ಮಂಗಳವಾರ, ಸೆಪ್ಟೆಂಬರ್ 21, 2021
26 °C

ಹೂವು ಇಳಿಕೆ, ಕೆಲ ತರಕಾರಿ, ಹಣ್ಣು ತುಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ತರಕಾರಿ ಮಾರುಕಟ್ಟೆಯಲ್ಲಿ ಈ ವಾರ ಹಸಿಮೆಣಸು ಮತ್ತು ದಪ್ಪಮೆಣಸಿನ ಬೆಲೆ ಇಳಿಕೆಯಾಗಿದೆ. ಕ್ಯಾರೆಟ್‌, ಈರುಳ್ಳಿ ಕೊಂಚ ತುಟ್ಟಿಯಾಗಿದೆ. ಹೂವಿನ ಬೆಲೆಯಲ್ಲಿ ಇಳಿಕೆಯಾಗಿದೆ. ಮಾಂಸ ಮಾರುಕಟ್ಟೆಯಲ್ಲಿ ಬೆಲೆ ಯಥಾಸ್ಥಿತಿ ಮುಂದುವರಿದಿದೆ.

ಕಳೆದ ವಾರ ಬೀನ್ಸ್‌ ಹಾಗೂ ಟೊಮೆಟೊ ಬೆಲೆ ಹೆಚ್ಚಳವಾಗಿತ್ತು. ಈ ವಾರ ಅದೇ ಬೆಲೆ ಮುಂದುವರಿದಿದೆ. ಕ್ಯಾರೆಟ್‌ ₹ 10, ಈರುಳ್ಳಿ ₹ 3 ಹೆಚ್ಚಳವಾಗಿದೆ. ಹಸಿಮೆಣಸು ₹ 30 ಕಡಿಮೆಯಾಗಿದೆ. ದಪ್ಪ ಮೆಣಸಿನಕಾಯಿ ₹ 20 ಕಡಿಮೆಯಾಗಿದೆ. ಉಳಿದ ತರಕಾರಿಗಳ ಬೆಲೆ ಕಳೆದ ವಾರದಷ್ಟೇ ಮುಂದುವರಿದಿದೆ.

‘ಮೂರು ವಾರಗಳಿಂದ ಮಾರುಕಟ್ಟೆಗೆ ತರಕಾರಿಗಳು ಕಡಿಮೆ ಪ್ರಮಾಣದಲ್ಲಿ ಬರುತ್ತಿವೆ. ಬಿಸಿಲ ಝಳಕ್ಕೆ ತರಕಾರಿಗಳ ಇಳುವರಿ ಕಡಿಮೆಯಾಗಿದೆ. ಮಾರುಕಟ್ಟೆಯಿಂದ ತರುವಾಗಲೇ ಗುಣಮಟ್ಟದ ತರಕಾರಿ ನೋಡಿ ಖರೀದಿಸಲಾಗುತ್ತದೆ. ಬಿಸಿಲ ಶಾಖಕ್ಕೆ ಅನೇಕ ತರಕಾರಿಗಳು ಬಾಡುತ್ತವೆ ಇಲ್ಲವೆ ಕೊಳೆಯುತ್ತವೆ. ಹಾಗಾಗಿ ಕೆಲವು ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ’ ಎಂದು ಹಾಪ್‌ಕಾಮ್ಸ್‌ ಮಾರಾಟಗಾರ ಮಹೇಶ್ ಅವರು ‘ಪ್ರಜಾವಾಣಿ’ಗೆ ಹೇಳಿದರು.

ಹಣ್ಣುಗಳು: ಸೇಬು, ಸಪೋಟಾ, ಅನಾನಸ್‌ ಬಿಟ್ಟರೆ ಉಳಿದ ಎಲ್ಲ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸ ಕಂಡು ಬಂದಿಲ್ಲ. ಈ ಮೂರು ಫಲಗಳ ಬೆಲೆ ಈ ವಾರ ಏರುಗತಿಯಲ್ಲಿದೆ. ಸೇಬು ಕೆಜಿಗೆ ₹ 140, ಸಪೋಟಾ ₹ 40ರಿಂದ ₹ 60, ಅನಾನಸು ₹ 40 ಇದೆ. ಮೂರೂ ಹಣ್ಣುಗಳ ಬೆಲೆ ₹ 10ರಿಂದ ₹ 20ರಷ್ಟು ಜಾಸ್ತಿಯಾಗಿದೆ.

ಮೊಟ್ಟೆ, ಮಾಂಸ ಯಥಾಸ್ಥಿತಿ:  ಪ್ರತಿ ಮೂರು ದಿನಗಳಿಗೊಮ್ಮೆ ಮೊಟ್ಟೆಧಾರಣೆ ಬದಲಾಗುತ್ತಿರುತ್ತದೆ. ಕಳೆದ ವಾರ ₹ 5 ಕಡಿಮೆಯಾಗಿತ್ತು. ಸೋಮವಾರ 100 ಮೊಟ್ಟೆಗೆ ₹ 340 ಇತ್ತು. ಮಂಗಳವಾರದಿಂದ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಮೊಟ್ಟೆ ವ್ಯಾಪಾರಿಗಳು.

ಮಾಂಸ ಮಾರುಕಟ್ಟೆಯಲ್ಲಿ ಚಿಕನ್‌, ಮಟನ್‌ ಹಾಗೂ ಮೀನುಗಳ ಮಾರುಕಟ್ಟೆಯಲ್ಲಿ ಬೆಲೆ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಕಳೆದ ವಾರದ ದರವೇ ಮುಂದುವರಿದಿದೆ. 

ಮತ್ತೆ ಇಳಿದ ಹೂವಿನ ಬೆಲೆ

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಅನೇಕ ಹೂವುಗಳ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಚೆಂಡು ಹೂ, ಸುಗಂಧರಾಜ, ಸುಗಂಧರಾಜ ಹಾರ, ಮಲ್ಲಿಗೆ ಹೂವುಗಳ ಬೆಲೆ ಕಡಿಮೆಯಾಗಿದೆ. 100 ಗುಲಾಬಿಗೆ ₹ 100 ಆಗಿದೆ. 

ಕಳೆದೆರಡು ವಾರದಿಂದ ಶುಭ ಸಮಾರಂಭಗಳು ಕಡಿಮೆಯಾಗುತ್ತಿರುವ ಬೆನ್ನಲ್ಲೇ ಹೂವುಗಳಿಗೆ ಬೇಡಿಕೆಯೂ ಕಡಿಮೆಯಾಗುತ್ತಿದೆ. ಅಕ್ಷಯ ತೃತೀಯ (ಮೇ 7) ಬಳಿಕ ಹಬ್ಬಗಳು, ಶುಭ ಸಮಾರಂಭಗಳು ಆರಂಭವಾಗಲಿವೆ. ಆಗ ಹೂವಿಗೆ ಬೇಡಿಕೆ ಬರಲಿದೆ. ಸಹಜವಾಗಿ ಬೆಲೆಯಲ್ಲೂ ಏರಿಕೆಯಾಗಲಿದೆ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು