪ್ರವೇಶ ಪಡೆದರು ಮಾಳಿಂಗರಾಯ. ಇಲ್ಲಿ ಗ್ರಾಮಾಭಿವೃದ್ಧಿ ಸಂಸ್ಥೆಯ ವ್ಯಕ್ತಿಯೊಬ್ಬರ ಪರಿಚಯವಾಯ್ತು.

ಆರಂಭದಲ್ಲೇ ಅವರು ಟೇಲರಿಂಗ್ ಉದ್ಯಮದ ತರಬೇತಿ ಪಡೆಯಲಿಕ್ಕಾಗಿ, ಮುದ್ದೇಬಿಹಾಳದ ತೇಜು ಟೇಲರಿಂಗ್ ತರಬೇತಿ ಕೇಂದ್ರಕ್ಕೆ ಕಳಿಸಿದ್ದಾರೆ. ಒಂದು ವರ್ಷ ಕಾಲ, ಕೇಂದ್ರದ ಮಾಲೀಕನ ಮನೆಯಲ್ಲಿದ್ದುಕೊಂಡೇ ಮಾಳಿಂಗರಾಯ ತರಬೇತಿ ಪಡೆದರು.

ಈ ಸಮಯ ಮಾಳಿಂಗರಾಯ ತಯಾರಿಸಿದ 50 ಟೇಲರಿಂಗ್ ಯಂತ್ರಗಳನ್ನು ರುಡ್‌ಸೆಟ್‌ ಸಂಸ್ಥೆ ಖರೀದಿಸಿ ಪ್ರೋತ್ಸಾಹಿಸಿತು. ಇದರಿಂದ ದೊರೆತ ₹ 50,000 ಹಾಗೂ ಸಿಂದಗಿಯ ಫೈನಾನ್ಸ್‌ ಒಂದರಲ್ಲಿ ₹ 50,000 ಸಾಲ ಪಡೆದು, ಮುದ್ದೇಬಿಹಾಳದಲ್ಲಿ ತರಬೇತಿ ಪಡೆದ ಕೇಂದ್ರದ ಮಾಲೀಕನ ಮಗ ತೇಜು ಹೆಸರಿನಲ್ಲಿ ಸಿಂದಗಿ ಪಟ್ಟಣದಲ್ಲಿ ಟೇಲರಿಂಗ್ ಫಾರ್ಮ್‌ ಆರಂಭಿಸಿದವರು ಪೂಜಾರಿ.

ಟೇಲರಿಂಗ್ ಯಂತ್ರಗಳ ರಿಪೇರಿ, ಹೊಸ ಯಂತ್ರಗಳ ಮಾರಾಟ ಇದೀಗ ಬಿರುಸಿನಿಂದ ನಡೆದಿದೆ. ಇದರಿಂದ ಮುದ್ದೇಬಿಹಾಳ ಹಾಗೂ ಕಲಬುರ್ಗಿ ಜಿಲ್ಲೆಯ ಯಡ್ರಾಮಿಗಳಲ್ಲಿ ಶಾಖೆಗಳನ್ನು ಆರಂಭಿಸಿ, ಎಂಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ ಮಾಳಿಂಗರಾಯ.

'ನನ್ನದು ಬಡ ಕುಟುಂಬ. ತಂದೆ -ತಾಯಿ ಕೂಲಿ ಮಾಡುತ್ತಾರೆ. ಅವರು ಕೂಲಿ ಮಾಡುವುದು ನನ್ನ ಜೀವನದ ಮೇಲೆ ಅಗಾಧ ಪರಿಣಾಮ ಬೀರಿತು. ನಾನು ಈ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯ್ತು. ಆರಂಭದಲ್ಲಿ ಸೈಕಲ್ ಮೇಲೆ ದಿನ ಪತ್ರಿಕೆಯನ್ನು ಮನೆ, ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದೆ. ಇದೀಗ ಟೇಲರಿಂಗ್ ಉದ್ಯಮದಲ್ಲಿ ₹ 20 ಲಕ್ಷ ವಹಿವಾಟು ನಡೆದಿದೆ. ಆರು ವರ್ಷಗಳಿಂದ ಈ ಉದ್ಯಮ ನನಗೆ ಆಸರೆಯಾಗಿ, ಬದುಕಿನ ಚಿತ್ರಣವನ್ನೇ ಬದಲಿಸಿದೆ.’

‘ವರ್ಷಕ್ಕೆ ಎಲ್ಲಾ ಖರ್ಚು ಹೋಗಿ ₹ 6 ಲಕ್ಷ ಆದಾಯ ಉಳಿಯುತ್ತದೆ. ತೆರಿಗೆ ಕಟ್ಟುತ್ತೇನೆ. ಬಾಡಿಗೆ ಅಂಗಡಿ ಬಿಟ್ಟು, ಸ್ವಂತ ಅಂಗಡಿಗಾಗಿ ಮಾರ್ಕೆಟ್ ಪ್ರದೇಶದಲ್ಲಿ ಸೈಟ್ ಖರೀದಿಸಿದ್ದೇನೆ. ನನಗೆ ಬದುಕಿಗೆ ದಾರಿ ತೋರಿಸಿ ಕೊಟ್ಟ ಮುದ್ದೇಬಿಹಾಳ ತರಬೇತಿ ಕೇಂದ್ರದ ಮಾಲೀಕನ ಮಗ ತೇಜು ಹಾಗೂ ನನ್ನ ಮಗ ಎವರೆಸ್ಟ್ ಈ ಇಬ್ಬರ ಹೆಸರುಳ್ಳ ಟೇಲರಿಂಗ್ ಹೊಸ ಯಂತ್ರಗಳನ್ನು ಪಂಜಾಬ್‌, ಲೂಧಿಯಾನ, ದೆಹಲಿಯಲ್ಲಿ ಸಿದ್ಧಪಡಿಸಿ, ಇಲ್ಲಿಗೆ ತರಿಸಿಕೊಂಡು ಮಾರಾಟ ಮಾಡುತ್ತೇನೆ’ ಎಂದು ಮಾಳಿಂಗರಾಯ ತಮ್ಮ ಟೇಲರಿಂಗ್‌ ಉದ್ಯಮದ ಯಶೋಗಾಥೆಯನ್ನು ‘ಪ್ರಜಾವಾಣಿ’ ಬಳಿ ಬಿಚ್ಚಿಟ್ಟರು.

‘ಇಂದಿಗೂ ನನ್ನ ಮೂಲ ಕಸುಬು ಟೇಲರಿಂಗ್ ಮೆಷಿನ್ ರಿಪೇರಿ ಬಿಟ್ಟಿಲ್ಲ. ಅಂಗಡಿಗೆ ರಾಶಿ, ರಾಶಿ ಯಂತ್ರಗಳು ರಿಪೇರಿಗೆಂದು ಬರುತ್ತಿವೆ. ದಿನಕ್ಕೆ ಕನಿಷ್ಠ ಅಂದ್ರೂ, ₹ 2000 ಆದಾಯ ಪಡೆಯುತ್ತೇನೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರದ ಪಿಎಂಇಜಿಪಿ ಯೋಜನೆಯ ಸಾಲಕ್ಕೆ ಅರ್ಜಿ ಹಾಕಿದ್ದೇನೆ. ಸ್ವಂತ ಒಂದು ಎಕರೆ ಪ್ರದೇಶದಲ್ಲಿ ಬೃಹತ್ ಟೇಲರಿಂಗ್ ಯಂತ್ರ ತಯಾರಿಕೆ ಕೈಗಾರಿಕೆ ಆರಂಭಿಸುವ ಕನಸು ಹೊಂದಿದ್ದೇನೆ’ ಎನ್ನುತ್ತಾರೆ ಮಾಳಿಂಗರಾಯ ಪೂಜಾರಿ.

ಸಂಪರ್ಕಸಂಖ್ಯೆ-9591933939.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !