ರಮೇಶ ರಹಸ್ಯ ತಂತ್ರಗಾರಿಕೆ; ಅಸಮಾಧಾನಿತರ ಮನವೊಲಿಕೆ..!

ಶುಕ್ರವಾರ, ಏಪ್ರಿಲ್ 26, 2019
36 °C
ವಿಜಯಪುರ ಮಹಾನಗರ ಪಾಲಿಕೆಯ ಬಣ ರಾಜಕಾರಣಕ್ಕೆ ಬೀಳದ ಇತಿಶ್ರೀ; ಸಭೆಗೆ ಏಳು ಸದಸ್ಯರ ಗೈರು

ರಮೇಶ ರಹಸ್ಯ ತಂತ್ರಗಾರಿಕೆ; ಅಸಮಾಧಾನಿತರ ಮನವೊಲಿಕೆ..!

Published:
Updated:
Prajavani

ವಿಜಯಪುರ: ಲೋಕಸಭಾ ಚುನಾವಣೆಯ ಮತದಾನಕ್ಕೆ 22 ದಿನ ಬಾಕಿ ಉಳಿದಿವೆ. ನಾಮಪತ್ರ ಸಲ್ಲಿಕೆಗೂ ಮುನ್ನವೇ ಅಸಮಾಧಾನಿತರ ಮನವೊಲಿಕೆಗೆ ಬಿಜೆಪಿಯ ಹುರಿಯಾಳು ರಮೇಶ ಜಿಗಜಿಣಗಿ ರಹಸ್ಯ ತಂತ್ರಗಾರಿಕೆ ನಡೆಸಿದ್ದಾರೆ.

ಮಾಜಿ ಶಾಸಕ ಪ್ರೊ.ರಾಜು ಆಲಗೂರ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿದ್ದರಿಂದ, ಮೈತ್ರಿ ವಿರುದ್ಧ ಮುನಿಸಿಕೊಂಡಿರುವ ದಲಿತ ಬಲಗೈ ಸಮುದಾಯದ ಒಲವನ್ನು ಗಿಟ್ಟಿಸಿಕೊಳ್ಳಲು, ಚಲವಾದಿ ಸಮಾಜದ ಹಿರಿಯರು, ಯುವಕರೊಂದಿಗೆ ಸೋಮವಾರ ಜಿಗಜಿಣಗಿ ನಗರದ ಬುದ್ಧ ವಿಹಾರದಲ್ಲಿ ಮಾತುಕತೆ ನಡೆಸಿದ್ದು, ಫಲಪ್ರದವಾಗಿದೆ ಎಂಬುದು ಮೂಲಗಳಿಂದ ಖಚಿತಪಟ್ಟಿದೆ.

ಚಲವಾದಿ ಸಮಾಜ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಅವರನ್ನೇ ಕಾಂಗ್ರೆಸ್‌ನಿಂದ ಅಖಾಡಕ್ಕಿಳಿಸಬೇಕು ಎಂದು ಪ್ರಬಲ ಹಕ್ಕೊತ್ತಾಯ ಮಂಡಿಸಿತ್ತು. ಕೊನೆ ಕ್ಷಣದವರೆಗೂ ಒತ್ತಡ ಹಾಕಿತ್ತು. ಜಿಲ್ಲೆಯ ಎಲ್ಲಾ ಭಾಗದಿಂದ ಮನವಿಯ ಮಹಾಪೂರವೇ ಸಲ್ಲಿಕೆಯಾಗಿತ್ತು.

ಆದರೆ ಮೈತ್ರಿಯಿಂದಾಗಿ ಕ್ಷೇತ್ರ ಜೆಡಿಎಸ್‌ ಪಾಲಾಗಿದ್ದು, ದಳಪತಿಗಳು ಅಂತಿಮವಾಗಿ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಪತ್ನಿ ಸುನೀತಾ ಚವ್ಹಾಣ ಅವರನ್ನೇ ಕಣಕ್ಕಿಳಿಸಿದ್ದು, ದಲಿತ ಬಲಗೈ ಸಮಾಜದ ಆಕ್ರೋಶ ಸ್ಫೋಟಗೊಂಡಿತ್ತು.

ರಾಜು ಆಲಗೂರ ತಮಗೆ ಪ್ರತಿಸ್ಪರ್ಧಿಯಾಗಬಹುದು ಎಂಬ ಲೆಕ್ಕಾಚಾರದಿಂದ ಜಿಗಜಿಣಗಿ ಚುನಾವಣೆಗೂ ಮುನ್ನ ದಲಿತ ಬಲಗೈ ಸಮಾಜದ ಮುಖಂಡರ ನಿಕಟ ಸಂಪರ್ಕದಿಂದ ದೂರ ಉಳಿದಿದ್ದರು. ಕೊನೆ ಕ್ಷಣದಲ್ಲಿ ದಲಿತ ಬಲಗೈ ಸಮಾಜದ ಯಾವೊಬ್ಬ ಪ್ರಬಲ ಪ್ರತಿಸ್ಪರ್ಧಿ ಅಖಾಡಕ್ಕಿಳಿಯಲ್ಲ ಎಂಬುದು ಖಚಿತ ಪಡುತ್ತಿದ್ದಂತೆ, ಬೃಹತ್ ಸಂಖ್ಯೆಯ ಮತದಾರರನ್ನು ಹೊಂದಿರುವ ಸಮಾಜದ ಮುಖಂಡರ ಮನವೊಲಿಕೆಗೆ ಮುಂದಾದರು ಎಂಬುದು ಗೊತ್ತಾಗಿದೆ.

ಮಾತುಕತೆಯ ಸಂದರ್ಭ ಬಲಗೈ ಮುಖಂಡರು, ನಮ್ಮನ್ನು ಪ್ರತ್ಯೇಕವಾಗಿ ಕಾಣಬಾರದು. ಎಡಗೈ–ಬಲಗೈ ಎರಡನ್ನೂ ಒಟ್ಟಿಗೆ ಕರೆದೊಯ್ಯಬೇಕು ಎಂದು ಹೇಳುತ್ತಿದ್ದಂತೆ, ಜಿಗಜಿಣಗಿ ‘ನಾ ಎಂದೂ ಆ ರೀತಿ ಮಾಡಿಲ್ಲ. ಎಂದೆಂದೂ ನಾವು ಒಂದೇ. ಮುಂದೆಯೂ ಅಷ್ಟೇ. ಯಾವಾಗಲೂ ಒಟ್ಟಾಗಿರೋಣ. ಈ ಕೆಲಸ ಹಿಂದೆಯೇ ನಡೆದಿದ್ದರೆ ನಮ್ಮ ಗಾಡಿ ಬಲು ಸ್ಪೀಡಾಗಿರುತ್ತಿತ್ತು’ ಎಂದು ಸಭೆಯಲ್ಲಿ ಹೇಳಿದರು ಎಂಬುದು ಮೂಲಗಳಿಂದ ಖಚಿತ ಪಟ್ಟಿದೆ.

ಜಿಗಜಿಣಗಿ ಸಭೆಗೆ ಭರವಸೆ ನೀಡಿದ ಬಳಿಕ, ದಲಿತ ಬಲಗೈ ಸಮಾಜದ ಹಲ ಮುಖಂಡರು ಒಕ್ಕೊರಲಿನಿಂದ ಚುನಾವಣೆ ಮಾಡೋಣ ಎಂಬ ಮಾತು ನೀಡಿದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಉಪ ಮೇಯರ್ ಗೋಪಾಲ ಘಟಕಾಂಬಳೆ ಈ ಸಂದರ್ಭ ಜಿಗಜಿಣಗಿ ಜತೆಯಲ್ಲಿದ್ದರು ಎನ್ನಲಾಗಿದೆ.

ಬಣ ರಾಜಕಾರಣದ ಬಿಸಿ

ವಿಜಯಪುರ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ಆರಂಭದಿಂದಲೂ, ಬಿಜೆಪಿಯಲ್ಲಿನ ಬಣ ರಾಜಕಾರಣ ಕಮಲ ಪಡೆಗೆ ಹಲ ಬಾರಿ ಮುಜುಗರ ಸೃಷ್ಟಿಸಿದೆ. ಈ ಬಣ ರಾಜಕಾರಣದಿಂದಲೇ ಒಮ್ಮೆಯೂ ಪಾಲಿಕೆ ಗದ್ದುಗೆಯಲ್ಲಿ ಕಮಲ ಅರಳಿಲ್ಲ.

2018ರ ವಿಧಾನಸಭಾ ಚುನಾವಣೆ ಸಂದರ್ಭ ನಡೆದ ರಾಜಕೀಯ ಧ್ರುವೀಕರಣದಿಂದ, 35 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 22 ಸದಸ್ಯರನ್ನು ಹೊಂದಿದರೂ; ಅಂತಿಮ ಅವಧಿಯ ಚುಕ್ಕಾಣಿಯೂ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬಣ ರಾಜಕಾರಣದಿಂದ ಒಲಿಯಲಿಲ್ಲ.

ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲೂ ಬಣ ರಾಜಕಾರಣ ಬಿರುಸು ಪಡೆದಿತ್ತು. ಇದೀಗ ಲೋಕಸಭಾ ಚುನಾವಣೆ ಹೊತ್ತಲ್ಲಿ ಹಿಂದಿನ ಬಿರುಸು ಇಲ್ಲದಿದ್ದರೂ; ಒಳಗೊಳಗೆ ಅಸಮಾಧಾನ ಹೊಗೆಯಾಡುತ್ತಿದೆ.

ವಿಜಯಪುರ ನಗರ ಮಂಡಲ ಅಧ್ಯಕ್ಷ ಶಿವರುದ್ರ ಬಾಗಲಕೋಟ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚರ್ಚಿಸಲಿಕ್ಕಾಗಿ ಪಾಲಿಕೆ ಸದಸ್ಯರ ಸಭೆಯನ್ನು ಬಿಜೆಪಿ ಚುನಾವಣಾ ಕಚೇರಿಯಲ್ಲಿ ಸೋಮವಾರ ಕರೆದಿದ್ದರು. ಈ ಸಭೆಗೆ ಬಿಜೆಪಿಯ ಏಳು ಸದಸ್ಯರು ಗೈರಾಗುವ ಮೂಲಕ, ತಮ್ಮೊಳಗಿನ ಅಸಮಾಧಾನ ಹೊರ ಹಾಕಿದ್ದಾರೆ ಎಂಬುದು ಖಚಿತ ಪಟ್ಟಿದೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳರ ಕಟ್ಟಾ ಬೆಂಬಲಿಗರಾದ ಮಾಜಿ ಮೇಯರ್ ಸಂಗೀತಾ ಪೋಳ, ಉಪ ಮೇಯರ್ ಲಕ್ಷ್ಮೀ ಕನ್ನೊಳ್ಳಿ, ಈ ಹಿಂದಿನ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ವಿದ್ಯಾ ಹಳ್ಳಿ, ಸದಸ್ಯರಾದ ಪ್ರೇಮಾನಂದ ಬಿರಾದಾರ, ಎಂ.ಎಸ್.ಕರಡಿ ಸಭೆಗೆ ಗೈರಾಗಿದ್ದರು.

ಇವರ ಜತೆ ಹಿರಿಯ ಸದಸ್ಯ ರಾಜಶೇಖರ ಮಗಿಮಠ ವೈಯಕ್ತಿಕ ಕಾರಣದಿಂದ ಸಭೆಯಲ್ಲಿ ಹಾಜರಾಗದಿದ್ದರೆ, ಅಪ್ಪು ಬೆಂಬಲಿಗ ಶಂಕರ ಕುಂಬಾರ ಸಹ ಗೈರಾಗಿದ್ದು ಸದಸ್ಯರಲ್ಲೇ ಚರ್ಚೆಗೆ ಗ್ರಾಸವೊದಗಿಸಿತ್ತು.

ಸಭೆಗೆ ಹಾಜರಾಗಿದ್ದ ಸದಸ್ಯರ ಜತೆ ಜಿಗಜಿಣಗಿ ಆತ್ಮೀಯವಾಗಿ ಮಾತನಾಡಿದರು. ‘ನಿಮ್ಮ ಐದು ವರ್ಷದ ಅವಧಿಯಲ್ಲಿ ಎಂದೆಂದೂ ನಾನು ಹಸ್ತಕ್ಷೇಪ ನಡೆಸಿಲ್ಲ. ಮುಂದೆಯೂ ನಡೆಸಲ್ಲ. ಚುನಾವಣೆಯಲ್ಲಿ ಸಹಕರಿಸಿ’ ಎಂದು ಮನವಿ ಮಾಡಿದರು ಎನ್ನಲಾಗಿದೆ.

‘ನಾಮಪತ್ರ ಸಲ್ಲಿಕೆಯ ದಿನ ಅಪಾರ ಜನರನ್ನು ಸೇರಿಸುತ್ತೇವೆ. ವಿಜಯಪುರ ನಗರ ವ್ಯಾಪ್ತಿಯಲ್ಲಿ 15,000 ಮತಗಳ ಮುನ್ನಡೆ ಕೊಡುತ್ತೇವೆ ಎಂದು ಗೂಳಪ್ಪ ಶಟಗಾರ, ರವೀಂದ್ರ ಲೋಣಿ ಹೇಳಿದರೆ, 20,000 ಮತಗಳ ಮುನ್ನಡೆ ಕೊಡಿಸುತ್ತೇವೆ’ ಎಂದು ಪರಶುರಾಮ ರಜಪೂತ, ರಾಜೇಶ ದೇವಗಿರಿ ಜಿಗಜಿಣಗಿಗೆ ಭರವಸೆ ಕೊಟ್ಟರು ಎಂಬುದು ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !