ಹೂವು, ತರಕಾರಿ ಬೆಲೆ ಕೊಂಚ ಇಳಿಕೆ

ಭಾನುವಾರ, ಏಪ್ರಿಲ್ 21, 2019
32 °C
ಮೊಟ್ಟೆ ಏರಿಕೆ, ಮಾಂಸ ಯಥಾಸ್ಥಿತಿ, ಕೆಲವು ಹಣ್ಣುಗಳ ಧಾರಣೆ ಹೆಚ್ಚಳ

ಹೂವು, ತರಕಾರಿ ಬೆಲೆ ಕೊಂಚ ಇಳಿಕೆ

Published:
Updated:
Prajavani

ಚಾಮರಾಜನಗರ: ಚುನಾವಣಾ ಪ್ರಚಾರ ಭರಾಟೆಯ ನಡುವೆಯೇ ಮಾರುಕಟ್ಟೆಯಲ್ಲಿ ಹೂವು, ತರಕಾರಿಗಳ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಕೆಲವು ಹಣ್ಣುಗಳ ಬೆಲೆಯಲ್ಲೂ ಹೆಚ್ಚಳವಾಗಿದೆ.

ತರಕಾರಿಗಳ ಮೈಕಿ ಟೊಮೆಟೊ, ಬೀನ್ಸ್‌ ಬೆಲೆ ಕಡಿಮೆಯಾಗಿದೆ. ಎರಡು ಮೂರು ವಾರಗಳಿಂದ ಸತತವಾಗಿ ಇಳಿಮುಖವಾಗಿದ್ದ ಮೊಟ್ಟೆ ದರ‌ದಲ್ಲಿ ಏರಿಕೆಯಾಗಿದೆ. ಮಾಂಸಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. 

ಜಾತ್ರೆಗಳು ಮುಗಿದ ಬೆನ್ನಿಗೆ ಕುಸಿತದ ಹಾದಿ ಕಂಡಿದ್ದ ಹೂವುಗಳ ಬೆಲೆ, ಚುನಾವಣಾ ಪ್ರಚಾರದ ಅಂಗವಾಗಿ ಸಭೆ ಸಮಾರಂಭಗಳು ನಡೆಯಲಿರುವುದರಿಂದ ಹೂವಿಗೆ ಬೇಡಿಕೆ ಸೃಷ್ಟಿಯಾಗಬಹುದು ಎಂದು ವ್ಯಾಪಾರಿಗಳು ಅಂದಾಜಿಸಿದ್ದರು. ಆದರೆ, ಅಂತಹದ್ದೇನೂ ಆಗಿಲ್ಲ. ಜಿಲ್ಲೆಯಲ್ಲಿ ಸಮಾರಂಭಗಳು ಆ ಪ‍್ರಮಾಣದಲ್ಲಿ ನಡೆದಿಲ್ಲ. 

‘ಅಕ್ಷಯ ತೃತೀಯ‌ವರೆಗೂ ಹೂವಿನ ದರ ಇದೇ ಸ್ಥಿತಿಯಲ್ಲಿ ಮುಂದುವರಿಯಲಿದೆ. ಈಗ ಯಾವುದೇ ಪೂಜಾ ಕೈಂಕರ್ಯಗಳು, ಸಭೆ ಸಮಾರಂಭ ನಡೆಯುತ್ತಿಲ್ಲ. ರಾಜಕೀಯ ಚುನಾವಣಾ ಪ್ರಚಾರಕ್ಕೆ ಸೀಮಿತವಾಗಿದೆ. ಇಲ್ಲಿಯೂ ಹೂವು, ಹಾರ ಹಾಕುವಂತಹ ದೊಡ್ಡ ಮಟ್ಟದಲ್ಲಿ ಸಮಾವೇಶ ಮಾಡುತ್ತಿಲ್ಲ. ಇದರಿಂದ ಹೂವಿನ ಬೆಲೆ ಇಳಿಮುಖವಾಗಿದೆ’ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು.

ಬೀನ್ಸ್‌ ಬೆಲೆ ಇಳಿಕೆ: ತರಕಾರಿ ಮಾರುಕಟ್ಟೆಯಲ್ಲಿ ಟೊಮೆಟೊ, ಬೀನ್ಸ್‌ ಬೆಲೆ ಕಡಿಮೆಯಾಗಿದೆ. ಈರುಳ್ಳಿ ₹ 3 ಹೆಚ್ಚಳವಾಗಿದೆ. ಎಲ್ಲ ಬಗೆಯ ಸೊಪ್ಪುಗಳ ಬೆಲೆ (ಕಟ್ಟು) ₹5ರಿಂದ ₹10ರ ವರೆಗೆ ಇದೆ.

ದ್ರಾಕ್ಷಿ, ಸೇಬು, ಕಿತ್ತಳೆ ಹೆಚ್ಚಳ: ಬೇಸಿಗೆಯಲ್ಲಿ ಹಣ್ಣಿನ ರಸ ಹಾಗೂ ಹಣ್ಣುಗಳಿಗೆ ಬೇಡಿಕೆ ಇರುವ ಬೆನ್ನಲ್ಲೇ ದ್ರಾಕ್ಷಿ ಮತ್ತು ಸೇಬು ₹20, ಕಿತ್ತಳೆ ಹಣ್ಣು ₹10 ಏರಿಕೆಯಾಗದೆ. ಉಳಿದಂತೆ ಬೇರೆ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿಲ್ಲ. ಹಾಪ್‌ಕಾಮ್ಸ್‌ನಲ್ಲಿ ಹೋದ ವಾರ ಕೆಜಿ ಸೇಬಿಗೆ ₹120ರಿಂದ ₹140 ಇತ್ತು. ಈ ವಾರ ₹160 ಆಗಿದೆ.

ಮೊಟ್ಟೆ ಏರಿಕೆ: ಈ ವಾರ ಮೊಟ್ಟೆ ₹ 10 ಹೆಚ್ಚಳವಾಗಿದೆ. ಪ್ರಸ್ತುತ ₹ 365 ಇದೆ. ಕಳೆದ ವಾರ ₹ 355 ಇತ್ತು. ಪ್ರತಿ ಮೂರು ದಿನಗಳಿಗೊಮ್ಮೆ ದರ ಪರಿಶೀಲನೆಯಾಗುವುದರಿಂದ ಬೆಲೆ ನಿರ್ಧರಿಸಿ ನಿಖರವಾಗಿ ಬೆಲೆ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಮೊಟ್ಟೆ ವ್ಯಾಪಾರಿಗಳು. ಮಾಂಸ ಮಾರುಕಟ್ಟೆಯಲ್ಲಿನ ಧಾರಣೆ ಯಥಾಸ್ಥಿತಿ ಮುಂದುವರಿದಿದೆ.

ಉತ್ಪಾದನೆ ಹೆಚ್ಚು ಬೆಲೆ ಕಡಿಮೆ

‘ಹೂವಿನ ಮಾರುಕಟ್ಟೆಯಲ್ಲಿ ಈಗ ಕನಕಾಂಬರ,‌ ಮಲ್ಲಿಗೆ ಉತ್ಪಾದನೆ ಹೆಚ್ಚಿದೆ. ಹೂವಿನ ಮಾರುಕಟ್ಟೆಗೆ ಹೆಚ್ಚು ಆವಕವಾಗುತ್ತಿವೆ. ಆದರೆ, ಬೆಲೆ ಮಾತ್ರ ಕಡಿಮೆಯಾಗಿದೆ. ಎಲ್ಲ ಕಡೆಗಳಲ್ಲಿ ಈ ಎರಡೂ ಹೂವುಗಳ ಮಾರಾಟ ನಡೆಯುತ್ತಿದೆ’ ಎನ್ನುತ್ತಾರೆ ಹೂವಿನ ವ್ಯಾಪಾರಿ ಕೃಷ್ಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !