ಬುಧವಾರ, ಫೆಬ್ರವರಿ 26, 2020
19 °C

ಕೈ ಅಂಚಲ್ಲಿ ಕಡಲಾಳದ ಜಗತ್ತು...

ನಟರಾಜ ಎಸ್. ಭಟ್ Updated:

ಅಕ್ಷರ ಗಾತ್ರ : | |

Prajavani

ಎರಡೂವರೆ ಅಡಿ ಆಳ. ನೂರಾರು ಚದರ ಕಿಲೋಮೀಟರ್‌ನಷ್ಟು ವಿಸ್ತಾರವಾದ ತಿಳಿ ನೀರಿನ ಸಾಗರ. ಅದರೊಳಗೆ ಹೆಜ್ಜೆ ಹಾಕುತ್ತಾ, ಕತ್ತು ಬಗ್ಗಿಸಿಕೊಂಡು ತಳದಲ್ಲಿ ಕಾಣುತ್ತಿದ್ದ ಮಣ್ಣು, ಕಲ್ಲುಗಳ ನಡುವೆ ಬೆಳೆದಿದ್ದ ಸಸ್ಯಗಳನ್ನು ನೋಡುತ್ತಿದ್ದೆವು. ಥಟ್ಟನೆ ಮೃದ್ವಂಗಿಯೊಂದು ಮೈ ಅದುರಿಸಿಕೊಂಡು ನನ್ನ ಕಾಲಿನತ್ತ ಸರಿದು ಬಂತು. ಪಕ್ಕದಲ್ಲೇ ನಕ್ಷತ್ರ ಮೀನು ಕೋಡುಗಳನ್ನು ಅದಿರುಸುತ್ತಿತ್ತು. ಮತ್ತೊಂದೆಡೆ ಹವಳ, ದೂರದಲ್ಲಿ ಆಕ್ಟೋಪಸ್‌, ಏಡಿಗಳು, ಆಮೆಗಳು ಒಂದೊಂದಾಗಿ ಕಾಣಿಸಿಕೊಂಡವು. ನೋಡ ನೋಡುತ್ತಲೇ ತಿಳಿ ನೀರಿನ ತಳದಲ್ಲಿ ‘ಜಲಚರಗಳ ಮ್ಯೂಸಿಯಂ’ ತೆರೆದುಕೊಂಡಿತು. ನೂರಾರು ಅಡಿ ಸಾಗರದ ಆಳಕ್ಕಿಳಿದು ಕಾಣಬೇಕಿದ್ದ ಜಲಜೀವಿಗಳನ್ನೆಲ್ಲ ಎರಡು ಅಡಿ ಆಳದ ತಿಳಿನೀರಿನಲ್ಲಿ ಕಂಡು ನಿಬ್ಬೆರಗಾದೆವು.

ನಾವಿದ್ದಿದ್ದು ಗುಜರಾತ್‌ನ ನರಾರ ದ್ವೀಪದ ಸಮೀಪದಲ್ಲಿರುವ ‘ನ್ಯಾಷನಲ್‌ ಮೆರೇನ್‌ ಪಾರ್ಕ್‌’ನಲ್ಲಿ. ಕಚ್‌ ಜಿಲ್ಲೆಗೆ ಸೇರುವ ಈ ತಾಣ, ಜಾಮ್‌ನಗರದಿಂದ ಏಳು ಕಿ.ಮೀ ದೂರದಲ್ಲಿದೆ. ಭುಜ್‌ನಿಂದ 150 ಕಿ.ಮೀ ದೂರ.

1982ರಲ್ಲಿ ಆರಂಭವಾದ ಈ ಪಾರ್ಕ್‌ 270 ಚ.ಕಿ.ಮೀ ವಿಸ್ತಾರವಿದೆ. ಗುಜರಾತ್‌ನ ಓಕಾದಿಂದ ಜೋಡಿಯಾವರೆಗಿನ ಪ್ರದೇಶವನ್ನು ‘ಮೆರೇನ್ ಸೆಂಚುರಿ’ ಎಂದು ಗುರುತಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ವಲಯದಲ್ಲಿರುವ ಈ ಪ್ರದೇಶದಲ್ಲಿ 42 ದ್ವೀಪಗಳಿವೆ. ಬಹುಶಃ ರಸ್ತೆ ಮೂಲಕ ದ್ವೀಪಗಳನ್ನು ಗುರುತಿಸುವ ಏಕೈಕ ಜಾಗ ಇದು. ಆದರೆ ಇಲ್ಲಿ ಕೆಲವೇ ಕೆಲವು ದ್ವೀಪಗಳಗೆ ಮಾತ್ರ ಪ್ರವೇಶ ಒದಗಿಸಲಾಗಿದೆ.

ಪಾರ್ಕ್‌ ಹುಡುಕುತ್ತಾ...

ಈ ಮೆರೇನ್‌ ಪಾರ್ಕ್‌ ನೋಡುವುದಕ್ಕಾಗಿಯೇ ಜಾಮ್‌ನಗರಕ್ಕೆ ಹೋಗಿದ್ದೆವು. ನಾವು ತಂಗಿದ್ದ ಹೋಟೆಲ್‌ನವರು ‘ಈಗ ಈ ಪಾರ್ಕ್ ಮುಚ್ಚಿದ್ದಾರೆ’ ಎಂದರು. ನಿಜಕ್ಕೂ ಶಾಕ್‌ ಆಯಿತು. ಬೆಳ್ಳಂಬೆಳಿಗ್ಗೆ ಜಾಮ್‌ನಗರದ ಅರಣ್ಯ ಇಲಾಖೆಗೆ ಹೋಗಿ, ಅಲ್ಲಿ ಕೆಲಸ ಮಾಡುವ ಕಾವಲುಗಾರರನ್ನು ಕೇಳಿದೆವು. ಅವರು ‘ದ್ವೀಪಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ, ನೀವು ಮೆರೇನ್ ಪಾರ್ಕ್‌ಗೆ ಹೋಗಬಹುದು’ ಎಂದರು. ಸದ್ಯ ಸಮಾಧಾನವಾಯಿತು. ಅಲ್ಲಿಂದ ಹೊರಟವರು ನರಾರ ತಲುಪಿದೆವು.

ಎಲ್ಲಾ ಕಡೆ ಖಾಲಿ ಖಾಲಿ ಜಾಗ. ಆಫೀಸ್ ಕೂಡ ಕ್ಲೋಸ್‌ ಆಗಿದೆ. ನಿರ್ಜನ ಪ್ರದೇಶದಂತಿತ್ತು. ಒಂದೆರಡು ಗಂಟೆಗಳು ಅಲ್ಲೇ ಕುಳಿತು ಕಾಯುತ್ತಿದ್ದೆವು. ನಿಧಾನವಾಗಿ ಜನರು ಬರಲಾರಂಭಿಸಿದರು. ‘ಸದ್ಯ ಬಂದಿದ್ದು ಸಾರ್ಥಕವಾಯಿತಪ್ಪ’ ಎಂದುಕೊಂಡೆವು. ಅಷ್ಟರೊಳಗೆ ನಮ್ಮ ಕಡೆಗೆ ಬಂದ ಗೈಡ್ ಒಬ್ಬ ‘ಟಿಕೆಟ್‌ ತಗೊಳ್ಳಿ, ನಿಮ್ಮನ್ನ ಪಾರ್ಕ್‌ಗೆ ಕರೆದೊಯ್ಯುತ್ತೇನೆ’ ಎಂದ. ಸರಿ, ಟಿಕೆಟ್‌ ತಗೊಂಡು ಆತನನ್ನು ಹಿಂಬಾಲಿಸಿದೆವು. ಅಲ್ಲಿಂದ ಪ್ರಾರಂಭವಾಯಿತು ಕೌತುಕ ಜಾಗದ ಅನಾವರಣ.

ತಿಳಿ ನೀರ ಸಾಗರದಲ್ಲಿ..

ನಮ್ಮನ್ನು ತಿಳಿ ನೀರ ಸಾಗರದ ಅಂಗಳಕ್ಕೆ ಕರೆದೊಯ್ದ ಗೈಡ್. ಹೆಜ್ಜೆ ಹಾಕುತ್ತ ಮುಂದೆ ಚಲಿಸಿದಂತೆ ನೀರಿನ ಆಳ ಹೆಚ್ಚುತ್ತಾ ಹೋಯಿತು. ನಾವು ಸುಮಾರು 2 ಅಡಿ ಆಳದ ನೀರಿನಲ್ಲಿ ನಡೆಯುತ್ತಿದ್ದೆವು. ಅಷ್ಟರಲ್ಲೇ ಒಂದಷ್ಟು ವಿಶೇಷ ರೀತಿಯ ಏಡಿಗಳನ್ನು ತೋರಿಸಿದರು. ಸ್ಟಾರ್ ಫಿಶ್‌ ಅನ್ನು ಕೈ ಮೇಲೆ ಬಿಟ್ಟರು. ಆಕ್ಟೋಪಸ್ ಅಂಗೈ ಮೇಲೆ ಹರಿದಾಡಿತು. ಸಮುದ್ರ ಸೌತೆ, ಹವಳಗಳನ್ನು (ಕೋರಲ್‌) ಎತ್ತಿ ಕೈಗಿಟ್ಟು, ಅವುಗಳ ಬಗ್ಗೆ ವಿವರಣೆ ನೀಡುತ್ತಾ, ತಕ್ಷಣ ನೀರಿಗೆ ಬಿಟ್ಟು ಬಿಡುತ್ತಿದ್ದರು. ಮೃದು ದೇಹದ ಜೀವಿಗಳನ್ನು ಸ್ಪರ್ಶಿಸುವುದೇ ಅದೆಂತಹದೋ ಆನಂದ. ಹೀಗೆ ಸುಮಾರು 15 ಪ್ರಭೇದದ ಜೀವಿಗಳನ್ನು ಮುಟ್ಟಿ ಮಾತನಾಡಿಸಿದೆವು.

ಗೈಡ್‌ ನೀಡಿದ ಮಾಹಿತಿ ಪ್ರಕಾರ,  ಆ ಪಾರ್ಕ್‌ನಲ್ಲಿ  ಸುಮಾರು 70 ಬಗೆಯ ಮೃದ್ವಂಗಿಗಳಿವೆ, 42 ಬಗೆಯ ಹವಳಗಳು, 44 ಬಗೆಯ ಗಟ್ಟಿ ಹವಳಗಳು(ಕೋರಲ್‌), 27 ಬಗೆಯ ಆರ್ಥೋಪಾಂಡ್ಸ್‌ಗಳು ಇವೆ. ಇದರ ಜೊತೆಯಲ್ಲಿ ಜೆಲ್ಲಿ ಫಿಶ್, ಸೀ ಅನಿಮೊನ್ಸ್, ಸೀಗಡಿಗಳು, ಎಕಿನಡೂಡ್ಫನ್ಸ್, ಸ್ಟಿಂಗ್ರೇ, ವೇಲ್ ಶಾರ್ಕ್, ಮಡ್ ಸ್ಕಿಪರ್, ಗ್ರೀನ್ ಸೀ ಟರ್ಟಲ್ಸ್‌, ಒಲಿವ್ ರಿಡ್ಲೆಸ್, ಲೆದರ್ ಬ್ಯಾಕ್ಸ್, ಸೀ ಸ್ನೇಕ್ಸ್, ಡೂಗಾಂಗ್ಸ್, ಬಾಟಲ್ ನೋಸ್ ಡಾಲ್ಫಿನ್ಸ್‌ಗಳನ್ನು ನೋಡಬಹುದಂತೆ. ಬೇರೆ ಕಡೆ ಇಂಥ ಜಲಚರಗಳನ್ನು ನೋಡಬೇಕೆಂದರೆ 10 ರಿಂದ 30 ಅಡಿಗಳ ಆಳದ ಸಾಗರದ ತಳಕ್ಕೆ ಹೋಗಬೇಕು. ಆದರೆ ಇಲ್ಲಿ ಕಣ್ಣಳತೆಗೆ ಕಂಡಿದ್ದು, ಕೈಗೆ ಸಿಕ್ಕಿದ್ದು ಬಹಳ ಖುಷಿಕೊಟ್ಟಿತು.

ಇಂತಹ ಜಲಚರಗಳು ವಾಸವಿರಬೇಕೆಂದರೆ ಅಲ್ಲಿ ಶುದ್ಧವಾದ ನೀರು ಇರಬೇಕು. ಬಹುಶಃ ಕಡಿಮೆ ಆಳದಲ್ಲೇ ಅಂತಹ ಶುದ್ಧ ನೀರು ಇರುವುದರಿಂದಲೇ, ಇಷ್ಟೆಲ್ಲ ಜಲಚರ ಕುಟುಂಬಗಳು ವಾಸಿಸುತ್ತಿವೆ. ಅಂದ ಹಾಗೆ, ಈ ಪ್ರದೇಶದಲ್ಲಿ ಸುಮಾರು ಬೇಸಿಗೆಯಲ್ಲಿ 50 ಡಿಗ್ರಿ ಸೆಲ್ಷಿಯಸ್‌ವರೆಗೂ ತಾಪಮಾನ ಏರುತ್ತದೆ. ಚಳಿಗಾಲದಲ್ಲಿ ಶೂನ್ಯದವರೆಗೂ ಇಳಿಯುತ್ತದೆ. ಮೆರೇನ್ ಪಾರ್ಕ್‌ ಕುರಿತ ಹೆಚ್ಚಿನ ಮಾಹಿತಿಯನ್ನು ಈ ವೆಬ್‌ಸೈಟ್‌ ಮೂಲಕ ಪಡೆಯಬಹುದು.

http://www.jamnagar.org/mnp.htm

***

ಹೋಗುವುದು ಹೇಗೆ?

ಗುಜರಾತ್‌ನ ಜಾಮ್‌ನಗರಕ್ಕೆ ದೇಶದ ಬಹುಭಾಗಗಳಿಂದ ರೈಲಿನ ಸೌಲಭ್ಯವಿದೆ. ನಿಯಮಿತವಾಗಿ ವಿಮಾನ ಸೌಲಭ್ಯವೂ ಇದೆ. ಭುಜ್‌ ನಗರದಿಂದ ಜಾಮ್‌ನಗರಕ್ಕೂ ಬಸ್‌ಗಳಿವೆ.

ಅನುಮತಿ ಅಗತ್ಯ

ಈ ತಿಳಿನೀರ ಸಾಗರಕ್ಕೆ ಕರೆದೊಯ್ಯುವ ಮುನ್ನ ಅರಣ್ಯ ಇಲಾಖೆಯಿಂದ ಪರವಾನಗಿ ಪಡೆಯಬೇಕು. ಸಮುದ್ರದ ನೀರಿನ ಮಟ್ಟವನ್ನು ನೋಡಿಕೊಂಡು, ಪ್ರವಾಸಿಗರಿಗೆ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ. ಉಬ್ಬರವಿಳಿತಗಳು ಇದ್ದಾಗ (ಅಲೆಗಳ ಪ್ರಮಾಣ ಹೆಚ್ಚಾಗಿದ್ದು, ಚಂಡಮಾರುತದ ಮುನ್ಸೂಚನೆ ಇದ್ದಾಗ) ಪ್ರವೇಶ ನಿಷಿದ್ಧ. ಅನುಮತಿಪಡೆಯುವ ವಿಳಾಸ: ಡೆಪ್ಯುಟಿ ಕನ್ಸರ್‍ವೇಟರ್ ಆಫ್ ಫಾರೆಸ್ಟ್, ಮೆರೇನ್ ನ್ಯಾಷನಲ್ ಪಾರ್ಕ್, ವನ್‍ಸಂಕುಲ್, ಸಿ.ಎಫ್ ಆಫೀಸ್, ನಾಗಾನಾಥ್ ರೋಡ್, ಜಾಮ್ ನಗರ-360001, ಪೋನ್-02882679357.

ಊಟ–ವಸತಿ

ಜಾಮ್‌ನಗರದಲ್ಲಿ ಎಲ್ಲ ವರ್ಗದವರಿಗೂ ಕೈಗೆಟಕುವಂತಹ ಹೋಟೆಲ್‌ ಮತ್ತು ವಸತಿ ಗೃಹಗಳಿವೆ. ಆದರೆ, ಪಾರ್ಕ್‌ ಇರುವ ನರಾರ ಸುತ್ತಮುತ್ತ ಯಾವುದೇ ಅಂಗಡಿಗಳಿಲ್ಲ. ಉಪಹಾರ ಮತ್ತು ನೀರಿನ ವ್ಯವಸ್ಥೆಯನ್ನು ಮಾಡಿಕೊಂಡು ಹೋಗಬೇಕು.

ಸೂಕ್ತ ಅವಧಿ

ಮೆರೇನ್‌ ಪಾರ್ಕ್‌ ನೋಡಲು ಅಕ್ಟೋಬರ್‌ನಿಂದ ಫೆಬ್ರುವರಿ ಸೂಕ್ತ ಸಮಯ. ಬೆಳಗಿನ ಜಾವ 6 ಗಂಟೆಯಿಂದ 12 ಗಂಟೆವರೆಗೆ ಈ ಪಾರ್ಕ್‌ನಲ್ಲಿ ಅಡ್ಡಾಡಬಹುದು. ಕೆಲವೊಮ್ಮೆ ಸಮುದ್ರದ ಏರಿಳಿತಗಳ ಮೇಲೂ, ಪ್ರವಾಸಿಗರ ‍ಪ್ರವೇಶ ಅವಲಂಬನೆಯಾಗಿರುತ್ತದೆ.

ಸುರಕ್ಷತೆ

ಈ ಮೆರೇನ್ ಪಾರ್ಕ್‌ನಲ್ಲಿ (ನೀರಿನಲ್ಲಿ ) ನಡೆದು ಹೋಗುವುದರಿಂದ ಕಾಲಿನ ಸುರಕ್ಷತೆಗೆ ಗಮನ ಕೊಡಬೇಕು. ಹಾಗಾಗಿ ಗಟ್ಟಿಯಾದ ಸೋಲ್ ಇರುವ ಚಪ್ಪಲಿಗಳನ್ನು ಧರಿಸಿ ಹೋಗಬೇಕು.

***

ಪಕ್ಷಿ ವೀಕ್ಷಣಾ ತಾಣ: ಜಾಮ್‌ನಗರದ ಒಂದು ಭಾಗದಲ್ಲಿ ಪಕ್ಷಿಧಾಮವಿದೆ. ಓರಿಯಂಟಲ್ ಸ್ಕೈಲಾರ್ಕ್, ಶಿಕ್ರ, ಕ್ಲಾ, ರೀಡ್ ವಾರ್ಬ್ಲರ, ಕಾಮನ್ ಟೇಲ್, ಪರ್ಪಲ್ ಹೆರಾನ್, ಸ್ಪಾಟ್ ಬಿಲ್ಡ್ ಡಕ್, ಹೌಸ್ ಸ್ವಿಫ್ಟ್, ಫ್ಲೆಮಿಂಗೋ, ಮೈನಾ ಹೀಗೆ ಬಗೆ ಬಗೆಯ ಪಕ್ಷಿಗಳನ್ನು ಅಲ್ಲಿ ನೋಡಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)