ಮಂಗಳವಾರ, ಅಕ್ಟೋಬರ್ 22, 2019
26 °C
ಸಂಘ ಪರಿವಾರದ ಹಿನ್ನೆಲೆ ವ್ಯಕ್ತಿಗೆ ಬಿಜೆಪಿ ಮಣೆ * ಮಹಾಲಕ್ಷ್ಮಿ ಉಪಮೇಯರ್‌ ಅಭ್ಯರ್ಥಿ

ಬಿಬಿಎಂಪಿ ಮೇಯರ್ ಚುನಾವಣೆ: ಗೌತಮ್ ಕುಮಾರ್‌ ಬಿಜೆಪಿ ಅಭ್ಯರ್ಥಿ

Published:
Updated:

ಬೆಂಗಳೂರು: ಮೇಯರ್‌ ಸ್ಥಾನಕ್ಕೆ ಬಿಜೆಪಿಯು ಜೋಗುವಾಳ್ಯ ವಾರ್ಡ್‌ನ ಪಾಲಿಕೆ ಸದಸ್ಯ ಎಂ.ಗೌತಮ್ ಕುಮಾರ್‌ ಅವರನ್ನು ಹಾಗೂ ಉಪ ಮೇಯರ್‌ ಅಭ್ಯರ್ಥಿಯನ್ನಾಗಿ ಹೊಸಹಳ್ಳಿ ವಾರ್ಡ್‌ ಸದಸ್ಯೆ ಮಹಾಲಕ್ಷ್ಮೀ ರವೀಂದ್ರ ಅವರನ್ನು ಆಯ್ಕೆ ಮಾಡಿದೆ.

ಬಿಜೆಪಿಯಲ್ಲಿ ಪದ್ಮನಾಭ ರೆಡ್ಡಿ, ಎಲ್‌.ಶ್ರೀನಿವಾಸ್‌, ಕೆ.ಎ.ಮುನೀಂದ್ರ ಕುಮಾರ್‌, ಜಿ.ಮಂಜುನಾಥ ರಾಜು, ಎಂ.ವೆಂಕಟೇಶ್‌, ಎಂ.ಗೌತಮ್ ಕುಮಾರ್‌, ಕೆ.ಉಮೇಶ ಶೆಟ್ಟಿ ಅವರು ಮೇಯರ್‌ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಈ ಪೈಕಿ ಒಬ್ಬರನ್ನು ಆಯ್ಕೆ ಮಾಡುವ ಸಲುವಾಗಿ ಸೋಮವಾರ ಮಧ್ಯರಾತ್ರಿವರೆಗೂ ಬಿಜೆಪಿ ಮುಖಂಡರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ನೇತೃತ್ವದಲ್ಲಿ ಸಭೆ ನಡೆಸಿದ್ದರು. ಅಂತಿಮವಾಗಿ ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿದ್ದ ಗೌತಮ್‌ ಕುಮಾರ್‌ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದರು.

ಇದನ್ನೂ ಓದಿ: ಬಿಬಿಎಂಪಿ ಮೇಯರ್‌ ಗಾದಿ | ಇಂದು ಚುನಾವಣೆ: ಚುಕ್ಕಾಣಿ ಯಾರಿಗೆ?

ಮುಖಂಡರಿಂದ ಲಾಬಿ ನಡೆಸದೇ ಇರುವುದೇ ಗೌತಮ್ ಪಾಲಿಕೆ ವರವಾಗಿ ಪರಿಣಮಿಸಿದೆ. ಎರಡನೇ ಬಾರಿ ಸದಸ್ಯರಾಗಿರುವ ಗೌತಮ್‌ ಅವರು ವಿಧಾನಸಭಾ ಚುನಾವಣೆಯಲ್ಲಿ ಶಾಂತಿನಗರ ಕ್ಷೇತ್ರದಿಂದ ಪಕ್ಷದ ಟಿಕೆಟ್‌ ಬಯಸಿದ್ದರು. ಟಿಕೆಟ್‌ ಕೈತಪ್ಪಿದರೂ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು. ಪಕ್ಷ ನಿಷ್ಠೆಯನ್ನು ಗುರುತಿಸಿ ಅವರನ್ನೇ ಕಣಕ್ಕಿಳಿಸಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಒಲವು ತೋರಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಚುನಾವಣೆ | ಮೇಯರ್‌ ಸ್ಥಾನ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು

ರೆಡ್ಡಿಗೆ ನಿರಾಸೆ: ಈ ಅವಧಿಯಲ್ಲಿ ಪಾಲಿಕೆಯಲ್ಲಿ ಸತತ ನಾಲ್ಕು ವರ್ಷ ವಿರೋಧ ಪಕ್ಷದ ನಾಯಕರಾಗಿದ್ದ ಪದ್ಮನಾಭ ರೆಡ್ಡಿ ಅವರಿಗೆ ಟಿಕೆಟ್‌ ಕೈತಪ್ಪಿದೆ. ಹೆಚ್ಚಿನ ಶಾಸಕರು ರೆಡ್ಡಿ ಪರ ವಹಿಸಿದ್ದರು. ವಿರೋಧ ಪಕ್ಷದ ನಾಯಕ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡದೇ ಇದ್ದುದು ಹಾಗೂ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ಟಿಕೆಟ್‌ ನೀಡಿದರೂ ಸರ್ವಜ್ಞನಗರ  ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದು ಅವರಿಗೆ ದುಬಾರಿ ಆಗಿ ಪರಿಣಮಿಸಿದೆ.

ಕಾಂಗ್ರೆಸ್‌ನಿಂದ ಸತ್ಯನಾರಾಯಣ: ಕಾಂಗ್ರೆಸ್‌ ಈ ಬಾರಿಯೂ ಜೆಡಿಎಸ್ ಜೊತೆ ಮೈತ್ರಿ ಮುಂದುವರಿಸಿದೆ. ಮೈತ್ರಿಕೂಟದಿಂದ ದತ್ತಾತ್ರೇಯ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಆರ್‌.ಎಸ್‌.ಸತ್ಯನಾರಾಯಣ ಅವರನ್ನು ಮೇಯರ್‌ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್‌ ತೀರ್ಮಾನಿಸಿದೆ. ಜೆಡಿಎಸ್‌ನಿಂದ ಶಕ್ತಿಗಣಪತಿ ನಗರ ವಾರ್ಡ್‌ನ ಗಂಗಮ್ಮ ಅವರನ್ನು ಉಪಮೇಯರ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗುತ್ತಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)