ತಾಯಿ ಬೈದಿದ್ದಕ್ಕೆ ಮೆಟ್ರೊ ಮುಂದೆ ಹಾರಿದ!

7
ನ್ಯಾಷನಲ್‌ ಕಾಲೇಜು ನಿಲ್ದಾಣದಲ್ಲಿ ಘಟನೆ l ವಿದ್ಯುತ್ ಸ್ಥಗಿತದಿಂದ ಬದುಕುಳಿದ 18ರ ಹುಡುಗ

ತಾಯಿ ಬೈದಿದ್ದಕ್ಕೆ ಮೆಟ್ರೊ ಮುಂದೆ ಹಾರಿದ!

Published:
Updated:
Prajavani

ಬೆಂಗಳೂರು: ಕಲಿಕೆ ಮುಂದುವರಿಸುವಂತೆ ಬುದ್ಧಿಮಾತು ಹೇಳಿದ ತಾಯಿ ಮೇಲೆ ಮುನಿಸಿಕೊಂಡು ಮನೆಯಿಂದ ಹೊರಬಂದ ವೇಣುಗೋಪಾಲ್ (18) ಎಂಬಾತ, ನ್ಯಾಷನಲ್ ಕಾಲೇಜು ಮೆಟ್ರೊ ನಿಲ್ದಾಣದಲ್ಲಿ ಹಳಿ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಲಾಲ್‌ಬಾಗ್ ಕಡೆಯಿಂದ ಮೆಜೆಸ್ಟಿಕ್‌ಗೆ ಹೊರಟಿದ್ದ ರೈಲು 11.20ರ ಸುಮಾರಿಗೆ ನ್ಯಾಷನಲ್ ಕಾಲೇಜು ನಿಲ್ದಾಣಕ್ಕೆ ಬಂದಿದ್ದು, ವೇಣುಗೋಪಾಲ್ ಅದರ ಮುಂದೆಯೇ ಹಾರಿದ್ದಾನೆ. ಹಳಿಗಳ ನಡುವಿನ ಜಾಗದಲ್ಲಿ ಆತ ಸಿಲುಕಿಕೊಂಡಿದ್ದರಿಂದ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ. ತಲೆಗೆ ಪೆಟ್ಟು ಬಿದ್ದಿದ್ದು, ಸದ್ಯ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ‘ಭಾನುವಾರದೊಳಗೆ ಆತ ಸಂಪೂರ್ಣ ಚೇತರಿಸಿಕೊಳ್ಳಲಿದ್ದಾನೆ’ ಎಂದು ವೈದ್ಯರು ಹೇಳಿದ್ದಾರೆ. 

ಪಾಸ್ ಆಗಲಿಲ್ಲ: ಬಸವನಗುಡಿಯ ಗೋಪಾಲಕೃಷ್ಣ ಹಾಗೂ ವಸಂತಾ ದಂಪತಿಯ ಮೂವರು ಮಕ್ಕಳಲ್ಲಿ ವೇಣುಗೋ
ಪಾಲ್ ಹಿರಿಯ ಪುತ್ರ. 2016ರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣನಾದ ಆತ, ಆನಂತರ ಎರಡು ಬಾರಿ ಪರೀಕ್ಷೆ ಬರೆದರೂ ಪ್ರಯೋಜನವಾಗಲಿಲ್ಲ. ಇದರಿಂದಾಗಿ ಆತ ಇನ್ನು ಮುಂದೆ ಪರೀಕ್ಷೆ ಬರೆಯದಿರಲು ನಿರ್ಧರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ನೆಟ್ಟಕಲ್ಲಪ್ಪ ವೃತ್ತದಲ್ಲಿ ದಂಪತಿ ಸ್ವಂತ ಟೈಲರ್ ಅಂಗಡಿ ಹೊಂದಿದ್ದು, ವೇಣುಗೋಪಾಲ್ ಅಲ್ಲೇ ಪೋಷಕರಿಗೆ ಸಹಾಯ ಮಾಡಿಕೊಂಡಿದ್ದ. ಎಷ್ಟೇ ಕಷ್ಟಪಟ್ಟರೂ ಎಸ್ಸೆಸ್ಸೆಲ್ಸಿ ಮುಗಿಸಲು ಆಗಲಿಲ್ಲ ಎಂದು ಸ್ನೇಹಿತರ ಬಳಿ ನೋವು ನೋಡಿಕೊಂಡಿದ್ದ. ಅದೇ ವಿಚಾರವಾಗಿ ಖಿನ್ನತೆಗೂ ಒಳಗಾಗಿದ್ದ. ಇದೇ ವಿಷಯ ಪ್ರಸ್ತಾಪಿಸಿ ತಾಯಿ ಬೈದಿದ್ದರಿಂದ ಬೇಸರಗೊಂಡು ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಡವಾಗಿ ಎದ್ದಿದ್ದಕ್ಕೆ ಬೈದೆ: ‘ಮಗ ಗುರುವಾರ ರಾತ್ರಿ ಎಲ್ಲರೊಂದಿಗೂ ಖುಷಿ ಖುಷಿಯಾಗಿ ಮಾತನಾಡಿ ಮಲಗಿದ್ದ. ಬೆಳಿಗ್ಗೆ 9 ಗಂಟೆಯಾದರೂ ಎದ್ದೇಳದಿ
ದ್ದಾಗ, ಕೆಲಸ–ಕಾರ್ಯವಿಲ್ಲದೆ ಸೋಮಾರಿ ಆಗಿದ್ದೀಯಾ ಎಂದು ಬೈದಿದ್ದೆ. ಈ ಸಲ ಪರೀಕ್ಷೆ ಕಟ್ಟಿ ಚೆನ್ನಾಗಿ ಓದಿಕೊಳ್ಳುವಂತೆ ಬುದ್ಧಿ ಮಾತನ್ನೂ ಹೇಳಿದ್ದೆ. ಇದರಿಂದ ಸಿಟ್ಟಾಗಿ ನನ್ನೊಂದಿಗೆ ಜಗಳಕ್ಕೇ ಬಂದ. ಅದೇ ಕೋಪದಲ್ಲಿ ಮುಖವನ್ನೂ ತೊಳೆಯದೆ 9.30ರ ಸುಮಾರಿಗೆ ಮನೆಯಿಂದ ಹೊರ ಹೋಗಿದ್ದ’ ಎಂದು ವಸಂತಾ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದರು.

‘ಹೊಟ್ಟೆ ಹಸಿದಾಗ ವಾಪಸ್ ಬರುತ್ತಾನೆ ಎಂದು ನಾನೂ ಸುಮ್ಮನಾಗಿದ್ದೆ. ಆದರೆ, 11.30ರ ಸುಮಾರಿಗೆ ಪರಿಚಿತರೊಬ್ಬರು ಕರೆ ಮಾಡಿ ಮಗ ಆತ್ಮಹತ್ಯೆಗೆ ಯತ್ನಿಸಿರುವ ವಿಷಯ ತಿಳಿಸಿದರು. ಕೂಡಲೇ ಪತಿಯನ್ನು ಕರೆದುಕೊಂಡು ಮೆಟ್ರೊ ನಿಲ್ದಾಣದ ಬಳಿ ಬಂದೆ. ಅಷ್ಟರಲ್ಲಾಗಲೇ ನಿಮ್ಹಾನ್ಸ್‌ಗೆ ಕರೆದೊಯ್ದಿದ್ದರು. ಅದೃಷ್ಟವಶಾತ್ ಜೀವಕ್ಕೆ ಅಪಾಯವಾಗಿಲ್ಲ. ಅವನು ಓದುವುದೂ ಬೇಡ, ಕೆಲಸಕ್ಕೆ ಹೋಗುವುದೂ ಬೇಡ. ಈ ವಿಚಾರವಾಗಿ ಮತ್ತೆಂದೂ ಬೈಯ್ಯುವು
ದಿಲ್ಲ’ ಎಂದು ವಸಂತಾ ದುಃಖತಪ್ತರಾದರು.

‘ಆ ಕ್ಷಣಕ್ಕೆ ಏನಾಯಿತೋ ಗೊತ್ತಿಲ್ಲ’

‘ನಾನು ಆತ್ಮಹತ್ಯೆಗೆ ಯತ್ನಿಸಲಿಲ್ಲ. ರೈಲು ಹತ್ತಲು ಓಡಿಬಂದೆ. ಆ ಕ್ಷಣದಲ್ಲಿ ಏನಾಯಿತೋ ಗೊತ್ತಿಲ್ಲ...

– ಇದು ವೇಣುಗೋಪಾಲ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ನೀಡಿದ ಹೇಳಿಕೆ. ನಿಮ್ಹಾನ್ಸ್‌ಗೆ ದಾಖಲಾದ ಅವನನ್ನು ಮುಖ್ಯಮಂತ್ರಿ ಭೇಟಿಯಾಗಿ ಮಾತನಾಡಿಸಿದರು.

‘ವಿಡಿಯೊದಲ್ಲಿ ನೀನು ರೈಲಿನಡಿ ಬೀಳಲು ಓಡಿಬಂದಂತೆ ಕಾಣುತ್ತದೆಯಲ್ಲಾ’ ಎಂದು ಹೇಳಿದಾಗ ಅವನು ಮಾತನಾಡಲಿಲ್ಲ. 

ಬುದ್ಧಿ ಹೇಳಿದ ಮುಖ್ಯಮಂತ್ರಿ, ‘ಹೆತ್ತವರು ಹೇಳಿದ ಮಾತಿಗೆ ನೊಂದುಕೊಂಡು ಹೀಗೆ ಮಾಡುವುದು ಸರಿಯಲ್ಲ. ಬುದ್ಧಿಮಾತುಗಳ ಹಿಂದಿನ ಕಾಳಜಿಯನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪರೀಕ್ಷೆಯ ಸಮಯದಲ್ಲಿ ಮಕ್ಕಳು ಯಾವುದೇ ಒತ್ತಡವಿಲ್ಲದೆ ಅಭ್ಯಾಸ ಮಾಡುವ ವಾತಾವರಣವನ್ನು ಶಿಕ್ಷಕರು ಹಾಗೂ ಹೆತ್ತವರು ನಿರ್ಮಿಸಬೇಕು. ಮಕ್ಕಳು ತಮ್ಮ ಶಿಕ್ಷಕರು, ಪೋಷಕರ ಬುದ್ಧಿಮಾತುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಓದಿನತ್ತ ಗಮನಹರಿಸಬೇಕು ಎಂದು ಸಲಹೆ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ‘ಘಟನೆಯಲ್ಲಿ ಮೆಟ್ರೊ ಭದ್ರತಾ ಸಿಬ್ಬಂದಿಯ ಬೇಜವಾಬ್ದಾರಿತನ ಇಲ್ಲ. ಯುವಕನೇ ಹಳಿ ಮೇಲೆ ಹಾರಲು ಮುಂದಾಗಿದ್ದಾನೆ. ಮುಂಜಾಗ್ರತಾ ಕ್ರಮ ಕೈಗೊಂಡದ್ದರಿಂದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ’ ಎಂದು ಹೇಳಿದರು. 

ರೈಲಿನಿಂದಲೇ ಉಳಿಯಿತು ಜೀವ

ವೇಣುಗೋಪಾಲ್ ರೈಲಿಗೆ ಸಿಲುಕಿ ಸಾಯಬೇಕು ಎಂದುಕೊಂಡಿದ್ದ. ಆದರೆ, ಅದೇ ರೈಲು ಆತನ ಜೀವ ಉಳಿಸಿತು!

ಮೆಟ್ರೊ ಹಳಿಗಳಲ್ಲಿ ಯಾವಾಗಲೂ 750 ವೋಲ್ಟ್ಸ್‌ ವಿದ್ಯುತ್ ಹರಿಯುತ್ತಿರುತ್ತದೆ. ರೈಲು ನಿಂತಾಗ ಮಾತ್ರ ಹಳಿಗಳ ಮೇಲೆ ಭಾರ ಬಿದ್ದು ಆ ಜಾಗದಲ್ಲಿ ವಿದ್ಯುತ್ ಹರಿಯುವಿಕೆ ನಿಲ್ಲುತ್ತದೆ.

ರೈಲು ವೇಗವಾಗಿ ಬರುತ್ತಿರುವುದನ್ನು ನೋಡಿದ ಕೂಡಲೇ ವೇಣುಗೋಪಾಲ್ ಒಮ್ಮೆಲೆ ಹಾರಿ ಹಳಿಗಳ ನಡುವಿನ ಜಾಗದಲ್ಲಿ ಸಿಲುಕಿಕೊಂಡಿದ್ದ. ಒಂದು ಬೋಗಿ ಆತ ಸಿಲುಕಿಕೊಂಡಿದ್ದ ಹಳಿಗಳ ಮೇಲೆಯೇ ಹೋಗಿದ್ದರಿಂದ ತಕ್ಷಣ ವಿದ್ಯುತ್ ಹರಿಯುವಿಕೆ ಸ್ಥಗಿತವಾಗಿ ಬದುಕುಳಿದಿದ್ದಾನೆ. ಕೂಡಲೇ ರಕ್ಷಣೆಗೆ ಧಾವಿಸಿದ ನಿಲ್ದಾಣದ ಭದ್ರತಾ ಸಿಬ್ಬಂದಿ, ಆತನನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಈ ಹಿಂದೆ ಆತ್ಮಹತ್ಯೆ ಪ್ರಕರಣ

2012ರ ಮಾರ್ಚ್‌ 4ರಂದು ಕೂಡಾ ಇಂಥದ್ದೇ ಘಟನೆ ನಡೆದಿತ್ತು. ಎಂ.ಜಿ.ರಸ್ತೆ ನಿಲ್ದಾಣದಲ್ಲಿ ಯುವಕನೊಬ್ಬ ಹಳಿ ಮೇಲೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಸೇಂಟ್‌ ಜೋಸೆಫ್‌ ಶಾಲೆಯ ವಿದ್ಯಾರ್ಥಿ ವಿಷ್ಣುಚರಣ್‌ ಮೃತಪಟ್ಟವನು. ಅಂದು ರಾತ್ರಿ 8.30ಕ್ಕೆ ಘಟನೆ ನಡೆದಿತ್ತು.

ಬರಹ ಇಷ್ಟವಾಯಿತೆ?

 • 9

  Happy
 • 3

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !