ಮಾರುಕಟ್ಟೆಗೆ ಲಗ್ಗೆ ಇಟ್ಟ ನೇರಳೆ ಹಣ್ಣು

ಮಂಗಳವಾರ, ಜೂನ್ 25, 2019
28 °C
ಜೂನ್‌ ತಿಂಗಳಲ್ಲಿ ಮಾತ್ರ ಲಭ್ಯವಾಗುವ ಹಣ್ಣು, ಕೆಜಿಗೆ ₹120–₹160, ಆರೋಗ್ಯಕ್ಕೂ ಒಳ್ಳೆಯದು

ಮಾರುಕಟ್ಟೆಗೆ ಲಗ್ಗೆ ಇಟ್ಟ ನೇರಳೆ ಹಣ್ಣು

Published:
Updated:
Prajavani

ಚಾಮರಾಜನಗರ: ನಗರದ ಮಾರುಕಟ್ಟೆಯಲ್ಲೀಗ ನೇರಳೇ ಹಣ್ಣಿನ ಕಾರುಬಾರು. ರಸ್ತೆಗಳಲ್ಲಿ ತಳ್ಳುಗಾಡಿಗಳಲ್ಲಿ ಮಾವಿನ ಹಣ್ಣುಗಳ ಜೊತೆಯಲ್ಲಿ ನೇರಳೆ ಹಣ್ಣುಗಳನ್ನು ಗುಡ್ಡೆ ಹಾಕಿ ಮಾರಾಟ ಮಾಡುವವರು ಕಂಡು ಬರುತ್ತಿದ್ದಾರೆ. 

ನಾಲ್ಕೈದು ದಿನಗಳಿಂದೀಚೆಗೆ ಆಕರ್ಷಕ ಹಾಗೂ ರುಚಿಕರ ಹಣ್ಣಿನ ಮಾರಾಟ ಜೋರಾಗಿದ್ದು, ಬೆಲೆ ಕೊಂಚ ದುಬಾರಿಯಾದರೂ ಗ್ರಾಹಕರು ಹಣ್ಣನ್ನು ಖರೀದಿಸುತ್ತಿದ್ದಾರೆ. ಆರಂಭದಲ್ಲಿ ಕೆಜಿಗೆ ₹200ರವರೆಗೂ ಇದ್ದ ಬೆಲೆ ಈಗ ₹120ಕ್ಕೆ ಕುಸಿದಿದೆ. ಕೆಜಿಗೆ ₹120ರಿಂದ ₹160ರ ನಡುವೆ ಮಾರಾಟವಾಗುತ್ತಿದೆ. 

ಆರೋಗ್ಯಕ್ಕೂ ಒಳ್ಳೆಯದಾದ ನೇರಳೆ ಹಣ್ಣು ಎಲ್ಲ ಕಾಲದಲ್ಲೂ ಸಿಗುವುದಿಲ್ಲ. ಮಳೆಗಾಲ ಆರಂಭವಾಗುವ ಸಮಯದಲ್ಲಿ ಮೇ–ಜೂನ್‌ ನಡುವೆ ಮಾತ್ರ ಲಭ್ಯವಿರುತ್ತದೆ. ಒಂದು ತಿಂಗಳಿನಿಂದ ಹೆಚ್ಚು ಸಮಯ ಇದು ಕಾಣ ಸಿಗುವುದಿಲ್ಲ. ವ್ಯಾಪಾರಿಗಳ ಪ್ರಕಾರ, ಈ ಹಣ್ಣಿನ ಮಾರಾಟ ಭರಾಟೆ 20 ದಿನಗಳು ಮಾತ್ರ.

ದಲ್ಲಾಳಿಗಳಿಂದ ಮಾರಾಟ: ‘ನಗರದ ಮಾರಿಗುಡಿ ಮುಂಭಾಗ ಬೆಳಿಗ್ಗೆ 6ಗಂಟೆಯಿಂದ 8.30ರ ವರೆಗೆ ರೈತರು ನೇರಳೆ ಹಣ್ಣು ತಂದು ಕೆಜಿಗೆ ₹ 50ಕ್ಕೆ ಮಾರಾಟ ಮಾಡುತ್ತಾರೆ. ದಲ್ಲಾಳಿಗಳು ತಮ್ಮ ಕಮಿಷನ್‌ ಪಡೆದು ಮಾರಾಟಗಾರರಿಗೆ ₹ 50ಕ್ಕೆ ಮಾರಾಟ ಮಾಡುತ್ತಾರೆ. ರೈತರು ನೇರವಾಗಿ ನಮ್ಮ ಬಳಿ ಬರುವುದಿಲ್ಲ’ ಎಂದು ತಳ್ಳುಗಾಡಿ ಮಾರಾಟಗಾರರೊಬ್ಬರು ತಿಳಿಸಿದರು.

‘ವರ್ಷಕ್ಕೆ 20 ದಿನ ಮಾತ್ರ ಸಿಗುವಂತಹ ನೇರಳಗೆ ಬೇಡಿಕೆ ಹೆಚ್ಚಿದೆ. ಈ ತಿಂಗಳು (ಜೂನ್‌) ಮಾತ್ರವೇ ಇದರ ಸವಿ ಸವಿಯಬಹುದು. ನಾಲ್ಕೈದು ದಿನಗಳ ಹಿಂದೆ ಕಾಲು ಕೆಜಿಗೆ ₹50 ಇತ್ತು. ಈಗ ನೇರಳೆ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಆದ್ದರಿಂದ, ಒಂದು ಕೆಜಿಗೆ ₹ 120ರಿಂದ ₹ 160ರವರೆಗೂ ಇದೆ. ಎರಡು ದಿನದಲ್ಲಿ 30ರಿಂದ 40 ಕೆಜಿ ಮಾರಾಟ ಮಾಡುತ್ತೇನೆ. ಅಷ್ಟೊಂದು ಬೇಡಿಕೆ ಇದೆ’ ಎಂದು ನೇರಳೆ ಹಣ್ಣು ವ್ಯಾಪಾರಿ ದೊರೆ ‘ಪ್ರಜಾವಾಣಿ’ಗೆ ಹೇಳಿದರು.

‘ತಳ್ಳುಗಾಡಿಗಳಲ್ಲೇ ನೇರಳೆಯನ್ನು ಹೆಚ್ಚು ಮಾರಾಟ ಮಾಡಲಾಗುತ್ತದೆ. ಅಲ್ಲಿ ₹ 160ರವರೆಗೂ ಬೆಲೆ ಇದೆ. ಎಪಿಎಂಸಿ ಮಾರುಕಟ್ಟೆಗೆ ಇದರ ಆವಕ ವಿರಳ. ಆದ್ದರಿಂದ ದಿನಕ್ಕೆ 10ರಿಂದ 15 ಕೆಜಿ ಮಾತ್ರ ತಂದು ₹ 120ಕ್ಕೆ ಮಾರಾಟ ಮಾಡುತ್ತೇವೆ. ಒಂದೇ ದಿನದಲ್ಲಿ ಎಲ್ಲವೂ ಖಾಲಿಯಾಗುತ್ತದೆ’ ಎಂದು ಹಾಪ್‌ಕಾಮ್ಸ್ ವ್ಯಾಪಾರಿ ಮಧು ಹೇಳಿದರು.

ಎರಡೇ ದಿನ ಬಾಳಿಕೆ: ಕೊಯ್ದಿಟ್ಟ ನೇರಳೆ ಹಣ್ಣು ಹೆಚ್ಚು ಎಂದರೆ ಎರಡು ದಿನ ಬಾಳಿಕೆ ಬರುತ್ತದೆ. ಆಮೇಲೆ ಹಾಳಾಗಲು ಆರಂಭವಾಗುತ್ತದೆ. ಹಾಗಾಗಿ ವ್ಯಾಪಾರಸ್ಥರು ಆದಷ್ಟೂ ಒಂದೇ ದಿನದಲ್ಲಿ ಮಾರಾಟ ಮಾಡಲು ಯತ್ನಿಸುತ್ತಾರೆ. ಸಂಜೆ ಹೊತ್ತಿಗೆ ಮುಗಿಯದಿದ್ದರೆ, ಕಡಿಮೆ ದರಕ್ಕೆ ಕೊಡುವವರೂ ಇದ್ದಾರೆ.

 ಕೆಲವು ತರಕಾರಿ ಬೆಲೆ ಹೆಚ್ಚಳ: ತರಕಾರಿಗಳ ಧಾರಣೆಯಲ್ಲಿ ಏರಿಳಿತ ಕಂಡು ಬಂದಿದೆ. ಕ್ಯಾರೆಟ್, ಬೀನ್ಸ್, ಬೀಟ್‌ರೂಟ್‌ಗಳು ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿವೆ. ಇತ್ತೀಚೆಗೆ ದಿನ ಬಿಟ್ಟು ದಿನ ಮಳೆಯಾಗುತ್ತಿರುವ ಪರಿಣಾಮ ರೈತರು ಎಪಿಎಂಸಿ ಮಾರುಕಟ್ಟೆಗೆ ತರಕಾರಿಗಳನ್ನು ತರುವುದು ಕಡಿಮೆಯಾಗಿದೆ. ಆದ್ದರಿಂದ, ಕೆಲ ತರಕಾರಿಗಳ ಬೆಲೆ ಹೆಚ್ಚಳವಾಗಿದೆ. ತೆಂಗಿನ ಕಾಯಿ, ನಿಂಬೆ ಹಣ್ಣಿನ ದರ ಕೊಂಚ ಏರಿಕೆ ಕಂಡಿದೆ. ಉಳಿದಂತೆ ಬಹುತೇಕ ತರಕಾರಿಗಳ ಧಾರಣೆ ಯಥಾಸ್ಥಿತಿ ಮುಂದುವರಿದಿದೆ ಎನ್ನುತ್ತಾರೆ ವ್ಯಾಪಾರಿಗಳು.

ಈದ್‌–ಉಲ್‌–ಫಿತ್ರ್‌ ಹಬ್ಬದ ನಂತರವೂ ಮಾಂಸದ ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ.

ಮೊಟ್ಟೆ ಧಾರಣೆ ಹೆಚ್ಚಳ

ಈ ತಿಂಗಳ (ಜೂನ್) 2ನೇ ವಾರದಿಂದ ಶಾಲೆ, ಅಂಗನವಾಡಿಗಳು ಆರಂಭವಾದ್ದರಿಂದ ಮೊಟ್ಟೆಯ ಬೆಲೆ ಹೆಚ್ಚಳವಾಗಿದೆ. ಅಂಗನವಾಡಿಗಳಲ್ಲಿ ಮಕ್ಕಳು, ಬಾಣಂತಿಯರಿಗೆ ಮೊಟ್ಟೆ ನೀಡುತ್ತಾರೆ. ಇದರಿಂದ ಮೊಟ್ಟೆಯ ಧಾರಣೆಯಲ್ಲಿ ಏರಿಕೆ ಕಂಡಿದೆ. ಕಳೆದ ವಾರ ₹ 355 ಇತ್ತು ಈ ವಾರ ₹ 55 ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಇದೇ ಬೆಲೆ ಮುಂದುವರಿಯಬಹುದು ಅಥವಾ ಕೊಂಚ ಕಡಿಮೆಯಾಗಬಹುದು ಹೇಳುವುದು ಸಾಧ್ಯವಿಲ್ಲ ಎನ್ನುತ್ತಾರೆ ಮೊಟ್ಟೆ ವ್ಯಾಪಾರಿಗಳು.

ಕನಕಾಂಬರ ತುಟ್ಟಿ, ಉಳಿದವು ಅಗ್ಗ:  ಹೂವುಗಳ ಪೈಕಿ ಕನಕಾಂಬರ ಹೂವಿನ ಬೆಲೆ ₹ 200 ಹೆಚ್ಚಳವಾಗಿದೆ. ಕಳೆದ ವಾರ ₹ 300ರಿಂದ ₹ 400 ಇತ್ತು. ಈ ವಾರ ₹ 600 ಇದೆ. ಶುಭ ಸಮಾರಂಭಗಳಿಲ್ಲದ ಪರಿಣಾಮ ಉಳಿದ ಎಲ್ಲ ಹೂವುಗಳ ಬೆಲೆ ಇಳಿಮುಖವಾಗಿದೆ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !