ಗುರುವಾರ , ಆಗಸ್ಟ್ 22, 2019
27 °C
ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆ ಕಲ್ಯಾಣ ಅಭಿಯಾನ, ವಿವಿಧ ಧರ್ಮಗಳ ಮುಖಂಡರು ಭಾಗಿ

ಶ್ರೇಷ್ಠತೆಯ ವ್ಯಸನ ದೂರವಾದರೆ ಸತ್ಯದ ಸಾಕ್ಷಾತ್ಕಾರ: ಸಾಣೆಹಳ್ಳಿ ಶ್ರೀ

Published:
Updated:
Prajavani

ಚಾಮರಾಜನಗರ: ‘ಧಾರ್ಮಿಕವಾದ ಚೌಕಟ್ಟನ್ನು ಹಾಕಿಕೊಂಡು ನಮ್ಮ ಧರ್ಮವೇ ಶ್ರೇಷ್ಠ ಎಂದು ಹೇಳುತ್ತಿದ್ದೇವೆ. ಈ ಶ್ರೇಷ್ಠತೆಯ ವ್ಯಸನದಿಂದ ಹೊರಬಂದರೆ ಮಾತ್ರ ಸತ್ಯದ ಸಾಕ್ಷಾತ್ಕಾರ ಆಗುತ್ತದೆ’ ಎಂದು ಚಿತ್ರದುರ್ಗ ಜಿಲ್ಲೆಯ ತರಳಬಾಳು ಶಾಖಾಮಠದ ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು. 

‘ಮತ್ತೆ ಕಲ್ಯಾಣ’ ಅಭಿಯಾನದ ಭಾಗವಾಗಿ ಸಹಮತ ವೇದಿಕೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಏಸು, ಶಿವ, ಅಲ್ಲಾ ಬೇರೆ ಅಲ್ಲ. ಮೂವರು ಕೂಡ ಒಂದೇ ಚೇತನಗಳು. ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಆದರೆ, ನಮ್ಮ ದೇವರೇ ದೊಡ್ಡವರು ಎಂದು ನಾವು ಪರಸ್ಪರ ಜಗಳವಾಡುತ್ತೇವೆ. ಇದರಿಂದಾಗಿ ಧರ್ಮಗಳ ನಡುವೆ ಗೋಡೆಗಳು ನಿರ್ಮಾಣಗೊಂಡಿವೆ. ಈ ಗೋಡೆಗಳನ್ನು ಒಡೆಯುವುದೇ ಮತ್ತೆ ಕಲ್ಯಾಣ ಅಭಿಯಾನದ ಉದ್ದೇಶ’ ಎಂದು ಅವರು ಅಭಿಪ್ರಾಯಪಟ್ಟರು. 

‘ನಾವು ಯೋಚಿಸುವ ರೀತಿ ಬದಲಾದರೆ ಬದುಕು ಸಂತಸದಾಯಕವಾಗುತ್ತದೆ. ಸತ್ಯ ಮತ್ತು ಸುಳ್ಳುಗಳು ನಮ್ಮಲ್ಲೇ ಇರುವ ಅಂಶಗಳು. ಸತ್ಯ ಎನ್ನುವುದು ಅಂತರ್ಗತವಾ‌ದಂತಹ ಶಕ್ತಿ. ಅದನ್ನು ನಮ್ಮೊಳಗೇ ಅದನ್ನು ಹುಡುಕಿಕೊಳ್ಳಬೇಕು. ಆಗ ಪ್ರಪಂಚವೆಲ್ಲ ಸತ್ಯವಾಗಿ ಕಾಣುತ್ತದೆ’ ಎಂದರು.

‘ಅರಿವು ಮತ್ತು ಆಚಾರ ಒಂದಾದರೆ ಎಲ್ಲರೂ ಶರಣ/ಶರಣೆ ಆಗಬಹುದು. ಆದರೆ ಇವೆರಡೂ ಒಂದಾಗುತ್ತಿಲ್ಲ. ಮನುಷ್ಯನಲ್ಲಿರುವ ಜಾಣ್ಮೆ ಮತ್ತು ಬುದ್ಧಿ ಮಾತುಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಬದುಕಿನಲ್ಲಿ ಅಳವಡಿಸಿಕೊಳ್ಳುವುದಿಲ್ಲ. ಅದಕ್ಕೆ ಇಷ್ಟೆಲ್ಲ ಸಮಸ್ಯೆಗಳು ಉಂಟಾಗುತ್ತವೆ’ ಎಂದು ಹೇಳಿದರು. 

‘ನಮ್ಮ ದೃಷ್ಟಿಯಂತೆ ಸೃಷ್ಟಿ ಎಂಬ ಮಾತಿದೆ. ನಮ್ಮ ದೃಷ್ಟಿಯನ್ನು ನಾವು ಸರಿಪಡಿಸಿಕೊಳ್ಳಬೇಕಾಗುತ್ತದೆ. ವ್ಯಕ್ತಿ ಬದಲಾವಣೆಯಾಗದೆ ಸಮಾಜವನ್ನು ಹಾಗೂ ದೇಶವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ’ ಎಂದು ಸಾಣೆಹಳ್ಳಿ ಶ್ರೀಗಳು ಪ್ರತಿಪಾದಿಸಿದರು.

ಸತ್ಯ ಅರಿಯಲು ತಾಳ್ಮೆ ಬೇಕು: ‘ವಚನಗಳಲ್ಲಿ ನಿತ್ಯ–ಸತ್ಯ’ ಎಂಬ ವಿಷಯದ ಬಗ್ಗೆ ಮಾತನಾಡಿದ ಚಿಂತಕ ಓ.ಎಲ್‌.ನಾಗಭೂಷಣಸ್ವಾಮಿ ಅವರು, ‘ನಮ್ಮಲ್ಲಿ ತಾಳ್ಮೆ ಇದ್ದಷ್ಟೂ ಸತ್ಯ ಸಿಗುವುದು ಸುಲಭವಾಗುತ್ತದೆ. ತರಾತುರಿಯಲ್ಲಿ ಸತ್ಯ ಏನು ಎಂದು ಕಂಡುಕೊಳ್ಳಲು ಆಗುವುದಿಲ್ಲ. ಸತ್ಯವನ್ನು ಹುಡುಕುವ ಮನಸ್ಸು ನಮ್ಮಲ್ಲಿಲ್ಲ. ಅದು ಯಾರಿಗೂ ಬೇಡ. ಆ ಕ್ಷಣದ ಲಾಭ, ಸುಖವೇ ನಮಗೆ ಬೇಕು’ ಎಂದು ಹೇಳಿದರು.

ಜಾತಿ, ಮತ, ಅಧಿಕಾರ, ದುಡ್ಡು ಎಂಬುದು ಸತ್ಯದ ಬಟ್ಟೆ ಹಾಕಿರುವ ಸುಳ್ಳುಗಳು. ಅದು ಜನರ ಅರಿವಿಗೆ ಬಂದಾಗ ಮತ್ತೆ ಕಲ್ಯಾಣ ಆಗುತ್ತದೆ. 12ನೇ ಶತಮಾನದಲ್ಲಿ ಕಲ್ಯಾಣ ಆಗಿತ್ತು ಎಂದು ಹೇಳುತ್ತಾರೆ. ನಮಗೆ ಅದು ಕನಸಾಗಿಯೇ ಉಳಿದಿದೆ’ ಎಂದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಮಾತನಾಡಿದರು. ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಚಾಮರಾಜನಗರದ ಸಿದ್ಧಮಲ್ಲೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಉತ್ತುವಳ್ಳಿಯ ದಾರುಲ್‌ ಉಲುಮ್‌ ಎಕ್ಸ್‌ನಿಯ ಪ್ರಾಂಶುಪಾಲ ಮಹಮ್ಮದ್‌ ಇಸ್ಮಾಯಿಲ್‌, ಜೋರಾ ಮಸೀದಿಯ ಸೈಯದ್‌ ಲತಿಫ್‌ ರೆಹಮಾನ್‌, ಸೇಂಟ್‌ ಫಾಲ್ಸ್‌ ಚರ್ಚ್‌ನ ಫಾದರ್‌ ಜೋಸೆಫ್‌ ಮರಿ ಸೇರಿದಂತೆ ಹಲವರು ಇದ್ದರು. 

ಸಾಮರಸ್ಯ ನಡಿಗೆ, ನಾಟಕ ಪ್ರದರ್ಶನ

ಸಾರ್ವಜನಿಕ ಸಮಾವೇಶಕ್ಕೂ ಮುನ್ನ ಚಾಮರಾಜೇಶ್ವರ ದೇವಾಲಯದ ಆವರಣದಿಂದ ಜಿಲ್ಲಾಡಳಿತ ಭವನದವರೆಗೆ ಸಾಮರಸ್ಯ ನಡಿಗೆ ನಡೆಯಿತು. 

ರೈತರಿಗೆ ಗಿಡಗಳನ್ನು ವಿತರಿಸುವ ಮೂಲಕ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ನಡಿಗೆಗೆ ಚಾಲನೆ ನೀಡಿದರು. 

‘ಮತ್ತೆ ಕಲ್ಯಾಣ’ ಅಭಿಯಾನಕ್ಕಾಗಿ ಸಿದ್ಧಗೊಳಿಸಲಾಗಿರುವ ವಿವಿಧ ವಚನಕಾರರ ಪ್ರತಿಕೃತಿಗಳನ್ನು ಹೊಂದಿರುವ ರಥದೊಂದಿಗೆ ಸಾಣೆಹಳ್ಳಿ ಶ್ರೀಗಳು ಹಾಗೂ ವಿವಿಧ ಧರ್ಮಗಳ ಮುಖಂಡರು ಹೆಜ್ಜೆ ಹಾಕಿದರು. 

ಸಮಾವೇಶದ ನಂತರ ಸಾಣೆಹಳ್ಳಿ ಶ್ರೀಗಳು ರಚಿಸಿರುವ ‘ಮೋಳಿಗೆ ಮಾರಯ್ಯ’ ಎಂಬ ನಾಟಕ ಪ್ರದರ್ಶನವೂ ನಡೆಯಿತು.

Post Comments (+)