ಬುಧವಾರ, ಆಗಸ್ಟ್ 21, 2019
27 °C
ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಾಣೇಹಳ್ಳಿ ಶ್ರೀ ಸಂವಾದ

‘ಮುಂಜಾವಿನಲ್ಲೇ ದಿಕ್ಕು ತಪ್ಪಿಸುವಿಕೆ’

Published:
Updated:
Prajavani

ಮೈಸೂರು: ‘ಅನೇಕ ಟಿ.ವಿ.ಮಾಧ್ಯಮಗಳು ಮುಂಜಾನೆಯೇ ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತವಾಗಿವೆ. ಗುರುವಾಗಲು ಯೋಗ್ಯತೆ ಇಲ್ಲದವನನ್ನು ಕೂರಿಸಿ ಮೌಢ್ಯ ಬಿತ್ತುತ್ತಿವೆ’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಕಿಡಿಕಾರಿದರು.

ನಗರದಲ್ಲಿ ಸಹಮತ ವೇದಿಕೆಯಿಂದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಕಲಾಮಂದಿರದಲ್ಲಿ ನಡೆದ ಕಾಲೇಜು ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ಸ್ವಾಮೀಜಿ, 'ಶಾಸ್ತ್ರ, ಜ್ಯೋತಿಷದ ಹೆಸರಿನಲ್ಲಿ ಮುಂಜಾನೆಯೇ ಮೆದುಳು ತಿನ್ನುವಿಕೆ ಶುರುವಾಗುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ವ್ಯವಹಾರಿಕ, ಅಧ್ಯಾತ್ಮ, ನೈತಿಕ ಶಿಕ್ಷಣ ಇಂದು ಮಕ್ಕಳಿಗೆ ಸಿಗದಾಗಿದೆ. ದೋಚುವುದು–ಬಾಚುವುದನ್ನೇ ಇಂದಿನ ಶಿಕ್ಷಣ ಕಲಿಸುತ್ತಿದೆ. ಅರಿವು ನೀಡುವುದು, ಕೊಳೆ ತೊಳೆಯುವುದು ಶಿಕ್ಷಣದ ಮೂಲ ಮಂತ್ರವಾಗಬೇಕಿದೆ. ಆಚಾರ–ವಿಚಾರ ಕ್ರಾಂತಿ ಬದುಕಿಗೆ ಬೆಳಕಾಗಬೇಕಿದೆ. ನಡೆ–ನುಡಿ ಸಿದ್ಧಾಂತಗಳು ಆದರ್ಶವಾಗಬೇಕಿವೆ' ಎಂದರು.

'ಪ್ರತಿಭಟಿಸುವುದು ಸುಲಭದ ಕೆಲಸ. ಮನಸ್ಸು ಕಟ್ಟುವುದು ಕಷ್ಟದ ಕಾರ್ಯ. ಬಡತನ, ಭ್ರಷ್ಟಾಚಾರ, ಜಾತೀಯತೆ, ಲಿಂಗ ತಾರತಮ್ಯ ಇಂದಿಗೂ ಜೀವಂತವಾಗಿದ್ದು, ಇವನ್ನು ಹೋಗಲಾಡಿಸುವವರು ಯಾರು? ಸಮ ಸಮಾಜ ನಿರ್ಮಾಣಕ್ಕಾಗಿ ಮತ್ತೆ ಕಲ್ಯಾಣ ಆರಂಭಿಸಲಾಗಿದೆ' ಎಂದು ಸ್ವಾಮೀಜಿ ತಿಳಿಸಿದರು.

ವಿದ್ಯಾರ್ಥಿಗಳಾದ ವಿಜಯಕುಮಾರ್, ಉದಯ್‌ಕುಮಾರ್‌, ಶೃಂಗ, ಪುಟ್ಟಸ್ವಾಮಿ, ಅಂಬಿಕಾ, ಅಕ್ಷತಾ ಬಿ.ಕೆ. ಅರ್ಚನಾ ಜೆ, ರಕ್ಷಿತಾ, ಅಂಕಿತಾ ಸಂವಾದದಲ್ಲಿ ಪ್ರಶ್ನಿಸಿದರು. ಪಂಡಿತಾರಾಧ್ಯ ಸ್ವಾಮೀಜಿ, ಪ್ರೊ.ಮೊರಬದ ಮಲ್ಲಿಕಾರ್ಜುನ, ಎಚ್‌.ಜನಾರ್ಧನ್ ಉತ್ತರಿಸಿದರು. ಕೆ.ಎಸ್.ಶಿವರಾಮು, ಜವರಪ್ಪ, ಮಹದೇವಪ್ಪ ಉಪಸ್ಥಿತರಿದ್ದರು.

Post Comments (+)