ರಾಜ್‌– ರವಿಚಂದ್ರನ್‌ ಕುಟುಂಬಗಳಲ್ಲಿ ಮದುವೆ ಸಂಭ್ರಮ

ಗುರುವಾರ , ಜೂನ್ 27, 2019
29 °C

ರಾಜ್‌– ರವಿಚಂದ್ರನ್‌ ಕುಟುಂಬಗಳಲ್ಲಿ ಮದುವೆ ಸಂಭ್ರಮ

Published:
Updated:

ಬೆಂಗಳೂರು: ರಾಜ್‌ ಕುಟುಂಬ ಮತ್ತು ರವಿಚಂದ್ರನ್‌ ಮನೆಯಲ್ಲಿ ಮದುವೆಯ ಸಂಭ್ರಮ ಕಳೆಗಟ್ಟಿದೆ. ಭಾರತೀಯ ಚಿತ್ರರಂಗದ ಗಣ್ಯಾತಿಗಣ್ಯರು ‌ಮೇಳೈಸಲಿರುವ ಈ ಅದ್ದೂರಿ ಮದುವೆಗಳಿಗೆ ನಗರದ ಅರಮನೆ ಮತ್ತು ಅರಮನೆ ಮೈದಾನ ಸಿಂಗಾರಗೊಳ್ಳುತ್ತಿವೆ. ವಿವಾಹ ಮಂಟಪಗಳನ್ನೂ ವೈಭವಯುತವಾಗಿ ಅಲಂಕರಿಸಲಾಗಿದೆ.

ನಟ ರಾಘವೇಂದ್ರ ರಾಜ್‍ಕುಮಾರ್ ಕಿರಿಯ ಪುತ್ರ ಯುವ ರಾಜ್‍ಕುಮಾರ್ ತಮ್ಮ ಗೆಳತಿ ಶ್ರೀದೇವಿ ಜೊತೆ ಬೆಂಗಳೂರಿನ ಅರಮನೆಯಲ್ಲಿ ಭಾನುವಾರ ಸಪ್ತಪದಿ ತುಳಿಯಲಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್‌ ಮನೆಯಲ್ಲಿ ಈಗಾಗಲೇ ನೆಂಟರಿಷ್ಟರು ಸೇರಿದ್ದಾರೆ. ಶುಕ್ರವಾರ ಮಧ್ಯಾಹ್ನ ಅರಿಶಿನ ಶಾಸ್ತ್ರ, ಸಂಜೆ ಮೆಹಂದಿ ಕಾರ್ಯಕ್ರಮ ನಡೆಯಿತು. ಶನಿವಾರ ವರ ಪೂಜೆ ನಡೆಯಲಿದೆ. ಭಾನುವಾರ ವಿವಾಹ ಸಮಾರಂಭ ನಡೆಯಲಿದ್ದು, ಅದೇ ದಿನ ಸಂಜೆ ಆರತಕ್ಷತೆಯೂ ನಡೆಯಲಿದೆ.

ಇದಕ್ಕೂ ಮೊದಲು ರಾಜ್‌ ಕುಟುಂಬದವರು, ರಾಜ್ ಹುಟ್ಟೂರಾದ ಚಾಮರಾಜನಗರದ ತಾಳವಾಡಿ ಸಮೀಪ ಗಾಜನೂರಿನಲ್ಲಿ ಯುವ ರಾಜ್‍ಕುಮಾರ್ ಅವರ ಅರಿಶಿನ ಶಾಸ್ತ್ರವನ್ನು ಹತ್ತಿರದ ಸಂಬಂಧಿಕರ ಸಮ್ಮುಖದಲ್ಲಿ ಇತ್ತೀಚೆಗಷ್ಟೇ ನೆರವೇರಿಸಿದ್ದರು.

ಚಿತ್ರರಂಗದ ಗಣ್ಯರು ಮತ್ತು ರಾಜಕಾರಣಗಳನ್ನು ಆರತಕ್ಷತೆಗೆ ಆಹ್ವಾನಿಸಲಾಗಿದೆ ಎಂದು ರಾಜ್‌ ಕುಟುಂಬದ ಮೂಲಗಳು ತಿಳಿಸಿವೆ.

‘ಕನಸುಗಾರ’ನ ಪುತ್ರಿ ಮದುವೆಗೂ ವೈಭವದ ಸಿದ್ಧತೆ

ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರಿ ಗೀತಾಂಜಲಿಯ ಮದುವೆಯು ಉದ್ಯಮಿ ಅಜಯ್‌ ಜತೆಗೆ ಇದೇ 29ರಂದು (ಬುಧವಾರ) ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. 

ಬಾಲಿವುಡ್‌, ಕಾಲಿವುಡ್‌, ಟಾಲಿವುಡ್‌, ಮಾಲಿವುಡ್‌ನ ನಟ–ನಟಿಯರು ಮತ್ತು ತಂತ್ರಜ್ಞರಿಗೆ ರವಿಚಂದ್ರನ್‌ ದಂಪತಿಯೇ ಖುದ್ದು ಆಹ್ವಾನ ಪತ್ರಿಕೆ ಕೊಟ್ಟು ಬಂದಿದ್ದಾರೆ. 

ರವಿಚಂದ್ರನ್‌ ಅವರು ತಮ್ಮ ಪುತ್ರಿಯ ಮದುವೆಯನ್ನು ವೈಭವಯುತವಾಗಿ ನೆರವೇರಿಸಲು ಸಿನಿಮಾ ಸೆಟ್‌ನಂತೆ ಅದ್ದೂರಿ ಮಂಟಪವನ್ನೇ ನಿರ್ಮಿಸಿದ್ದಾರೆ. 3ಡಿ ಆಹ್ವಾನ ಪತ್ರಿಕೆ, ವಧುವಿಗೆ ಕಪ್ಪು ಮತ್ತು ಹಸಿರು ಬಣ್ಣದ ಗೌನ್‌ ಹಾಗೂ ಅಳಿಯನಿಗೆ ಸೂಟ್‌ ಅನ್ನು ರವೀಚಂದ್ರನ್‌ ಅವರೇ ವಿನ್ಯಾಸಗೊಳಿಸಿದ್ದಾರೆ. 

ಮದುವೆ ಮಂಟಪ ಹೂವಿನ ಅಲಂಕಾರದಿಂದ ಕೂಡಿರದೇ, ಗಾಜಿನ ವಿನ್ಯಾಸದಿಂದ ಕೂಡಿರಲಿದೆ. ಈ ಮಂಟಪದ ತಯಾರಿ ಮೂರ್ನಾಲ್ಕು ತಿಂಗಳಿಂದ ನಡೆದಿದೆ. ಇದರ ವಿನ್ಯಾಸದ ರೂವಾರಿಯೂ ರವಿಚಂದ್ರನ್‌ ಅವರೇ. ಮಗಳ ಮದುವೆಗಾಗಿ ಹಾಡೊಂದನ್ನು ರವಿಚಂದ್ರನ್‌ ರಚಿಸಿದ್ದು, ಇವರ ಒಡನಾಡಿ ಹಂಸಲೇಖ ಮತ್ತು ತಂಡದವರಿಂದ ಮದುವೆ ದಿನ ಸಂಗೀತ ಕಾರ್ಯಕ್ರಮವೂ ನಡೆಯಲಿದೆ. ಅಭಿಮಾನಿಗಳಿಗೆ ಮುಕ್ತ ಪ್ರವೇಶವನ್ನೂ ಕಲ್ಪಿಸಲಾಗಿದೆ.

ಕನ್ನಡ ಚಿತ್ರರಂಗದ ಈ ಎರಡು ಪ್ರತಿಷ್ಠಿತ ಕುಟುಂಗಳ ಮದುವೆಗಳ ಸಮಾರಂಭದಲ್ಲಿ ಅಮಿತಾಭ್‌ ಬಚ್ಚನ್‌, ರಜನಿಕಾಂತ್‌, ಕಮಲ್‌ ಹಾಸನ್‌, ಚಿರಂಜೀವಿ, ಶಿಲ್ಪಾ ಶೆಟ್ಟಿ, ಮುಮ್ಮುಟ್ಟಿ, ಜೂನಿಯರ್‌ ಎನ್‌ಟಿಆರ್‌ ಸೇರಿದಂತೆ ವಿವಿಧ ಚಿತ್ರರಂಗದ ಅನೇಕ ಕಲಾವಿದರು ಭಾಗವಹಿಸುವ ನಿರೀಕ್ಷೆ ಇದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್‌ ಸೇರಿ ಹಲವು ರಾಜಕಾರಣಿಗಳಿಗೂ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 8

  Happy
 • 4

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !