ಬುಧವಾರ, ಡಿಸೆಂಬರ್ 11, 2019
19 °C
ಧರ್ಮಸಭೆಯಲ್ಲಿ ಕಾಶಿ ಪೀಠದ

ಮಠ-ಮಂದಿರಗಳಿಂದ ಸಂಸ್ಕೃತಿ ಉಳಿವು: ಡಾ.ಚಂದ್ರಶೇಖರ ಶಿವಾಚಾರ್ಯರ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಸಿಂದಗಿ: ‘ಭಾರತೀಯ ಸಂಸ್ಕೃತಿಯ ಉಳಿವು ಮಠ–ಮಂದಿರಗಳಿಂದ ಮಾತ್ರ ಸಾಧ್ಯ. ಇಷ್ಟಲಿಂಗ ಕೊಟ್ಟ ಗುರು ನಡೆದಾಡುವ ದೇವರು. ವೀರಶೈವ ಧರ್ಮವನ್ನು ಕೃತ ಯುಗ, ತ್ರೇತಾ ಯುಗ, ದ್ವಾಪರ ಯುಗ ಮತ್ತು ಕಲಿಯುಗದಲ್ಲೂ ಕಾಣುತ್ತೇವೆ. ವೀರಶೈವ ಧರ್ಮ ತನ್ನದೇ ಆದ ಸುದೀರ್ಘ ಇತಿಹಾಸ ಹೊಂದಿದೆ’ ಎಂದು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯರು ಹೇಳಿದರು.

ಇಲ್ಲಿಯ ಸಾರಂಗಮಠದಲ್ಲಿ ಲಿಂಗೈಕ್ಯ ಚೆನ್ನವೀರ ಶ್ರೀಗಳ ರಜತ ಸ್ಮರಣೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

‘ವೀರಶೈವ-ಲಿಂಗಾಯತ ಎರಡೂ ಒಂದೇ. ಆದರೆ, ವಿಜಯಪುರ ಮೂಲ ಕೇಂದ್ರದಲ್ಲಿ ಇವೆರಡೂ ಬೇರೆ ಬೇರೆ ಎಂಬ ವಿವಾದ ಹುಟ್ಟು ಹಾಕಲಾಗಿದೆ. ವೀರಶೈವ, ಲಿಂಗಾಯತ ಎರಡೂ ಒಂದೇ ಎಂಬ ಸಿದ್ಧಾಂತಕ್ಕೆ ಬದ್ಧರಾಗಿ ಧರ್ಮ ಒಡೆಯುವವರ ವಿರುದ್ಧ ಮೊದಲ ಧ್ವನಿ ಎತ್ತಿದವರು ಸೇನಾಪತಿ ಸಾರಂಗಮಠದ ಶ್ರೀಗಳು’ ಎಂದರು.

‘ಸಿಂದಗಿ ಸಾರಂಗಮಠದ ಪ್ರಭು ಸಾರಂಗದೇವ ಶ್ರೀಗಳಿಗೆ ಕಾಶಿ ಪೀಠದಿಂದ ಪಂಚಾಚಾರ್ಯ ಶ್ರೀ ಗೌರವ ಸಮ್ಮಾನ ಬೆಂಗಳೂರಿನಲ್ಲಿ ನಡೆಯಲಿದೆ’ ಎಂದು ಹೇಳಿದರು.

ಶ್ರೀಶೈಲ ಪೀಠದ ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ‘ಕೆಲವು ಸಮುದಾಯಗಳಿಗೆ ದೇವರ ದರ್ಶನ ನೀಡದಿರುವ ವ್ಯವಸ್ಥೆ ಇತ್ತು. ಅದಕ್ಕಾಗಿ, ರಥದ ಮೂಲಕ ಎಲ್ಲರಿಗೂ ದರ್ಶನ ನೀಡಲು ರಥ ಪರಂಪರೆ ಬೆಳೆದು ಬಂದಿದೆ’ ಎಂದರು.

‘ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಸಿಗಲಿ, ಅನ್ನದಾತ ಸುಖಿಯಾಗಿರಲಿ, ನಾವೆಲ್ಲರೂ ಭಾರತೀಯರು ಎಂಬ ಸನ್ಮಂಗಲ ಪ್ರತಿಯೊಬ್ಬ ದೇಶವಾಸಿಯಲ್ಲಿ ಮೂಡಿ ಬರಲಿ’ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯರು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

‘ಗುರುವಿನಲ್ಲಿ ಭೇದ-ಭಾವ ಇರಕೂಡದು. ಭಕ್ತರಿಗೆ ಸಂಸ್ಕಾರ ದಯಪಾಲಿಸಬೇಕು. ಜ್ಞಾನ ದಾಸೋಹ ಪ್ರಸಾರ ಮಾಡಬೇಕು. ದಾಸೋಹ ಸೇವೆಯೂ ಇರಬೇಕು. ನೊಂದು ಬೆಂದವರಿಗೆ ಸಾಂತ್ವನ ಹೇಳುವಂತವರಾಗಬೇಕು. ಸ್ಥಾವರರೂಪದ ಭಗವಂತನನ್ನು ಉತ್ಸವರೂಪದಲ್ಲಿ ರಥದ ಮೂಲಕ ದರ್ಶನ ದೊರಕಿಸಿ ಕೊಡುವುದು’ ಎಂದರು.

ಬೆಳ್ಳಿ ರಥವನ್ನು ಅತ್ಯಂತ ಸುಂದರವಾಗಿ ಕೆತ್ತಿದ ಕಲೆಗಾರರಾದ ಉಡುಪಿಯ ಪ್ರಭಾಕರ ಆಚಾರ್ಯ, ಕೃಷ್ಣಯ್ಯ ಆಚಾರ್ಯ ಅವರಿಗೆ ಶ್ರೀಗಳ ಸಮ್ಮುಖದಲ್ಲಿ ಕಲಾ ತಪಸ್ವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಧರ್ಮಸಭೆಯಲ್ಲಿ ನಾಡಿನ ವಿವಿಧ ಮಠಗಳ ಪೂಜ್ಯರು ಪಾಲ್ಗೊಂಡಿದ್ದರು.

ಧರ್ಮ ಒಡೆಯುವ ಒಡಕು ಬುದ್ಧಿ ಬಿಟ್ಟು ಸಮಾಜಮುಖಿ ಕೆಲಸ ಮಾಡಿ ಎಂದು ಅವರು ಕೇಳಿಕೊಂಡರು. ಡಾ. ವಿಶ್ವಪ್ರಭುದೇವ ಶಿವಾಚಾರ್ಯರು ಕೊಣ್ಣೂರ, ಬಾಬು ಡೊಳ್ಳಿ ನಿರೂಪಿಸಿದರು.

ಪ್ರತಿಕ್ರಿಯಿಸಿ (+)