ಯುಗಾದಿಗೂ ಮುನ್ನ ಕುಸಿದ ಹೂವಿನ ದರ

ಭಾನುವಾರ, ಏಪ್ರಿಲ್ 21, 2019
25 °C
ತರಕಾರಿ, ಹಣ್ಣುಗಳ ಬೆಲೆಯಲ್ಲಿ ಆಗದ ವ್ಯತ್ಯಾಸ, ಮಾಂಸಗಳ ಧಾರಣೆಯೂ ಯಥಾಸ್ಥಿತಿ

ಯುಗಾದಿಗೂ ಮುನ್ನ ಕುಸಿದ ಹೂವಿನ ದರ

Published:
Updated:
Prajavani

ಚಾಮರಾಜನಗರ: ಎರಡು ಮೂರು ವಾರಗಳಿಂದ ಏರುಗತಿಯಲ್ಲಿದ್ದ ಹೂವಿನ ಧಾರಣೆ ಯುಗಾದಿ ಹಬ್ಬದ ಹೊಸ್ತಿಲಿನಲ್ಲಿ ಕುಸಿತ ಕಂಡಿದೆ. 

ಕಿತ್ತಳೆ ಸೇರಿದಂತೆ ಒಂದೆರಡು ಹಣ್ಣುಗಳ ಬೆಲೆಯಲ್ಲಿ ಏರಿಕೆಯಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ ಬೀನ್ಸ್‌, ದಪ್ಪ ಮೆಣಸಿನಕಾಯಿ ಬಿಟ್ಟರೆ ಉಳಿದ ಕಾಯಿಪಲ್ಲೆಗಳ ಬೆಲೆ ಕೈಗೆಟುಕುವ ದರದಲ್ಲೇ ಇದೆ. ಮೊಟ್ಟೆಯ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ.

ಜಾತ್ರೆಗಳು, ಕೊಂಡೋತ್ಸವಗಳ ಕಾರಣಕ್ಕೆ ಬೇಡಿಕೆ ಹೆಚ್ಚಿದ್ದರಿಂದ ಗಗನಮುಖಿಯಾಗಿದ್ದ ಹೂವುಗಳ ದರ ಈ ವಾರದ ಆರಂಭದಲ್ಲಿ ಕಡಿಮೆಯಾಗಿದೆ.

ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕೆಜಿಗೆ ₹ 1000ದಷ್ಟಿದ್ದ ಕನಕಾಂಬರದ ಬೆಲೆ ಈಗ ₹ 300ರಿಂದ ₹ 400ಕ್ಕೆ ಕುಸಿದಿದೆ. ₹ 80ರಿಂದ ₹ 200ರ ವರೆಗಿದ್ದ ಸುಂಗಧರಾಜ ಹೂವಿಗೆ ಸೋಮವಾರ ₹ 120–₹ 160 ಇತ್ತು. ಕೆಜಿ ಮಲ್ಲಿಗೆ ಬೆಲೆ ₹ 200–₹ 240ಕ್ಕೆ ಇಳಿದಿದೆ. ಹೋದ ವಾರ ₹ 350–₹ 400ರ ವರೆಗೆ ಇತ್ತು. 

‘ಐದಾರು ದಿನಗಳಲ್ಲಿ ಯುಗಾದಿ ಹಬ್ಬವಿದ್ದು, ಅದಕ್ಕೂ ಮುನ್ನ ಜಿಲ್ಲೆಯಾದ್ಯಂತ ಜಾತ್ರೆಗಳು, ಕೊಂಡೋತ್ಸವಗಳು ಮುಗಿಯುತ್ತವೆ. ಹಾಗಾಗಿ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇರುವುದಿಲ್ಲ. ಇದರಿಂದಾಗಿ ಬೆಲೆ ಕಡಿಮೆಯಾಗಿದೆ’ ಎಂದು ಹೂವುಗಳ ವ್ಯಾಪಾರಿ ಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು. 

ಸುಡು ಬೇಸಿಗೆಯಲ್ಲಿ ಹಣ್ಣುಗಳಿಗೆ ಬೇಡಿಕೆ ಇದ್ದರೂ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ಕಿತ್ತಳೆ ಹಣ್ಣಿನ ಧಾರಣೆ ₹ 20 ಹೆಚ್ಚಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಹೋದ ವಾರ ಕೆಜಿ ಕಿತ್ತಳೆಗೆ ₹ 60 ಇತ್ತು. ಅದೀಗ ₹ 80ಕ್ಕೆ ಏರಿದೆ. ಹೊರಗಿನ ಮಾರುಕಟ್ಟೆಯಲ್ಲಿ ₹ 100ರ ವರೆಗೂ ಇದೆ. ಮೂಸಂಬಿಗೆ ₹ 60– ₹ 80ರ ವರೆಗೆ ಬೆಲೆ ಇದೆ.

ಮೊಟ್ಟೆಯ ಬೆಲೆ (100ಕ್ಕೆ) ₹ 30ಕ್ಕೆ ಮತ್ತೆ ಇಳಿದಿದೆ. ಕಳೆದ ವಾರ ₹ 365 ಇತ್ತು. ಈ ವಾರ ₹ 335 ಇದೆ.

ಮಾಂಸ ಮಾರುಕಟ್ಟೆಯಲ್ಲಿ ಚಿಕನ್‌, ಮಟನ್‌ ಹಾಗೂ ಮೀನುಗಳ ಧಾರಣೆಯಲ್ಲಿ ವ್ಯತ್ಯಾಸ ಆಗಿಲ್ಲ.

ಯುಗಾದಿಗೆ ಬೆಲೆ ಹೆಚ್ಚಳ ನಿರೀಕ್ಷೆ

ಶನಿವಾರ (ಏಪ್ರಿಲ್‌ 6) ಯುಗಾದಿ ಹಬ್ಬವಿದ್ದು, ಆ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ತರಕಾರಿ, ಹೂವುಗಳು ಸೇರಿದಂತೆ ಇತರೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

ಹಿಂದೂ ಕ್ಯಾಲೆಂಡರ್‌ ಪ್ರಕಾರ ಯುಗಾದಿ ನಂತರ ಹೊಸ ‌ವರ್ಷ ಆರಂಭವಾಗುತ್ತದೆ. ದೇಶದಾದ್ಯಂತ ಅತ್ಯಂತ ಸಂಭ್ರಮದಿಂದ ಯುಗಾದಿ ಹಬ್ಬ ಆಚರಿಸಲಾಗುತ್ತದೆ. ಜಿಲ್ಲೆಯಲ್ಲೂ ಜನರು ಶ್ರದ್ಧಾ– ಭಕ್ತಿಯಿಂದ ಯುಗಾದಿ ಆಚರಿಸುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !