ನವೀನ ರೂಪ ಪಡೆದ ಬೋಸ್‌ ಉದ್ಯಾನ

7
ಬರಲಿದೆ ಮಿಲಿಟರಿ ಪೋಷಾಕಿನ ಸುಭಾಷ್‌ಚಂದ್ರರ ಪ್ರತಿಮೆ

ನವೀನ ರೂಪ ಪಡೆದ ಬೋಸ್‌ ಉದ್ಯಾನ

Published:
Updated:
Deccan Herald

ಬೆಂಗಳೂರು: ಹಲವು ವರ್ಷಗಳಿಂದ ಸೌಲಭ್ಯಗಳಿಲ್ಲದೆ ನಲುಗುತ್ತಿದ್ದ ವಾರ್ಡ್‌ ನಂಬರ್‌ 105ರ ಎಂ.ಸಿ.ಬಡಾವಣೆಯಲ್ಲಿರುವ ನವೀನ್‌ ಉದ್ಯಾನಕ್ಕೆ ಇದೀಗ ಅಭಿವೃದ್ಧಿಯ ಭಾಗ್ಯ ದೊರೆತಿದೆ. 

ಸುಮಾರು 2.5 ಎಕರೆ ವಿಸ್ತೀರ್ಣದಲ್ಲಿ ಮೈಚಾಚಿಕೊಂಡಿರುವ 22 ವರ್ಷಗಳಷ್ಟು ಹಳೆಯ ಉದ್ಯಾನವನ್ನು ಹೈಟೆಕ್‌ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಸದ್ಯ ಬಿಬಿಎಂಪಿ ಹಣಕಾಸಿನ ನೆರವಿನಿಂದ ಇದರ ಹೊಣೆ ಹೊತ್ತಿದ್ದು, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನಕ್ಕಾಗಿ ಬೇಡಿಕೆ ಇಡಲಾಗಿದೆ. 

‘ಇಲ್ಲಿ, ನವೀನ್‌ ಎಂಬ ಹೋಟೆಲ್‌ ಇತ್ತು. ಹಾಗಾಗಿ, ಸಾರ್ವಜನಿಕರು ನವೀನ್‌ ಹೊಟೇಲ್‌ ಪಕ್ಕದ ಉದ್ಯಾನ ಎಂದು ಕರೆಯುತ್ತಿದ್ದರು. ಬರುಬರುತ್ತ ‘ನವೀನ್‌ ಉದ್ಯಾನ’ ಎಂದೇ ಕರೆಯಲಾರಂಭಿಸಿದರು. ಈಗಲೂ ಅದೇ ಹೆಸರಿನಲ್ಲೇ ಕರೆಯುತ್ತಾರೆ. ಸುಮಾರು 9 ವರ್ಷಗಳಿಂದ ಉದ್ಯಾನವನ್ನು ಅಭಿವೃದ್ಧಿಪಡಿಸಿ ಎಂದು ಅಧಿಕಾರಿಗಳಿಗೆ ಗೋಗರೆಯುತ್ತಲೇ ಇದ್ದೆವು. ಈ ತನಕ ಆ ಭಾಗ್ಯ ಸಿಕ್ಕಿರಲಿಲ್ಲ’ ಎನ್ನುತ್ತಾರೆ ಅಲ್ಲಿನ ಸ್ಥಳೀಯರು. 

‘ಸುಮಾರು ವರ್ಷಗಳಿಂದ ಉದ್ಯಾನದಲ್ಲಿ ಮೂಲಸೌಲಭ್ಯಗಳಿರಲಿಲ್ಲ. ಕಾಂಪೌಂಡ್‌ ಕೂಡ ಸಮರ್ಪಕವಾಗಿರಲಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದವು. ಹಾಗಾಗಿ, ಸದ್ಯ ಅದರ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಉದ್ಯಾನದಲ್ಲಿ ಮುರಿದು ಬಿದ್ದಿದ್ದ ಸಲಕರಣೆ ತೆರವುಗೊಳಿಸಿ, ಸಾರ್ವಜನಿಕರಿಗೆ ಅನೂಕೂಲವಾಗುವಂತೆ ಪಾದಚಾರಿ ಮಾರ್ಗವನ್ನು ಎಂಟು ಅಡಿಗೆ ವಿಸ್ತರಿಸಲಾಗಿದೆ’ ಎನ್ನುತ್ತಾರೆ ವಾರ್ಡ್‌ ಸದಸ್ಯೆ ಶಿಲ್ಪಾ ಶ್ರೀಧರ್‌. 

ಉದ್ಯಾನಕ್ಕೆ ಭೋಸ್‌ ಹೆಸರು: ‘ಉದ್ಯಾನಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ಚಂದ್ರ ಬೋಸ್‌ ಅವರ ಹೆಸರನ್ನು ಇಡಲಾಗುತ್ತದೆ’ ಎಂದು ಅವರು ಹೇಳುತ್ತಾರೆ.

‘ಸುತ್ತಮುತ್ತಲಿನ ಜನ ನಿತ್ಯ ಇಲ್ಲಿ ಕಸ ಎಸೆಯುತ್ತಾರೆ. ಉದ್ಯಾನ ಈಗ ಅಭಿವೃದ್ಧಿ ಆಗುತ್ತಿದ್ದು, ಇನ್ನು ಮುಂದಾದರೂ ಕಸ ಎಸೆಯುವ ಪರಿಪಾಠ ನಿಲ್ಲಿಸಿ, ಇಲ್ಲಿನ ಸೌಲಭ್ಯಗಳನ್ನು ಅವರು ಬಳಕೆ ಮಾಡಿಕೊಳ್ಳಬೇಕು’ ಎಂದು ಆಶಿಸುತ್ತಾರೆ. 

ತಲೆ ಎತ್ತಲಿದೆ ಪ್ರತಿಮೆ: ‘ಉದ್ಯಾನದ ಆವರಣದಲ್ಲಿ ಮಿಲಿಟರಿ ವೇಷಭೂಷಣದ ಬೋಸ್‌ ಅವರ ಪ್ರತಿಮೆಯನ್ನು ಸ್ಥಾಪಿಸಲಿದ್ದೇವೆ. ಇದು ಉದ್ಯಾನಕ್ಕೆ ಮತ್ತಷ್ಟು ಮೆರುಗನ್ನು ನೀಡಲಿದೆ. ಮಕ್ಕಳಲ್ಲಿ ಈ ಪ್ರತಿಮೆ ದೇಶಪ್ರೇಮವನ್ನು ಬಿತ್ತಲಿದ್ದು, ಅವರಿಗೆ ಸ್ಫೂರ್ತಿ ನೀಡಲಿದೆ’ ಎಂದು ಹೇಳುತ್ತಾರೆ. 

ಸಿ.ಸಿ.ಟಿ.ವಿ. ಕಣ್ಗಾವಲು: ಇಲ್ಲಿ ಸುಮಾರು 18 ಸಿ.ಸಿ.ಟಿ.ವಿ. ಕ್ಯಾಮೆರಾ, 23 ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದೆ. ಉದ್ಯಾನದಲ್ಲಿ 200ಕ್ಕೂ ಹೆಚ್ಚು ಔಷದಿ ಹಾಗೂ ಅಲಂಕಾರಿಕ ಗಿಡಗಳನ್ನು ಬೆಳೆಸಲಾಗಿದೆ. ಇಲ್ಲಿ ಅರಳಿಮರದ ಹತ್ತಿರವಿರುವ ನಾಗರಕಟ್ಟೆಯನ್ನೂ ಹೊಸದಾಗಿ ಅಭಿವೃದ್ಧಿಪಡಿಸಲಾಗಿದೆ.

ಉದ್ಯಾನ ಈಗ ಹೊಸತನದಿಂದ ಕಂಗೊಳಿಸುತ್ತಿದೆ. ನಮ್ಮ ಭಾಗದ ಜನರಿಗೆ ಆನಂದದಿಂದ ಕಾಲ ಕಳೆಯಲು ಒಂದು ಅತ್ಯುತ್ತಮ ತಾಣವಾಗಿದೆ ಎಂದು ಗೋವಿಂದರಾಜನಗರದ ವಾರ್ಡ್‌ ಸದಸ್ಯ ಉಮೇಶ್‌ ಶೆಟ್ಟಿ ಹೇಳುತ್ತಾರೆ.

ಉದ್ಯಾನ ಇದೇ ತಿಂಗಳು ಉದ್ಘಾಟನೆಯಾಗಲಿದ್ದು, ಬಳಿಕ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. 

‘ಹಾಡು ಕೇಳಿ, ಇಂಟರ್‌ನೆಟ್‌ ಬಳಸಿ’
‘ಆಧುನಿಕ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಈ ಉದ್ಯಾನದಲ್ಲಿ ಎಫ್‌.ಎಂ ರೇಡಿಯೊ ಅಳವಡಿಸಲಾಗಿದೆ. ಉದ್ಯಾನದ ಸುತ್ತಮುತ್ತಲಿನ 175 ಅಡಿ ದೂರದವರೆಗೂ 100 ಎಂಬಿಪಿಎಸ್‌ ವೇಗದಲ್ಲಿ ಉಚಿತವಾಗಿ ಇಂಟರ್‌ನೆಟ್‌ ಬಳಸಬಹುದು. ಹಾಗಾಗಿ, ಸಾರ್ವಜನಿಕರು ಹಾಡು ಕೇಳುತ್ತ, ಇಂಟರ್‌ನೆಟ್‌ ಬಳಸುತ್ತಾ ಕಾಲ ಕಳೆಯಬಹುದು’ ಎಂದು ಉಮೇಶ್‌ ಶೆಟ್ಟಿ ವಿವರಿಸುತ್ತಾರೆ.

ಹೊರಾಂಗಣ ಜಿಮ್‌: ‘ಈ ಮುಂಚೆ ಇಲ್ಲಿ ಹಳೆ ಕಾಲದ ಜಿಮ್‌ ಇತ್ತು. ಆದರೆ, ಅಲ್ಲಿನ ಸಲಕರಣೆಗಳು ಮುರಿದು ಹೋಗಿದ್ದವು. ಹಾಗಾಗಿ, ಹೊಸ ಮಾದರಿಯ ಜಿಮ್‌ ಸಲಕರಣೆಗಳನ್ನು ತರಿಸಲಾಗಿದೆ. ಅಲ್ಲದೇ, ಪುಟ್ಟದಾದ ಬಯಲು ರಂಗಮಂದಿರ, ಯೋಗ ಶಾಲೆ, ಚಿಣ್ಣರಿಗಾಗಿ ಆಟದ ಅಂಗಳ ನಿರ್ಮಾಣಗೊಂಡಿದೆ’ ಎಂದು ಮಾಹಿತಿ ನೀಡುತ್ತಾರೆ.

*
ನಾನಿನ್ನೂ ಉದ್ಯಾನಕ್ಕೆ ಭೇಟಿ ನೀಡಿಲ್ಲ. ಕಾಮಗಾರಿ ಪೂರ್ಣಗೊಂಡ ನಂತರ ಪರಿಶೀಲಿಸುವೆ. ಅನುದಾನ ನೀಡುವುದರ ಬಗ್ಗೆಯೂ ಆಲೋಚಿಸುವೆ.
-ವಿ.ಸೋಮಣ್ಣ, ಶಾಸಕ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !